ಕೊರೋನ ಸೋಂಕಿತೆಗೆ ರೆಮ್ಡೆಸಿವಿರ್ ಬದಲು ಗ್ಲುಕೋಸ್ ಇಂಜೆಕ್ಷನ್
ಕೋಟಾ, ಮೇ 23: ರೆಮ್ಡೆಸಿವಿರ್ಗೆ ಬದಲು ಗ್ಲುಕೋಸ್ ಇಂಜೆಕ್ಷನ್ ನೀಡಿ ಕೊರೋನ ಸೋಂಕಿತರೋರ್ವರ ಸಾವಿಗೆ ಕಾರಣರಾದ ಆರೋಪಕ್ಕೆ ಸಂಬಂಧಿಸಿ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ನರ್ಸ್ಗಳ ವಿರುದ್ಧ ಕೊಲೆಯಲ್ಲದ ದಂಡನೀಯ ನರಹತ್ಯೆ, ವಂಚನೆ ಹಾಗೂ ಕ್ರಿಮಿನಲ್ ಪಿತೂರಿ ಅಡಿಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ.
ಕಳೆದ ವಾರ ಸಂಭವಿಸಿದ ಈ ಘಟನೆ ಕುರಿತು ಕೊಟಾ ಜಿಲ್ಲಾಧಿಕಾರಿ ಉಜ್ವಲ್ ರಾಥೋಡ್ ಅವರು ತನಿಖೆಗೆ ಆದೇಶಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಕೋಟಾ ಹೃದ್ರೋಗ ಆಸ್ಪತ್ರೆಯ ನರ್ಸ್ಗಳಾದ ಮನೋಜ್ ರಾಯಗಢ, ರಾಕೇಶ್ ರಾಯಗಢ, ಬ್ರಿಜ್ಮೋಹನ್ ಹಾಗೂ ಆಡಳಿತ ನಿರ್ದೇಶಕ ರಾಕೇಶ್ ಜಿಂದಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜವಾಹರ್ ನಗರ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಾಮಕೃಷ್ಣ ವರ್ಮಾ ಹೇಳಿದ್ದಾರೆ. ನಗರದ ದಕ್ಖನಿಯಾ ರೈಲ್ವೆ ನಿಲ್ದಾಣ ಪ್ರದೇಶದ ನಿವಾಸಿ ಪುನೀತ್ ರೋಹಿದಾ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋಟಾದ ಹೃದ್ರೋಗದ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಾದ ನನ್ನ ತಾಯಿಯನ್ನು ದಾಖಲಿಸಲಾಗಿತ್ತು. ಅವರಿಗೆ ಶಿಫಾರಸು ಮಾಡಲಾದ ಎಲ್ಲ ಔಷದಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನರ್ಸ್ಗಳು ತನ್ನ ತಾಯಿಗೆ ರೆಮ್ಡೆಸಿವಿರ್ ನೀಡುವ ಬದಲು ಗ್ಲುಕೋಸ್ ಇಂಜೆಕ್ಷನ್ ನೀಡಿದ್ದಾರೆ. ಇದರಿಂದಾಗಿ ಅವರು ಮೇ 4ರಂದು ಸಾವನ್ನಪ್ಪಿದ್ದಾರೆ ಎಂದು ರೋಹಿದಾ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ವರ್ಮಾ ತಿಳಿಸಿದ್ದಾರೆ. ಈ ಹಿಂದೆ ಆಸ್ಪತ್ರೆಯ ಆಡಳಿತ ಮಂಡಳಿ ನರ್ಸ್ಗಳು ಆಸ್ಪತ್ರೆಯಿಂದ ಔಷಧಗಳನ್ನು ಕಳವುಗೈಯುತ್ತಿದ್ದಾರೆ ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿತ್ತು.