ಮುಂಬೈ ಕನ್ನಡಿಗರ ಹೆಮ್ಮೆಯ ಶೈಕ್ಷಣಿಕ ಸಂಸ್ಥೆಗಳು

Update: 2021-07-08 19:30 GMT

ಸ್ಥಳೀಯ ಸರಕಾರದಿಂದ ಯಾವುದೇ ಅನುದಾನ ಅಥವಾ ಕರ್ನಾಟಕ ಸರಕಾರದಿಂದ ಯಾವುದೇ ರೀತಿಯ ಸಹಾಯ ಹಸ್ತ ಇಲ್ಲದೆ ತಮ್ಮ ಮುಂಬೈ ಕನ್ನಡಿಗರ ಸಹಕಾರದಿಂದಲೇ ಕಟ್ಟಿದ ಈ ಸಂಘ ಸಂಸ್ಥೆಗಳ ಶೈಕ್ಷಣಿಕ ಕಾಳಜಿ ಶ್ಲಾಘನೀಯ. ತಮ್ಮ ಗುಣಮಟ್ಟಕ್ಕಾಗಿ 'NAAC'’ನಿಂದ ಅತ್ಯುತ್ತಮ ಪ್ರಮಾಣ ಪತ್ರಗಳನ್ನು ಈ ಸಂಸ್ಥೆಗಳು ಈಗಾಗಲೇ ಪಡೆದಿವೆ.


ಹೊಟ್ಟೆಪಾಡಿಗಾಗಿ ಕನಸುಗಳ ನಗರಿ ಮುಂಬೈಗೆ ಆಗಮಿಸಿದ ಇಲ್ಲಿನ ಕನ್ನಡಿಗರ ಸಾಧನೆಯ ಪುಟಗಳು ಅಗಣಿತ. ಸಾಹಿತ್ಯ, ಸಾಂಸ್ಕೃತಿಕ, ಹೊಟೇಲ್ ಉದ್ದಿಮೆ, ರಸ್ತೆಗಳು ಮತ್ತು ಬೃಹತ್ ಕಟ್ಟಡಗಳ ನಿರ್ಮಾಣ, ರಾಜಕೀಯ ರಂಗ-ಹೀಗೆ ಎಲ್ಲ ಸ್ತರಗಳಲ್ಲೂ ಮುಂಬೈ ಕನ್ನಡಿಗರ ಕೊಡುಗೆ ಅಪಾರವಾದುದು. ಹೊಟ್ಟೆ ಬಟ್ಟೆಯ ಬಗ್ಗೆ ಲೆಕ್ಕಾಚಾರ ಇಟ್ಟುಕೊಂಡು ಅರೆ ಹೊಟ್ಟೆಯಲ್ಲಿ ಬದುಕಿದ, ಬರಿಗಾಲಲ್ಲಿ ನಡೆದಾಡಿದ ಅಂದಿನ ಆ ನಿಸ್ವಾರ್ಥ ಕನ್ನಡಿಗರು, ನಾರಾಯಣಗುರುಗಳ ತತ್ವವಾಣಿಯಂತೆ ಅವರ ತತ್ವವನ್ನು ಕೇಳರಿಯದವರೂ ‘‘ನಾವು-ನಮ್ಮವರು ವಿದ್ಯಾವಂತರಾಗಬೇಕು, ಆ ಮೂಲಕ ಸಂಘಟಿತರಾಗಬೇಕು’’ ಎಂಬ ಧ್ಯೇಯವಾಕ್ಯದಂತೆ ಈ ನಗರದುದ್ದಕ್ಕೂ ವಿದ್ಯಾಸಂಸ್ಥೆಗಳನ್ನು ತೆರೆಯಲಾರಂಭಿಸಿದರು. ಆ ಮೂಲಕ ಕರ್ಮಭೂಮಿಗೂ ಭಾರವಾಗದೆ ಎಲ್ಲರೊಳಗೊಂದಾಗಿ ಬದುಕು ಕಟ್ಟಿಕೊಳ್ಳುವುದನ್ನು ಕಲಿತುಕೊಂಡರು. ಅಂತಹ ವಿದ್ಯಾಸಂಸ್ಥೆಗಳು ಇಂದು ಕನ್ನಡಿಗರನ್ನು ಎತ್ತರಕ್ಕೆ, ಇತರರಿಂದ ಗೌರವಿಸಲ್ಪಡುವಷ್ಟರಮಟ್ಟಿಗೆ ಕೊಂಡೊಯ್ದಿದೆ. ಈಗ ಇಲ್ಲಿ ನಮಗೆ ಪ್ರಸ್ತುತವಾಗಿರುವುದು ಈ ನಗರದಲ್ಲಿ ಕನ್ನಡ ಸಂಘಟನೆಗಳಿಂದ ನಡೆಸಲ್ಪಡುವ (ವ್ಯಕ್ತಿಗಳನ್ನು ಬಿಟ್ಟು) ಕಾಲೇಜುಗಳು.

ಹಲವಾರು ಸಾಧಕರನ್ನು ಕೊಟ್ಟಿರುವ ಹಳೆಯ ಪದವಿ ಪೂರ್ವ ಕಾಲೇಜುಗಳಲ್ಲಿ ಎನ್‌ಕೆಇಎಸ್ ಒಂದು. ವಡಾಲದಲ್ಲಿ 1975ರಲ್ಲಿ ಪ್ರಾರಂಭಗೊಂಡ ಈ ಕಾಲೇಜು ಆರ್ಟ್ಸ್, ಕಾಮರ್ಸ್ ಮತ್ತು ವಿಜ್ಞಾನ ವಿಭಾಗಗಳನ್ನು ಹೊಂದಿದೆ. 2018ರಿಂದ ಪದವಿ, 2010ರಿಂದ ಪಿಜಿ ತರಗತಿಗಳನ್ನು ಪ್ರಾರಂಭಿಸಿರುವ ಎನ್‌ಕೆಇಎಸ್ ವಿದ್ಯಾ ಸಂಕುಲಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಸುಮಾರು 1,000. ಬಿಕಾಂ ಅಲ್ಲದೆ ಬಿಎಫ್‌ಎ, ಬಿಎಂಎಸ್, ಬಿಎ ಹಾಗೂ ಮ್ಯಾನೇಜ್‌ಮೆಂಟ್ ವಿಭಾಗದಿಂದ ಈಗಾಗಲೇ ಹನ್ನೊಂದು ಬ್ಯಾಚ್ ಹೊರಬಂದಿದೆ.

ಸುಮಾರು 15-20ವರ್ಷಗಳಿಂದ 10ನೇ ತರಗತಿಯಲ್ಲಿ 100 ಪ್ರತಿಶತ ಫಲಿತಾಂಶವನ್ನು ಪಡೆದು ಬೃಹತ್ ಮುಂಬೈ ನಗರಪಾಲಿಕೆ ವತಿಯಿಂದ ಬಹುಮಾನಗಳನ್ನು ಪಡೆದಿರುವ ಈ ವಿದ್ಯಾಸಂಸ್ಥೆ, ಅದೇ ಗುಣಮಟ್ಟವನ್ನು ಕಾಲೇಜು ಹಾಗೂ ಪಿಜಿ ವಿಭಾಗದವರೆಗೂ ಮುಂದುವರಿಸುತ್ತಾ ಬಂದಿದೆ. ಸಾಹಿತ್ಯ, ಸಾಂಸ್ಕೃತಿಕ ಹಾಗೂ ಆಟೋಟಗಳಿಗೂ ಮಹತ್ವವನ್ನು ನೀಡುವ ಈ ವಿದ್ಯಾ ಮಂದಿರದ ವಾರ್ಷಿಕ ಪತ್ರಿಕೆ ‘ನಂದಾದೀಪ’. ಪ್ರಾರಂಭದಲ್ಲಿ ಕನ್ನಡದ ವಿದ್ಯಾರ್ಥಿಗಳಿಂದ ತುಂಬಿಕೊಳ್ಳುತ್ತಿದ್ದ ಈ ವಿದ್ಯಾ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ‘‘ಈಗ ಕೇವಲ ಹತ್ತು ಪ್ರತಿಶತ ಜನ ಕನ್ನಡಿಗರಿದ್ದಾರೆ’’ ಎಂದು ಇತ್ತೀಚೆಗೆ ನಿವೃತ್ತರಾದ ಪ್ರಿನ್ಸಿಪಾಲ್ ಸರೋಜಾ ರಾವ್ ವಿಷಾದ ವ್ಯಕ್ತಪಡಿಸುತ್ತಾರೆ. ಕೋಟೆ ಪರಿಸರದ ಪ್ರತಿಷ್ಠಿತ ವಿದ್ಯಾಸಂಸ್ಥೆ ‘ಕನ್ನಡ ಭವನ ಎಜುಕೇಶನ್ ಸೊಸೈಟಿ’. 1975-76ರ ಹೊತ್ತಿಗೆ ಕೇಶವ ಕೋಟ್ಯಾನ್, ದೇವದಾಸ್ ಸಾಲ್ಯಾನ್, ಶಿವ ಬಿಲ್ಲವ, ಶೇಖರ್ ಅಮೀನ್, ಜಯರಾಮ್ ಶೆಟ್ಟಿ, ವಾಮನ ಪೂಜಾರಿ, ಪುರುಷೋತ್ತಮ ಪೂಜಾರಿ ಮೊದಲಾದ ವಿದ್ಯಾರ್ಥಿಗಳು ತಮಗೆ 10ನೇ ತರಗತಿಯ ನಂತರ ವಿದ್ಯಾಭ್ಯಾಸ ಮುಂದುವರಿಸಲು ಕೋಟೆ ಪರಿಸರದಲ್ಲಿ ಕಾಲೇಜು ಬೇಕೆಂದು ಯೂನಿವರ್ಸಿಟಿಯ ಸ್ಟೂಡೆಂಟ್ ಫೆಡರೇಷನ್‌ನ ಕಾರ್ಯದರ್ಶಿ ಇಗ್ನೇಷಿಯಸ್ ಇವರೊಂದಿಗೆ ಸೇರಿ ಆಗಿನ ಮುಂಬೈ ವಿಶ್ವವಿದ್ಯಾನಿಲಯದ ವೈಸ್ ಚಾನ್ಸಲರ್ ಆಗಿದ್ದ ರಾಮ್ ಜೋಶಿ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆ ಇಟ್ಟರು. ಆಗ ರಾಮ್ ಜೋಶಿಯವರು ಕಾಲೇಜಿನ ವ್ಯವಸ್ಥೆ ಮಾಡಲು ಸ್ಥಳದ ಅಭಾವದ ಕಾರಣವನ್ನು ಮುಂದಿಟ್ಟರು. ಆಗ ಕನ್ನಡ ಭವನ ಹೈಸ್ಕೂಲಿನ ಸಹೃದಯಿ ಮುಖ್ಯಸ್ಥರಾದ ರಾಮ್ ನಾರಾಯಣ್ ಐಲ್ ತಮ್ಮ ಶಾಲೆಯಲ್ಲಿ ರಾತ್ರಿ ಕಾಲೇಜಿಗಾಗಿ ಸ್ಥಳಾವಕಾಶ ನೀಡಿದರು. ಹೀಗೆ 1976-77ರ ಶೈಕ್ಷಣಿಕ ವರ್ಷದಿಂದಲೇ ಕನ್ನಡ ಭವನದಲ್ಲಿ ರಾತ್ರಿ ಕಾಲೇಜು ಅಸ್ತಿತ್ವವನ್ನು ಪಡೆಯಿತು. ಪ್ರಾರಂಭದ ವರ್ಷವೇ ಆರ್ಟ್ಸ್ ಹಾಗೂ ಕಾಮರ್ಸ್ ವಿಭಾಗದಲ್ಲಿ ಒಟ್ಟು ಸುಮಾರು 1,000 ವಿದ್ಯಾರ್ಥಿಗಳನ್ನು ಹೊಂದಿದ್ದ ಪದವಿಪೂರ್ವ ಕಾಲೇಜು, ಆ ಪರಿಸರದಲ್ಲಿ ಇಂತಹ ಕಾಲೇಜೊಂದರ ಅವಶ್ಯಕತೆ ಏಕೆ ಇತ್ತು ಎಂಬುದಕ್ಕೆ ಉತ್ತರವಾಗಿತ್ತು.
ಪ್ರಾಚಾರ್ಯ ನಾಗರಹಳ್ಳಿ, ಕೆ.ಎಸ್. ಸುವರ್ಣ, ವಿಠಲ ಪೂಜಾರಿ, ವಸಂತ ಶೆಟ್ಟಿ, ನಾಗೇಶ್ ಹಾವನೂರು ಮೊದಲಾದವರು ಪ್ರಾರಂಭದಲ್ಲಿ ಸಂಬಳ ತೆಗೆದುಕೊಳ್ಳದೆ ಅಧ್ಯಾಪಕರಾಗಿ ನಿಸ್ವಾರ್ಥವಾಗಿ ದುಡಿಯುತ್ತಿದ್ದರು. ಪ್ರಾಚಾರ್ಯ ನಾಗರಹಳ್ಳಿಯವರು ನಾಟಕಗಳನ್ನು ಬರೆದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪ್ರತಿವರ್ಷ ವಾರ್ಷಿಕೋತ್ಸವಕ್ಕೆ ವಿದ್ಯಾರ್ಥಿಗಳಿಂದಲೇ ಅತ್ಯುತ್ತಮ ನಾಟಕಗಳು ರಂಗಕ್ಕೆ ಬರುವಂತೆ ಮಾಡುತ್ತಿದ್ದರು. ಇಲ್ಲಿನ ‘ಮಧುರವಾಣಿ’ ವಾರ್ಷಿಕ ಪುಸ್ತಕದಲ್ಲಿ ವಿದ್ಯಾರ್ಥಿಗಳ ಕತೆ, ಕವಿತೆ, ಲೇಖನಗಳು ಪ್ರಕಟಗೊಳ್ಳುತ್ತಿದ್ದವು. ಯೋಗ್ಯರೀತಿಯ ಅಧ್ಯಾಪಕರ ಮಾರ್ಗದರ್ಶನ, ಸಾಹಿತ್ಯ, ಕಲೆ, ಆಟೋಟಗಳಿಗೆ ಇಲ್ಲಿ ಸಿಗುತ್ತಿದ್ದ ಪ್ರೋತ್ಸಾಹವೇ ಬಹುಶಃ ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲೂ ಮಿಂಚಲು ಕಾರಣ. ಪ್ರಾರಂಭದಿಂದಲೇ ವಿದ್ಯಾಭ್ಯಾಸದ ಗುಣಮಟ್ಟ ಅತ್ಯುತ್ತಮವಾಗಿರುವ ಈ ಕಾಲೇಜಿನ ಪ್ರವೇಶ ವಿಶಿಷ್ಟ ರೀತಿಯದ್ದು. ಯಾರು ಮೊದಲು ಆಗಮಿಸುತ್ತಾರೋ ಅವರಿಗೆ ಪ್ರವೇಶ ದೊರೆಯುತ್ತಿತ್ತು.
ವಿದ್ಯಾ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿ ಪ್ರಶಂಸೆಗೆ ಪಾತ್ರವಾಗಿರುವ ಮುಲುಂದ್ ಪೂರ್ವದಲ್ಲಿರುವ ವಿದ್ಯಾ ಪ್ರಸಾರಕ ಮಂಡಳಿ (ವಿಪಿಎಂ) ತನ್ನದೇ ಆದ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಿದ್ದು 1991ರಲ್ಲಿ. ಪದವಿ ಪೂರ್ವ ವಿಭಾಗದಲ್ಲಿ ಸದ್ಯ 16 ಅಧ್ಯಾಪಕ ವೃಂದ ಹಾಗೂ 4 ಮಂದಿ ಅಧ್ಯಾಪಕೇತರ ಸಿಬ್ಬಂದಿ ವರ್ಗವನ್ನೂ, ಸುಮಾರು 640 ವಿದ್ಯಾರ್ಥಿಗಳನ್ನು ಹೊಂದಿರುವ ಈ ಕಾಲೇಜು, ತನ್ನದೇ ಆದ ಸಣ್ಣ ಕ್ರೀಡಾಂಗಣ, ಸುಸಜ್ಜಿತ ಪುಸ್ತಕಾಲಯ, ಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದೆ. ವಿಜ್ಞಾನ ವಿಭಾಗದಲ್ಲಿ ಐಟಿ, ಫಿಜಿಕ್ಸ್, ಕೆಮೆಸ್ಟ್ರಿ, ಬಯಾಲಜಿ, ಮ್ಯಾಥ್ಸ್‌ಗಳನ್ನು ಹೊಂದಿದ್ದು, ಕಾಮರ್ಸ್ ವಿಭಾಗದಲ್ಲಿಯೂ ಸಾಂಪ್ರದಾಯಿಕ ಪಠ್ಯಕ್ರಮಗಳನ್ನು ಹೊಂದಿದೆ. ಮೆರಿಟ್ ಪ್ರಕಾರ ಪ್ರವೇಶ ನೀಡುತ್ತಿರುವ ಇಲ್ಲಿ ಸುಮಾರು ಐವತ್ತು ಪ್ರತಿಶತ ಕನ್ನಡಿಗರಿಗೆ ಮೀಸಲಾತಿ ಇದೆ. ಆದರೆ ‘‘ಈಗ ಇಲ್ಲಿ 30-40 ಪ್ರತಿಶತ ಕನ್ನಡಿಗರಿದ್ದಾರೆ’’ ಎಂದು ಈ ವಿಭಾಗದ ಪ್ರಾಂಶುಪಾಲರಾಗಿರುವ ಅರ್ಚನಾ ಅರುಣ್ ಕುಮಾರ್ ಬಿರಾಜ್‌ದಾರ್ ಕನ್ನಡಿಗರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ.
 ಸುಮಾರು 60ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ವಿಪಿಎಂ ವಿದ್ಯಾಸಂಸ್ಥೆ ಈಗ ಕೆಜಿಯಿಂದ ಪಿಜಿಯವರೆಗೆ ಒಟ್ಟು ಹನ್ನೊಂದು ವಿದ್ಯಾಮಂದಿರಗಳನ್ನು (ಎಜುಕೇಶನ್ ಇನ್‌ಸ್ಟಿಟ್ಯೂಟ್) ಹೊಂದಿದೆ. 2003ರಲ್ಲಿ ಪದವಿ ಕಾಲೇಜನ್ನು ಹೊಂದಿರುವ ಈ ಸಂಸ್ಥೆ ಸದೃಢವಾದ ಹಳೆ ವಿದ್ಯಾರ್ಥಿ ಬಳಗವನ್ನು ಹೊಂದಿದೆ. ‘ಜ್ಞಾನಜ್ಯೋತಿ’ ಎಂಬ ವಾರ್ಷಿಕ ಪತ್ರಿಕೆ ಹೊರತರುವ ವಿದ್ಯಾಸಂಸ್ಥೆ, ತಮ್ಮಲ್ಲಿಗೆ ಹಿರಿಯ ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು ಮುಂತಾದವರು ಭೇಟಿ ನೀಡಿದಾಗ ಸಂಸ್ಥೆಯ ಅತಿಥಿ ಕೈಪಿಡಿಯಲ್ಲಿ ಬರೆದಿಟ್ಟಿದ್ದ ಬರಹವನ್ನು ತನ್ನ 60ರ ಸಂಭ್ರಮದಲ್ಲಿ ‘ವಿಸಿಟರ್ಸ್ ವೀವ್ಸ್’ ಅನ್ನುವ ಬಹುಮೂಲ್ಯ ಕೃತಿಯನ್ನು ಹೊರತಂದಿದೆ.
 
ಡೊಂಬಿವಿಲಿ ಪರಿಸರದಲ್ಲಿ ವಿದ್ಯಾ ಸಂಕುಲವನ್ನು ಪ್ರಾರಂಭಿಸಿ ಕನ್ನಡಿಗರ ಹೆಮ್ಮೆಗೆ ಪಾತ್ರವಾಗಿದ್ದ ಡೊಂಬಿವಿಲಿ ಕರ್ನಾಟಕ ಸಂಘ 1990ರಲ್ಲಿ ಡಿಗ್ರಿ ಕಾಲೇಜನ್ನು ಆರಂಭಿಸಿ ಮಹಾರಾಷ್ಟ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಇನ್ನೊಂದು ಹೆಮ್ಮೆ. ಪ್ರಾರಂಭದಲ್ಲಿ ಅದಕ್ಕೆ ಸ್ಥಳದ ಕೊರತೆ ಬಹಳಷ್ಟು ಕಾಡುತ್ತಿತ್ತು. ಆಗ ಅಗರ್ಕರ್ ರೋಡ್‌ನಲ್ಲಿದ್ದ ‘ಸರಸ್ವತಿ ಕ್ಲಾಸಸ್’ ಎಂಬ ಟ್ಯೂಷನ್ ಕ್ಲಾಸ್‌ನಲ್ಲಿ ಕಾಮರ್ಸ್ ಪ್ರಥಮ ವರ್ಷದ ಮೂರು ವಿಭಾಗಗಳಲ್ಲಿ ಸುಮಾರು 360 ವಿದ್ಯಾರ್ಥಿಗಳೊಂದಿಗೆ ‘ಮಂಜುನಾಥ ಮಹಾವಿದ್ಯಾನಿಲಯ’ ಎಂಬ ಹೆಸರಿನೊಂದಿಗೆ ಕಾಲೇಜು ಶಿಕ್ಷಣ ನೀಡಲು ಆರಂಭಿಸಿತು. ಮುಂದೆ ಆರ್ಟ್ಸ್ ವಿಭಾಗವನ್ನು ಆರಂಭಿಸಿದ ಈ ಸಂಸ್ಥೆ ರಾಮನಗರದಲ್ಲಿನ ಹೊಟೇಲೊಂದರ ಮೂರು ಮತ್ತು ನಾಲ್ಕನೇ ಅಂತಸ್ತುಗಳಲ್ಲಿ ತನ್ನ ಡಿಗ್ರಿ ಕಾಲೇಜನ್ನು ವಿಸ್ತರಿಸಿತ್ತು. ಡೊಂಬಿವಿಲಿ ಕರ್ನಾಟಕ ಸಂಘವು ತನ್ನಲ್ಲಿದ್ದ ಒಟ್ಟು ಹಣ ಸೇರಿಸಿ, ದಾನಿಗಳಿಂದಲೂ ದೇಣಿಗೆ ಸಂಗ್ರಹಿಸಿದ್ದಲ್ಲದೆ, ಅದರ ಸಮಿತಿ ಸದಸ್ಯರು ಕೂಡಾ ಸಾಕಷ್ಟು ಕೈಯಿಂದ ಭರಿಸಿ ಠಾಕುರ್ಲಿಯ ಪೂರ್ವದ ಕಂಬಲ್‌ಪಾಡದ ಕಂಚನ್‌ಗಾಂವ್‌ನಲ್ಲಿ ವಿಸ್ತೃತವಾದ ಸ್ಥಳ ಪಡೆದು ಅಲ್ಲಿ ಈಗಿರುವ ಬೃಹತ್ ವಿದ್ಯಾ ಸಂಕುಲವನ್ನು ತೆರೆಯಲು ಯಶಸ್ವಿಯಾಯಿತು. ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 1,000 ವಿದ್ಯಾರ್ಥಿಗಳನ್ನೂ, ಪದವಿಯಲ್ಲಿ ಸುಮಾರು 2,600 ವಿದ್ಯಾರ್ಥಿಗಳನ್ನು ಹೊಂದಿರುವ ವಿದ್ಯಾಸಂಸ್ಥೆ ಇದಾಗಿದೆ. ಕಾಮರ್ಸ್ ವಿಭಾಗದಲ್ಲಿ ಬಿಬಿಐ, ಬಿಎಂಎಸ್, ಬಿಎಎಫ್ ಹಾಗೂ ಸಾಂಪ್ರದಾಯಿಕ ಪಠ್ಯವನ್ನು ಹೊಂದಿರುವ ಇಲ್ಲಿನ ಶಿಕ್ಷಣ ಉನ್ನತ ಮಟ್ಟದಲ್ಲಿದೆ. ಪಿಜಿ ಸೆಂಟರ್ ಅನ್ನು ಹೊಂದಿರುವ ಈ ಸಂಸ್ಥೆ ಎಂಕಾಂನಲ್ಲಿ ಅಕೌಂಟೆನ್ಸಿಯನ್ನು ವಿಶೇಷ ಸಬ್ಜೆಕ್ಟಾಗಿ ಹೊಂದಿದೆ. ವಿಶಾಲವಾದ ತರಗತಿಗಳು ಐಟಿ ರೂಂ, ಗ್ರಂಥಾಲಯ ಸಭಾಗೃಹ, ಬಯಲು ಸಭಾಗೃಹ, ಕಾನ್ಫರೆನ್ಸ್ ರೂಂ, ವಿಶಾಲವಾದ ಆಟದ ಮೈದಾನ ಮತ್ತು ವಿಸ್ತಾರವಾದ ಸುಸಜ್ಜಿತ ಕ್ಯಾಂಟಿನ್ ವ್ಯವಸ್ಥೆ ಹೊಂದಿರುವ, ಮುಂಬೈಯ ಹೃದಯಭಾಗದಂತಿರುವ ಪೊವಾಯಿ ಪರಿಸರದಲ್ಲಿರುವ ವಿದ್ಯಾಸಂಕುಲವೊಂದು ತುಳು ಕನ್ನಡಿಗರದ್ದೆಂದು ಹೇಳುವುದೇ ಹೆಮ್ಮೆಯ ಸಂಗತಿ. ಕೆಜಿಯಿಂದ ಪಿಜಿಯವರೆಗೆ ಎಲ್ಲಾ ರೀತಿಯ ಕಲಿಕಾ ವ್ಯವಸ್ಥೆ ಇರುವ ಈ ವಿದ್ಯಾಸಂಸ್ಥೆಯಲ್ಲಿ 2010-11ರ ಸಾಲಿನಲ್ಲಿ ಸುಮಾರು 16 ವಿದ್ಯಾರ್ಥಿಗಳೊಂದಿಗೆ ಪದವಿ ತರಗತಿಗಳನ್ನು ಪ್ರಾರಂಭಿಸಿದ್ದರೆ, ಇದೀಗ (2020-21) ವಿದ್ಯಾರ್ಥಿಗಳ ಸಂಖ್ಯೆ 848. ಖ್ಯಾತ ಉದ್ಯಮಿ ಎಸ್. ಎಂ. ಶೆಟ್ಟಿ ಅವರ ಉದಾರತೆ ಹಾಗೂ ದೂರದೃಷ್ಟಿಯಿಂದ ಜನ್ಮತಾಳಿದ ಬಂಟರ ಸಂಘದ ‘ಎಸ್. ಎಂ. ಶೆಟ್ಟಿ ಕಾಲೇಜ್ ಆಫ್ ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ ಮೆಂಟ್’ ವಿದ್ಯಾಸಂಸ್ಥೆಯು ಗುಣಮಟ್ಟಕ್ಕೆ ಮಹತ್ವ ನೀಡುವಂತಹದ್ದು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ಕಾಲೇಜು ಬಿಎಸ್ಸಿ-ಐಟಿ, ಬಿಎ ಮತ್ತು ಬಿಎಂಎಸ್ ಹಾಗೂ ಸಾಂಪ್ರದಾಯಿಕ ಬಿಕಾಂ ವಿಭಾಗಗಳನ್ನೂ ಹೊಂದಿದೆ. ಈ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಧರ ಶೆಟ್ಟಿಯವರ ಪರಿಶ್ರಮ ಹಾಗೂ ಮುಂದಾಲೋಚನೆಯಿಂದ ಈ ಸಂಸ್ಥೆ ಅಂಧೇರಿ ಪರಿಸರದಲ್ಲಿ ಹೆಮ್ಮೆಯ ಸಂಸ್ಥೆಯಾಗಿ ಕನ್ನಡಿಗರಿಗೆ ಗೌರವ ತಂದಿದೆ.
‘ಬಂಟ್ಸ್ ಸಂಘ’ ತನ್ನ ಎಸ್. ಎಂ. ಶೆಟ್ಟಿ ವಿದ್ಯಾಸಂಕುಲದಿಂದಷ್ಟೇ ತೃಪ್ತಿ ಹೊಂದಿಲ್ಲ. ಬಂಟರ ಭವನದ ಎದುರುಗಡೆ ಇರುವ ವಿಶಾಲವಾದ ಜಾಗದಲ್ಲಿ ‘ಶಶಿ ಮನ್‌ಮೋಹನ್ ಶೆಟ್ಟಿ ಹೈಯರ್ ಎಜುಕೇಶನ್ ಕಾಂಪ್ಲೆಕ್ಸ್’ ತೆರೆದು ಅಲ್ಲಿ ವಿವಿಧ ರೀತಿಯ ಗುಣಮಟ್ಟದ ವೃತ್ತಿಪರ ಶಿಕ್ಷಣವನ್ನು ನೀಡುತ್ತಿದೆ. ರಾಮನಾಥ್ ಪಯ್ಯಡೆ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಸ್ಟಡೀಸ್, ಉಮಾಕೃಷ್ಣ ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್, ಆರತಿ ಶಶಿಕಿರಣ್ ಶೆಟ್ಟಿ ಜ್ಯೂನಿಯರ್ ಕಾಲೇಜ್, ಅನ್ನಲೀಲಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಎಕನಾಮಿಕ್ಸ್, ಶೋಭಾ ಜಯರಾಮ ಶೆಟ್ಟಿ ಕಾಲೇಜ್ ಫಾರ್ ಬಿಎಂಎಸ್ ಇತ್ಯಾದಿ ಹತ್ತು ಹಲವು ಮ್ಯಾನೇಜ್‌ಮೆಂಟ್ ಕಾಲೇಜುಗಳನ್ನು ತೆರೆದು ಹೊಸ ದಾಖಲೆ ಬರೆದಿದೆ.
 

ಮುಂಬೈ ಕನ್ನಡಿಗರಿಗೆ ಪ್ರಥಮ ರಾತ್ರಿ ಶಾಲೆಯನ್ನಿತ್ತ ಮೊಗವೀರ ವ್ಯವಸ್ಥಾಪಕ ಮಂಡಳಿ 2008-09ರ ಸಾಲಿನಲ್ಲಿ ಎಂವಿಎಂ ವಿದ್ಯಾಸಂಕುಲವನ್ನು ಸದೃಢಗೊಳಿಸಿ ಪದವಿಪೂರ್ವ ಮಟ್ಟದಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸಿತು. ಅಲ್ಲಿಂದ ಮುಂದೆ ಹಿಂದಿರುಗಿ ನೋಡದ ಈ ಸಂಸ್ಥೆ ‘ಎಂವಿ ಮಂಡಳೀಸ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಸೈನ್ಸ್’ ಅನ್ನು 201011ರಲ್ಲಿ ಪ್ರಾರಂಭಿಸಿತು. ಮುಂದೆ ಮ್ಯಾನೇಜ್‌ಮೆಂಟ್ ಶಿಕ್ಷಣ ಆರಂಭಿಸಿದ ಈ ಸಂಸ್ಥೆ ಬಿಎಂಎಸ್, ಬಿಎಸ್ಸಿ-ಐಟಿ ಹಾಗೂ ಮಾಹಿತಿ ತಂತ್ರಜ್ಞಾನ ಅಧ್ಯಯನ ವಿಭಾಗದಲ್ಲಿ ವಿಶೇಷತೆಯನ್ನು ಹೊಂದಿದೆ. ಹೊಸ ತಾಂತ್ರಿಕ ವ್ಯವಸ್ಥೆಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡಿರುವ ಈ ಸಂಸ್ಥೆ ಈಗ ಸುಮಾರು 800 ವಿದ್ಯಾರ್ಥಿಗಳನ್ನು ಹೊಂದಿದೆ. ಗುಣಮಟ್ಟದ ಶಿಕ್ಷಣದ ಧ್ಯೇಯವನ್ನು ಹೊಂದಿರುವ ಈ ಸಂಸ್ಥೆಯ ಈಗಿನ ಪ್ರಾಂಶುಪಾಲರು ಡಾ. ಗೋಪಾಲ್ ಕಲ್ಕೋಟಿ. ಸುಮಾರು 53 ವರ್ಷಗಳ ಹಿಂದೆ ಥಾನಾದ ಕಿಸಾನ್ ನಗರ ಪರಿಸರದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದದ್ದು ಮಿಲ್ಲುಗಳು ಮತ್ತು ಹೊಟೇಲ್ ಕಾರ್ಮಿಕರು. ಇವರಿಗೆ ಅಂದು ವಿದ್ಯೆ ಕೈಗೆಟುಕುವ ಸ್ಥಿತಿಯಲ್ಲಿರಲಿಲ್ಲ. ಆಗ ಯಶೋಧರ ಶೆಟ್ಟಿ ಎನ್ನುವವರು ಅಲ್ಲಿನ ತುಳುವರನ್ನು ಒಟ್ಟು ಸೇರಿಸಿ ಕಟ್ಟಿದ ಸಂಸ್ಥೆ ‘ನವೋದಯ ಕನ್ನಡ ಸೇವಾ ಸಂಘ’. 1969ಕ್ಕೆ ಅಸ್ತಿತ್ವಕ್ಕೆ ಬಂದ ಈ ವಿದ್ಯಾ ಸಂಸ್ಥೆಯನ್ನು ಕಟ್ಟುವ ಪೂರ್ವ ತಯಾರಿ ಎಂಬಂತೆ ಗ್ರಂಥಾಲಯವೊಂದನ್ನು ತೆರೆಯಲಾಯಿತು. ಮುಂದೆ ಶೀಘ್ರವೇ (1970)ನವೋದಯ ಇಂಗ್ಲಿಷ್ ಹೈಸ್ಕೂಲ್ ಅನ್ನು ಹುಟ್ಟು ಹಾಕಿತು. ಮುಂದೆ 2017ರಲ್ಲಿ ಪದವಿ ಪೂರ್ವ ಕಾಲೇಜನ್ನು ಅಸ್ತಿತ್ವಕ್ಕೆ ತಂದಿತು. ಕಾಮರ್ಸ್ ಮತ್ತು ಸೈನ್ಸ್ ವಿಭಾಗವನ್ನು ಹೊಂದಿರುವ ಈ ಕಾಲೇಜು ವಿಭಾಗದಲ್ಲಿ ಈಗ ಸುಮಾರು 200 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸ್ಥಳೀಯ ಸರಕಾರದಿಂದ ಯಾವುದೇ ಅನುದಾನ ಅಥವಾ ಕರ್ನಾಟಕ ಸರಕಾರದಿಂದ ಯಾವುದೇ ರೀತಿಯ ಸಹಾಯ ಹಸ್ತ ಇಲ್ಲದೆ ತಮ್ಮ ಮುಂಬೈ ಕನ್ನಡಿಗರ ಸಹಕಾರದಿಂದಲೇ ಕಟ್ಟಿದ ಈ ಸಂಘ ಸಂಸ್ಥೆಗಳ ಶೈಕ್ಷಣಿಕ ಕಾಳಜಿ ಶ್ಲಾಘನೀಯ. ತಮ್ಮ ಗುಣಮಟ್ಟಕ್ಕಾಗಿ ‘NAAC’ನಿಂದ ಅತ್ಯುತ್ತಮ ಪ್ರಮಾಣ ಪತ್ರಗಳನ್ನು ಈ ಸಂಸ್ಥೆಗಳು ಈಗಾಗಲೇ ಪಡೆದಿವೆ.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News