ಚಿಕ್ಕಮಗಳೂರಿನ ನಾಲ್ವರು ಶಾಸಕರ ಪೈಕಿ ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

Update: 2021-07-29 06:50 GMT

ಚಿಕ್ಕಮಗಳೂರು, ಜು.28: ರಾಜ್ಯದ ಬಿಜೆಪಿ ಸರಕಾರದಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಬಳಿಕ ಮುಂದಿನ ಸಿಎಂ ಯಾರೆಂಬ ರಾಜ್ಯದ ಜನರ ಕುತೂಹಲಕ್ಕೆ ತೆರಬಿದ್ದಿದ್ದು, ಬಸವರಾಜ ಬೊಮ್ಮಾಯಿ ಅವರನ್ನೇ ಸಿಎಂ ಎಂದು ಘೋಷಿಸಿ ಹೈಕಮಾಂಡ್ ಎಲ್ಲ ರೀತಿಯ ಗೊಂದಲಗಳಿಗೆ ತೆರೆ ಎಳೆದಿದೆ. ಈ ಮಧ್ಯೆ ಸಿಎಂ ರೇಸ್‌ನಲ್ಲಿದ್ದ ಜಿಲ್ಲೆಯ ನಾಲ್ಕು ಬಾರಿಯ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಮುಖ್ಯಮಂತ್ರಿ ಗದ್ದುಗೆಗೇರುವ ಕನಸೂ ಭಗ್ನಗೊಂಡಿರುವುದರಿಂದ ಸದ್ಯ ಜಿಲ್ಲೆಯ ಜನರ ಏಕೈಕ ನಿರೀಕ್ಷೆ ಜಿಲ್ಲೆಯ ನಾಲ್ವರು ಬಿಜೆಪಿ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಎಂಬುದಾಗಿದೆ.

ಯಡಿಯೂರಪ್ಪ ಬಳಿಕ ಸಿಎಂ ಯಾರೆಂಬುದು ಇಡೀ ರಾಜ್ಯದ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಸಿಎಂ ರೇಸ್‌ನಲ್ಲಿ ಬಿಜೆಪಿ ಪಕ್ಷದ ಪ್ರಭಾವಿ ಮುಖಂಡರ ಹೆಸರುಗಳೊಂದಿಗೆ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸಚಿವರಾಗಿ, ಹಾಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆರೆಸ್ಸೆಸ್ ಸೇರಿದಂತೆ ಸಂಘಪರಿವಾರದ ಮುಖಂಡರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಸಿ.ಟಿ.ರವಿ ಅವರ ಹೆಸರೂ ಚಲಾವಣೆಯಲ್ಲಿತ್ತು. ಸಿ.ಟಿ.ರವಿ ಕೂಡ ಈ ನಿಟ್ಟಿನಲ್ಲಿ ಬಿಡುವಿಲ್ಲದ ಓಡಾಟ ನಡೆಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ನೀಡಿರುವುದರಿಂದ ಸಿ.ಟಿ.ರವಿ ಹಾಗೂ ಅವರ ಹಿಂಬಾಲಕರ ಆಸೆಗೆ ತಣ್ಣೀರೆರಚಿದೆ.

ಈ ಬೆಳವಣಿಗೆಗಳ ಮಧ್ಯೆ ಸದ್ಯ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ ಅವರಿಗೆ ರಾಜ್ಯ ಸರಕಾರದ ಸಚಿವ ಸಂಪುಟದಲ್ಲಿ ಗೃಹ ಸಚಿವದಂತಹ ಉನ್ನತಮಟ್ಟದ ಸ್ಥಾನಮಾನ ಸಿಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಸಿ.ಟಿ.ರವಿ ಅವರಿಗೆ ಈಗಾಗಲೇ ಸಚಿವ ಸ್ಥಾನದಂತಹ ಉನ್ನತ ಸ್ಥಾನಮಾನಗಳು ಸಿಕ್ಕಿದ್ದು, ಜಿಲ್ಲೆಯಲ್ಲಿರುವ ಇತರ ಬಿಜೆಪಿ ಶಾಸಕರು ಎರಡು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಇದುವರೆಗೂ ಸಚಿವರ ಸ್ಥಾನ ಮಾನ ಸಿಕ್ಕಿಲ್ಲ. ರೀಕೆರೆ ಶಾಸಕ ಡಿ.ಎಸ್.ಸುರೇಶ್ ಹಾಗೂ ಮೂಡಿಗೆರೆ ಶಾಸಕರ ಎಂ.ಪಿ.ಕುಮಾರಸ್ವಾಮಿ ಅವರು ತಲಾ ಮೂರು ಬಾರಿ ಶಾಸಕರಾಗಿದ್ದು, ಈ ಶಾಸಕರು ಸಚಿವ ಸ್ಥಾನ ಬೇಕೆಂದು ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿದ್ದಾರೆ. ಈ ಬಾರಿಯಾದರೂ ಈ ಶಾಸಕರಿಗೆ ಸಚಿವ ಸ್ಥಾನಮಾನ ಸಿಗಬೇಕಾಗಿರುವುದು ಔಚಿತ್ಯಪೂರ್ಣ ಎಂಬ ಮಾತು ಕೇಳಿ ಬರುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ಕಡೂರು ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಬೆಳ್ಳಿಪ್ರಕಾಶ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ತರೀಕೆರೆ, ಮೂಡಿಗೆರೆ, ಕಡೂರು ಕ್ಷೇತ್ರದ ಶಾಸಕರಿಗೆ ನ್ಯಾಯಬದ್ಧವಾಗಿ ಸಚಿವ ಸ್ಥಾನಮಾನ ಸಿಗಬೇಕು ಎಂಬುದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ.

ಒಂದು ವೇಳೆ ಜಿಲ್ಲೆಯಲ್ಲಿನ ನಾಲ್ವರು ಬಿಜೆಪಿ ಶಾಸಕರ ಪೈಕಿ ಸಿ.ಟಿ.ರವಿ ಅವರಿಗೆ ಮತ್ತೆ ಸಚಿವ ಸಂಪುಟದಲ್ಲಿ ಮಣೆ ಹಾಕಿದಲ್ಲಿ ಜಿಲ್ಲೆಯ ಇತರ ಶಾಸಕರು ಅಸಮಾಧಾನಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಸಿ.ಟಿ.ರವಿ ವಿರುದ್ಧ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಜಗಜ್ಜಾಹೀರಾಗಿದೆ.

ಎಂ.ಪಿ.ಕುಮಾರಸ್ವಾಮಿ, ಡಿ.ಎಸ್.ಸುರೇಶ್‌ಗೆ ಸಚಿವ ಸ್ಥಾನ?

ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ನೆರಳಾಗಿದ್ದಾರೆ. ಸಿ.ಟಿ.ರವಿ ವಿರುದ್ಧ ಯಡಿಯೂರಪ್ಪ ಅವರಿಗೆ ಮೊದಲಿನಿಂದಲೂ ಅಸಮಾಧಾನವಿದ್ದು, ಸಿಎಂ ಬದಲಾವಣೆ ಸಂದರ್ಭ ಸಿ.ಟಿ.ರವಿ ಅವರು ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಕಾರಣಕ್ಕೆ ಸಿ.ಟಿ.ರವಿ ಬಿಜೆಪಿ ರಾ.ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತೃಪ್ಪಿಪಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವರಿಗೆ ಸಚಿವ ಸಂಪುಟದಲ್ಲಿ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಮೂಡಿಗೆರೆ ಶಾಸಕ ಹಾಗೂ ತರೀಕೆರೆ ಶಾಸಕ ಮೊದಲಿನಿಂದಲೂ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದವರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೊಂದು ಸಚಿವ ಸ್ಥಾನ ಸಿಗುವುದಿದ್ದರೆ ಎಂ.ಪಿ.ಕುಮಾರಸ್ವಾಮಿ, ಇಲ್ಲವೇ ಡಿ.ಎಸ್.ಸುರೇಶ್ ಅವರಿಗೆ ಸಿಗಲಿದೆ ಎಂಬ ಅಭಿಪ್ರಾಯ ಬಿಜೆಪಿ ಮುಖಂಡರಿಂದ ಕೇಳಿ ಬರುತ್ತಿವೆ.

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News