ಲಕ್ಷದ್ವೀಪ ಆಡಳಿತಾಧಿಕಾರಿಯ ಹೊಸ ನಿಯಮಾವಳಿಗಳ ವಿರುದ್ಧ ಸಿಡಿದೆದ್ದ ಅಲ್ಲಿನ ಬಿಜೆಪಿ ಮುಖ್ಯಸ್ಥ
ಹೊಸದಿಲ್ಲಿ: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಜಾರಿಗೊಳಿಸಿರುವ ಕೆಲವೊಂದು ವಿವಾದಾತ್ಮಕ ನಿಯಮಾವಳಿಗಳ ವಿರುದ್ಧ ಸಿಪಿಐ ಹಾಗೂ ಕಾಂಗ್ರೆಸ್ ಸದಸ್ಯರು ತಮ್ಮ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಅಲ್ಲಿನ ಬಿಜೆಪಿ ಅಧ್ಯಕ್ಷ ಮುಹಮ್ಮದ್ ಕಾಸಿಂ ಕೂಡ ಹೊಸ ನಿಯಮಗಳ ವಿರುದ್ಧ ಕಿಡಿ ಕಾರಿದ್ದಾರೆ. ಯಾವುದೇ ಬದಲಾವಣೆಗಳನ್ನು ತರುವ ಮುನ್ನ ಜನರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವುದು ಅಗತ್ಯ ಎಂದು ಕಾಸಿಂ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವುದಾಗಿಯೂ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಈಗಾಗಲೇ ಪಟೇಲ್ ಅವರನ್ನು ವಾಪಸ್ ಕರೆಸಬೇಕು ಹಾಗೂ ಅವರು ಜಾರಿಗೆ ತಂದಿರುವ ನಿಯಮಗಳನ್ನೂ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದೆ. ದಾದ್ರಾ ಮತ್ತು ನಗರ್ ಹವೇಲಿಯ ಆಡಳಿತಾಧಿಕಾರಿಯಾಗಿರುವ ಪಟೇಲ್ ಅವರಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ಲಕ್ಷದ್ವೀಪದ ಆಡಳಿತಾಧಿಕಾರಿ ದಿನೇಶ್ವರ್ ಶರ್ಮ ಅವರ ನಿಧನ ನಂತರ ಅಲ್ಲಿನ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು.
ಖಾಸಗಿ ಆಸ್ತಿಗಳನ್ನು ಅಭಿವೃದ್ಧಿಗಾಗಿ ಕಡ್ಡಾಯ ಸ್ವಾಧೀನ, ಪೊಲೀಸರಿಗೆ ಯಾರನ್ನು ಬೇಕಾದರೂ ಬಂಧಿಸಲು ಅಧಿಕಾರ ನೀಡುವ ಗೂಂಡಾ ವಿರೋಧಿ ನಿಯಮಗಳ ಜಾರಿ, ಶಾಲೆಗಳ ಮಧ್ಯಾಹ್ನದ ಊಟದಿಂದ ಬೀಫ್ ಕೈಬಿಟ್ಟಿರುವುದು, ರಸ್ತೆ ಅಗಲೀಕರಣ ಯೋಜನೆಗಳಿಗೆ ಮರಗಳನ್ನು ಕಡಿಯಲು ಅನುಮತಿ ಹಾಗೂ ಸ್ಥಳೀಯಾಡಳಿತ ಚುನಾವಣೆಗಳಿಗೆ ಸ್ಪರ್ಧಿಸುವವರಿಗೆ ಎರಡು ಮಕ್ಕಳ ನೀತಿ ಅನ್ವಯಿಸುವ ಕ್ರಮವನ್ನು ಯಾವುದೇ ಚರ್ಚೆಯಿಲ್ಲದೆ ಪಟೇಲ್ ಜಾರಿಗೊಳಿಸಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಇದೀಗ ಬಿಜೆಪಿ ನಾಯಕರೇ ಇದನ್ನು ವಿರೋಧಿಸಲು ಕಾಂಗ್ರೆಸ್ ಮತ್ತು ಸಿಪಿಐ ನಾಯಕರ ಜತೆ ದನಿಗೂಡಿಸಿದ್ದಾರೆ. ಶೇ95ರಷ್ಟು ಮುಸ್ಲಿಂ ಜನಸಂಖ್ಯೆಯಿರುವ ದ್ವೀಪವನ್ನು ಅವರು ಕೇಸರೀಕರಣಗೊಳಿಸಲು ಯತ್ನಿಸುತ್ತಿದ್ದಾರೆಂದು ಕಾಂಗ್ರೆಸ್, ಸಿಪಿಎಂ ಮತ್ತು ಮುಸ್ಲಿಂ ಲೀಗ್ ಈಗಾಗಲೇ ಆರೋಪಿಸಿವೆ.
ಗುಜರಾತ್‍ನಲ್ಲಿ ನರೇಂದ್ರ ಮೋದಿ ಸಿಎಂ ಆಗಿದ್ದ ವೇಳೆ ಗೃಹ ಸಚಿವರಾಗಿದ್ದ ಪಟೇಲ್ ಅವರ ಬೆಂಬಲಕ್ಕೆ ಬಿಜೆಪಿ ನಿಂತಿದೆ. ಆದರೆ ಹೊಸ ನಿಯಮಗಳನ್ನು ಕಾಸಿಂ ಅವರು ವಿರೋಧಿಸಿರುವ ಕುರಿತು ತಮಗೆ ತಿಳಿದಿಲ್ಲ ಎಂದು ಲಕ್ಷದ್ವೀಪ ಬಿಜೆಪಿ ಉಪಾಧ್ಯಕ್ಷ ಎ ಪಿ ಅಬ್ದುಲ್ಲಾ ಕುಟ್ಟಿ ಹೇಳಿದ್ದಾರಲ್ಲದೆ ಇತರ ಪಕ್ಷಗಳು ನಡೆಸುತ್ತಿರುವ 'ಲಕ್ಷದ್ವೀಪ ಉಳಿಸಿ ಅಭಿಯಾನ' ರಾಜಕೀಯ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರೆ.
ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಕೂಡ ಲಕ್ಷದ್ವೀಪದ ಆಡಳಿತಾಧಿಕಾರಿ ಕ್ರಮವನ್ನು ಸಮರ್ತಿಸಿದ್ದಾರೆ. ದ್ವೀಪದಲ್ಲಿ ಬೀಫ್ ಅನ್ನು ಯಾವತ್ತೂ ನಿಷೇಧಿಸಿರಲಿಲ್ಲ ಎಂದಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಬಿಜೆಪಿಯು ಶಾಂತಿಯುತ ದ್ವೀಪವನ್ನು ಇನ್ನೊಂದು ಕಾಶ್ಮೀರವಾಗಿಸಲು ಯತ್ನಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಆರೋಪಿಸಿದ್ದಾರೆ.
ಹಲವಾರು ಚಿತ್ರತಾರೆಯರು ಹಾಗೂ ಕಲಾವಿದರೂ ಲಕ್ಷದ್ವೀಪ ಉಳಿಸಿ ಅಭಿಯಾನವನ್ನು ಸೇರಿದ್ದಾರೆ. ಈ ನಡುವೆ ಲಕ್ಷದ್ವೀಪ ಆಡಳಿತಾಧಿಕಾರಿಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳ ಸಹಿತ ನಾಲ್ಕು ಮಂದಿಯನ್ನು ಲಕ್ಷದ್ವೀಪ ಪೊಲೀಸರು ಬಂಧಿಸಿದ್ದಾರೆ.