ಮುಂಬೈ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿ ‘ಕನ್ನಡ ಕಲಾ ಕೇಂದ್ರ’

Update: 2021-06-25 05:37 GMT

ಟಿ. ಪಿ. ಕೈಲಾಸಂ, ಶ್ರೀರಂಗ, ಜಿ. ಬಿ. ಜೋಶಿ, ಚಂಪಾ, ಲಂಕೇಶ್, ಕಂಬಾರ, ಕಾರ್ನಾಡ್ ಮೊದಲಾದ ಶ್ರೇಷ್ಠ ಕನ್ನಡ ನಾಟಕಕಾರರ ನಾಟಕಗಳು ಕನ್ನಡ ಕಲಾ ಕೇಂದ್ರದ ನಾಟಕೋತ್ಸವಗಳಲ್ಲಿ ಅಭಿವ್ಯಕ್ತಿಗೊಂಡಿವೆ. ಸದಾನಂದ ಸುವರ್ಣ, ಕೆ. ಕೆ. ಸುವರ್ಣ, ಕೆ. ಜೆ. ರಾವ್, ಎಚ್ಕೆ ಕರ್ಕೇರ, ಡಾ. ಮಂಜುನಾಥ, ಆರ್. ಡಿ. ಕಾಮತ್ ಮೊದಲಾದವರು ನಾಟಕೋತ್ಸವಗಳಿಗಾಗಿಯೇ ನಾಟಕಗಳನ್ನು ಬರೆದರು. ಅನುವಾದ/ರೂಪಾಂತರಗಳನ್ನು ಮಾಡಿ ಕನ್ನಡ ನಾಟಕಕ್ಕೆ ಹೊಸ ಗಟ್ಟಿ ನಾಟಕಗಳು ಬರುವಂತೆ ಮಾಡಿದರು.

ಕನ್ನಡ ರಂಗಭೂಮಿಯ ಬಗ್ಗೆ ಬರೆಯುವಾಗ ಮುಂಬೈ ಕನ್ನಡ ರಂಗಭೂಮಿಯನ್ನು ಯಾವತ್ತೂ ನಿರ್ಲಕ್ಷಿಸುವಂತಿಲ್ಲ. ಕನ್ನಡಕ್ಕೆ ಪ್ರಥಮ ಸ್ವತಂತ್ರ ನಾಟಕವನ್ನು (1887) ಕೊಟ್ಟವರು ವೆಂಕಟರಮಣಶಾಸ್ತ್ರಿ ಸೂರಿ. ಆನಂತರದಲ್ಲಿ ಇಲ್ಲಿ ಒಂದಿಲ್ಲೊಂದು ನಾಟಕಗಳು ರಂಗದ ಮೇಲೆ ಬಂದಿರಬಹುದು. ಆದರೆ ಯಾವುದೇ ದಾಖಲೆಗಳು ಲಭ್ಯವಿಲ್ಲ. 1912ರಲ್ಲಿ ‘ಮುಂಬೈ ಕೆನರಾ ಡ್ರಮಾಟಿಕ್ ಅಮೆಚೂರ್ ಸಂಘ’ವು ಮಂಗಳಾಪುರ ನಾರಾಯಣ ಕಾಮತ್ ಅವರ ‘ಸಂಗೀತ ಸುನಾದ’ ಎಂಬ ನಾಟಕವನ್ನು ಮುದ್ರಿಸಿತ್ತು. ಬಿ. ಲೀಲಾ ಭಟ್ ಅವರು ಮಂಗಳಾಪುರ ನಾರಾಯಣ ಕಾಮತ್ ಅವರ ‘ಸಂಗೀತ ನಾಟಕಗಳು’ ಸಂಕಲನಕ್ಕೆ(1995) ಬರೆದ ಮುನ್ನುಡಿಯಂತೆ ‘ಮುಂಬೈ ಕೆನರಾ ಡ್ರಮಾಟಿಕ್ ಅಮೆಚೂರ್ ಸಂಘ’ವನ್ನು ಕಟ್ಟಿದವರು ಸ್ವತಃ ಎಂ. ನಾರಾಯಣ ಕಾಮತ್. ಅದಾಗಲೇ ಕ್ರಿಯಾಶೀಲವಾಗಿದ್ದ ಆ ಸಂಸ್ಥೆಯ ಮೂಲಕ ಆಗಲೇ ಹಲವಾರು ನಾಟಕಗಳನ್ನು (ಕಾಮತರ ಎಲ್ಲಾ ನಾಟಕಗಳು ರಂಗ ಕಂಡಿವೆ) ಕಾಮತರು ಹಾಗೂ ಅವರ ತಂಡ ತಮ್ಮ ಸಂಸ್ಥೆಯ ಮೂಲಕ ರಂಗದ ಮೇಲೆ ತಂದಿವೆ. ಆದ್ದರಿಂದ ಮುಂಬೈ ರಂಗಭೂಮಿಯ ಇತಿಹಾಸ ಕೂಡ ಕಳೆದ ಶತಮಾನದ 10-20ರ ದಶಕದಿಂದ ಆರಂಭವಾಗುತ್ತದೆ.

ಅಲ್ಲಿಂದ ಮೊದಲುಗೊಂಡು ನೂರಾರು ನಾಟಕ ಸಂಘ, ಸಂಸ್ಥೆಗಳು ಹುಟ್ಟಿಕೊಂಡವು. ಅವಿಭಜಿತ ದಕ್ಷಿಣ ಕನ್ನಡದಿಂದ ಮುಂಬೈಗೆ ಬಂದು ಹಲವು ಪ್ರಥಮಗಳ ಮಹಾನ್ ಸಾಧನೆ ಮಾಡಿದ್ದ ಮೊಗವೀರರು ತಮ್ಮ ಪ್ರಥಮ ರಾತ್ರಿ ಶಾಲೆಯನ್ನು ತೆರೆದರು. ಅದರ ಹಿಂದೆಯೇ ಹತ್ತು ಹಲವು ರಾತ್ರಿಶಾಲೆಗಳು ಜನ್ಮತಾಳಿ ಜ್ಞಾನದಾಹಿಗಳ ಆಸರೆಯಾಗಿ ನಿಂತವು. ಆ ರಾತ್ರಿ ಶಾಲೆಗಳು ನಡೆಸುತ್ತಿದ್ದ ವಾರ್ಷಿಕೋತ್ಸವಗಳಲ್ಲಿ ಅವರು ಆಡುತ್ತಿದ್ದ ನಾಟಕಗಳನ್ನು ನಾವು ರಂಗ ಇತಿಹಾಸ ಬರೆಯುವಾಗ ದಾಖಲಿಸಲೇಬೇಕಾಗುತ್ತದೆ. ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘಟನೆಗಳ ಕೊಡುಗೆಯೂ ಗಣನೀಯ.

ಇಲ್ಲಿ ಈಗ ನಮಗೆ ಮುಖ್ಯವಾಗುವುದು ಮುಂಬೈ ರಂಗಭೂಮಿಯಲ್ಲಿ ಕ್ರಾಂತಿಯನ್ನೇ ಮಾಡಿದ, ರಂಗಕಲೆಗೆ ಮೀಸಲಾದ ‘ಕನ್ನಡ ಕಲಾಕೇಂದ್ರ ಮುಂಬೈ’. ತನ್ನ ಸುದೀರ್ಘ ಇತಿಹಾಸದಲ್ಲಿ ಸುಮಾರು 61 ವಾರ್ಷಿಕ ನಾಟಕೋತ್ಸವಗಳನ್ನು ಹಮ್ಮಿಕೊಂಡ ಮುಂಬೈಯ ಏಕೈಕ ರಂಗ ಸಂಸ್ಥೆ ಕನ್ನಡ ಕಲಾಕೇಂದ್ರ.

ಎಲ್ಲಾ ಅಸಾಧ್ಯತೆಗಳನ್ನು ಸಾಧ್ಯವಾಗಿಸುವ ತಾಣ ಮುಂಬೈ ನಗರಿ. ಇಲ್ಲಿನ ರೈಲೇ ಒಂದು ಭಾರತವಿದ್ದಂತೆ. ರೈಲಿನೊಳಗೆ ಎಷ್ಟೇ ನೂಕುನುಗ್ಗಲಿದ್ದರೂ, ಉಸಿರುಬಿಡುವುದಕ್ಕೇ ತ್ರಾಸವಾಗುತ್ತಿದ್ದರೂ ಬೆಳಗ್ಗೆ ವಿ.ಟಿ. ಕಡೆ ಹಾಗೂ ಸಾಯಂಕಾಲ ಉಪನಗರಗಳಿಗೆ ಸಾಗುತ್ತಿರುವ ರೈಲುಗಳ ಒಳಗೆ ಭಜನೆಯ ಗುಂಯ್ ಗುಡುವಿಕೆ ಕೇಳುತ್ತಲೇ ಇರುತ್ತದೆ. ಇಲ್ಲಿ ಭಜನೆ ಮಾಡುತ್ತಿರುವವರು ಆಸ್ತಿಕರೇ ಎಂದು ಹೇಳುವ ಹಾಗೂ ಇಲ್ಲ. ಇವರಿಗೆ ಭಜನೆ ಮುಖ್ಯ ಎನ್ನುವುದಕ್ಕಿಂತ ದಾರಿ ಕಳೆಯಲು ಹಾಡು ಮುಖ್ಯ; ಅದಕ್ಕೊದಗುವ ಪಕ್ಕ ವಾದ್ಯಗಳು ಮುಖ್ಯ. ಈ ಭಜನೆ ಗುಂಪುಗಳಲ್ಲಿ ಕೆಲವೊಂದು ಗುಂಪುಗಳು ಮುಂದೊಂದು ದಿನ ಬಹುದೊಡ್ಡ ಸಾಂಘಿಕ ರೂಪವನ್ನು ತಾಳಿ ವಿವಿಧ ರೀತಿಯ ಸಮಾಜ ಸೇವೆಯಲ್ಲಿ ತೊಡಗಿಕೊಂಡಿವೆ. ಈ ಬಳಗಗಳಲ್ಲಿ ಯಾವುದೇ ಜಾತಿ, ಮತ, ಭಾಷೆಗಳ ಬಂಧನ ಇಲ್ಲದೇ ಇರುವುದನ್ನು ನಾವು ಕಾಣಬಹುದು. ಇದು ಭಜನೆ ಬಳಗವಾದರೆ, ಇನ್ನೊಂದು ಇಸ್ಪೀಟ್ ಆಡುವ ಗುಂಪುಗಳು. ಸಮಯ ಕಳೆಯುವುದಕ್ಕಾಗಿ ಹುಟ್ಟಿಕೊಂಡು ಮುಂದೆ ಬೇರೆ ಆಯಾಮ ಪಡೆಯುವ ಪ್ರಕ್ರಿಯೆ ಅದ್ಭ್ಬುತವೆನಿಸುವಂತಹದ್ದು.

ಅಂತಹದ್ದೇ ‘ಸಮಯ ಕೊಲ್ಲುವ’ ಬಳಗವೊಂದು ಮನೆಯೊಂದರಲ್ಲಿ ಕೂಡಿಕೊಳ್ಳುತ್ತಿತ್ತು. ಹಾಗೆಂದು ಇವರು ನಿರುದ್ಯೋಗಿಗಳಲ್ಲ. ಕ್ರಿಯಾಶೀಲ ವ್ಯಕ್ತಿತ್ವದ ಸಮಾನ ಮನಸ್ಸಿನ ಈ ತಂಡಕ್ಕೆ ಒಂದು ರಾತ್ರಿ ಇದ್ದಕ್ಕಿದ್ದಂತೆ ಬುದ್ಧನಿಗೆ ಜ್ಞಾನೋದಯವಾದಂತೆ ತಾವು ಈ ರೀತಿ ಕಾಲಹರಣ ಮಾಡುವುದು ಸರಿಯಲ್ಲ, ತಮ್ಮಿಳಗಿನ ಕಲೆಯನ್ನು ಹೊರ ಹೊಮ್ಮಿಸಬೇಕು ಎಂದುಕೊಂಡರು. ಆ ದಿಸೆಯಲ್ಲಿ 1954ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ಕನ್ನಡ ಕಲಾಕೇಂದ್ರ’. ಸಮಾನ ಮನಸ್ಕರಾದ ಸೂರ್ಯನಾರಾಯಣ ರಾವ್, ಶಂಕರನಾರಾಯಣ ರಾವ್, ಕಡಬ ವ್ಯಾಸ ರಾವ್, ಅಡೂರು ಕೃಷ್ಣರಾವ್, ಎಂ. ಎಲ್. ರಾವ್, ಶುಂಠಿಪ್ಪಾಡಿ ಭುಜಂಗರಾವ್, ಕೆ. ರಘುರಾಮ ರಾವ್, ಕಡಬ ಜಗನ್ನಾಥ ರಾವ್, ಕುಡ್ಪಿ ಜಯರಾಮ ರಾವ್ (ಕೆ. ಜೆ. ರಾವ್) ಮೊದಲಾದವರು ‘ಕೇಶವ ಭವನ’ದಲ್ಲಿ ಒಂದುಗೂಡಿ ಕಟ್ಟಿದ ಕೇಂದ್ರವು ಡಾ. ಲಲಿತಾ ರಾವ್ ಅವರ ಮನೆ ‘ಭಾಸ್ಕರ ಭವನ’ದಲ್ಲಿ ಚೈತನ್ಯ ಪಡೆದು; ಇದೀಗ ಇರುವ ‘ವೆಂಕಟೇಶ್ ನಿವಾಸ್’ನಲ್ಲಿಯವರೆಗಿನ ಏಳುಬೀಳುಗಳ ಪಯಣವೂ ಈ ಸಂಘಟನೆಯನ್ನು ಒಟ್ಟು ಕನ್ನಡದ ರಂಗಭೂಮಿಯು ಗುರುತಿಸುವಂತೆ ಮಾಡಿದೆ. ಜಾತಿ, ಮತ, ಧರ್ಮ, ಪ್ರಾಂತ, ಭಾಷೆ ಎಂಬಿತ್ಯಾದಿ ಭೇದಭಾವ ಇಲ್ಲದೆ, ಕೇವಲ ರಂಗಕಲಾವಿದರ ಸಂಘಟನೆಯಾಗಿ ‘ಕನ್ನಡ ಕಲಾಕೇಂದ್ರ’ ಮುಂಬಾಪುರಿಯಲ್ಲಿ ಮುಂಚೂಣಿಯಲ್ಲಿ ಎದ್ದುನಿಂತಿದೆ. ಟಿ. ಪಿ. ಕೈಲಾಸಂ ಅವರ ‘ಹೋಂ ರೂಲ್’ ನಾಟಕವನ್ನು ತುಳುವಿನಲ್ಲಿ ಹಾಗೂ ದಾಶರಥಿ ದೀಕ್ಷಿತ್ ಅವರ ‘ಅಳಿಯ ದೇವರು’ ನಾಟಕವನ್ನು ಕನ್ನಡದಲ್ಲಿ ತನ್ನ ಪ್ರಥಮ ನಾಟಕಗಳಾಗಿ ರಂಗಕ್ಕೆ ತಂದಿತ್ತು.

 ಹಿಂದೆ ಇಲ್ಲಿ ಮುಂಬೈ ರಾಜ್ಯ ಸರಕಾರದ ಆಶ್ರಯದಲ್ಲಿ ಮರಾಠಿ, ಕನ್ನಡ, ಗುಜರಾತಿ ಮೊದಲಾದ ಭಾಷೆಗಳನ್ನೊಳಗೊಂಡ ‘ನಾಟ್ಯ ಮಹೋತ್ಸವ’ ಜರುಗುತ್ತಿತ್ತು. ಆದರೆ ಭಾಷಾವಾರು ಪ್ರಾಂತ ವಿಂಗಡಣೆಯಲ್ಲಿ ಉಂಟಾದ ಬಿಸಿ ಕಾವಿನಿಂದಾಗಿ ಈ ನಾಟ್ಯ ಮಹೋತ್ಸವಗಳಲ್ಲಿ ಕನ್ನಡ ನಾಟಕಗಳಿಗೆ ಸ್ಥಾನ ನಿರಾಕರಿಸಲ್ಪಟ್ಟಾಗ ಇಲ್ಲಿನ ಕನ್ನಡ ನಾಟಕ ಪ್ರಿಯರಿಗೆ ಆದ ಕಳವಳ ಅಷ್ಟಿಷ್ಟಲ್ಲ. ಈ ಸಂದರ್ಭ ‘‘ಸರಕಾರದ ಸಹಕಾರವೇ ಬೇಕಿಲ್ಲ. ನಾಟ್ಯ ವಿಲಾಸಿಗಳೆಲ್ಲ ಒಟ್ಟುಗೂಡಿ ಹಿಂದೆಂದೂ ಜರುಗದಷ್ಟು ಸಂಭ್ರಮದಿಂದ ಕನ್ನಡ ನಾಟ್ಯ ಮಹೋತ್ಸವ ಆಚರಿಸ ಬಲ್ಲೆವು’’ ಎಂದು ಆವೇಶಪೂರ್ಣವಾಗಿ ಘೋಷಿಸಿದವರ ಘೋಷಣೆ ಘೋಷಣೆಯಾಗಿಯೇ ಉಳಿದು ಮರೆತು ಹೋಯಿತು. ಅಂತಹ ಸಂದಿಗ್ಧ ಪರಿಸ್ಥಿತಿಯ ಕೆಲವರ್ಷಗಳಲ್ಲಿ ಕನ್ನಡ ನಾಟಕ ಪ್ರೇಮಿಗಳನ್ನು ತನ್ನತ್ತ ಸೆಳೆದ ಸಂಸ್ಥೆ ಕನ್ನಡ ಕಲಾಕೇಂದ್ರ. ಇಲ್ಲಿನ ಸರಕಾರದ ನೀತಿಗೆ ಸಡ್ಡು ಹೊಡೆದು ನಿಂತ ಕನ್ನಡ ಕಲಾ ಕೇಂದ್ರವು 1964ರಲ್ಲಿ ಪ್ರಥಮ ಕನ್ನಡ ನಾಟಕೋತ್ಸವವನ್ನು ಆಚರಿಸಿತು. ಮೊದಲ ನಾಟಕೋತ್ಸವವು 12.12.1964ರಂದು ಮೊದಲ್ಗೊಂಡು 26.12.1964ರಂದು ಸಮಾಪ್ತಿಗೊಂಡಿತ್ತು. ಈ ನಾಟಕೋತ್ಸವದಲ್ಲಿ ಒಟ್ಟು ಐದು ದಿನ, ವಿವಿಧ ಐವರು ನಿರ್ದೇಶಕರಿಂದ ಐದು ನಾಟಕಗಳು ರಂಗ ಕಂಡವು. ‘ಕನಸಿನ ರಾಣಿ’ (ನಿ: ವಸಂತ ಕವಲಿ), ‘ಶ್ರೀ ಕೃಷ್ಣ ಸುಧಾಮ’ (ಆರ್. ಡಿ. ಕಾಮತ್), ‘ಸತ್ಯಮೇವ ಜಯತೆ’ (ವಿ. ಎಸ್. ತಳಗೇರಿ), ‘ಧರ್ಮದುರಂತ’ (ಕೆ. ಜೆ. ರಾವ್), ‘ಸಮಯಕ್ಕೊಂದ್ಸುಳ್ಳು’ (ಸುಬ್ಬನರಸಿಂಹ) -ಹೀಗೆ ಐದು ವೈವಿಧ್ಯಮಯ ನಾಟಕಗಳು ರಂಗಾಸಕ್ತರ ಮನ ತಣಿಸಿದವು. ಅಲ್ಲಿಂದ ಪ್ರಾರಂಭಗೊಂಡ ಕೇಂದ್ರದ ನಾಟಕೋತ್ಸವ ನಿರಂತರ ಸಾಗುತ್ತ ಬಂದು ಈವರೆಗೆ ಸುಮಾರು ಅರುವತ್ತಕ್ಕಿಂತಲೂ ಹೆಚ್ಚು ನಾಟಕೋತ್ಸವಗಳನ್ನು ನಡೆಸುತ್ತಾ ಬಂದಿದೆ. ನಾಟಕೋತ್ಸವಗಳಿಗೆ ಹೊಸ ನಾಟಕಗಳನ್ನೇ ಕೊಡಬೇಕೆಂಬ ಸೂತ್ರವು ಹೊಸಹೊಸ ನಾಟಕಗಳನ್ನು ರಂಗಕ್ಕೆ ತರುವಲ್ಲಿ ಕಾರಣವಾಗಿದೆ. ಈ ನಾಟಕೋತ್ಸವಕ್ಕೆ ಕೆಲವು ವರ್ಷ ಆಗುವುದರಲ್ಲೇ ಇಲ್ಲಿ ‘‘ಸದಭಿರುಚಿಯ ಪ್ರೇಕ್ಷಕ ವರ್ಗವನ್ನು ನಿರ್ಮಾಣ ಮಾಡಿದ ಕೀರ್ತಿ, ಆ ನಾಟಕೋತ್ಸವದಲ್ಲಿ ಭಾಗವಹಿಸಿ ಗುಣಮಟ್ಟದ ನಾಟಕಗಳನ್ನು ನೀಡುತ್ತಿದ್ದ ನಿರ್ದೇಶಕರಿಗೆ ಮತ್ತು ಅವರನ್ನು ಸಂಘಟಿಸಿ ಒಂದು ವೇದಿಕೆ ನೀಡಿ ನಾಟಕೋತ್ಸವ ಜರುಗಿಸುತ್ತಾ ಬಂದ ಕನ್ನಡ ಕಲಾ ಕೇಂದ್ರಕ್ಕೆ ಸಲ್ಲುತ್ತದೆ’’ ಎಂದು ಸದಾನಂದ ಸುವರ್ಣರು ಒಂದೆಡೆ ಹೇಳುತ್ತಾರೆ. ಟಿ. ಪಿ. ಕೈಲಾಸಂ, ಶ್ರೀರಂಗ, ಜಿ. ಬಿ. ಜೋಶಿ, ಚಂಪಾ, ಲಂಕೇಶ್, ಕಂಬಾರ, ಕಾರ್ನಾಡ್ ಮೊದಲಾದ ಶ್ರೇಷ್ಠ ಕನ್ನಡ ನಾಟಕಕಾರರ ನಾಟಕಗಳು ಕೇಂದ್ರದ ನಾಟಕೋತ್ಸವಗಳಲ್ಲಿ ಅಭಿವ್ಯಕ್ತಿಗೊಂಡಿವೆ. ಸದಾನಂದ ಸುವರ್ಣ, ಕೆ. ಕೆ. ಸುವರ್ಣ, ಕೆ. ಜೆ. ರಾವ್, ಎಚ್ಕೆ ಕರ್ಕೇರ, ಡಾ. ಮಂಜುನಾಥ, ಆರ್. ಡಿ. ಕಾಮತ್ ಮೊದಲಾದವರು ನಾಟಕೋತ್ಸವಗಳಿಗಾಗಿಯೇ ನಾಟಕಗಳನ್ನು ಬರೆದರು. ಅನುವಾದ/ರೂಪಾಂತರಗಳನ್ನು ಮಾಡಿ ಕನ್ನಡ ನಾಟಕಕ್ಕೆ ಹೊಸ ಗಟ್ಟಿ ನಾಟಕಗಳು ಬರುವಂತೆ ಮಾಡಿದರು. ಇಲ್ಲಿ ಹೆಸರುಗಳ ಪಟ್ಟಿಯೇ ಹತ್ತುಹಲವು ಪುಟಗಳಾಗಬಹುದು, ಆದ್ದರಿಂದ ಇಲ್ಲಿ ಉಲ್ಲೇಖಿಸಲ್ಪಡುವ ಹೆಸರುಗಳು ಕೇವಲ ಸಾಂಕೇತಿಕವಾಗಿಯಷ್ಟೇ. ಶೇಕ್ಸ್‌ಪಿಯರ್, ಬ್ರೆಕ್ಟ್, ಠಾಗೂರ್ ಮೊದಲಾದವರ ನಾಟಕಗಳು ಪ್ರೇಕ್ಷಕರ ಮನತಣಿಸಿವೆ. ‘ಚೋಮನ ದುಡಿ’, ‘ಅನುರಕ್ತೆ’, ‘ವೈಶಾಖ’ ಮೊದಲಾದ ಕನ್ನಡದ ಮುಖ್ಯ ಕಾದಂಬರಿಗಳು, ಹಲವಾರು ನಾಟಕಗಳು ಕೇಂದ್ರದ ನಾಟಕೋತ್ಸವಗಳಲ್ಲಿ ನಾಟಕಗಳಾಗಿ ಮೂಡಿಬಂದಿವೆ.

ಈ ನಾಟಕೋತ್ಸವಗಳಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಜಾನಪದ, ಪೌರಾಣಿಕ, ಸಾಮಾಜಿಕ, ಅಸಂಗತ ನಾಟಕಗಳು, ಏಕಾಂಕಗಳು, ಏಕವ್ಯಕ್ತಿ ಪ್ರಯೋಗಗಳು; ಸೆಟ್ಟಿಲ್ಲದ ಅಥವಾ ರಂಗಪರಿಕರವಿಲ್ಲದ ಪ್ರಯೋಗಗಳಿಂದ ತೊಡಗಿ ತಿರುಗು ರಂಗ ಮಂಟಪದ ಪ್ರಯೋಗದವರೆಗೆ ವೈವಿಧ್ಯ ರೀತಿಯಲ್ಲಿ ನಾಟಕಗಳು ಅಭಿವ್ಯಕ್ತಿಗೊಂಡಿವೆ. ಕೆ. ಜೆ. ರಾವ್ ಅವರು ಇಲ್ಲಿ ತಿರುಗು ರಂಗಮಂಟಪವನ್ನು ತಮ್ಮ ನಾಟಕಗಳಲ್ಲಿ (ಪುಣೆಯಿಂದ ತರಿಸಿ) ಪ್ರಯೋಗಿಸಿ ಕನ್ನಡ ರಂಗಭೂಮಿಗೆ ಹೊಸ ಸಂಚಲನ ಮೂಡಿಸಿದ್ದರು. ಅಲ್ಲದೆ ಈವರೆಗಿನ ನಾಟಕಗಳಲ್ಲಿ ಸುಮಾರು 1,500ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ರಂಗ ಕಲಾವಿದರು ಬೆಳಕಿಗೆ ಬಂದಿದ್ದಾರೆ.

ಕೇವಲ ಮುಂಬೈ ನಾಟಕ ತಂಡಗಳಿಗಷ್ಟೇ ಸೀಮಿತವಾಗದೆ ಕೇಂದ್ರದ ವಾರ್ಷಿಕ ನಾಟಕೋತ್ಸವ ಅಥವಾ ವಿಶೇಷ ಸಂದರ್ಭಗಳಲ್ಲಿ ದಿಲ್ಲಿ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ನೂರಾರು ತಂಡಗಳು ಇಲ್ಲಿಗಾಗಮಿಸಿ ನಾಟಕ, ಯಕ್ಷಗಾನ, ವಿವಿಧ ನೃತ್ಯ, ಜನಪದ ಕಲೆಗಳ ರಸದೌತಣ ನೀಡಿವೆ. ಕನ್ನಡ, ತುಳು ಮಾತ್ರವಲ್ಲದೆ ಮರಾಠಿ, ಇಂಗ್ಲಿಷ್, ಹಿಂದಿ ಭಾಷಾ ನಾಟಕಗಳೂ ನಾಟಕೋತ್ಸವಗಳಲ್ಲಿ ಪಾಲ್ಗೊಂಡಿವೆ. ಬಹುಭಾಷಾ ನಾಟಕೋತ್ಸವ, ಗಿರೀಶ್ ಕಾರ್ನಾಡ್ ನಾಟಕೋತ್ಸವ, ಬಿ.ವಿ. ಕಾರಂತ ನಾಟಕೋತ್ಸವ ಹೀಗೆ ವೈವಿಧ್ಯತೆಯನ್ನು ನಾಟಕೋತ್ಸವಕ್ಕೆ ಕೊಟ್ಟು ನಾಟಕೋತ್ಸವದ ಮಟ್ಟವನ್ನು ಏರಿಸಿದೆ. ಅಲ್ಲದೆ ಕನ್ನಡ ಕಲಾಕೇಂದ್ರವು ಕನ್ನಡ ನಾಟಕೋತ್ಸವಗಳಿಗೆ ಮರಾಠಿ ತಂಡಗಳನ್ನೂ ಆಹ್ವಾನಿಸಿ ಅವರಿಗೂ ವೇದಿಕೆ ಕಲ್ಪಿಸಿ ಸಾಮರಸ್ಯ ಮೊೆದಿದೆ. ಡಾ. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆ ‘ಅಭಿಮನ್ಯು ವಧೆ’ ಅಲ್ಲದೆ ಇತರ ಯಕ್ಷಗಾನ ತಂಡಗಳನ್ನೂ ಆಹ್ವಾನಿಸಿದೆ. ಆರ್. ನಾಗೇಶ್, ಟಿ. ಎಸ್. ನಾಗಾಭರಣ, ಸಿಜಿಕೆ, ಸುರೇಶ್ ಆನಗಳ್ಳಿ, ಬಿ. ಜಯಶ್ರೀ, ಜಬ್ಬಾರ್ ಪಟೇಲ್, ಶಂಭು ಹೆಗಡೆ (ಯಕ್ಷಗಾನ), ಜಯತೀರ್ಥ ಜೋಶಿ, ಬಿ. ವಿ. ಕಾರಂತ, ಸಿ. ಆರ್. ಸಿಂಹ, ಕೃಷ್ಣಮೂರ್ತಿ ಕವತ್ತಾರ್, ಡಾ.ಶ್ರೀಪಾದ್ ಭಟ್ ಮೊದಲಾದವರ ನಿರ್ದೇಶನದಲ್ಲಿ ಒಳನಾಡಿನ ತಂಡಗಳು ಬಂದು ಇಲ್ಲಿನ ರಂಗಾಸಕ್ತರಿಗೆ ಮುದನೀಡಿವೆ. ವಸಂತ ಕವಲಿ, ಆರ್. ಡಿ. ಕಾಮತ್, ವಿ. ಎಸ್. ತಳಗೇರಿ, ಕೆ. ಜೆ. ರಾವ್, ಸುಬ್ಬನರಸಿಂಹ, ಯು. ಪ್ರಭಾಕರ್ ರಾವ್, ಸದಾನಂದ ಸುವರ್ಣ, ಕೆ. ಕೆ. ಸುವರ್ಣ, ಸಿ. ಎ. ರಾಮಚಂದ್ರ, ಬಿ. ಕೆ. ಜೆ. ರಾವ್, ಅನಂತ ಗುಡೂರು, ಡಾ. ರಂಗನಾಥ್ ಭಾರದ್ವಾಜ್, ಅನಂತ ನಾಗರಕಟ್ಟಿ (ಅನಂತನಾಗ್), ವಿ. ಬಿ. ದೇಶಪಾಂಡೆ, ಶ್ರೀಪತಿ ಬಲ್ಲಾಳ್, ಡಾ. ಮಂಜುನಾಥ್ ಹೀಗೆ ನೂರಾರು ರಂಗ ನಿರ್ದೇಶಕರನ್ನು ಕೇಂದ್ರದ ರಂಗೋತ್ಸವ ಹೆಮ್ಮೆಯಿಂದ ನೆನೆಯುತ್ತದೆ. ಕೇಂದ್ರದ ಹಿರಿಯರ ಕುರಿತು ಕೇಂದ್ರಕ್ಕೆ ಬಹಳ ಕಳಕಳಿ. ನಿಧನಾನಂತರ ಅವರ ಸ್ಮರಣೆಯಲ್ಲಿ ನಾಟಕೋತ್ಸವಗಳನ್ನು ನಡೆಸಿದ್ದು, ಅವುಗಳಲ್ಲಿ ಕೇಂದ್ರದ ಸ್ಥಾಪನೆಯಿಂದಲೂ ಇದ್ದ ಕೆ. ಜೆ. ರಾವ್ ಹಾಗೂ ವಿ. ಎಚ್. ಸೋಮೇಶ್ವರ ಅವರ ನೆನಪಿನ ನಾಟಕೋತ್ಸವಗಳು ಉಲ್ಲೇಖಾರ್ಹ.

ಕೇವಲ ನಾಟಕೋತ್ಸವ, ರಂಗ ಶಿಬಿರ, ನೃತ್ಯ, ಯಕ್ಷಗಾನ ಶಿಬಿರಗಳಿಗಷ್ಟೇ ಈ ಕೇಂದ್ರ ಮೀಸಲಾಗಿಲ್ಲ. ಮುಂಬೈ ಹಾಗೂ ಬೇರೆ ಬೇರೆ ಕಡೆಗಳ ರಂಗ ಸಂಸ್ಥೆಗಳ ಜೊತೆ ಸೇರಿ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ, ಯುದ್ಧದ ಸಂದರ್ಭಗಳಂತಹ ಮುಂಬೈಯನ್ನು ನಡುಗಿಸಿದ ಹತ್ತು ಹಲವು ಸಂದರ್ಭಗಳಲ್ಲಿ ತನ್ನದೇ ತಂಡದಿಂದ ನಾಟಕಗಳನ್ನು ಆಡಿಸಿ ಸಹಾಯ ಹಸ್ತ ನೀಡುತ್ತಾ ಬಂದಿದೆ. ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಕರಿಸಿದೆ. ಅಸಹಾಯಕ ಕಲಾವಿದರ ಸಹಾಯಕ್ಕೆ ಬಂದಿದೆ. ಕರ್ನಾಟಕದಿಂದ ಅಥವಾ ಹೊರನಾಡುಗಳಿಂದ ಬರುವ ನಾಟಕ ಸಂಸ್ಥೆಗಳಿಗೆ, ಯಕ್ಷಗಾನ, ಜಾನಪದ ತಂಡಗಳಿಗೆ ತಾನು ಆಪದ್ಬಾಂಧವನಾಗಿ ನಿಂತು ಅವರಿಗೆ ಕಡಿಮೆ ದರದಲ್ಲಿ ತನ್ನ ಕಚೇರಿ, ಕಿರುಸಭಾಗೃಹದಲ್ಲಿ ನಿಲ್ಲಲು ಅವಕಾಶ ಮಾಡಿಕೊಡುತ್ತಿರುವ ಕಾರ್ಯ ಶ್ಲಾಘನೀಯ.

ಕೇಂದ್ರವು ಕೆ. ಜೆ. ರಾವ್ ಮೊದಲಾದವರ ‘ಸತ್ಯಂ ವದ ಧರ್ಮಂ ಚರ’, ‘ಕಪ್ಪುದ್ವೀಪ, ಕೆಂಪು ದೀಪ’ ಹಾಗೂ ಸದಾನಂದ ಸುವರ್ಣರ ‘ಚಕ್ರವ್ಯೆಹ’, ‘ಯಾರು ನನ್ನವರು’ ಮಾತ್ರವಲ್ಲದೆ ‘ಗುಡ್ಡೆದ ಭೂತ’ ನಾಟಕಗಳನ್ನೂ ಮುಂಬೈ, ಪುಣೆ, ಬೆಂಗಳೂರು, ಮೈಸೂರು ಮತ್ತು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸುಮಾರು ತಲಾ 25-40ಕ್ಕೂ ಹೆಚ್ಚು ಪ್ರಯೋಗಗಳನ್ನು ನೀಡಿದೆ. ಇತ್ತೀಚೆಗೆ ನಿಧನರಾದ ಕೇಂದ್ರದ ಅಧ್ಯಕ್ಷರಾಗಿದ್ದ ಬೈಲೂರು ಬಾಲಚಂದ್ರರಾವ್ ಬರೆದು ನಿರ್ದೇಶಿಸಿದ ‘ಶ್ರೀ ಆದಿಶಂಕರಾಚಾರ್ಯ’ ಕೇಂದ್ರದ ಇತ್ತೀಚಿನ ನಾಟಕ. ಮಹಾರಾಷ್ಟ್ರ ಹಾಗೂ ಕರ್ನಾಟಕಾದ್ಯಂತ ಸುಮಾರು ಹದಿನೈದಕ್ಕಿಂತಲೂ ಹೆಚ್ಚು ಪ್ರಯೋಗಗಳನ್ನು ಕಂಡಿದೆ. ಈ ನಾಟಕಗಳು ಮಾತ್ರವಲ್ಲದೆ, ಶಾಲೆಯ ಮಕ್ಕಳಿಗಾಗಿಯೇ ಸುಮಾರು ಹತ್ತು ನಾಟಕ ತರಬೇತಿ ಶಿಬಿರಗಳು, ಸುಮಾರು ಹತ್ತು ಯಕ್ಷಗಾನ ತರಬೇತಿ ಶಿಬಿರಗಳ ಮೂಲಕ ಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಯುವಕ-ಯುವತಿಯರಿಗೆ ತರಬೇತಿ ನೀಡಿ ಉತ್ತಮ ರಂಗಕಲಾವಿದರು ಅಥವಾ ಕೊನೆಯ ಪಕ್ಷ ಉತ್ತಮ ಪ್ರೇಕ್ಷಕರಾಗುವ ನಿಟ್ಟಿನಲ್ಲಿ ಕೇಂದ್ರ ಮಾಡಿರುವ ಕಾರ್ಯ ಶ್ಲಾಘನೀಯ.

  ‘‘ಜಾತಿ, ಮತ, ಧರ್ಮ, ಬಡವ, ಬಲ್ಲಿದ ಎಂಬ ಗಡಿ ಮೀರಿದ್ದು ಈ ರಂಗಭೂಮಿ. ಒಬ್ಬರನ್ನೊಬ್ಬರು ತಿಳಿಯುವುದಕ್ಕೆ ಅರ್ಥೈಸುವುದಕ್ಕೆ ಪ್ರೇರಕ ಶಕ್ತಿ ಇದು... ಇನ್ನು ಬರುವ ದಿನಗಳಲ್ಲಿ ಮುಂಬೈಯ ಐದು ಕ್ರಿಯಾಶೀಲ ನಿರ್ದೇಶಕರನ್ನು ಒಟ್ಟುಗೂಡಿಸಿ ಕೇಂದ್ರವೇ ಹೊಸ ರೀತಿಯಿಂದ ರಂಗೋತ್ಸವ ಮಾಡಲಿದೆ’’ ಎಂದು ಕೇಂದ್ರದ ಈಗಿನ ಅಧ್ಯಕ್ಷರಾದ ಮಧುಸೂದನ್ ಟಿ. ಆರ್. ಇತ್ತೀಚೆಗೆ ನಡೆದ ‘ವಿಶ್ವ ರಂಗ ದಿನಾಚರಣೆ’ ಸಂದರ್ಭ ನುಡಿದಿದ್ದರು. ‘‘ಕೆ. ಜೆ. ರಾವ್ ಮೊದಲಾದವರು ಕೇಂದ್ರದ ನಾಟಕ ಸಿದ್ಧಗೊಳಿಸುವಲ್ಲಿ ಹೋಗಿ ನಾಟಕದ ಪೂರ್ವತಯಾರಿಯ ಬಗ್ಗೆ ಬೇಕಾದ ಸವಲತ್ತಿನಲ್ಲಿ ತೊಂದರೆಗಳು ಉಂಟಾದರೆ ಅದನ್ನು ನೀಗಿಸುತ್ತಿದ್ದರು. ಅದು ಬಹಳ ಮುಖ್ಯವಾಗುತ್ತಿತ್ತು’’ ಎಂದು ಕೇಂದ್ರದ ನಾಟಕಗಳಲ್ಲಿ ತಮ್ಮ ತಂದೆ ಕೆ. ಕೆ. ಸುವರ್ಣರ ಗರಡಿಯಲ್ಲಿ ರಂಗದ ಹಿಂದೆ ದುಡಿಯುತ್ತಿದ್ದ, ಚಿಕ್ಕಪುಟ್ಟ ಪಾತ್ರಗಳನ್ನು ನಿಭಾಯಿಸುತ್ತಿದ್ದ ರಂಗಕರ್ಮಿ, ಕಂಠದಾನ ಕಲಾವಿದ ಜಯಶೀಲ ಸುವರ್ಣ ಅಂದಿನ ದಿನಗಳ ಮೆಲುಕು ಹಾಕುತ್ತಾರೆ. ಆ ನಿಟ್ಟಿನಲ್ಲಿ ಮಧುಸೂದನ್ ಅವರ ಮಾತು ಬಹುಶಃ ಇನ್ನು ಮುಂದೆ ನಡೆಯಲಿರುವ ನಾಟಕೋತ್ಸವಗಳ ದಿಕ್ಕು ದಿಸೆಯನ್ನು ತೆರೆದಿಡುತ್ತದೆ ಎಂದೆನಿಸಬಹುದು. ಮುಂಬೈಯ ಪ್ರಾರಂಭದ ಹಂತದ ನಾಟಕಗಳು ಕೋಟೆ ಪರಿಸರದ ‘ಭುಲಾಬಾಯಿ ದೇಸಾಯಿ ಅಡಿಟೋರಿಯಂ’ನಲ್ಲಿ ಹೆಚ್ಚಾಗಿ ಪ್ರಯೋಗಗೊಳ್ಳುತ್ತಿದ್ದರೆ, ಕೇಂದ್ರದ ನಾಟಕೋತ್ಸವಗಳು ಪ್ರಾರಂಭವಾದ ಆನಂತರ ಹೆಚ್ಚಿನ ನಾಟಕೋತ್ಸವಗಳು (ಪ್ರಾರಂಭ ಹಂತದ) ‘ರವೀಂದ್ರ ನಾಟ್ಯಮಂದಿರ’ದಲ್ಲಿ ಜರುಗುತ್ತಿತ್ತು. ಅಂದಿನ ದಿನಗಳಲ್ಲಿ ಕೇಂದ್ರ ನಾಟಕೋತ್ಸವಗಳು ಹೌಸ್ ಪುಲ್ ಆಗುತ್ತಿತ್ತಂತೆ. ಆಗ ಪ್ರತಿ ನಾಟಕೋತ್ಸವದ ಪ್ರವೇಶಕ್ಕೆ ಟಿಕೆಟ್‌ಗಳಿದ್ದವು. ಅಂದಿನ ದಿನಗಳಲ್ಲಿ ಒಳಗೆ ಸಭಾಗೃಹದಲ್ಲಿ ಇದ್ದಷ್ಟೇ ಪ್ರೇಕ್ಷಕರು ಸಭಾಗೃಹದ ಹೊರಗೆ ಜಮಾಯಿಸುತ್ತಿದ್ದರು ಅನ್ನುವುದು ಅಂದಿನ ಜನರ ಕಲಾ ಪ್ರೇಮವನ್ನು ತೆರೆದಿಡುತ್ತದೆ. ಡಾ. ಲಲಿತಾ ರಾವ್, ಆನಂತರ ಡಾ. ವ್ಯಾಸರಾವ್ ನಿಂಜೂರು, ಡಾ ಬಾಲಚಂದ್ರ ರಾವ್, ಇದೀಗ ಮಧುಸೂದನ್ ಟಿ. ಆರ್. ಇವರೆಲ್ಲ ಕೇಂದ್ರದ ಉದ್ದೇಶಕ್ಕನುಗುಣವಾಗಿ ಎಂದೂ ಸ್ವಾರ್ಥ ಬಯಸದೆ, ಕೇಂದ್ರದ ನಿಯಮಾವಳಿಗಳನ್ನು ದುರುಪಯೋಗಪಡಿಸದೆ ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದ್ದರಿಂದಲೇ ಕೇಂದ್ರ ಇಂದು ಮುಂಬೈ ಕನ್ನಡಿಗರ ನೆಚ್ಚಿನ ಸಂಸ್ಥೆಯಾಗಿದೆ.

ಹೀಗೆ ರಂಗಭೂಮಿಗೆ ಕೊಡುಗೆ ನೀಡಿದ ಕನ್ನಡ ಕಲಾ ಕೇಂದ್ರವು ತನ್ನ ಇತಿಮಿತಿಯಲ್ಲೇ ಗೈದ ಸಾಧನೆ, ಏರಿದ ಎತ್ತರ ಅನುಪಮ; ಅನುಕರಣನೀಯ. ಪ್ರಾರಂಭದ ಸಂಗೀತ ಅಕಾಡಮಿ, ಈಗಿನ ನಾಟಕ ಅಕಾಡಮಿ ಈ ಸಂಸ್ಥೆಯನ್ನು ಗುರುತಿಸದಿದ್ದರೂ, ಕೆಲವೊಮ್ಮೆ ನಾಟಕೋತ್ಸವಕ್ಕೆ ಸಹಾಯ ನೀಡಲು ಅಕಾಡಮಿಗಳಿಗೆ ಮೊರೆ ಹೊಕ್ಕಾಗ ಅಲ್ಲಿನ ಕಹಿಘಟನೆಗಳಾಗಲೀ, ಇಲ್ಲಿನ ಕೆಲವೊಂದು ಸ್ಪರ್ಧಿಗಳ ನಡೆಗಳಾಗಲೀ ಕೇಂದ್ರದ ಯಾವುದೇ ನಿಯೋಜಿತ ಕಾರ್ಯಕ್ರಮಗಳಿಗೆ ಅಡ್ಡಿಯಾಗಿಲ್ಲ. 60-70ರ ದಶಕವನ್ನು ರಂಗಭೂಮಿಯಲ್ಲಿ ಸುವರ್ಣಕ್ಷಣಗಳಾಗಿಸಿದ ಕನ್ನಡ ಕಲಾಕೇಂದ್ರ, ಕೊರೋನದ ಆರ್ಭಟ ಇಳಿದ ಆನಂತರ ಮತ್ತೊಮ್ಮೆ ಮೈಗೊಡವಿ ಎದ್ದು ಕಾರ್ಯಪ್ರವೃತ್ತವಾಗಲಿ ಎನ್ನುವುದು ಮುಂಬೈ ಕಲಾ ಪ್ರೇಮಿಗಳ ಆಶಯ.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News