ಮುಂಬೈ ನೆಲದಲ್ಲಿ ಕಾರ್ಮಿಕ ನಾಯಕರಾಗಿ ಮಿಂಚಿದ ಕನ್ನಡಿಗರು

Update: 2021-05-20 19:30 GMT

ಕಾರ್ಮಿಕರಿಗೆ ಸಂಘಟನೆಯ ಅವಶ್ಯಕತೆಯನ್ನು ಮನಗಾಣಿಸಿ ದುಷ್ಟ ಆಡಳಿತದ ವಿರುದ್ಧ ಸೆಟೆದು ನಿಲ್ಲುವುದಕ್ಕೆ ಶಕ್ತಿ ಸಾಮರ್ಥ್ಯವನ್ನು ಮನವರಿಕೆ ಮಾಡಿಕೊಟ್ಟ ಕಾರ್ಮಿಕ ಸಂಘಟನೆಗಳ ತವರು ಮುಂಬೈ. ಈ ಕಾರ್ಮಿಕ ಸಂಘಟನೆಗಳು ಮುಂದೆ ಬೇರೆ ಬೇರೆ ರಾಜಕೀಯ ಆಯಾಮಗಳನ್ನು ಪಡೆದುಕೊಂಡವು ಎನ್ನುವುದನ್ನೂ ನಾವು ಗಮನಿಸಬಹುದು. ಕಾರ್ಮಿಕರ ಜೀವನ ಶೈಲಿಯನ್ನೇ ಬದಲಿಸಿದ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಿಗೆ ಜಯವಿದೆ ಎಂಬುದನ್ನು ಕಲಿಸಿಕೊಟ್ಟಿವೆ. ಅಂತಹ ಸಂಘಟನೆಗಳ ಹಿಂದೆ ಇಲ್ಲಿನ ಅನೇಕ ಕನ್ನಡಿಗರ ನಿಸ್ವಾರ್ಥ ಸೇವೆ, ಬಲಿದಾನಗಳಿವೆ. ಅಂತಹ ಮಹಾನ್ ಶಕ್ತಿಗಳ ಸಾಹಸಗಾಥೆಯನ್ನು ದಾಖಲಿಸುವುದು ಬಿಡಿ ಅವರ ಹೆಸರುಗಳನ್ನು ಉಲ್ಲೇಖಿಸಲು ಪುಟಗಳು ಸಾಕಾಗದು.



ದೇಶದ ಆರ್ಥಿಕ ರಾಜಧಾನಿ ಎನಿಸಿಕೊಂಡಿರುವ ಮುಂಬೈಯು ಕಾರ್ಮಿಕ ವರ್ಗಕ್ಕೆ ಹೊಸ ಭರವಸೆಯನ್ನು ತಂದುಕೊಟ್ಟ ನೆಲವೂ ಹೌದು. ಕಾರ್ಮಿಕರಿಗೆ ಸಂಘಟನೆಯ ಅವಶ್ಯಕತೆಯನ್ನು ಮನಗಾಣಿಸಿ ದುಷ್ಟ ಆಡಳಿತದ ವಿರುದ್ಧ ಸೆಟೆದು ನಿಲ್ಲುವುದಕ್ಕೆ ಶಕ್ತಿ ಸಾಮರ್ಥ್ಯವನ್ನು ಮನವರಿಕೆ ಮಾಡಿಕೊಟ್ಟ ಕಾರ್ಮಿಕ ಸಂಘಟನೆಗಳ ತವರು ಮುಂಬೈ. ಈ ಕಾರ್ಮಿಕ ಸಂಘಟನೆಗಳು ಮುಂದೆ ಬೇರೆ ಬೇರೆ ರಾಜಕೀಯ ಆಯಾಮಗಳನ್ನು ಪಡೆದುಕೊಂಡವು ಎನ್ನುವುದನ್ನೂ ನಾವು ಗಮನಿಸಬಹುದು. ಕಾರ್ಮಿಕರ ಜೀವನ ಶೈಲಿಯನ್ನೇ ಬದಲಿಸಿದ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಿಗೆ ಜಯವಿದೆ ಎಂಬುದನ್ನು ಕಲಿಸಿಕೊಟ್ಟಿವೆ. ಅಂತಹ ಸಂಘಟನೆಗಳ ಹಿಂದೆ ಇಲ್ಲಿನ ಅನೇಕ ಕನ್ನಡಿಗರ ನಿಸ್ವಾರ್ಥ ಸೇವೆ, ಬಲಿದಾನಗಳಿವೆ. ಅಂತಹ ಮಹಾನ್ ಶಕ್ತಿಗಳ ಸಾಹಸಗಾಥೆಯನ್ನು ದಾಖಲಿಸುವುದು ಬಿಡಿ ಅವರ ಹೆಸರುಗಳನ್ನು ಉಲ್ಲೇಖಿಸಲು ಪುಟಗಳು ಸಾಕಾಗದು. ಅಂತಹ ಕನ್ನಡಿಗರ ಕೆಲವು ಹೆಸರುಗಳನ್ನಾದರೂ ನೆನಪಿಸಿ ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯವೂ ಹೌದು.

ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ ಧೀಮಂತ ವ್ಯಕ್ತಿತ್ವ ಪಿ. ಡಿ’ಮೆಲ್ಲೋ ಅವರದು. ಅವರ ಹಾದಿಯಲ್ಲಿ ಹೆಜ್ಜೆಗಳನ್ನಿಟ್ಟು ಮುನ್ನಡೆದ ಇನ್ನೊಂದು ಹೆಸರು ಜಾರ್ಜ್ ಫೆರ್ನಾಂಡಿಸ್. ಪಾದ್ರಿಯಾಗಬೇಕೆಂದು ಇವರನ್ನು ಮನೆಯವರು ಬೆಂಗಳೂರಿಗೆ ಕಳುಹಿಸಿದ್ದರು. ಆದರೆ ಅಲ್ಲಿ ಒಲ್ಲೆನೆಂದು ಬೆನ್ನು ತಿರುಗಿಸಿ ಮರಳಿ ಮಂಗಳೂರಿಗೆ ಬಂದ ಜಾರ್ಜ್ ಫೆರ್ನಾಂಡಿಸ್‌ರಿಗೆ ಅಮ್ಮೆಂಬಳ ಬಾಳಪ್ಪಅವರಿಂದ ಡಿ’ಮೆಲ್ಲೋ ಅವರ ಪರಿಚಯವಾಗಿ ಆನಂತರ ಮುಂಬೈಗೆ ಪಯಣ ಬೆಳೆಸಿದರು. ಮುಂಬೈಯಲ್ಲಿ ಒಂದೆರಡು ವರ್ಷ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಫ್ರೂಪ್ ರೀಡರ್ ಆಗಿ ದುಡಿಯುತ್ತ ರಾತ್ರಿ ಡಿ. ಎನ್. ರೋಡ್‌ನ ಪಕ್ಕದ ಗಲ್ಲಿ ಅಥವಾ ಟಾಟಾ ಹೌಸ್‌ನ ಎದುರಿನ ಗಲ್ಲಿಗಳಲ್ಲಿನ ಫುಟ್‌ಪಾತ್‌ಗಳಲ್ಲಿ ಗೋಣಿ ಚೀಲ ಅಥವಾ ಪೇಪರ್ ಹಾಸಿಕೊಂಡು ಮಲಗಿ ಆಕಾಶದ ತಾರೆಗಳನ್ನು ಎಣಿಸುತ್ತಾ ರಾತ್ರಿ ಕಳೆದರು. ಅದಾಗಲೇ ಹೊಟೇಲ್ ಕಾರ್ಮಿಕರ ಬವಣೆಗಳ ಪರಿಚಯ. ಹಗಲಲ್ಲಿ ದುಡಿದು ರಾತ್ರಿ ಶಾಲೆಗೆ ಹೋಗುವ ಈ ಹೊಟೇಲ್ ಕಾರ್ಮಿಕರೊಡನೆ ನಡುರಾತ್ರಿ ಚರ್ಚೆ, ಮಾತುಕತೆ ಕೊನೆಗೆ ಸುಮಾರು ಒಂದೂವರೆ ಲಕ್ಷ ಜನರನ್ನು ಸೇರಿಸಿ ಅವರಿಗಾಗುತ್ತಿರುವ ಅನ್ಯಾಯಗಳ ವಿರುದ್ಧ ಚಳವಳಿ ರೂಪಿಸಿದರು. ಹೊಟೇಲ್ ಕಾರ್ಮಿಕ ಸಂಘಟನೆ ರೂಪುಗೊಂಡ ಪರಿ ಇದು.

ಗುರು ಪಿ. ಡಿ’ಮೆಲ್ಲೋ ಅವರ ಮಾರ್ಗದರ್ಶನದಂತೆ ಇಲ್ಲಿನ ಸಂಘಟನೆಗಳಲ್ಲಿ ಭಾಗಿಯಾಗಿ ಅನುಭವಪಡೆದ ಜಾರ್ಜ್ ಫೆರ್ನಾಂಡಿಸ್ ಹಲವು ಕಾರ್ಮಿಕ ಸಂಘಟನೆಗಳನ್ನು ಸಂಘಟಿಸಿ, ಆ ಮೂಲಕ ಕಾರ್ಮಿಕರ ಚೇತರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಪ್ರೀಮಿಯರ್ ಆಟೊಮೊಬೈಲ್ ಕಾರ್ಮಿಕರ ಸಂಘಟನೆಯ ನಾಯಕ ತಾನಲ್ಲದಿದ್ದರೂ ಅಲ್ಲಿನ ನಾಯಕರಿಂದ ಆಹ್ವಾನಿಸಲ್ಪಟ್ಟ ಫೆರ್ನಾಂಡಿಸ್ 3ದಿನಗಳ ಮುಷ್ಕರವನ್ನು 1ದಿನದ ಭಾರತ್ ಬಂದ್ ಮೂಲಕ ಯಶಸ್ವಿಗೊಳಿಸಿದರು. ಗಾಂಧಿತತ್ವ ಪಾಲಕರಾದ ಇವರ ಯಾವುದೇ ಪ್ರತಿಭಟನೆಗಳು ಹಿಂಸೆಯ ಮಾರ್ಗವನ್ನು ಹಿಡಿದಿರಲಿಲ್ಲ. ಕಾರ್ಮಿಕ ವರ್ಗದ ಉನ್ನತಿ ಅವರ ಧ್ಯೇಯ ವಾಕ್ಯವಾಗಿತ್ತು. ಅದಕ್ಕಾಗಿ ಟ್ಯಾಕ್ಸಿಮನ್ ವೆಲ್ಫೇರ್ ಟ್ರಸ್ಟ್ ಸ್ಥಾಪಿಸಿದ ಫೆರ್ನಾಂಡಿಸ್ ಪ್ರೀಪೇಯ್ಡಾ ಟ್ಯಾಕ್ಸಿ ವ್ಯವಸ್ಥೆಯನ್ನು ಜಾರಿಗೆ ತಂದರು. ವಿಶ್ವದಲ್ಲೇ ಪ್ರಥಮ ಎನಿಸಿಕೊಂಡ ಈ ವ್ಯವಸ್ಥೆಯನ್ನು ಬೇರೆ ದೇಶಗಳೂ ಅನುಸರಿಸಿದವು. ಟ್ಯಾಕ್ಸಿ ಕಾರ್ಮಿಕರಿಗಾಗಿ ಸ್ಥಾಪಿಸಿ, ಅವರಿಗೆ ಹಣದ ಸಹಾಯಹಸ್ತ ನೀಡುತ್ತಾ ಬಂದಿದ್ದ ‘ಬಾಂಬೆ ಲೇಬರ್ ಕೋ-ಆಪರೇಟಿವ್ ಬ್ಯಾಂಕ್’, (ಈಗ ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ಆಗಿದೆ.) ಅವರ ವಸತಿಗಾಗಿ ಸುಮಾರು 600 ರಿಂದ 700 ಮನೆಗಳ ನ್ನು ಹೊಂದಿದ್ದ ‘ಟ್ಯಾಕ್ಸಿಮನ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ’ಯ ನಿರ್ಮಾಣ ಜಾರ್ಜ್ ಫೆರ್ನಾಂಡಿಸ್ ಅವರ ಗುಣಗ್ರಾಹಿ ಮುಂದಾಳತ್ವಕ್ಕೆ ಸಾಕ್ಷಿ. ಈ ಹಿಂದೆ ಈ ನಗರದಲ್ಲಿ ಹೊಟೇಲ್ ಕಾರ್ಮಿಕರಾಗಿ, ಟ್ಯಾಕ್ಸಿ ಚಾಲಕರಾಗಿ, ಮಿಲ್ ಕಾರ್ಮಿಕರಾಗಿ ದುಡಿಯುತ್ತಿದ್ದವರು ಹೆಚ್ಚಿನವರು ಕನ್ನಡಿಗರಾಗಿದ್ದರು.

ಭಾರತದ ರೈಲು ಕಾರ್ಮಿಕರಿಗೆ ಹೊಸ ದಿಕ್ಕು ತೋರಿಸಿದವರು ಜಾರ್ಜ್ ಫೆರ್ನಾಂಡಿಸ್. ಅನಪೇಕ್ಷಿತವಾಗಿ ದೊರೆತ ‘ಆಲ್ ಇಂಡಿಯಾ ರೈಲ್ವೇಮೆನ್ ಫೆಡರೇಶನ್’ ಇದರ ಅಧ್ಯಕ್ಷ ಸ್ಥಾನ ವಹಿಸಿಕೊಂಡು, ತನಗೆ ಇಚ್ಛೆ ಇರದಿದ್ದರೂ ರೈಲ್ವೆ ಕಾರ್ಮಿಕರ ಇಪ್ಪತ್ತು ದಿನಗಳ ಮುಷ್ಕರ ಹಾಗೂ ಒಂದು ದಿನದ ಭಾರತ್ ಬಂದ್‌ನ್ನು ಶಾಂತಿಯುತವಾಗಿ ನಡೆಸಿದರು. ವಿ. ಪಿ. ಸಿಂಗ್ ಅವರ ಮಂತ್ರಿಮಂಡಲದಲ್ಲಿ ಕೇವಲ ಹನ್ನೊಂದು ತಿಂಗಳು ರೈಲ್ವೆ ಮಂತ್ರಿ ಆಗಿದ್ದ ಸಂದರ್ಭ ಕೊಂಕಣ ರೈಲ್ವೆಯ ಕೆಲಸಕ್ಕೆ ಕೈಹಾಕಿದರು. ಈ ಮೊದಲು ಟಿ. ಎ. ಪೈ ಮೊದಲಾದವರು ಮಂಗಳೂರಿನ ಕಡೆ ರೈಲು ಬೇಕೆಂದು ಒತ್ತಾಯ ಮಾಡಿದ್ದರು. ಆ ದುರ್ಗಮ ಹಾದಿಯಲ್ಲಿ ಅಸಾಧ್ಯವೆಂದು ಅದು ತಿರಸ್ಕರಿಸಲ್ಪಟ್ಟಿತ್ತು ಆದರೆ ಜಾರ್ಜ್ ಅವರು ಹಠ ಬಿಡಲಿಲ್ಲ. ಅಸಾಧ್ಯ ಎಂಬುದನ್ನು ಸಾಧ್ಯವಾಗಿಸುತ್ತೇನೆಂದು ಅವರು ತೋರಿಸಿಕೊಟ್ಟರು. ಕೊಂಕಣ ರೈಲು ಹಾದು ಹೋಗುವ ನಾಲ್ಕು ರಾಜ್ಯಗಳಿಂದ ಈ ಕೆಲಸಕ್ಕೆ ಹಣ ದೊರೆಯುವಂತೆ ಮಾಡಿದ ಜಾರ್ಜ್ ಫೆರ್ನಾಂಡಿಸ್ ಕೊಂಕಣ ರೈಲು ನಿಗಮದ ಸ್ಥಾಪನೆ ಮಾಡಿದರು. ‘ಕೊಂಕಣ ರೈಲು ಬಾಂಡ್’ ಬಂತು. ನಿಗಮಕ್ಕೆ ಶ್ರೀಧರನ್ ನಿರ್ದೇಶಕರಾದರು. ಮುಂದೆ ನಡೆದದ್ದೆಲ್ಲಾ ಒಂದು ಜಾದೂವಿನಂತೆ. ಯಾರೂ ಊಹಿಸದ ದುರ್ಗಮ ಪ್ರದೇಶದಲ್ಲಿ ಅಸಾಧ್ಯವಾದದ್ದು ಸಾಧ್ಯಗೊಂಡು, ಬೆಟ್ಟ ಗುಡ್ಡಗಳನ್ನೇ ಸೀಳಿ, ನದಿ ಕಣಿವೆಗಳನ್ನು ಹಾದು ರೈಲು ಹಾವಿನಂತೆ ಸರಿಯತೊಡಗಿತ್ತು.

ದತ್ತಾ ಸಾಮಂತ್ ಅಪ್ಪಟ ಮರಾಠಿ ಮಾನುಸ್. ಆದರೆ ಕನ್ನಡಿಗರ ಕಾರ್ಮಿಕ ಸಂಘಟನೆಗಳ ಬಗ್ಗೆ ಬರೆಯುವಾಗ ಡಾ. ದತ್ತಾ ಸಾಮಂತ್ ಹೆಸರು ಉಲ್ಲೇಖಿಸದಿದ್ದರೆ ಅದು ಕನ್ನಡಿಗರಿಗೆ ಅಪಚಾರವಾದಂತೆ. ಮುಂಬೈಯನ್ನು ಕಟ್ಟುವಲ್ಲಿ ಇಲ್ಲಿನ ಕನ್ನಡಿಗರದ್ದು ಅಗ್ರಪಾಲು. ಹೈದರಾಬಾದ್ ಕರ್ನಾಟಕದ ರಾಯಚೂರು, ಕಲಬುರಗಿ ಮೊದಲಾದ ಪ್ರಾಂತಗಳಿಂದ ಇಲ್ಲಿ ಕೂಲಿ ಕಾರ್ಮಿಕರಾಗಿ ಬಂದಿದ್ದ ಕನ್ನಡಿಗರಲ್ಲಿ ಕೆಲವರು ಘಾಟ್‌ಕೋಪರ್ ಪ್ರಾಂತದಲ್ಲಿ ರಸ್ತೆ, ಕಟ್ಟಡ, ಸೇತುವೆ, ಮೊದಲಾದ ನಿರ್ಮಾಣ ಕಾರ್ಯಗಳಿಗಾಗಿ ಜಲ್ಲಿಕಲ್ಲು ಹುಡಿಮಾಡುವ ಕಾಯಕದಲ್ಲಿ ತೊಡಗಿದ್ದರು. ಯಾವುದೇ ಸೌಲಭ್ಯವಿಲ್ಲದ ಈ ಅಮಾಯಕರು ಶೋಷಿತರೂ ಆಗಿದ್ದರು. ಅಂದಿನ ದಿನಗಳಲ್ಲಿ ವೈದ್ಯರಾಗಿದ್ದ ಡಾ. ದತ್ತ್ತಾ ಸಾಮಂತರ ಕ್ಲಿನಿಕ್‌ಗೆ ಬರುತ್ತಿದ್ದ ರೋಗಿಗಳು ಎಲ್ಲರೂ ಒಂದೇ ರೀತಿಯ ಕಾಯಿಲೆಗೆ ತುತ್ತಾಗುತ್ತಿದ್ದರು. ಅದುವೇ ಕ್ಷಯ ರೋಗ. ಈ ರೀತಿ ಯಾಕೆ ಎಂದು ಚಿಂತನೆಗೆ ತೊಡಗಿಕೊಂಡ ಡಾ. ದತ್ತಾ ಸಾಮಂತ್, ಈ ಕಾರ್ಮಿಕರ ನೆಲೆ, ಅವರ ಕೆಲಸ, ಸೇವಿಸುತ್ತಿದ್ದ ಆಹಾರಗಳ ಬಗ್ಗೆ ವಿಚಾರಿಸಿದರು. ಅವರ ಕೆಲಸದ ಜಾಗಕ್ಕೆ, ವಾಸಸ್ಥಾನಕ್ಕೆ ಭೇಟಿ ನೀಡಿದರು.

ಸುಮಾರು ಒಂದೂವರೆ-ಎರಡು ಸಾವಿರ ಜನ, ಎಲ್ಲರೂ ಕನ್ನಡಿಗರು. ಅವರೆಲ್ಲರ ಬದುಕಿನ ಬಗ್ಗೆ ಅಭ್ಯಸಿಸಿ ಅವರ ಕಾಂಟ್ರಾಕ್ಟ್ ದಾರರನ್ನು ಸಂಪರ್ಕಿಸಿ ಅವರಿಗೆ ಈ ಕೆಲಸದಿಂದ ಕಾರ್ಮಿಕರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮವನ್ನು ವಿವರಿಸಿ, ಅವರಿಗೆ ಕೆಲಸ ಮಾಡುವುದಕ್ಕೆ ಅಗತ್ಯ ಸಾಮಗ್ರಿಗಳ ಸರಬರಾಜಿನ ಅವಶ್ಯಕತೆ ಬಗ್ಗೆ ಒತ್ತಿ ಹೇಳಿದರು. ಕಾಂಟ್ರಾಕ್ಟ್ ದಾರ ಈ ಬಗ್ಗೆ ನಿರ್ಲಕ್ಷಿಸಿದಾಗ ಓರ್ವ ವೈದ್ಯರಾಗಿದ್ದ ಡಾ. ಸಾಮಂತ್ ಈ ಕನ್ನಡಿಗರಿಗಾಗಿ ಕಾರ್ಮಿಕ ಸಂಘಟನೆಯ ನೇತಾರ ದತ್ತಾ ಸಾಮಂತ್ ಆದರು. ‘‘ನಾನು ಜೀವ ಉಳಿಸುವ ವೈದ್ಯನಾಗಿದ್ದವ; ನಾನೆಂದೂ ಜೀವ ತೆಗೆಯುವ ಚಂಡಾಲ ಆಗಲಾರೆ’’ ಎಂದು ಹೇಳುತ್ತಾ, ಜಲ್ಲಿಕುಟ್ಟುವ ಜನರ ದೇವರಾಗಿ ಬಂದ ದತ್ತಾ ಸಾಮಂತರ ಆನಂತರದ ಕಾರ್ಮಿಕ ಹೋರಾಟ ಈ ನಗರಿ ಸದಾ ಸ್ಮರಿಸುವಂತಹದ್ದು.

ದತ್ತಾ ಸಾಮಂತರ ಸಲಹೆ, ಸೂಚನೆಗಳನ್ನು ಸದಾ ಪಡೆಯುತ್ತಾ ತಮ್ಮ ಬಾಯರ್ ಇಂಡಿಯಾ ಕಂಪೆನಿಯ ಇತರ ನಾಲ್ವರು ಕಾರ್ಮಿಕರ ಜೊತೆ ಸೇರಿ ಸಮಯೋಚಿತ ತೀರ್ಮಾನ ಕೈಗೊಳ್ಳುತ್ತಿದ್ದ ಓರ್ವ ಪ್ರಾಮಾಣಿಕ ಕನ್ನಡಿಗ ಎ. ನರಸಿಂಹ ಬೊಮ್ಮರಬೆಟ್ಟು. ಜಾರ್ಜ್ ಫೆರ್ನಾಂಡಿಸ್‌ರ ಭಾಷಣಕ್ಕೆ ಮಾರುಹೋಗಿ ತನ್ನನ್ನು ತಾನು ಕಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಓರ್ವ ಕನ್ನಡ ರಾತ್ರಿಶಾಲೆಯ ಪೋರ ಬೊಮ್ಮರಬೆಟ್ಟು. ಹಾಗೆಯೇ ದೇಶ ‘ತುರ್ತುಪರಿಸ್ಥಿತಿ’ ಎದುರಿಸಿದಾಗ ಬರೋಡಾ ಡೈನಮೈಟ್ ಕೇಸ್‌ನಲ್ಲಿ ದಿಲ್ಲಿಯ ತಿಹಾರ್ ಜೈಲಿನಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ಜತೆಗಿದ್ದು ಬಹಳಷ್ಟು ಜೀವನಾನುಭವ ಪಡೆದಿದ್ದ, ಜಾರ್ಜ್ ಅವರ ಆತ್ಮೀಯ ವಲಯದಲ್ಲಿ ಓರ್ವರಾಗಿದ್ದವರು ಅಡ್ವಕೇಟ್ ಪದ್ಮನಾಭ ಶೆಟ್ಟಿ. ಸದಾ ಕಾರ್ಮಿಕರ ಪರವಾಗಿರುವ ಪದ್ಮನಾಭ ಶೆಟ್ಟಿ ಅವರು ಪ್ರಸ್ತುತ ಕಾರ್ಮಿಕರ ಪರ ವಕಾಲತ್ತು ಮಾಡುತ್ತಿದ್ದಾರೆ.

ಎಸ್. ಆರ್. ಕುಲಕರ್ಣಿ, ಕೆ. ಎ. ಖಾನ್ ಪಿ. ಡಿ’ಮೆಲ್ಲೊ ಅವರ ಆಪ್ತರಾ ಗಿದ್ದು ಸಂಘಟನೆಗಳಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಜಾರ್ಜ್ ಫೆರ್ನಾಂಡಿಸ್ ಅವರ ಜೊತೆ ಸುಮಾರು ಇಪ್ಪತ್ತು ವರ್ಷಗಳಿಂದ ಇದ್ದ ಮಂಗಳೂರಿನ ಎಸ್. ಆರ್. ರಾವ್ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜಾರ್ಜ್ ಅವರ ಸಂಘಟನೆ ಬಲಗೊಳ್ಳುವಲ್ಲಿ ಅವರೊಂದಿಗಿದ್ದು ಕಾರ್ಮಿಕರಿಗೆ ಹೊಸ ದಿಶೆಯನ್ನು ತೋರಿಸುವಲ್ಲಿ ನೆರವಾದವರ ದಂಡೇ ಇದೆ. ರಾಘವರಾವ್ (ಎಸ್. ಆರ್. ರಾವ್), ಶರದ್ ರಾವ್ (ಪ್ರಧಾನ ಕಾರ್ಯದರ್ಶಿ), ಕಾರವಾರದ ನಾರಾಯಣ ಪೆನಾನಿ, (ಬೆಸ್ಟ್ ವರ್ಕರ್ಸ್ ಯೂನಿಯನ್ ಗೌ.ಕಾರ್ಯದರ್ಶಿ) ಫೆರ್ನಾಂಡಿಸ್ ಅವರ ರಾಜಕೀಯ ಕಾರ್ಯದರ್ಶಿ ಫೆಡ್ರಿಕ್ ಡೇಸಾ, ‘ಬಾಂಬೆ ಡಾಕ್ ಆ್ಯಂಡ್ ಪೋರ್ಟ್ ಯೂನಿಯನ್‌ನ ಖಜಾಂಚಿ ಹಾಗೂ ಗೌ. ಕಾರ್ಯದರ್ಶಿಯಾಗಿದ್ದ ಎಸ್. ಆರ್. ಕುಲಕರ್ಣಿ, ಗೋಪಾಲ ಸೇರಿಗಾರ್, ವಿಶ್ವನಾಥ್ ಶೆಟ್ಟಿ, ‘ಬಾಂಬೆ ಲೇಖರ್ ಯೂನಿಯನ್’ನ ಈಗಿನ ಅಧ್ಯಕ್ಷರಾಗಿರುವ ಅಡ್ವಕೇಟ್ ಪಡುಬಿದ್ರಿ ಶಂಕರ ಶೆಟ್ಟಿ, ಅಡ್ವಕೇಟ್ ಶ್ರೀಧರ ಪೂಜಾರಿ, ‘ಮುನ್ಸಿಪಲ್ ಮಜ್ದೂರ್ ಯೂನಿಯನ್’ನ ಪ್ರಸ್ತುತ ಗೌ. ಕಾರ್ಯದರ್ಶಿಯಾಗಿರುವ ಅಡ್ವಕೇಟ್ ಮಹಾಬಲ ಶೆಟ್ಟಿ, ಕಾರ್ಯದರ್ಶಿ ಗೋಪಾಲ್ ಶೆಟ್ಟಿಗಾರ್, ಬಾಂಬೆ ಟ್ಯಾಕ್ಸಿಮೆನ್ಸ್ ಯೂನಿಯನ್‌ನ ಗೌರವ ಕಾರ್ಯದರ್ಶಿಯಾಗಿದ್ದ, ಒಳ್ಳೆಯ ಸಂಘಟಕ, ಮಾತುಗಾರ, ಜನಾನುರಾಗಿಯಾಗಿದ್ದ ಮುಹಮ್ಮದ್ ಹುಸೇನ್ ಬಾಜಿ, ಈಗಿನ ಗೌ. ಕಾರ್ಯದರ್ಶಿ ಎ. ಎಲ್. ಕೊಡ್ರಸ್, ಲೇಬರ್ ಯೂನಿಯನ್ ನ ಕಾರ್ಯದರ್ಶಿಯಾಗಿದ್ದ ಅಣ್ಣ ಸಾಣೆ ಇವರೆಲ್ಲರೂ ಕನ್ನಡಿಗರು.

ಜಾರ್ಜ್ ಫೆರ್ನಾಂಡಿಸ್ ಅವರ ಸಾಧನೆಯ ಏಳುಬೀಳುಗಳಲ್ಲಿ ಸಮಪಾಲು ಪಡೆದವರು. ಲಕ್ಷೋಪಲಕ್ಷ ಕಾರ್ಮಿಕರಿಗೆ ಅಂಧಕಾರದಲ್ಲಿ ಬೆಳಕು ತೋರಿಸಿದವರು. ಇವರಲ್ಲಿ ಜಾರ್ಜ್ ಅವರ ಸಂಘಟನೆಯಲ್ಲಿ ಇದ್ದುಕೊಂಡೇ ಪದ್ಮನಾಭ ಶೆಟ್ಟಿ ಮೊದಲಾದವರನ್ನು ಸೇರಿಸಿಕೊಂಡು, ಜಾರ್ಜ್ ಅವರ ಯೂನಿಯನ್ ಆಫೀಸ್‌ನಲ್ಲಿ ಉಳಿದುಕೊಂಡು, ಅಲ್ಲಿಯೇ ‘ಕನ್ನಡ ಕಲಾವಿದರ ಸಂಘ’ ಎಂಬ ನಾಟಕ ಸಂಸ್ಥೆಯನ್ನು ಕಟ್ಟಿಕೊಂಡಿರುವುದು ನಮ್ಮವರಿಗೆ ಕಲಾ ಪ್ರೇಮದ ಬಗೆಗಿದ್ದ ಅಪಾರ ಗೌರವವನ್ನು ಸೂಚಿಸುತ್ತದೆ. ಆ ದಿಟ್ಟತನದ ಕಲಾಪ್ರೇಮಿಗಳಲ್ಲೊಬ್ಬರಾಗಿ ಎಳವೆಯಿಂದಲೇ ಜಾರ್ಜ್ ಬಳಗದಲ್ಲಿದ್ದವರು ಉಮೇಶ್ ಶೆಟ್ಟಿ. ಅದೇ ಕಚೇರಿಯಲ್ಲಿ ‘ಮಾಜಂದಿ ಬರವು’ ಎಂಬ ನಾಟಕದ ತಾಲೀಮನ್ನು ಮಾಡಿ ಪದ್ಮನಾಭ ಶೆಟ್ಟಿ ಮೊದಲಾದವರನ್ನು ರಂಗಕ್ಕೆ ತಂದ ಕೀರ್ತಿ ಉಮೇಶ್ ಶೆಟ್ಟಿ ಅವರದ್ದು. ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಜೈಲು ಸೇರಿದ್ದ ಪದ್ಮನಾಭ ಶೆಟ್ಟಿ ಇಲ್ಲಿ ನಡೆಯುತ್ತಿದ್ದ ಅಂತರ್ ಕಾಲೇಜು ಏಕಪಾತ್ರಾಭಿನಯಕ್ಕೆ ತಾನು ಜೈಲಲ್ಲಿ ಜಾರ್ಜ್ ಮತ್ತು ಸಂಗಡಿಗರೊಂದಿಗಿದ್ದ ಪ್ರಸಂಗಗಳನ್ನೇ ಆಯ್ದು ಏಕಪಾತ್ರಾಭಿನಯ ಮಾಡಿ ಬಹುಮಾನಗಳನ್ನು ಗಿಟ್ಟಿಸುತ್ತಿದ್ದುದನ್ನು ನಾವು ಗುರುತಿಸಲೇಬೇಕು.

ಈ ಎಲ್ಲಾ ಕಾರ್ಮಿಕ ಸಂಘಟನೆಗಳ ಬಗ್ಗೆ ಬರೆಯುವಾಗ ಇಲ್ಲಿನ ಬ್ಯಾಂಕ್‌ಗಳಲ್ಲಿನ ಕಾರ್ಮಿಕ ಸಂಘಟನೆಗಳ ಬಗ್ಗೆ ನಾವು ಕಡೆಗಣಿಸುವಂತಿಲ್ಲ. ಊರಿನಿಂದ ಬರುತ್ತಿದ್ದ ಹಲವು ಮಂದಿ ರಾತ್ರಿ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತ, ಹೊಟೇಲ್ ಅಥವಾ ಬ್ಯಾಂಕ್‌ನಲ್ಲಿ ಗುಮಾಸ್ತರಾಗಿ ಸೇರಿಕೊಳ್ಳುತ್ತಿದ್ದರು. ತಾವು ರಾತ್ರಿ ಶಾಲೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿಕೊಂಡೇ ಬ್ಯಾಂಕುಗಳಲ್ಲಿ ಉನ್ನತಸ್ಥಾನಕ್ಕೇರುತ್ತಿದ್ದರು. ಅಂತಹವರೇ ಬ್ಯಾಂಕ್‌ಗಳಲ್ಲಿ ಕನ್ನಡ ಸಂಘಟನೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರೇ ಮುಂದೆ ಕಾರ್ಮಿಕರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಅಲ್ಲಿನ ಕಾರ್ಮಿಕ ಸಂಘಟನೆಗಳಲ್ಲಿ ತಮ್ಮನ್ನು ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಸೆಂಟ್ರಲ್ ಬ್ಯಾಂಕ್‌ನ ಕಾರ್ಮಿಕ ಸಂಘಟನೆಯಲ್ಲಿದ್ದು, ಸೆಂಟ್ರಲ್ ಬ್ಯಾಂಕ್‌ನ ರಾಷ್ಟ್ರೀಯ ಮಟ್ಟದ ಕಾರ್ಮಿಕ ಸಂಘಟನೆಯ ಗೌ. ಕಾರ್ಯದರ್ಶಿಯಾಗಿದ್ದ ಶರತ್‌ಚಂದ್ರ ಬಿಜೈ ಅಂತಹ ಧೀಮಂತ ವ್ಯಕ್ತಿಗಳಲ್ಲಿ ಓರ್ವರು. ಅಸ್ಖಲಿತ ಮಾತುಗಾರ, ಉತ್ಸಾಹಿ, ಕ್ರಿಯಾತ್ಮಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು ಬಿಜೈ. ಆದರೆ ಇಲ್ಲಿನ ಮರಾಠಿ ಮಾನುಸ್ ಅವರನ್ನು ಇರಗೊಡಲಿಲ್ಲ. ಕೊನೆಗೆ ರೋಸಿಹೋಗಿ ಈಗ ಬೆಂಗಳೂರಿನಲ್ಲಿ ಲೇಬರ್ ಲಾ ಪ್ರಾಕ್ಟೀಸ್ ಮಾಡುತ್ತಾ ಅಲ್ಲೂ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

ಈಶ್ವರ ಪುತ್ರನ್ ರಾಷ್ಟ್ರಮಟ್ಟದಲ್ಲಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರೆ, ಅದೇ ಬ್ಯಾಂಕಿನ ದೇವದಾಸ್ ಸಾಲ್ಯಾನ್ ಕ್ರಿಯಾಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸುಮಾರು ನಲವತ್ತೆರಡು ವರ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವರು. ಅವರು ಮುಂಬೈ ವಿಭಾಗದ ಜತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮುಂಬೈಯ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಬ್ಯಾಂಕ್ ಆಫ್ ಬರೋಡಾದ ಕನ್ನಡ ಸಂಘದಲ್ಲೂ ಚಟುವಟಿಕೆಯಿಂದಿದ್ದ ಕೇಶವ ಕೋಟ್ಯಾನ್, ಮುಂಬೈ ವಿಭಾಗದ ಅಧ್ಯಕ್ಷರಾಗಿ ರಾಷ್ಟ್ರಮಟ್ಟದ ಸಂಘಟನೆಯಲ್ಲಿ ಗೌ. ಕಾರ್ಯದರ್ಶಿಯಾಗಿ ಮಿಂಚಿದವರು. ಇವರು ಬ್ಯಾಂಕ್ ಆಫ್ ಬರೋಡಾ ಇದರ ‘ಬಿಒಬಿ ಪೆನ್ಸ್ ಫಂಡ್’ ಕಾರ್ಮಿಕರ ಪರವಾಗಿ ಟ್ರಸ್ಟಿಯಾಗಿ ಆಯ್ಕೆಗೊಂಡಿರುವುದು ಕನ್ನಡಿಗರು ಹೆಮ್ಮೆ ಪಡುವಂತದ್ದು. ದಿಟ್ಟತನದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದ ಎಂ. ರಾಜಗೋಪಾಲ್ ಜೊತೆ ಕಾರ್ಯದರ್ಶಿಯಾಗಿ ರಾಷ್ಟ್ರ ಮಟ್ಟದ ಗೌರವ ಕಾರ್ಯದರ್ಶಿಯಾಗಿದ್ದ ಕನ್ನಡಿಗ. ಮುಂಬೈ ವಲಯ ಹಾಗೂ ರಾಷ್ಟ್ರಮಟ್ಟದ ಖಜಾಂಚಿಯಾಗಿದ್ದವರು ಪಿ. ಎಂ. ಕೋಟ್ಯಾನ್. ಮುಂಬೈ ವಲಯದ ಅಧ್ಯಕ್ಷರು ಅಖಿಲ ಭಾರತ ಮಟ್ಟದ ಖಜಾಂಚಿಯಾಗಿದ್ದ ಪಿ. ಬಿ. ಪಾಂಗಳ್; ಮುಂಬೈ ವಲಯದ ಖಚಾಂಜಿ ಹಾಗೂ ಅಧ್ಯಕ್ಷರಾಗಿದ್ದ ಕೆ.ಟಿ. ಶೆಟ್ಟಿ; ಓರ್ವ ಧೀಮಂತ ವ್ಯಕ್ತಿತ್ವದ ಮಿಲಿಂದ್ ನಾಡಕರ್ಣಿ ಮುಂಬೈ ವಲಯದ ಗೌ. ಕಾರ್ಯದರ್ಶಿ, ರಾಷ್ಟ್ರಮಟ್ಟದ ಕಾರ್ಯದರ್ಶಿ ಹಾಗೂ ಎರಡು ಅವಧಿಗಳಲ್ಲಿ ಕಾರ್ಮಿಕ ಪರವಾಗಿ ಬ್ಯಾಂಕಿನ ನಿರ್ದೇಶಕರಾಗಿದ್ದವರು. ಇವರೆಲ್ಲರೂ ಅಪ್ಪಟ ಕನ್ನಡಿಗರು.

ಓರ್ವ ಕ್ರಿಯಾಶೀಲ ಸಂಘಟಕ, ‘ಯೂನಿಯನ್ ಬ್ಯಾಂಕ್ ಸ್ಟಾಫ್ ಯೂನಿಯನ್’ ಇದರ ಅಧ್ಯಕ್ಷರಾಗಿರುವ ಜಯಂತ್ ಕುಂದರ್ ‘ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್’ ಇದರ ಆರ್ಗನೈಜಿಂಗ್ ಕಾರ್ಯದರ್ಶಿಯೂ ಆಗಿದ್ದಾರೆ.

ವಿಜಯ ಬ್ಯಾಂಕಿನ ಆಫೀಸರ್ಸ್ ಅಸೋಸಿಯೇಷನ್‌ನಲ್ಲಿ ನಿರಂತರ ಹನ್ನೆರಡು ವರ್ಷ ತೊಡಗಿಸಿಕೊಂಡಿರುವ ರಘು ಮೊಯ್ಲಿ ಮುಂಬೈ ವಿಭಾಗದ ಖಜಾಂಚಿಯಾಗಿದ್ದಾರೆ. ಕೆನರಾ ಬ್ಯಾಂಕಿನಲ್ಲಿ (ಎಐಬಿಎ) ಗೌ. ಕಾರ್ಯದರ್ಶಿಯಾಗಿ ಮಿಂಚಿದ ಪ್ರಾಮಾಣಿಕ ಹೆಸರು ಏಕನಾಥ್ ಪೈ. ಅಲ್ಲದೆ, ಜಿ. ಎಂ. ವಿ ನಾಯ್ಕಾ ಗೌ. ಕಾರ್ಯದರ್ಶಿಯಾಗಿದ್ದರೆ ಅದೇ ಬ್ಯಾಂಕಿನ ಕೃಷ್ಣಪ್ಪ, ದಿವಾಕರ್ ಶೆಣೈ, ಬಿಡ್ಕರ್ ಮೊದಲಾದವರು ಕಾರ್ಮಿಕ ವರ್ಗದ ಉನ್ನತ ಸ್ಥಾನವನ್ನು ಅಲಂಕರಿಸಿದವರು. ಕಾರ್ಪೊರೇಶನ್ ಬ್ಯಾಂಕಿನ ವಿವಿಧ ಪದಾಧಿಕಾರಿಗಳಾಗಿ ಉನ್ನತ ಮಟ್ಟದ ಸೇವೆ ಒದಗಿಸಿದವರಲ್ಲಿ ರಾಮನಾಥ ಕಿಣಿ (ಅಧ್ಯಕ್ಷರು), ಗಣೇಶ್ ಕಾಮತ್ ಹೆಸರುಗಳು ಉಲ್ಲೇಖನೀಯ.

ಹಿಂದಿ ಪ್ರಚಾರದ ಶಿಕ್ಷಕರೂ ಜಾರ್ಜ್ ಫೆರ್ನಾಂಡಿಸ್‌ರ ತತ್ವ ಪಾಲಕರೂ ಆಗಿದ್ದ ಕರ್ಮರನ್ ಕನ್ನಡದ ವಿದ್ಯಾರ್ಥಿಗಳಿಗೆ ಹಿಂದಿಯ ದೀಕ್ಷೆ ತೊಡಿಸಿ ಪರರೊಂದಿಗೆ ಹೊರನಾಡಲ್ಲಿ ಹೋರಾಡುವುದಕ್ಕೆ ಬುನಾದಿ ಒದಗಿಸಿದವರು. ಅವರು ನ್ಯೂ ಇಂಡಿಯಾ ಇನ್ಶೂರೆನ್ಸ್ ಇದರ ಕಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು.
ಎಲ್ಲಾ ಕ್ಷೇತ್ರದ ಕಾರ್ಮಿಕ ವರ್ಗದ ಬಗ್ಗೆ ಹೇಳುವಾಗ ವೈಮಾನಿಕ ವಿಭಾಗವನ್ನು ಮರೆಯಲಾಗುವುದಿಲ್ಲ. ಇಂಡಿಯನ್ ಏರ್‌ಲೈನ್ಸ್‌ನಲ್ಲಿದ್ದು ಧೀಮಂತ ವ್ಯಕ್ತಿತ್ವದ ಬಿ. ನಾಗರಾಜ್ ಆಚಾರ್ಯ ಅವರು ಸದಾ ಪಾದರಸದ ಕ್ರಿಯಾಶೀಲತೆ ಉಳ್ಳವರು. ಏರ್‌ಲೈನ್ಸ್ ಕಾರ್ಮಿಕ ಸಂಘಟನೆಯ ವೆಸ್ಟರ್ನ್ ವಿಭಾಗದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರ ಸಮಿತಿಯಲ್ಲಿ ಕ್ರಿಯಾಶೀಲ ವ್ಯಕ್ತಿ ಎಂ. ಎಸ್. ರಾವ್ ಕಾರ್ಯನಿರ್ವಹಿಸುತ್ತಿದ್ದರು.

ಈ ಕಾರ್ಮಿಕ ಹೋರಾಟಗಾರರಲ್ಲಿ ಹಲವರು ಹೋರಾಟಕ್ಕಾಗಿ ಮನೆಮಠ ತ್ಯಾಗ ಮಾಡಿ, ಅಂತಿಮವಾಗಿ ಭ್ರಮನಿರಸನಗೊಂಡು ವಲಸೆ ಹೋದವರೂ ಇದ್ದಾರೆ. ಜಾರ್ಜ್ ಫೆರ್ನಾಂಡಿಸ್ ತುರ್ತು ಪರಿಸ್ಥಿತಿ ನಂತರ ಗೆದ್ದು ದಿಲ್ಲಿಯತ್ತ ಯಾವತ್ತು ಮುಖ ಮಾಡಿದರೋ, ಆಗ ಅಲ್ಲಿಯವರೆಗೆ ಮಲಗಿದ್ದ ‘ಹುಲಿ’ ಎಚ್ಚೆತ್ತುಕೊಂಡಿತು. ‘‘ಆ ಯೂನಿಯನ್ ನೋಡಿ, ಅಲ್ಲಿ ಕನ್ನಡಿಗ’’, ‘‘ಇಲ್ಲಿ ನೋಡಿ, ಆತ ಕನ್ನಡಿಗ ...ಮತ್ತೆ ನೀವು’’ ಎಂದು ಹೀಗೆಳೆಯುತ್ತಿರುವಂತೆ ಕನ್ನಡಿಗರ ಸ್ಥಾನವನ್ನು ಇತರರು ಆಕ್ರಮಿಸಲು ಆರಂಭಿಸಿದರು. ಈ ಪ್ರಾದೇಶಿಕ ರಾಜಕೀಯವು ಕಾರ್ಮಿಕ ವರ್ಗವನ್ನು ಮೇಲೆತ್ತುವ ನೆಪದಲ್ಲಿ ಪಾತಾಳಕ್ಕೆ ದೂಡಲಾರಂಭಿಸಿತು. ಈಗ ಏನಿದ್ದರೂ ಅಂದಿನ ಯೂನಿಯನ್‌ಗಳ ‘ಪ್ರೇತಾತ್ಮ’ಗಳಷ್ಟೇ ಕಾಣಲು ಸಿಗುತ್ತದೆ. ಅವುಗಳ ಉದ್ಧಾರಕ್ಕೆ ಮತ್ತೆ ಕನ್ನಡದ ಮಣ್ಣಿನಿಂದ ಡಿ’ಮೆಲ್ಲೋ, ಫೆರ್ನಾಂಡಿಸ್ ಅಥವಾ ಮರಾಠಿ ಮಣ್ಣಿನಿಂದ ಸಾಮಂತ್ ಹುಟ್ಟಿಬರಬೇಕೇ?

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News