ದೇಶಾದ್ಯಂತ ಮೂರು ತಿಂಗಳಲ್ಲಿ 50 ಮಾಡ್ಯುಲರ್ ಕೋವಿಡ್ ಆಸ್ಪತ್ರೆ

Update: 2021-06-14 03:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಕೊರೋನ ವೈರಸ್‌ನ ಮೂರನೇ ಅಲೆಯಲ್ಲಿ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿ ಹೆಚ್ಚುವ ಭೀತಿ ಇರುವ ಹಿನ್ನೆಲೆಯಲ್ಲಿ ರಾಜ್ಯಗಳ ಆರೋಗ್ಯ ಮೂಲಸೌಕರ್ಯಗಳಿಗೆ ಕ್ಷಿಪ್ರವಾಗಿ ಕಾಯಕಲ್ಪ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 50 ವಿನೂತನ ಮಾಡ್ಯುಲರ್ ಆಸ್ಪತ್ರೆಗಳನ್ನು ಮುಂದಿನ ಎರಡು- ಮೂರು ತಿಂಗಳ ಅವಧಿಯಲ್ಲಿ ನಿರ್ಮಿಸಲು ಸಜ್ಜಾಗಿದೆ.

ಹಾಲಿ ಇರುವ ಆಸ್ಪತ್ರೆಗಳ ಪಕ್ಕದಲ್ಲೇ ಮೂಲಸೌಕರ್ಯಗಳ ವಿಸ್ತರಣಾ ಘಟಕವಾಗಿ ಮಾಡ್ಯುಲರ್ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತದೆ. 100 ಹಾಸಿಗೆಗಳ ಈ ಮಾಡ್ಯುಲರ್ ಆಸ್ಪತ್ರೆಗಳು ವಿಶೇಷವಾದ ತೀವ್ರ ನಿಗಾ ಘಟಕ (ಐಸಿಯು)ಗಳನ್ನು ಹೊಂದಿರುತ್ತವೆ. ಮೂರು ವಾರಗಳೊಳಗೆ ಮೂರು ಕೋಟಿ ರೂಪಾಯಿ ಅಂದಾಜು ವೆಚ್ಚದ ಇಂಥ ಆಸ್ಪತ್ರೆಗಳನ್ನು ನಿರ್ಮಿಸಿ 6-7 ವಾರಗಳ ಒಳಗೆ ಇವು ಕಾರ್ಯಾಚರಣೆಗೆ ಸಜ್ಜಾಗಲಿವೆ ಎಂದು ಉನ್ನತ ಮೂಲಗಳು ಹೇಳಿವೆ.

ಈ ಉಪಕ್ರಮಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯರಾಘವನ್ ಅವರ ಕಚೇರಿ ಚಾಲನೆ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ದತ್ತಿ ಆಸ್ಪತ್ರೆಗಳಲ್ಲಿ ಇವು ಜಾರಿಯಾಗಲಿವೆ.

ಈ ಕ್ಷಿಪ್ರವಾಗಿ ನಿಯೋಜಿಸಬಹುದಾದ ಆಸ್ಪತ್ರೆಗಳು ಪ್ರಮುಖವಾಗಿ ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಆರೋಗ್ಯ ಮೂಲ ಸೌಕರ್ಯ ಅಂತರವನ್ನು ಕಡಿಮೆ ಮಾಡುವ ಮೂಲಕ ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೆರವಾಗಲಿವೆ.

ವಿದ್ಯುತ್, ನೀರು ಸರಬರಾಜು ಮತ್ತು ಆಮ್ಲಜನಕ ಪೈಪ್‌ಲೈನ್ ಹೊಂದಿರುವ ಯಾವುದೇ ಸರ್ಕಾರಿ ಆಸ್ಪತ್ರೆ, ಅದಕ್ಕೆ ಹೊಂದಿಕೊಂಡಂತೆ ಮಾಡ್ಯುಲರ್ ಆಸ್ಪತ್ರೆಯನ್ನು ಹೊಂದಲು ಅರ್ಹವಾಗಿರುತ್ತದೆ ಎಂದು ಪ್ರಧಾನ ವಿಜ್ಞಾನ ಸಲಹೆಗಾರರ ಕಚೇರಿಯ ಉದ್ಯಮ- ಶೈಕ್ಷಣಿಕ ಸಹಭಾಗಿತ್ವ ವಿಭಾಗದ ಸದಸ್ಯೆ ಅದಿತಿ ಲಿಲೆ ವಿವರಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯತೆಯನ್ನು ತಿಳಿದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News