ಲಾಕ್ಡೌನ್ ನಿರ್ಬಂಧಗಳ ಪರಿಣಾಮ: ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇ.14.7ಕ್ಕೆ ಏರಿಕೆ

Update: 2021-05-25 15:21 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 25: ಮೇ 23ರಂದು ಕೊನೆಗೊಂಡ ವಾರದಲ್ಲಿ ಭಾರತದ ನಿರುದ್ಯೋಗ ಪ್ರಮಾಣವು ಶೇ.14.7ಕ್ಕೇದ್ದು, ಇದು 2020ರ ಜೂನ್ನಿಂದೀಚೆಗೆ ಅತ್ಯಧಿಕವೆಂದು ಭಾರತೀಯ ಆರ್ಥಿಕ ದತ್ತಾಂಶ ನಿಗಾವಣೆ ಕೇಂದ್ರ (ಸಿಎಂಐಇ) ತಿಳಿಸಿದೆ.

ಇದೇ ಅವಧಿಯಲ್ಲಿ ನಗರಪ್ರದೇಶಗಳಲ್ಲಿನ ಉದ್ಯೋಗ ಪ್ರಮಾಣವು ಶೇ.17.4ಕ್ಕೇ ಏರಿದ್ದು, ಅದರ ಹಿಂದಿನ ವಾರ ಶೇ.14.7 ಶೇಕಡದಷ್ಟಿತ್ತು. ಗ್ರಾಮೀಣ ನಿರುದ್ಯೋಗ ಪ್ರಮಾಣ ಕೂಡಾ ಇದೇ ಅವಧಿಯಲ್ಲಿ 13.5 ಶೇ.ದಷ್ಟಾಗಿದ್ದು, ಅದಕ್ಕಿಂತ ಹಿಂದಿನ ಶೇ.14.3ರಷ್ಟಿತ್ತು.
 
ಮಾರ್ಚ್ ತಿಂಗಳಲ್ಲಿ ಶೇ.6.5 ರಷ್ಟಿದ್ದ ನಿರುದ್ಯೋಗ ಪ್ರಮಾಣವು ಎಪ್ರಿಲ್ನಲ್ಲಿ ಶೇ.8ಕ್ಕೆ ಏರಿಕೆಯಾಗಿತ್ತು. ಇದೇ ವೇಳೆ ನಿರುದ್ಯೋಗ ಪ್ರಮಾಣವು ಮಾರ್ಚ್ನಲ್ಲಿ ಶೇ.37.6ರಷ್ಟಿದ್ದು, ಏಪ್ರಿಲ್ನಲ್ಲಿ ಶೇ.36.8ಕ್ಕೆ ತಲುಪಿರುವುದನ್ನು ಸಿಎಂಐಇ ದತ್ತಾಂಶಗಳು ತೋರಿಸಿಕೊಟ್ಟಿವೆ. 2020 ಎಪ್ರಿಲ್ನಲ್ಲಿ ಸಾಪ್ತಾಹಿಕ ನಿರುದ್ಯೋಗ ಪ್ರಮಾಣವು ಶೇ.23.45ಕ್ಕೆ ತಲುಪಿದ್ದು, ಮೇ ವೇಳೆಗೆ ಶೇ.21.7ರಲ್ಲಿ ಉಳಿದುಕೊಂಡಿದೆ.
    
2020ರ ಜೂನ್ ಆನಂತರ ಅಂದಾಜಿತ ಸಾಪ್ತಾಹಿಕ ನಿರುದ್ಯೋಗ ಪ್ರಮಾಣವು ಏಕ ಅಂಕಿಯಲ್ಲೇ ಉಳಿದುಕೊಂಡಿತ್ತಾದರೂ, ಈ ವರ್ಷದ ಮೇ 9ರಂದು ಕೊನೆಗೊಂಡ ವಾರದಲ್ಲಿ ಹಠಾತ್ತನೆ ಶೇ.8.7ರಷ್ಟಿದ್ದ ನಿರುದ್ಯೋಗ ಪ್ರಮಾಣವು ಮೇ 16ರಂದು ಕೊನೆಗೊಂಡ ವಾರದಲ್ಲಿ ಶೇ.14.7 ಶೇಕಡಕ್ಕೇರಿತು.

ಕೊರೋನ ವೈರಸ್ ನ ಎರಡನೆ ಅಲೆ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳು ಲಾಕ್ಡೌನ್ ಹೇರುವ ಮೂಲಕ ಜನರ ಚಲಿಸುವಿಕೆಯನ್ನು ನಿಯಂತ್ರಿಸಿರುವುದರಿಂದ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆಯಾಗಿದೆಯೆಂದು ವರದಿಗಳು ತಿಳಿಸಿವೆ.
     
2020ರ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಲ್ಪಟ್ಟ ಸಮಯದಲ್ಲಿ ಮಾತ್ರವೇ ನಿರುದ್ಯೋಗ ಪ್ರಮಾಣವು ಎರಡಂಕಿಯನ್ನು ತಲುಪಿತ್ತು. ಆದರೆ ಈಗ ಜನಸಂಚಾರವನ್ನು ತಡೆಗಟ್ಟಲು ಸೌಮ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆಯಾದರೂ, ಕಳೆದ ವರ್ಷದಷ್ಟು  ಕಠಿಣವಾದ ಲಾಕ್ಡೌನ್ ಜಾರಿಯಲ್ಲಿಲ್ಲ. ಆದಾಗ್ಯೂ ನಿರುದ್ಯೋಗ ಪ್ರಮಾಣವು ಈಗಲೂ ಎರಡಂಕಿಯಲ್ಲಿರುವುದು ಸರಳವಾದ ಲಾಕ್ಡೌನ್ ನಿರ್ಬಂಧಗಳು ಕೂಡಾ ದೇಶದ ಆರ್ಥಿಕತೆಗೆ ಘಾಸಿ ಮಾಡುತ್ತಿರುವುದನ್ನು ತೋರಿಸುತ್ತದೆ ಎಂದು ಸಿಎಂಐಇ ಆಡಳಿತ ನಿರ್ದೇಶಕ ಮಹೇಶ್ ವ್ಯಾಸ್ ತಿಳಿಸಿದ್ದಾರೆ. 

ಎಪ್ರಿಲ್ 2021ರ ಆರಂಭದಲ್ಲಿ ನಗರ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಎಪ್ರಿಲ್ 1ರಂದು ಶೇ. 7.2ರಷ್ಟಿದ್ದುದು ಮೇ 23ರಂದು 12.7ಕ್ಕೆ ತಲುಪಿದೆ ಎಂದು ವ್ಯಾಸ್ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿಯೂ ನಿರುದ್ಯೋಗಿಗಳ ಸಂಖೆಯಲ್ಲಿ ಏರಿಕೆಯಾಗಿರುವುದು ಆತಂಕಕಾರಿ ಎಂದು ಅವರು ತಿಳಿಸಿದರು. ಆದಾಗ್ಯೂ ಕೇಂದ್ರ ಸರಕಾರ ಎಂನರೇಗಾ ಯೋಜನೆಯ ಮೂಲಕ ಗ್ರಾಮೀಣ ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ನೆರವಾಗಿದೆಯೆಂದು ವ್ಯಾಸ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News