ಮೋದಿ ಸರಕಾರದಲ್ಲಿ ರಾಜ್ಯ ಖಾತೆ ಸಚಿವೆಯಾದ ಶೋಭಾ ಕರಂದ್ಲಾಜೆ: ಕಾಫಿನಾಡಿನ ಜನರಲ್ಲಿ ಗರಿಗೆದರಿದ ನಿರೀಕ್ಷೆಗಳು

Update: 2021-07-08 17:41 GMT

ಚಿಕ್ಕಮಗಳೂರು, ಜು.8: ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಯಾಗಿ ನೇಮಕಗೊಂಡಿರುವುದರಿಂದ ಕಾಫಿನಾಡಿನ ಜನರಲ್ಲಿ ನಿರೀಕ್ಷೆಗಳು ಗರಿಗೆದರಿಕೊಂಡಿವೆ. ರಾಜ್ಯ ಖಾತೆ ಸಚಿವೆಯಾಗಿ ಅವರು ಕಾಫಿನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರದೊಂದಿಗೆ ಕಾಫಿ, ಅಡಿಕೆ ಬೆಳೆಗಾರರ ಸಮಸ್ಯೆ, ಅತಿವೃಷ್ಟಿ ಪರಿಹಾರ ಹಾಗೂ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಸಾಕಾರದ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಆಗ್ರಹವೂ ಕೇಳಿ ಬರುತ್ತಿವೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಬಳಿಕ ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಸಂಸತ್‍ಗೆ ಆಯ್ಕೆಯಾದ ಮಹಿಳೆಯರಲ್ಲಿ ಶೋಭಾ ಕರಂದ್ಲಾಜೆ ಮೂರನೆಯವರು. ಇಂದಿರಾಗಾಂಧಿ ಬಳಿಕ ಡಿ.ಕೆ.ತಾರಾದೇವಿ ಸಂಸದೆಯಾಗಿ ಆಯ್ಕೆಯಾಗಿದ್ದಲ್ಲದೆ ಕಾಂಗ್ರೆಸ್ ಸರಕಾರದ ಮಂತ್ರಿ ಮಂಡಲದಲ್ಲಿ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಡಿ.ಕೆ.ತಾರಾದೇವಿ ಬಳಿಕ ಸತತ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಖಾತೆ ಸಚಿವೆಯಾಗಿ ಆಯ್ಕೆಯಾಗುವ ಮೂಲಕ ಕಾಫಿನಾಡಿನ ಕೀರ್ತಿಯನ್ನು ದಿಲ್ಲಿಯಲ್ಲಿ ಬೆಳಗಿಸಿದ್ದಾರೆ.

ಆದರೆ ಇದುವರೆಗೂ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಕಾರ್ಯವೈಖರಿ ಬಗ್ಗೆ ಬಿಜೆಪಿ ಪಕ್ಷದವರಲ್ಲೇ ಅಸಮಾಧಾನವಿದೆ. ಸತತ ಎರಡು ಬಾರಿ ಸಂಸದೆಯಾಗಿದ್ದರೂ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಅವರು ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬ ಆರೋಪಗಳು ವ್ಯಾಪಕವಾಗಿವೆ.

ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಪ್ರದೇಶವಾಗಿದ್ದು, ಜಿಲ್ಲೆಯ ಮಲೆನಾಡು ಭಾಗದ ಜನರು ವಿವಿಧ ಅರಣ್ಯ ಯೋಜನೆಗಳ ಜಾರಿಯ ಭೀತಿಯಲ್ಲಿದ್ದಾರೆ. ಕಸ್ತೂರಿ ರಂಗನ್ ವರದಿ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ, ಹುಲಿ ಯೋಜನೆ, ಮುಳ್ಳಯ್ಯನಗಿರಿ ಸಂರಕ್ಷಿತ ಅರಣ್ಯ, ಡೀಮ್ಡ್ ಫಾರೆಸ್ಟ್ ಸೇರಿದಂತೆ ವಿವಿಧ ಅರಣ್ಯ ಯೋಜನೆಗಳ ಭೀತಿಯಿಂದ ಜನರು ಇಂದಿಗೂ ಅತಂತ್ರ ಭಾವದಲ್ಲಿದ್ದಾರೆ. ಈ ಅರಣ್ಯ ಯೋಜನೆಗಳಿಂದಾಗಿ ಮಲೆನಾಡಿನ ಜನರು ಸಾಮೂಹಿಕವಾಗಿ ಒಕ್ಕಲೇಳಬೇಕಾದ ಅಥವಾ ಅರಣ್ಯ ಯೋಜನೆಗಳಿಂದ ತೊಂದರೆ ಅನುಭವಿಸಬೇಕಾದ ಆತಂಕದಲ್ಲಿದ್ದಾರೆ. ವಿಶೇಷವಾಗಿ ಕಸ್ತೂರಿರಂಗನ್ ವರದಿಯಿಂದ ಮಲೆನಾಡಿನ ಬಹುತೇಕ ತಾಲೂಕುಗಳ ಕೃಷಿಕರು ತೊಂದರೆಗೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಸದೆ ಶೋಭಾ ಕರಂದ್ಲಾಜೆ ಈ ಯೋಜನೆ ಜಾರಿ ಸಂಬಂಧ ಇಲ್ಲಿನ ರೈತರ ಸಮಸ್ಯೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಯೋಜನೆ ವ್ಯಾಪ್ತಿಯ ಸಾರ್ವಜನಿಕರು, ಕೃಷಿಕರು ಬೃಹತ್ ಹೋರಾಟ ನಡೆಸಿ ಯೋಜನೆ ಜಾರಿ ವಿರುದ್ಧ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ.

ಇನ್ನು ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಂರಕ್ಷಿತ ಅರಣ್ಯ ಪ್ರದೇಶದ ಹೆಸರಿನಲ್ಲಿ ಜನವಸತಿ ಇರುವ ನೂರಾರು ಗ್ರಾಮಗಳನ್ನು ಸೇರಿಸಿ ಅರಣ್ಯ ಯೋಜನೆ ಜಾರಿಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿರುವುದರ ವಿರುದ್ಧವೂ ಸಂತ್ರಸ್ತರು ಹೋರಾಟ ನಡೆಸಿ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಹುಲಿ ಯೋಜನೆ, ಡೀಮ್ಡ್ ಫಾರೆಸ್ಟ್, ಕುದುರೆಮುಖ ರಾಷ್ಟ್ರೀಯ ಉದ್ಯಾನದಂತಹ ಗಂಭೀರ ಅರಣ್ಯ ಸಮಸ್ಯೆಗಳಿಂದ ಜನರು ಆತಂಕದಲ್ಲಿದ್ದು, ನೂತನ ರಾಜ್ಯ ಖಾತೆ ಸಚಿವೆ ಶೋಭಾ ಅವರು ಜಿಲ್ಲೆಯ ಅರಣ್ಯ ಸಮಸ್ಯೆಗಳಿಂದಾಗುವ ತೊಂದರೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆಂಬ ನಿರೀಕ್ಷೆ ಜಿಲ್ಲೆಯ ಮಲೆನಾಡು ಭಾಗದ ಜನರದ್ದಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಾಫಿ ಬೆಳೆಗೆ ಹೆಸರಾಗಿದ್ದು, ಕಾಫಿನಾಡೆಂದೇ ಖ್ಯಾತಿ ಪಡೆದಿದೆ. ಕಾಫಿ ಬೆಳೆಯಿಂದಾಗಿ ಚಿಕ್ಕಮಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುಗಳಿಸಿದೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ತರೀಕೆರೆ ತಾಲೂಕಿನ ಕೆಲ ಭಾಗದಲ್ಲಿ ಯಥೇಚ್ಛವಾಗಿ ಕಾಫಿ ಬೆಳೆಯಲಾಗುತ್ತಿದೆ. ಆದರೆ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಸತತ ಅತಿವೃಷ್ಟಿ, ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗಾರರು ಬೆಳೆ ನಷ್ಟ ಅನುಭವಿಸಿದ್ದಾರೆ. ಕಾಫಿ ತೋಟಗಳಲ್ಲಿ ಉಪಬೆಳೆಯಾಗಿರುವ ಕಾಳುಮೆಣಸಿನ ಧಾರಣೆ ಕುಸಿದು ಹಲವು ವರ್ಷಗಳೇ ಕಳೆದಿದ್ದು, ಅತಿವೃಷ್ಟಿ, ಧಾರಣೆ ಕುಸಿತದಿಂದಾಗಿ ಬೆಳೆಗಾರರ ಬದುಕೂ ಬೀದಿಗೆ ಬಂದಿದೆ. ಈ ಕಾರಣಕ್ಕೆ ಕಾಫಿ ಬೆಳೆಗಾರರ ಸಂಘ ಹಲವು ಬಾರಿ ಕೇಂದ್ರದ ಬಳಿ ನಿಯೋಗ ತೆರಳಿ ಪರಿಹಾರದ ಪ್ಯಾಕೆಜ್‍ಗೆ ಮನವಿ ಸಲ್ಲಿಸಿದೆ.

ಆದರೆ ಕೇಂದ್ರದಿಂದ ಕಾಫಿ ಬೆಳೆಗಾರರ ನಿರೀಕ್ಷೆ ಸುಳ್ಳಾಗಿದ್ದು, ಪರಿಹಾರ ಮರೀಚಿಕೆಯಾಗಿದೆ. ಸಂಸದೆ ಶೋಭಾ ಅವರು ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆಂಬ ಅಸಮಾಧಾನ ಕಾಫಿ ಬೆಳೆಗಾರರಲ್ಲಿದೆ. ಸದ್ಯ ಶೋಭಾ ಕರಂದ್ಲಾಜೆ ಕೇಂದ್ರದಲ್ಲಿ ಸಚಿವೆಯಾಗುತ್ತಿದ್ದಂತೆ ಜಿಲ್ಲೆಯ ಕಾಫಿ ಬೆಳೆಗಾರರಲ್ಲಿ ನಿರೀಕ್ಷೆಗಳು ಗರಿಗೆದರಿದ್ದು, ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರದಿಂದ ಪರಿಹಾರ ದೊರಕಿಸಿಕೊಡಲಿದ್ದಾರೆಂಬ ಆಶಾಭಾವನೆ ಹೊಂದಿದ್ದು, ಸಚಿವೆ ಶೋಭಾ ಈ ನಿಟ್ಟಿನಲ್ಲಿ ಹೇಗೆ ಕೆಲಸ ಮಾಡಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.

ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆಯಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಅವರ ಮೇಲೆ ಜಿಲ್ಲೆಯ ರೈತರು ಅಪಾರ ನಿರೀಕ್ಷೆಗಳನ್ನು ಹೊಂದಿದ್ದಾರೆ. ಜಿಲ್ಲೆಯ ಬಯಲು ಭಾಗದಲ್ಲಿ ನೀರಾವರಿ ಯೋಜನೆಗಳ ಕೊರತೆಯಿಂದಾಗಿ ಅಲ್ಲಿನ ರೈತರು ಸಂಕಷ್ಟದಲ್ಲಿದ್ದಾರೆ. ಕಡೂರು, ತರೀಕೆರೆ ತಾಲೂಕುಗಳ ಸತತ ಬರದಿಂದ ತತ್ತರಿಸಿದ್ದು, ಕೃಷಿಕರ ಬದುಕು ಅತಂತ್ರಗೊಂಡಿದೆ. ಸೂಕ್ತ ಪರಿಹಾರ ಸಿಗದೇ ರೈತರು ಸರಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಳೆ ವಿಮೆ ಪರಿಹಾರವೂ ಸಮರ್ಪಕವಾಗಿ ಸಿಗದ ಬಗ್ಗೆ ಆಕ್ರೋಶಗೊಂಡಿದ್ದು, ನೂತನ ಸಚಿವೆ ಶೋಭಾ ಈ ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿದೆ.

ಇನ್ನು ಕಾಫಿನಾಡಿನಲ್ಲಿ ರೈಲ್ವೆ ಯೋಜನೆಗಳು ಅರ್ಧಂಬರ್ದವಾಗಿವೆ. ಚಿಕ್ಕಮಗಳೂರು, ಬೇಲೂರು, ಸಕಲೇಶಪುರ, ಹಾಸನ ಸಂಪರ್ಕದ ರೈಲ್ವೆ ಯೋಜನೆ ಮಂಜೂರಾಗಿದ್ದರೂ ಯೋಜನೆ ಇನ್ನೂ ಕುಂಟುತ್ತಾ ಸಾಗಿದೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ನೇರ ರೈಲು ಬೇಕೆನ್ನುವ ಬೇಡಿಕೆ ಇಂದಿಗೂ ಮರಿಚೀಕೆಯಾಗಿದ್ದು, ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಪೂರ್ಣಕ್ಕೆ ಸಚಿವೆ ಶೋಭಾ ಶ್ರಮಿಸಲಿದ್ದಾರೆಂಬುದು ಜಿಲ್ಲೆಯ ಜನರ ನಿರೀಕ್ಷೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮ ಕೇಂದ್ರವಾಗಿದ್ದರೂ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಬಡವಾಗಿದೆ. ಚಿಕ್ಕಮಗಳೂರು ನಗರದ ಸಮೀಪದಲ್ಲಿ ಮಿನಿ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಲಾಗಿದೆಯಾದರೂ ಯೋಜನೆ ಮಾತ್ರ ಇನ್ನೂ ಕಾರ್ಯಗತವಾಗಿಲ್ಲ. ಮಿನಿ ವಿಮಾನ ನಿಲ್ದಾಣ ಸೇರಿದಂತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ನೂತನ ಸಚಿವೆ ಶೋಭಾ ಕೇಂದ್ರದಿಂದ ಹೆಚ್ಚು ಅನುದಾನ ತರಲಿದ್ದಾರೆಂಬುದೂ ಕಾಫಿನಾಡಿನ ಜನರ ನಿರೀಕ್ಷೆಯಾಗಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ 2 ಅವಧಿಯಲ್ಲಿ ಈ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ. ಉಡುಪಿ ಜಿಲ್ಲೆಗೆ ಕೆಲ ಯೋಜನೆಗಳನ್ನಾದರೂ ತಂದಿರುವ ಶೋಭಾ ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ. ಕೊರೋನ ಅವಧಿಯಲ್ಲಿ ನಾಪತ್ತೆಯಾಗಿದ್ದರು, ಜಿಲ್ಲೆಯತ್ತ ಮುಖ ಮಾಡಲ್ಲ ಎಂಬ ಆರೋಪಗಳಿದ್ದು, ಸದ್ಯ ಮೋದಿ ಸಂಪುಟದಲ್ಲಿ ಸಚಿವೆಯಾಗಿರುವ ಅವರ ಮೇಲೆ ಕಾಫಿ ನಾಡಿನ ಜನರ ನಿರೀಕ್ಷೆ ದುಪ್ಪಟ್ಟಾಗಿದ್ದು, ಈ ನಿಟ್ಟಿನಲ್ಲಿ ಅವರು ಹೇಗೆ ಕೆಲಸ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಾಫಿ ಬೆಳೆಗಾರರ ಸಮಸ್ಯೆಗಳ ಪೈಕಿ ಸರ್ಫೇಯಿಸಿ ಕಾಯ್ದೆ ಬೆಳೆಗಾರರ ನಿದ್ದೆ ಗೆಡಿಸಿದೆ. ಕಾಫಿ ತೋಟಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಬ್ಯಾಂಕ್ ಸಾಲ ಮಾಡಿರುವ ದೊಡ್ಡ ಕಾಫಿ ತೋಟಗಳ ಮಾಲಕರು ಅತೀವೃಷ್ಟಿ, ಬೆಳೆ ನಷ್ಟ, ಧಾರಣೆ ಕುಸಿತದಂತಹ ಸಮಸ್ಯೆಗಳಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಇಂತಹ ಸಾಲಗಾರರ ತೋಟಗಳನ್ನು ಬ್ಯಾಂಕ್‍ಗಳು ಸರ್ಫೇಯಿಸಿ ಕಾಯ್ದೆ ಮೂಲಕ ಹರಾಜು ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಕಾಫಿ ಒಂದು ಕೃಷಿಯಾಗಿದ್ದು, ಕಾಫಿ ಬೆಳೆಗಾರರನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಬೆಳೆಗಾರರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಪರ ಕೇಂದ್ರದ ಬಳಿ ಚರ್ಚಿಸಿ ಪರಿಹಾರ ದೊರಕಿಸಿಕೊಡಲಿದ್ದಾರೆ ಎಂಬ ನಿರೀಕ್ಷೆ ಬೆಳೆಗಾರರದ್ದಾಗಿದೆ.

ನರೇಂದ್ರ ಮೋದಿ ಪ್ರಧಾನಿಯಾಗಿಯೇ ದೇಶವನ್ನು ಆರ್ಥಿಕವಾಗಿ ದಿವಾಳಿ ಎಬ್ಬಿಸಿದ್ದಾರೆ. ಜನಪರ ಆಡಳಿತ ನೀಡದೇ ಕಾರ್ಪೋರೇಟ್‍ಗಳ ಪರ ಆಡಳಿತ ನಡೆಸುತ್ತಿದ್ದಾರೆ. ಕೃಷಿ ಮಸೂದೆಗಳ ಮೂಲಕ ರೈತರ ಬದುಕನ್ನು ನಾಶ ಮಾಡಲು ಹೊರಟಿದ್ದಾರೆ. ಪ್ರಧಾನಿಯೇ ಸರಿ ಇಲ್ಲದ ಮೇಲೆ ಸಂಸದೆ ಶೋಭಾ ಸಚಿವೆಯಾಗಿ ಯಾವ ಅಭಿವೃದ್ಧಿಯನ್ನೂ ಮಾಡಲಾರರು. ಎರಡು ಬಾರಿ ಸಂಸದೆಯಾಗಿ ಅವರು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ. ಈಗ ಸಚಿವೆಯಾಗಿದ್ದಾರೆ. ಅವರ ಖಾಯಂ ಆಗಿ ದಿಲ್ಲಿಯಲ್ಲೇ ಸೆಟ್ಲ್ ಆಗಲಿದ್ದಾರೆ. ಅವರ ಮೇಲೆ ನಿರೀಕ್ಷೆ ಇಡುವುದು ಪ್ರಯೋಜನವಿಲ್ಲ. ಜನರ ಕೈಗೆ ಅವರು ಸಿಗಲಾರರು.

- ಗುರುಶಾಂತಪ್ಪ, ರೈತ ಸಂಘದ ಮುಖಂಡ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News