ಮುಂಬೈಯಲ್ಲಿ ಕನ್ನಡಿಗರು ಕಟ್ಟಿದ ಹಣಕಾಸು ಸಂಸ್ಥೆಗಳು

Update: 2021-05-27 19:30 GMT

ನಮ್ಮವರ ಬ್ಯಾಂಕ್‌ಗಳಿಂದಾಗಿ ಸುಮಾರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ದೊರಕಿದೆ. ಸಾವಿರಾರು ಸಣ್ಣಪುಟ್ಟ ಉದ್ಯೋಗಿಗಳು, ಹೊಟೇಲ್ ಉದ್ಯಮಿಗಳು, ಉದ್ಯೋಗಿಗಳು ಈ ಬ್ಯಾಂಕ್‌ಗಳಿಂದ ಲಾಭ ಪಡೆದು ಕೃತಾರ್ಥರಾಗಿದ್ದಾರೆ. ಈ ಬ್ಯಾಂಕ್‌ಗಳು ಹಾಗೂ ಕ್ರೆಡಿಟ್ ಸೊಸೈಟಿಗಳು ಅವಶ್ಯವಿದ್ದಾಗ ಮನೆ ರಿಪೇರಿಗಾಗಿ ಹಾಗೂ ವೈಯಕ್ತಿಕ ಸಾಲಗಳನ್ನು ನೀಡಿವೆ, ನೀಡುತ್ತಿವೆ. ಸಾವಿರಾರು ಮಂದಿಗೆ ಸ್ವಂತ ಉದ್ಯಮ ಕೈಗೊಳ್ಳಲು ಈ ಬ್ಯಾಂಕು, ಕ್ರೆಡಿಟ್ ಸೊಸೈಟಿಗಳು ಸಾಲ ಒದಗಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸಿವೆ. ಒಟ್ಟಾರೆ ಹೇಳುವುದಾದರೆ ಈ ಬ್ಯಾಂಕ್, ಕ್ರೆಡಿಟ್ ಸೊಸೈಟಿಗಳಿಂದ ಇಲ್ಲಿನ ಕನ್ನಡಿಗರ ಬದುಕಿನ ಪ್ರಗತಿ ಮತ್ತು ಹುಟ್ಟೂರಿನ ಪ್ರಗತಿ ಎರಡೂ ಒಟ್ಟೊಟ್ಟಿಗಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.



ಭಾರತದಲ್ಲಿ ಆಂಗ್ಲರ ಆಡಳಿತ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲದಲ್ಲಿ ಇಲ್ಲಿ ಬಡವರು ಕಡು ಬಡವರಾಗಿ, ಶ್ರೀಮಂತರು ಅತಿ ಶ್ರೀಮಂತರಾಗಿ ಇವರಿಬ್ಬರ ನಡುವೆ ಬಹುದೊಡ್ಡ ಕಂದಕ ಏರ್ಪಟ್ಟಿತ್ತು. ಅಂದಿನ ಆ ದಿನಗಳಲ್ಲಿ ಅಹಮದ್ ನಗರ ಹಾಗೂ ಪುಣೆಯಲ್ಲಿ ರೈತಾಪಿ ವರ್ಗ ಭೂ ಮಾಲಕರಿಂದ ಹಣವನ್ನು ಸಾಲವಾಗಿ ಪಡೆದುಕೊಳ್ಳುವ ಪರಿಸ್ಥಿತಿ ಇತ್ತು. ಆ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿಸಿ ರೈತಾಪಿ ಬಂಧುಗಳನ್ನು ಭೂಮಾಲಕರು ಸುಲಿಯುತ್ತಿದ್ದರು. ಅಂತಹ ಸಂದರ್ಭದಲ್ಲಿ ಭೂಮಾಲಕರ ವಿರುದ್ಧ ಪ್ರತಿಭಟನೆಗೆ ಅಲ್ಲಿನ ರೈತರು ಎದ್ದು ನಿಂತರು. ಇದನ್ನು ಕಂಡ ಅಂದಿನ ಬ್ರಿಟಿಷ್ ಸರಕಾರ ವಿಶೇಷ ಕಾಯ್ದೆಯೊಂದನ್ನು 1904ರಲ್ಲಿ ಜಾರಿಗೆ ತಂದಿತು. ಆ ಕಾಯ್ದೆಯೇ ‘ಕೋ-ಆಪರೇಟಿವ್ ಸೊಸೈಟಿ ಆ್ಯಕ್ಟ್’. ಭಾರತದಲ್ಲಿ ಈ ಮೊದಲೇ ಕೋ-ಆಪರೇಟಿವ್ ಸೊಸೈಟಿಗಳು ಇದ್ದರೂ ಅಧಿಕೃತವಾಗಿ ಕಾಯ್ದೆಯ ಪ್ರಕಾರ ಮೊದಲು ಸ್ಥಾಪನೆಯಾದ ಮೊದಲ ಕೋ- ಆಪರೇಟಿವ್ ಸೊಸೈಟಿ ‘ಎಗ್ರಿಕಲ್ಚರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’. ಕರ್ನಾಟಕದ ಗದಗದ ಕನಗಿನಹಲ್ ಎಂಬಲ್ಲಿ ಜನ್ಮತಾಳಿದ ಇದು ಭಾರತದ ಪ್ರಪ್ರಥಮ ಕೋ ಆಪರೇಟಿವ್ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕ್ರೆಡಿಟ್ ಸೊಸೈಟಿಯಾಗಿದೆ. ಈ ರೀತಿ ಜನ್ಮತಾಳಿದ ಕ್ರೆಡಿಟ್ ಸೊಸೈಟಿಗಳ ವಿಸ್ತೃತ ರೂಪವೇ ‘ಕೋ-ಆಪರೇಟಿವ್ ಬ್ಯಾಂಕ್’ಗಳು.

ಜನಸಾಮಾನ್ಯರು ತಮ್ಮಳಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಿಕೊಳ್ಳುವ ದೃಷ್ಟಿಯಿಂದ ಜನ್ಮತಾಳಿದ ಈ ಕಾಯ್ದೆಯ ಅಡಿಯಲ್ಲಿ ಇಂದು ಲಕ್ಷೋಪಲಕ್ಷ ಸಹಕಾರಿ ಸಂಸ್ಥೆಗಳು ಜನ್ಮತಾಳಿವೆ. ಆದರೆ ಇಲ್ಲಿ ನಮಗೆ ಈಗ ಮುಖ್ಯವಾಗುವುದು ಮುಂಬೈ ಮಹಾನಗರದಲ್ಲಿ ಜನ್ಮತಾಳಿದ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಗಳ ವಿಸ್ತೃತ ರೂಪವಾದ ಕನ್ನಡಿಗರ ಕೋ-ಆಪರೇಟಿವ್ ಬ್ಯಾಂಕ್‌ಗಳು. ಇದೀಗ ‘ಎಸ್‌ವಿಸಿ’ ಎಂದು ಗುರುತಿಸಲ್ಪಡುವ ಶ್ಯಾಮರಾವ್ ವಿಠಲ್ ಕೋ-ಆಪರೇಟಿವ್ ಬ್ಯಾಂಕ್, ಕ್ರೆಡಿಟ್ ಸೊಸೈಟಿ ರೂಪದಲ್ಲಿ 1906ರ ಡಿಸೆಂಬರ್ 27ರಂದು ರಾವ್ ಬಹದ್ದೂರ್ ಶ್ರೀಪಾದ್ ಸುಬ್ಬರಾವ್ ತಾಲಿಮಕ್ಕಿಯವರು ತಮ್ಮ ಮಾರ್ಗದರ್ಶಕರು, ಗುರುಗಳೂ ಆಗಿದ್ದ ಶ್ಯಾಮರಾವ್ ವಿಠಲ್ ಕಾಯ್ಕಿಣಿ ಅವರ ನೆನಪಲ್ಲಿ ಸ್ಥಾಪಿಸಿದ ಸಂಸ್ಥೆ. 1956ರಿಂದ ಅಧಿಕೃತವಾಗಿ ಎಲ್ಲ ಸಮುದಾಯದ ಜನರಿಗೂ ತನ್ನ ಸೇವೆಯನ್ನು ನೀಡಲು ಮುಂದಾದ ಈ ಸಂಸ್ಥೆ, ಬೆಳೆಯುತ್ತಾ 1988ರಲ್ಲಿ ಶೆಡ್ಯೂಲ್ ಬ್ಯಾಂಕ್ ಆಗಿ ಹಲವು ದಾಖಲೆಗಳನ್ನು ಬರೆದಿದೆ. 2,400 (2018ರವರೆಗೆ) ಮಂದಿ ಸಿಬ್ಬಂದಿವರ್ಗವನ್ನೂ, ರೂ. 28,108ಕೋಟಿ ವಾರ್ಷಿಕ ವ್ಯವಹಾರವನ್ನೂ ಹೊಂದಿರುವ ಬೃಹತ್ ‘ಎಸ್‌ವಿಸಿ’ ಬ್ಯಾಂಕ್, ಕರ್ನಾಟಕವನ್ನೂ ಒಳಗೊಂಡು ಹತ್ತು ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ರಾಷ್ಟ್ರಮಟ್ಟದ ಹಲವಾರು ಪುರಸ್ಕಾರಗಳನ್ನು ಪಡೆದಿದೆ. ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ದೇಶದಲ್ಲೇ ಮೂರನೇ ಸ್ಥಾನವನ್ನು ಗಳಿಸಿರುವ, ಕನ್ನಡಿಗರು ಕಟ್ಟಿದ ಹೆಮ್ಮೆಯ ಈ ಬ್ಯಾಂಕ್‌ಗೆ, ಈಗ ದುರ್ಗೇಶ್ ಎಸ್. ಚಂದಾವರ್‌ಕರ್ ಕಾರ್ಯಾಧ್ಯಕ್ಷರಾಗಿದ್ದು, ಬ್ಯಾಂಕ್ ಅಭಿವೃದ್ಧಿ ಪಥದಲ್ಲಿದೆ.

ಜಾನ್ ಡಿ’ಸಿಲ್ವಾ ಅವರ ನಾಯಕತ್ವದಲ್ಲಿ ಮಾಧವ ಪ್ರಭು, ರಘುರಾಮ ಶೆಟ್ಟಿ ಮೊದಲಾದವರಿಂದ ಅಸ್ತಿತ್ವಕ್ಕೆ ಬಂದ ಅಭ್ಯುದಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ(1964), ಜೂನ್ 25, 1965ಕ್ಕೆ ಬ್ಯಾಂಕ್ ಆಗಿ ಪರಿವರ್ತನೆಗೊಂಡಿತ್ತು. ಕೇವಲ ರೂ. 5,000 ಮೊತ್ತದಿಂದ ಪ್ರಾರಂಭಗೊಂಡ ಈ ಬ್ಯಾಂಕ್ ಈಗ ಮಹಾರಾಷ್ಟ್ರ, ಗುಜರಾತ್ ಹಾಗೂ ಕರ್ನಾಟಕಗಳಲ್ಲಿ 111 ಶಾಖೆಗಳನ್ನು ಒಳಗೊಂಡು ಶೆಡ್ಯೂಲ್ಡ್ (2007) ಬ್ಯಾಂಕ್ ಆಗಿ ಗುರುತಿಸಲ್ಪಡುತ್ತಿದೆ. ಪ್ರಥಮವಾಗಿ ಅತಿಸಣ್ಣ ಹಳ್ಳಿಗಾಡಿನಲ್ಲಿ ತನ್ನ ಶಾಖೆಯನ್ನು ಪ್ರಾರಂಭಿಸಿದ ಕೀರ್ತಿ ಈ ಬ್ಯಾಂಕಿನದ್ದು. ಈಗ 2,957 ಮಂದಿ ಸಿಬ್ಬಂದಿಯನ್ನು ಹೊಂದಿರುವ, ರೂ. 11,001.00 ಕೋಟಿ (11.05. 2021ರವರೆಗೆ) ಠೇವಣಿಯನ್ನು ಹೊಂದಿರುವ, ಪ್ರೇಮನಾಥ ಸಾಲ್ಯಾನ್ ಈಗ ಕಾರ್ಯಾಧ್ಯಕ್ಷರಾಗಿರುವ ಈ ಅಭ್ಯುದಯ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿ ಕನ್ನಡಿಗರಿಗೆ ಹೆಮ್ಮೆ ತಂದಿದೆ.
ಭಾರತ ಕಂಡ ಅತ್ಯಂತ ಮೇಧಾವಿ ಕಾರ್ಮಿಕ ಮುಖಂಡ ಜಾರ್ಜ್ ಫೆರ್ನಾಂಡಿಸ್ ಅವರ ದೂರದೃಷ್ಟಿಯ ಪರಿಣಾಮ ಅಸ್ತಿತ್ವಕ್ಕೆ ಬಂದ ಬ್ಯಾಂಕ್ ‘ಲೇಬರ್ ಕೋ-ಆಪರೇಟಿವ್ ಬ್ಯಾಂಕ್’. ಮುಂದೆ ಇದೇ ಬ್ಯಾಂಕ್ ‘ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್’ ಎಂದು ಪುನರ್‌ನಾಮಕರಣಗೊಂಡು ಜನರ ಸೇವೆಯಲ್ಲಿ ತೊಡಗಿಕೊಂಡಿದೆ. ನವೆಂಬರ್ 21, 1967ರಂದು ನೋಂದಾವಣೆಗೊಂಡ ಈ ಬ್ಯಾಂಕ್ ಟ್ಯಾಕ್ಸಿ ಚಾಲಕರ, ಫ್ಯಾಕ್ಟರಿ ಕಾರ್ಮಿಕವರ್ಗದ ಬೆನ್ನೆಲುಬಾಗಿ ನಿಂತಿತ್ತು. ಕೇವಲ 555 ಸದಸ್ಯರನ್ನು ಹೊಂದಿದ್ದ ಬ್ಯಾಂಕ್ ಇಂದು 9,891 ಸದಸ್ಯರನ್ನು ಹೊಂದಿದೆ. 1994ರಲ್ಲಿ ಶೆಡ್ಯೂಲ್ಡ್ ಬ್ಯಾಂಕ್ ಆಗಿ ರೂಪಾಂತರಗೊಂಡಿತು. ರೂ. 2,367 ಕೋಟಿ ಠೇವಣಿ ಹೊಂದಿರುವ ಈ ಬ್ಯಾಂಕಿನ ಸದ್ಯದ ಕಾರ್ಯಾಧ್ಯಕ್ಷರಾಗಿ ರಂಜಿತ್ ಭಾನು ಕಾರ್ಯನಿರ್ವಹಿಸುತ್ತಿದ್ದಾರೆ. ರಂಜಿತ್ ಭಾನು ಅವರು ಓರ್ವ ಕಾರ್ಮಿಕ ಸಂಘಟನೆಯ ನಾಯಕ ಹಾಗೂ ಕ್ರಿಮಿನಲ್ ಲಾಯರ್ ಆಗಿದ್ದಾರೆ.

ಮುಂಬೈಯಲ್ಲಿ ಜಾತೀಯ ಸಂಘಟನೆಗಳು ತಮ್ಮ ತಮ್ಮ ಜಾತಿ ಬಾಂಧವರ ಏಳ್ಗೆಗಾಗಿ ಶಾಲೆ-ಕಾಲೇಜು, ಸಾಂಸ್ಕೃತಿಕ ಭವನ, ಪತ್ರಿಕೆ..ಹೀಗೆ ಹತ್ತು ಹಲವು ಮಾರ್ಗಗಳ ಮೂಲಕ ಸಮಾಜವನ್ನು ಮುಂದೆ ತರಲು ಪ್ರಯತ್ನಿಸಿವೆ. ಇಂದು ಅವು ಈ ಮಹಾನಗರದಲ್ಲಿ ತಮ್ಮ ಜಾತಿ ಬಾಂಧವರ ಜೊತೆಗೆ ಇತರರ ಬೆಳವಣಿಗೆಗೂ ಕಾರಣವಾಗಿವೆ. ಈ ಜಾತಿ ಸಂಘಟನೆಗಳೂ ಕ್ರೆಡಿಟ್ ಸೊಸೈಟಿ, ಬ್ಯಾಂಕುಗಳನ್ನು ಹುಟ್ಟು ಹಾಕಿವೆ.

1917ರಲ್ಲಿ ಶೇಟ್ ಶಾಂತರಾಮ ಮಂಗೇಶ್ ಕುಲಕರ್ಣಿ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಕಟ್ಟಿದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯೊಂದು ಮುಂದೆ ‘ಎನ್‌ಕೆಜಿಎಸ್‌ಬಿ ಕೋ-ಆಪರೇಟಿವ್ ಬ್ಯಾಂಕ್’ ಆಗಿ ಗೈದ ಸಾಧನೆ, ಏರಿದ ಎತ್ತರ ವಿಸ್ಮಯ ಹುಟ್ಟಿಸುವಂತಹದ್ದು. 1996ರಲ್ಲಿ ಶೆಡ್ಯೂಲ್ಡ್ ಬ್ಯಾಂಕ್ ಆಗಿ ರೂಪಾಂತರಗೊಂಡ ಈ ಸಂಸ್ಥೆಯ ಸದ್ಯದ (2019ರವರೆಗೆ) ಸದಸ್ಯ ಸಂಪತ್ತು 55,071. ರೂ. 7,876ಕೋಟಿ ಠೇವಣಿ ಹೊಂದಿದ್ದು ರೂ. 12,700 ಕೋಟಿ ವಾರ್ಷಿಕ ವ್ಯವಹಾರ ಹೊಂದಿದೆ. 2018ರಲ್ಲಿ ಇದರ ಸಿಬ್ಬಂದಿವರ್ಗ 1,157 ಆಗಿದ್ದು, ಇದರಲ್ಲಿ 655 ಮಂದಿ ಮಹಿಳಾ ಸಿಬ್ಬಂದಿಯೆಂದು ಸಂಸ್ಥೆ ಹೆಮ್ಮೆಯಿಂದ ಹೇಳುತ್ತಿದೆ. ಈ ಬ್ಯಾಂಕ್‌ನ ಸದ್ಯದ ಕಾರ್ಯಾಧ್ಯಕ್ಷರಾಗಿ ಕಿಶೋರ್ ಕುಲಕರ್ಣಿ ಬ್ಯಾಂಕಿನ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕವಲ್ಲದೆ ಮಧ್ಯಪ್ರದೇಶ, ದಮನ್, ದಾದ್ರಾ ಮತ್ತು ನಗರ ಹವೇಲಿಗಳಲ್ಲೂ 109 ಶಾಖೆಗಳನ್ನು ಹೊಂದಿರುವುದು ವಿಶೇಷ.

ಪ್ರಾರಂಭದಲ್ಲಿ ಅವಿಭಜಿತ ದಕ್ಷಿಣ ಕನ್ನಡದಿಂದ ಬಂದಿದ್ದ ಹೆಚ್ಚಿನ ಎಲ್ಲಾ ತುಳು ಕನ್ನಡಿಗರು ಕೋಟೆ ಪರಿಸರದ ಕಚೇರಿ ಬ್ಯಾಂಕುಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಅಂತಹವರು ಮುಂದೆ ಅದೇ ಕಚೇರಿಗಳಲ್ಲಿ ಬ್ಯಾಂಕ್‌ಗಳಲ್ಲಿ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಿದ್ದರು. ಅಂತಹವರು ತಮ್ಮ ಸಮಾಜ ಬಾಂಧವರನ್ನು ಸೇರಿಸಿ ತಮ್ಮ ಸಂಘಟನೆಗಳ ಮೂಲಕ ಬ್ಯಾಂಕುಗಳ ಸ್ಥಾಪನೆಗೆ ಕಾರ್ಯೋನ್ಮುಖರಾಗಿರುವುದನ್ನು ಗುರುತಿಸಬಹುದು.

ಅಂತಹ ಕೆಲವೊಂದು ಜಾತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಅವಿಭಜಿತ ದಕ್ಷಿಣ ಕನ್ನಡಿಗರ ಬ್ಯಾಂಕ್‌ಗಳಲ್ಲಿ 1916ರಲ್ಲಿ ಸ್ಥಾಪಿಸಲ್ಪಟ್ಟ ‘ಮಂಗಳೂರಿಯನ್ ಕೆಥೊಲಿಕ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಒಂದು. ಜಾನ್ ಡಿ’ಸಿಲ್ವಾ ಅವರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡು ಮುಂದೆ 1998ರಲ್ಲಿ ಈ ಸಂಸ್ಥೆಯು ‘ಮೋಡೆಲ್ ಕೋ-ಅಪರೇಟಿವ್ ಬ್ಯಾಂಕ್’ ಎಂಬ ಹೊಸ ಹೆಸರಿನೊಂದಿಗೆ ಪ್ರಪಂಚಕ್ಕೆ ತನ್ನನ್ನು ತಾನು ಪರಿಚಯಿಸಿಕೊಂಡಿತ್ತು. ಈ ನಗರಿಯಲ್ಲಿ ಹಲವಾರು ಸಹಕಾರಿ ಬ್ಯಾಂಕ್ ಗಳ ಹುಟ್ಟಿಗೆ ಕಾರಣರಾದವರು ಜಾನ್ ಡಿ’ ಸಿಲ್ವಾ. ಆದ್ದರಿಂದಲೇ ಇಲ್ಲಿನ ಜನತೆ ಅವರನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ಆಚಾರ್ಯ ಎಂದು ಗುರುತಿಸುತ್ತಿದೆ. ಸದ್ಯ ಮುದ್ರಣ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ ಮೋಡೆಲ್ ಕೋ-ಆಪರೇಟಿವ್ ಬ್ಯಾಂಕಿನ ಕಾರ್ಯಾಧ್ಯಕ್ಷರಾಗಿ ಅದರ ಅಭಿವೃದ್ಧಿಯಲ್ಲಿ ಧೀಶಕ್ತಿಯಾಗಿದ್ದಾರೆ. ರಾಜ್ಯಾದ್ಯಂತ 25 ಶಾಖೆಗಳನ್ನೂ, ಸುಮಾರು 180 ಸಿಬ್ಬಂದಿವರ್ಗವನ್ನೂ ಹೊಂದಿರುವ ಈ ಬ್ಯಾಂಕಿನ ಸದ್ಯದ ಠೇವಣಿ ಮೊತ್ತ ರೂ. 1,103 ಕೋಟಿ. ಅವಿಭಜಿತ ದಕ್ಷಿಣ ಕನ್ನಡದಿಂದ ಇಲ್ಲಿಗಾಗಮಿಸಿ ಇಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ಹೆಗ್ಗಳಿಕೆ ಮೊಗವೀರರದ್ದು. ಅಂತಹ ಸಾಹಸವೀರರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಇಳಿದಿಲ್ಲ ಎಂದರೆ ಹೇಗೆ? ಮೊಗವೀರ ವ್ಯವಸ್ಥಾಪಕ ಮಂಡಳಿಯು ತಮ್ಮದೇ ಆದ ಬ್ಯಾಂಕೊಂದರ ಕನಸಿನಲ್ಲಿ ಕಾರ್ಯಪ್ರವೃತ್ತರಾಗಿ ಅದರ ಫಲವಾಗಿ 1946 ಜನವರಿ ತಿಂಗಳ 4ನೇ ತಾರೀಕಿನಂದು ಅಸ್ತಿತ್ವಕ್ಕೆ ಬಂದದ್ದು ‘ಮೊಗವೀರ ಕೋ- ಆಪರೇಟಿವ್ ಬ್ಯಾಂಕ್’. ಹಲವು ಏಳುಬೀಳುಗಳನ್ನು ಕಂಡ ಈ ಬ್ಯಾಂಕ್ ಸದ್ಯ ಸದಾನಂದ ಕೋಟ್ಯಾನ್ ಅವರ ಕಾರ್ಯಾಧ್ಯಕ್ಷತೆಯಲ್ಲಿ ಸದೃಢವಾಗಿ ನಿಂತಿದೆ. ಆಡಳಿತ ಕಚೇರಿಯೊಂದಿಗೆ 11 ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್‌ನಸಿಬ್ಬಂದಿ ಬಳಗ 193. ರೂ. 37,902 ಬಂಡವಾಳದೊಂದಿಗೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿದ್ದ ಈ ಬ್ಯಾಂಕಿನ ಸದ್ಯದ (31.3.2021ವರೆಗಿನ) ಠೇವಣಿ ಮೊತ್ತ ಸುಮಾರು 77 ಕೋಟಿ ರೂ.

ಜನವರಿ 1, 1962ರಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್‌ನ ಸಭೆಯಲ್ಲಿ ಮೊಳಕೆಯೊಡೆದ ಬೀಜ ಜೂನ್ 9, 1977ರಂದು ನೋಂದಾಯಿಸಲ್ಪಟ್ಟು, ಬಿಲ್ಲವರ ಅಸೋಸಿಯೇಶನ್ ಪ್ರಾಯೋಜಿತ ಬ್ಯಾಂಕ್ ‘ಭಾರತ್ ಕೋ-ಆಪರೇಟಿವ್ ಬ್ಯಾಂಕ್’ ಆಗಿ ಅರಳಿತು. 1978 ಆಗಸ್ಟ್ 20ರಂದು ಅಂದಿನ ಮಹಾರಾಷ್ಟ್ರ ಶಾಸನದ ಮಂತ್ರಿ ಹಶು ಅದ್ವಾನಿಯವರು ಉದ್ಘಾಟಿಸಿ ಸರ್ವಸಮಾಜಕ್ಕೆ ಬ್ಯಾಂಕನ್ನು ಸೇವೆಗಾಗಿ ತೆರೆದರು. ವರದ ಉಳ್ಳಾಲ್ ಪ್ರಾರಂಭದ ಕಾರ್ಯಾಧ್ಯಕ್ಷರಾಗಿ, ಡಿ. ಯು. ಸಾಲ್ಯಾನ್ ಮೊದಲಾದವರನ್ನೊಳಗೊಂಡ ಆಡಳಿತ ಮಂಡಳಿ, ಜೊತೆಗೆ ಬಿಲ್ಲವರ ಅಸೋಸಿಯೇಶನ್ ಹೆಗಲುಕೊಟ್ಟು ಬ್ಯಾಂಕಿನ ಅಭಿವೃದ್ಧಿಗೆ ಕೈ ಜೋಡಿಸಿತು. ಕೇವಲ 4 ಮಂದಿ ಸಿಬ್ಬಂದಿ ವರ್ಗ ಹಾಗೂ ರೂ. 6ಲಕ್ಷ ನಿರ್ವಹಣಾ ಬಂಡವಾಳದೊಂದಿಗೆ ಪ್ರಾರಂಭಗೊಂಡ ಬ್ಯಾಂಕ್ ಇಂದು 103 (1 ವಿಸ್ತೃತ ಕೌಂಟರ್ ಒಳಗೊಂಡು) ಶಾಖೆಗಳನ್ನು ಹೊಂದಿದ್ದು; 1,434 ಸಿಬ್ಬಂದಿ ವರ್ಗವನ್ನು ಹೊಂದಿದೆ.

ಸುಮಾರು 2,14,730(33,611 ಸಾಮಾನ್ಯ) ಸದಸ್ಯ ಬಲವನ್ನು ಹೊಂದಿದೆ. ಸದ್ಯ ರೂ. 19,382.68 ಕೋಟಿ ವ್ಯವಹಾರ (31. 3. 2020ರವರೆಗೆ) ಹಾಗೂ 11,529.28 ಕೋಟಿ ರೂ. ಠೇವಣಿಯನ್ನು ಹೊಂದಿದೆ. ಎಲ್ಲಾ 103 ಶಾಖೆಗಳಲ್ಲಿ ಮಾತ್ರವಲ್ಲದೆ ಇನ್ನಿತರ 2 ಕಡೆಗಳಲ್ಲಿ ಎಟಿಎಂ ವ್ಯವಸ್ಥೆಯನ್ನು ಹೊಂದಿದೆ. ಪ್ರಾರಂಭ ಹಂತದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಬ್ಯಾಂಕಿನ ಸೂತ್ರವನ್ನು 1997ರ ನಂತರ ವಹಿಸಿಕೊಂಡ ಜಯ ಸಿ. ಸುವರ್ಣ ಹಾಗೂ ಅವರ ಬಳಗ, ಒಟ್ಟು ಬ್ಯಾಂಕಿನ ದಿಕ್ಕುದೆಸೆಯನ್ನೇ ಬದಲಾಯಿಸಿದರು. ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಉತ್ತುಂಗಕ್ಕೇರುತ್ತಾ ಬಂತು. ಜಯ ಸುವರ್ಣರ ನಂತರ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ ಬ್ಯಾಂಕನ್ನು ಮುನ್ನಡೆಸುತ್ತಿರುವವರು ಯು. ಶಿವಾಜಿ ಪೂಜಾರಿ. ಶೆಡ್ಯೂಲ್ಡ್ ಬ್ಯಾಂಕ್ ಆಗಿರುವ ಭಾರತ್ ಬ್ಯಾಂಕ್ ಮಹಾರಾಷ್ಟ್ರವಲ್ಲದೆ ಗುಜರಾತ್ ಹಾಗೂ ಕರ್ನಾಟಕದಲ್ಲೂ ತನ್ನ ಶಾಖೆಗಳನ್ನು ಹೊಂದಿದೆ. ಈಗಾಗಲೇ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಭಾರತ್ ಬ್ಯಾಂಕ್ ಪ್ರಸ್ತುತ ಅಖಿಲ ಭಾರತ ಮಟ್ಟದಲ್ಲಿ ಟಾಪ್ ಹತ್ತರಲ್ಲಿ ಐದನೇ ಸ್ಥಾನವನ್ನು ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

1974ರಲ್ಲಿ ಮೂವರು ಉದ್ಯೋಗಿಗಳೊಂದಿಗೆ ರೂ. 1.20ಲಕ್ಷ ಬಂಡವಾಳದೊಂದಿಗೆ ಅಸ್ತಿತ್ವಕ್ಕೆ ಬಂದ ವೀರಶೈವ ಬ್ಯಾಂಕ್ 2001 ಮಾರ್ಚ್ 31ರಲ್ಲಿ ರೂ. 1.07 ಕೋಟಿ ಷೇರು ಬಂಡವಾಳ ಹೊಂದಿತ್ತು. ಆದರೆ ಸದ್ಯ ಹಲವಾರು ಆಂತರಿಕ ತೊಡಕುಗಳಿಂದ ಈ ಬ್ಯಾಂಕು ಸ್ಥಗಿತಗೊಂಡಿದೆ. ‘ರಾಜಾಪುರ ಸಾರಸ್ವತ ಸಂಘ’ದ ಕನಸಿನ ಕೂಸು ಆರ್. ಎಸ್. ಕೋ-ಆಪರೇಟಿವ್ ಬ್ಯಾಂಕ್. 1958ರಲ್ಲಿ ‘ಶ್ರೀ ದುರ್ಗಾಪರಮೇಶ್ವರಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’ ಸ್ಥಾಪನೆಗೊಂಡು 1997ರಲ್ಲಿ ಆರ್.ಎಸ್. ಕೋ-ಅಪರೇಟಿವ್ ಬ್ಯಾಂಕ್ ಆಗಿ ಪರಿವರ್ತನೆಗೊಂಡಿತು. ಆದರೆ ಪ್ರಗತಿ ಹಂತದಲ್ಲಿರುವಾಗಲೇ ಹಲವು ಅಡಚಣೆಗಳನ್ನು ಎದುರಿಸಿ ಗುಜರಾತ್‌ನ ಬ್ಯಾಂಕೊಂದರ ಜತೆ ಈ ಬ್ಯಾಂಕನ್ನು ವಿಲೀನಗೊಳಿಸಲಾಯಿತು. ಹೀಗೆ ಕನ್ನಡಿಗರ ಬ್ಯಾಂಕೊಂದು ಇಲ್ಲವಾಯಿತು.

ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲದೆ ನೂರಾರು ಕ್ರೆಡಿಟ್ ಸೊಸೈಟಿಗಳು ಇಲ್ಲಿವೆ. ತನ್ನದೇ ಇತಿಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವುಗಳ ಸಾಧನೆ ಯಾರೂ ಮರೆಯುವಂತಹದ್ದಲ್ಲ. ಅದರಲ್ಲಿ 1940ರಲ್ಲಿ ಚನ್ನಬಸಪ್ಪಎನ್. ಕುಲಕರ್ಣಿ ಅವರ ಮುಂದಾಳತ್ವದಲ್ಲಿ ಅಸ್ತಿತ್ವಕ್ಕೆ ಬಂದ ‘ಕರ್ನಾಟಕ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ, ಮುಂಬೈ’ ಒಂದು. ಪ್ರಾ. ರಮೇಶ್ ವಿ. ಕಾಖಂಡಿಕಿಯವರ ಕಾರ್ಯಾಧ್ಯಕ್ಷತೆಯಲ್ಲಿ ಡೊಂಬಿವಿಲಿ ಹಾಗೂ ಮಾಟುಂಗದಲ್ಲಿ ಶಾಖೆಗಳನ್ನು ಹೊಂದಿದೆ. ಕುಲಾಲ ಸಂಘವು ಮುತುವರ್ಜಿ ವಹಿಸಿ ಬೆನ್ನೆಲುಬಾಗಿ ನಿಂತ ‘ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ (1981) ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದು. 5,807 ಸದಸ್ಯತನವನ್ನು ಹೊಂದಿರುವ ಈ ಸಂಸ್ಥೆ ರೂ. 28 ಕೋಟಿ ಠೇವಣಿಯನ್ನು ಹೊಂದಿದೆ. ಮುಖ್ಯ ಕಚೇರಿ ಹಾಗೂ 5 ಶಾಖೆಗಳನ್ನು ಹೊಂದಿರುವ ಈ ಸಂಸ್ಥೆ 22 ಸಿಬ್ಬಂದಿ ಹಾಗೂ 25 ಮಂದಿ ಏಜೆಂಟ್‌ಗಳನ್ನು ಹೊಂದಿದೆ.

ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಾತಿ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ‘ಬಂಟರ ಸಂಘ’ 1987-88ನೇ ಸಾಲಿನಲ್ಲಿ ಕ್ರೆಡಿಟ್ ಸೊಸೈಟಿಯೊಂದನ್ನು ತನ್ನದಾಗಿಸಿತು. ತನ್ನ ಸುಸಜ್ಜಿತ 5 ಶಾಖೆಗಳನ್ನೊಳಗೊಂಡಿರುವ, 22 ಸಿಬ್ಬಂದಿ ವರ್ಗವನ್ನು ಹೊಂದಿರುವ ‘ಮಾತೃಭೂಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ ಪ್ರಗತಿಯ ಹಾದಿಯಲ್ಲಿದೆ. ರೂ. 80.20 ಕೋಟಿ ಠೇವಣಿ ಹೊಂದಿರುವ ಸಂಸ್ಥೆಯ ಸದಸ್ಯರ ಸಂಖ್ಯೆ 18,500. ಸದ್ಯ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ರತ್ನಾಕರ್ ಶೆಟ್ಟಿ ಮುಂಡ್ಕೂರು ಇದ್ದಾರೆ. ಈ ಕ್ರೆಡಿಟ್ ಸೊಸೈಟಿಯು ಅತ್ಯುತ್ತಮ ಸಾಧನೆಗೈಯುತ್ತಿರುವುದು ಮಾತ್ರವಲ್ಲದೆ ಮುಂದೆ ತಮ್ಮದೇ ಆದ ‘ಮಾತೃಭೂಮಿ ಕೋ-ಆಪರೇಟಿವ್ ಬ್ಯಾಂಕ್’ ಆಗುವ ನಿರೀಕ್ಷೆಯಲ್ಲಿ ಕಾರ್ಯಪ್ರವೃತ್ತವಾಗಿದೆ.

‘ಶ್ರೀ ರಜಕ ಸಂಘ ಮುಂಬೈ’ ಇದರ ಹಿರಿಯ ಸದಸ್ಯ ಬಾಂಧವರ ಕನಸಿನ ಕೂಸು ‘ರಾಜಲಕ್ಷ್ಮೀ ಕೋ-ಆಪರೇಟಿವ್ ಸೊಸೈಟಿ’. ಫೆಬ್ರವರಿ 4, 1986ಕ್ಕೆ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಒಂದು ಶಾಖೆಯನ್ನು ಹೊಂದಿದೆ. ರೂ. 117.74ಲಕ್ಷ ಷೇರು ಬಂಡವಾಳ ಹಾಗೂ ರೂ. 133.33ಲಕ್ಷ ಠೇವಣಿ ಹೊಂದಿದ್ದು, ಪ್ರಗತಿಯ ಪಥದಲ್ಲಿದೆ. ಸದ್ಯ ಪಿ. ನೀಲಯ ಗುಜರನ್ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದಾರೆ.

1988-89ರಲ್ಲಿ ಅಸ್ತಿತ್ವಕ್ಕೆ ಬಂದ ‘ತುಳು ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’ಯ ಈಗಿನ ಕಾರ್ಯಾಧ್ಯಕ್ಷರು ಪ್ರತಿಭಾ ಕರ್ಕೇರ. ಸ್ಥಾಪಕರಲ್ಲಿ ಓರ್ವರಾದ ಎಂ. ಪಿ. ಪೈಯವರ ಮಾರ್ಗದರ್ಶನ ಈ ಸಂಸ್ಥೆಗೆ ಸದಾ ಇದೆ. ಈ ಸಂಸ್ಥೆಯ ಸ್ಥಾಪಕ ಕಾರ್ಯಾಧ್ಯಕ್ಷ ಸುರೇಶ್ ಶ್ರೀಯಾನ್.

ಸಾಮಾಜಿಕ, ಸಾಂಸ್ಕೃತಿಕ, ಸಾಂಘಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಜಿ. ಟಿ. ಆಚಾರ್ಯ ಕಾರ್ಯಾಧ್ಯಕ್ಷರಾಗಿರುವ ‘ಶ್ರೀ ಬಾಲಾಜಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’ ರೂ. 2.5 ಕೋಟಿ ಠೇವಣಿ ಹಾಗೂ ರೂ 2.75ಕೋಟಿ ಮುಂಗಡವನ್ನು ಹೊಂದಿದೆ. ಸದ್ಯ 4 ಸಿಬ್ಬಂದಿ ವರ್ಗವನ್ನು ಹೊಂದಿರುವ ಸಂಸ್ಥೆ ಕಾಂದಿವಿಲಿಯಲ್ಲಿ ತನ್ನ ಶಾಖೆಯನ್ನು ಹೊಂದಿದೆ.

1991ರಲ್ಲಿ 4ಮಂದಿ ಉದ್ಯಮಿಗಳು ಉತ್ಸಾಹದಿಂದ ಕಟ್ಟಿದ ಸಂಸ್ಥೆ ‘ಮೋಯಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’. ಅಂಧೇರಿಯಲ್ಲಿ ತನ್ನ ಕಚೇರಿಯನ್ನು ಹೊಂದಿರುವ ಸಂಸ್ಥೆಯು ಸುಮಾರು 2,500 ಸದಸ್ಯತನವನ್ನು ಹೊಂದಿದೆ. 1998ರಲ್ಲಿ ಅಸ್ತಿತ್ವಕ್ಕೆ ಬಂದ ‘ಕರ್ನಾಟಕ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’ ವಸಯಿ ಪರಿಸರದಲ್ಲಿ ಜನಾನುರಾಗಿಯಾಗಿದೆ. ಶೇಖರ್ ಕೋಟ್ಯಾನ್ ಮೊದಲಾದವರು ಮುತುವರ್ಜಿ ವಹಿಸಿರುವ ಈ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಭಾಸ್ಕರ್ ಕೆ. ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. 4 ಸಿಬ್ಬಂದಿ ಹಾಗೂ 4 ಮಂದಿ ಏಜೆಂಟರನ್ನು ಹೊಂದಿರುವ ಸುಮಾರು ರೂ. 87,000 ಷೇರು ಬಂಡವಾಳವನ್ನು ಹೊಂದಿರುವ ಸದೃಢ ಸಂಸ್ಥೆಯಿದು.

ದೇವಾಡಿಗ ಸಂಘದ ಕನಸಿನ ಕೂಸು ‘ಅಕ್ಷಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’. 2000ದಲ್ಲಿ ಧರ್ಮಪಾಲ್ ದೇವಾಡಿಗರವರು ದೇವಾಡಿಗ ಸಂಘದ ಅಧ್ಯಕ್ಷರಾಗಿದ್ದಾಗ ಜನ್ಮತಾಳಿದ ಈ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಈಗ ವಾಸು ಎಸ್. ದೇವಾಡಿಗ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 300 ಸದಸ್ಯತ್ವ ಹೊಂದಿರುವ ‘ಅಕ್ಷಯ’, ರೂ. 1. 10 ಕೋಟಿ ಷೇರು ಬಂಡವಾಳ ಹೊಂದಿದೆ. ಇನ್ನೊಂದು ಮುಂಚೂಣಿಯಲ್ಲಿರುವ ಸಂಸ್ಥೆ ‘ಜಯಲಕ್ಷ್ಮೀ ಕೋ-ಆಪರೇಟಿವ್ ಸೊಸೈಟಿ’. 2002ರಿಂದ ಅಂಧೇರಿ ಪರಿಸರದ ಚಕಾಲ ಲಿಂಕ್ ರೋಡಿನಲ್ಲಿರುವ ಇದರ ಕಚೇರಿ ಸುಸಜ್ಜಿತವಾಗಿದೆ. ಸುಮಾರು 17 ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆಯ ಹಿಂದೆ ಗುರು ಆರ್. ಗೌಡರು, ರಂಗಪ್ಪಸಿ. ಗೌಡರು, ರಾಜೆ ಕೆ. ಗೌಡರು, ಶೇಖರ್ ಜೆ. ಗೌಡರು ಮೊದಲಾದವರ ಪರಿಶ್ರಮವಿದೆ.

ದೊಡ್ಡ ರಾಷ್ಟ್ರೀಕತ ಬ್ಯಾಂಕ್‌ಗಳು ನಮ್ಮ ಜನಸಾಮಾನ್ಯರನ್ನು ತಲುಪುವಲ್ಲಿ ಅಸಮರ್ಥವಾಗಿವೆ. ಅಂತಹ ಸಂದರ್ಭಗಳಲ್ಲಿ ಈ ಬ್ಯಾಂಕು, ಕ್ರೆಡಿಟ್ ಸೊಸೈಟಿಗಳ ಮಹತ್ವ ದೊಡ್ಡದು. ಈ ಬ್ಯಾಂಕುಗಳು ಸುಮಾರು ಇಪ್ಪತ್ತೈದು ಲಕ್ಷಕ್ಕೂ ಮೀರಿ ಸದಸ್ಯತನವನ್ನು ಹೊಂದಿರುವುದು ಗಮನಾರ್ಹ. ರಾಷ್ಟ್ರೀಕೃತ ಬ್ಯಾಂಕ್‌ಗಳ ಎದುರು ಚಿಕ್ಕಪುಟ್ಟ ಬ್ಯಾಂಕುಗಳು ಉಳಿಯುವುದು ಕಷ್ಟ ಎನ್ನುವ ಕಾಲವೊಂದಿತ್ತು. ಅದೆಲ್ಲವನ್ನು ಮೀರಿ ಈ ಬ್ಯಾಂಕ್‌ಗಳು ಜನಸಾಮಾನ್ಯರ ಬ್ಯಾಂಕ್ ಗಳಾಗಿ ಏರಿದ ಎತ್ತರ ಅಚ್ಚರಿಯನ್ನುಂಟು ಮಾಡುತ್ತದೆ. ತಮ್ಮ ಪಿಗ್ಮಿ ಮೂಲಕ ಬಾರ್ ಮಾಲಕರಿಂದ ಹಣ ಸಂಗ್ರಹಿಸಿ ಅವರಿಗೆ ಮಾರ್ಚ್ ತಿಂಗಳಲ್ಲಿ ಸರಕಾರದ ಲೈಸನ್ಸ್ ಫೀ ಕಟ್ಟಲು ಈ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳು ನೆರವಾಗುವುದನ್ನು ನಾವು ಗಮನಿಸಬೇಕು. ‘‘ಹೊಟೇಲ್ ಕೆಲಸದವರು ತಮ್ಮ ದೈನಂದಿನ ಪಿಗ್ಮಿ ಕಟ್ಟುವ ಮೂಲಕ ಉಳಿತಾಯ ಮಾಡಿ ಊರಿನಲ್ಲಿರುವ ತಮ್ಮವರನ್ನು ಕಾಣುವುದಕ್ಕೆ ನೆರವಾಗುತ್ತದೆ’’ ಅನ್ನುತ್ತಾರೆ ಅಂಧೇರಿಯ ಹೊಟೇಲ್ ಕೆಲಸಗಾರ ಜ�

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News