ಮುಂಬೈ ‘ವಿದ್ಯಾನಿಧಿ’ಯ ಎಂ.ಎಸ್. ಕೋಟ್ಯಾನ್

Update: 2021-07-29 19:30 GMT

ಮಾನವೀಯ ಕಳಕಳಿಯ, ಸಾಹಿತ್ಯ ಆರಾಧನಾ ಕೇಂದ್ರ, ಜ್ಞಾನಭಂಡಾರ, ಸಾಹಿತಿಗಳ ಕೂಡು ಕೇಂದ್ರ ‘ವಿದ್ಯಾನಿಧಿ’ಯು ಎಂ.ಎಸ್. ಕೋಟ್ಯಾನ್ ಅವರ ಜೊತೆಗೆ ನಿಶ್ಯಬ್ದವಾಗಿ ಈಗಾಗಲೇ 2 ದಶಕಗಳು ಸಂದಿವೆ. ಈಗ ಇಲ್ಲಿ ಮುಂಬೈ ಕನ್ನಡಿಗರಿಗೆ ಬೇಕಾದ ಕೃತಿಗಳೂ ಸಿಗುವುದಿಲ್ಲ. ಇಲ್ಲಿನ ಲೇಖಕರ ಕೃತಿಗಳನ್ನು ಮಾರುವ ಕೇಂದ್ರವಿಲ್ಲ. ಮುಂಬೈ ಕನ್ನಡಿಗರ ಪಾಲಿಗೆ ಪುಸ್ತಕಗಳ ಹರಿವು ಒಂದು ರೀತಿಯಲ್ಲಿ ನಿಂತ ನೀರಾಗಿದೆ. 


ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆ, ಕಲೆ -ಹೀಗೆ ಒಟ್ಟು ನಾಡು-ನುಡಿಯ ಬೆಳವಣಿಗೆಯಲ್ಲಿ ಮುಂಬೈ ಕನ್ನಡಿಗರ ಅನುಪಮ ಸೇವೆಯನ್ನು ಎಂದೂ ಮರೆಯುವಂತಿಲ್ಲ. ಸಾವಿರಾರು ತುಳು ಕನ್ನಡಿಗರಂತೆ, ಹೊಟ್ಟೆಪಾಡಿಗಾಗಿ ಮುಂಬೈಗೆ ಆಗಮಿಸಿ, ತಮ್ಮ ಅಸ್ಮಿತೆಯ ಹೆಜ್ಜೆಗುರುತುಗಳನ್ನೊತ್ತಿ ಸದಾ ಸ್ಮರಣೀಯವಾಗಿರುವವರ ಸಾಲಿನಲ್ಲಿ ವಿದ್ಯಾನಿಧಿಯ ಎಂ.ಎಸ್. ಕೋಟ್ಯಾನ್ ಮೊದಲಿಗರಲ್ಲಿ ಓರ್ವರಾಗಿ ಎದ್ದು ಕಾಣುತ್ತಾರೆ.

ಅದು ಎರಡನೇ ಮಹಾಯುದ್ಧದ ಕಾಲಘಟ್ಟ. ಮುಂಬೈಯ ರಾತ್ರಿಶಾಲೆಗಳಲ್ಲಿ ಒಂದಾದ ‘ಮದರ್ ಇಂಡಿಯಾ’ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಮುಳ್ಳಗುಡ್ಡೆ ಸುಂದರ ಕೋಟ್ಯಾನ್ ಎಂಬ ತರುಣ ರಾತ್ರಿ ಶಾಲೆಗಳ ಯೂನಿಯನ್‌ನ ಕಾರ್ಯದರ್ಶಿಯಾಗಿದ್ದರು. ಅಂದಿನ ದಿನಗಳಲ್ಲಿ ಆ ಪದವಿ ಜವಾಬ್ದಾರಿಯುತ ಹಾಗೂ ಗೌರವದಿಂದ ಕೂಡಿತ್ತು. ಆಗ ಇಲ್ಲಿನ ಶಾಲೆಗಳಿಗೆ ಪಠ್ಯಪುಸ್ತಕವಾಗಲೀ, ಇತರ ಸಾಹಿತ್ಯ ಕೃತಿಗಳಾಗಲೀ ಇಲ್ಲಿ ದೊರೆಯದ ಕಾಲ. ಆಗ ಶಿಕ್ಷಕರಲ್ಲಿ ಓರ್ವರಾಗಿದ್ದ ಶಿಬ್ರೂಕರ್ ಎಂಬವರು ವಿದ್ಯಾರ್ಥಿಗಳಿಗೆ ಮಂಗಳೂರಿನಿಂದಲೋ ಅಥವಾ ಧಾರವಾಡದಿಂದಲೋ ಪುಸ್ತಕಗಳನ್ನು ತರಿಸಿ ಕೊಡುತ್ತಿದ್ದರು. ಆದರೆ ಅದು ಎಲ್ಲ ವಿದ್ಯಾರ್ಥಿಗಳಿಗೂ ಪೂರೈಕೆಯಾಗುತ್ತಿರಲಿಲ್ಲ. ಇದನ್ನು ಮನಗಂಡ ಅಂದಿನ ಶಾಲಾ ಯೂನಿಯನ್ ಕಾರ್ಯದರ್ಶಿ ಎಂ. ಎಸ್. ಕೋಟ್ಯಾನ್ ತಾನೇ ಆ ಜವಾಬ್ದಾರಿ ವಹಿಸಿಕೊಂಡು ಎಲ್ಲ ಶಾಲಾ ವಿದ್ಯಾರ್ಥಿಗಳ ಕೈಗೆ ಪುಸ್ತಕಗಳು ತಲುಪುವಂತೆ ನೋಡಿಕೊಂಡರು. ಆದರೆ ಒಂದೆರಡು ವರ್ಷಗಳಲ್ಲಿ ಅವರು ತರಿಸಿದ್ದ ಪುಸ್ತಕಗಳು ಕೆಲ ವಿದ್ಯಾರ್ಥಿಗಳಿಂದ ಖರೀದಿಸಲ್ಪಡದೆ ಅವರಲ್ಲೇ ಉಳಿದುಕೊಂಡವು. ಕೈಸುಟ್ಟುಕೊಂಡ ಅನುಭವ. ಆಗಲೇ ಮಹಾಯುದ್ಧವೇನೋ ನಿಂತಿತ್ತು. ಆದರೆ ಎಂ.ಎಸ್. ಕೋಟ್ಯಾನ್‌ರ ಬದುಕಿನಲ್ಲಿ ಮಹಾಯುದ್ಧ ಪ್ರಾರಂಭಗೊಂಡಿತ್ತು. ಎಸ್‌ಎಸ್‌ಸಿ ಪರೀಕ್ಷೆಗೆ ರಜೆ ಬೇಕಾಗಿತ್ತು. ಆ ಕಾರಣದಿಂದ ಎಂ.ಇ.ಎಸ್. ನೌಕರಿ ಕೈತಪ್ಪಿತು.

ಪರೀಕ್ಷೆ ಮುಗಿದ ನಂತರ ಇಪ್ಪತ್ತರ ಎಂ.ಎಸ್. ಕೋಟ್ಯಾನ್ ಒಂದೆರಡು ಕಡೆ ಚಿಕ್ಕ ಪುಟ್ಟ ಕೆಲಸಕ್ಕೆ ಸೇರಿಕೊಂಡರು. ಆಗ ತನ್ನಲ್ಲಿ ಉಳಿದಿರುವ ಪುಸ್ತಕಗಳಿಗೆ ಮತ್ತೊಂದಿಷ್ಟು ಸೇರಿಸಿ ಪುಸ್ತಕ ವ್ಯಾಪಾರ ಮಾಡಿದರೆ ಹೇಗೆ? ಎಂಬ ಯೋಚನೆಯೊಂದು ಕಾಡುತ್ತಿದ್ದಂತೆಯೇ ಪೀತಾ ಸ್ಟ್ರೀಟ್‌ನಲ್ಲಿ ಒಂದು ಸಣ್ಣ ಅಂಗಡಿಯ ರೂಪದಲ್ಲಿ ‘ಸ್ಟೂಡೆಂಟ್ಸ್ ಬುಕ್ ಡಿಪೋ’ ಉದಯವಾಗಿ ಶೀಘ್ರದಲ್ಲೇ ಜನಪ್ರಿಯಗೊಂಡಿತಲ್ಲದೆ, ಕನ್ನಡ ಪುಸ್ತಕಗಳು ದೊರೆಯುವ ಮುಂಬೈಯ ಏಕಮಾತ್ರ ಅಂಗಡಿ ಎಂಬ ಗರಿಮೆ ಪಡೆಯಿತು. ಅಲ್ಲಿ ಕನ್ನಡ ಅಧ್ಯಾಪಕರ, ಪ್ರಾಧ್ಯಾಪಕರ, ಯಕ್ಷಗಾನ ಕಲಾವಿದರ, ಸಾಹಿತಿಗಳ ಪರಿಚಯವಾಯಿತು. ತಾನು ತರಿಸುತ್ತಿದ್ದ ಕೃತಿಗಳನ್ನು ಮೊದಲು ತಾನೇ ಓದುವುದರಿಂದ ಅವರಿಗೆ ಅನೇಕ ಸಾಹಿತ್ಯ ಕೃತಿಗಳ ಪರಿಚಯವಾಯಿತು. ಪ್ರಾರಂಭದಲ್ಲಿ ವಿದ್ವಾನ್ ರಾಮಚಂದ್ರ ಉಚ್ಚಿಲ್, ವ್ಯಾಸರಾಯ ಬಲ್ಲಾಳ ಮೊದಲಾದವರ ಮಾರ್ಗದರ್ಶನ ಒಳ್ಳೆಯ ಗ್ರಂಥಗಳ ಸಂಗ್ರಹಕ್ಕೆ ಕಾರಣವಾಯಿತು. ಅಂದಿನ ದಿನಗಳಲ್ಲಿ ಒಮ್ಮೆ ಮುಂಬೈಗೆ ಆಗಮಿಸಿದ್ದ ಜಿ.ಬಿ. ಜೋಶಿಯವರು ಈ ಅಂಗಡಿ ನೋಡಲೆಂದು ಬಂದವರು ‘‘ಪುಸ್ತಕದ ಅಂಗಡಿ ಇಟ್ಟಿದ್ದೀರಾ ಚೆನ್ನಾಯ್ತು. ಅತ್ತ ಸಾಯಲೂ ಬಿಡದ ಇತ್ತ ಬದುಕಲೂ ಬಿಡದ ವ್ಯಾಪಾರ. ಒಂದು ಹೊಂಡ ತೆಗೆಯಬೇಕು, ಆ ಹೊಂಡವನ್ನು ಮುಚ್ಚಲು ಇನ್ನೊಂದು ಹೊಂಡವನ್ನು ತೆಗೆಯಬೇಕು’’ ಎಂದು ಹೇಳಿದ್ದರಂತೆ.

‘ಮನೋಹರ ಗ್ರಂಥಮಾಲೆ’ಯಂತಹ ಪುಸ್ತಕ ಮಳಿಗೆಯೊಂದನ್ನು ಕಟ್ಟಿ ಬೆಳೆಸಿದ ಹಿರಿ ಜೀವದ ‘‘ಆ ಮಾತಿನ ಅನುಭವ ನನಗೀಗ ಆಗುತ್ತಿದೆ’’ ಎಂದು ಕರ್ನಾಟಕ ಸಂಘವು 1992ರಲ್ಲಿ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ಹಬ್ಬದ ನಿಮಿತ್ತ ಹಮ್ಮಿಕೊಂಡ ‘ಇಪ್ಪತ್ತೊಂದನೇ ಶತಮಾನದಲ್ಲಿ ಪುಸ್ತಕ ಪ್ರಪಂಚ’ ಎಂಬ ಗೋಷ್ಠಿಯಲ್ಲಿ ಎಂ.ಎಸ್. ಉದ್ಗರಿಸುತ್ತಾರೆ. ತಾನು ಕಲಿತ ‘ಮದರ್ ಇಂಡಿಯಾ’ ರಾತ್ರಿ ಶಾಲೆಯಲ್ಲಿ ಶಿಕ್ಷಕರಾಗಿ ಹಣದಾಸೆ ಇಲ್ಲದೆ ವಿದ್ಯೆ ಕಲಿಸಿದ ಎಂ.ಎಸ್., ಶೀಘ್ರವೇ ಮಕ್ಕಳ ಮೆಚ್ಚಿನ ಶಿಕ್ಷಕರಾದರು. ಮುಂದೆ 1957ರಲ್ಲಿ ಕೋಟೆ ಭಾಗದ ಮಾರುತಿ ಲೇನ್‌ನಲ್ಲಿ ಜಾಗ ಪಡೆದು ‘ವಿದ್ಯಾನಿಧಿ ಬುಕ್ ಡಿಪೋ’ ಎಂಬ ಹೆಸರಿನಿಂದ ಪೂರ್ಣ ಪ್ರಮಾಣದ ಪುಸ್ತಕ ವ್ಯಾಪಾರಿಯಾದರು. ಇದು ಕನಸೊಂದು ನನಸಾದ ಎಂ. ಎಸ್. ಕೋಟ್ಯಾನ್ ಅವರ ಬದುಕಿನ ಒಂದು ಚಿತ್ರ.

ಕಳೆದ ಶತಮಾನದ ಸುಮಾರು ಐವತ್ತರ ದಶಕದಿಂದಲೇ ಆ ಕಾಲದ ಜನಪ್ರಿಯ ಲೇಖಕರಾದ ಅನಕೃ, ತರಾಸು, ನಿರಂಜನ, ಕೃಷ್ಣಮೂರ್ತಿ ಪುರಾಣಿಕ, ತ್ರಿವೇಣಿ, ಬೀಚಿ ಮೊದಲಾದವರ ಕಾದಂಬರಿಗಳು ಮುಂಬೈ ಓದುಗರಿಗೆ ಸುಲಭ ಬೆಲೆಯಲ್ಲಿ ದೊರೆಯತೊಡಗಿದ್ದವು. ಜತೆಗೆ ಮುಂಬೈ ಲೇಖಕರ ಕೃತಿಗಳು ಇಲ್ಲಿ ಸಿಗುತ್ತಿದ್ದವು. ‘‘ಆಗಿನ ಕಾಲದಲ್ಲಿ ಕಾದಂಬರಿಗಳಲ್ಲದೆ ಕಥೆ, ಕವನ, ನಾಟಕ ಹಾಗೂ ಇತರ ಪ್ರಕಾರದ ಕೃತಿಗಳಿಗೆ ಸಾಕಷ್ಟು ಬೇಡಿಕೆಯಿತ್ತು’’ ಎಂದು ಎಂ.ಎಸ್. ಕೋಟ್ಯಾನ್ ಹೇಳಿದ್ದ ಮಾತು ಬಹಳಷ್ಟು ಗಮನಾರ್ಹವಾದುದು.

‘‘ಊರಿಗೆ ಬಂದವ ಮನೆಗೆ ಬಾರದಿರನೇ’’ ಎಂಬಂತೆ ಕೋಟೆ ಪರಿಸರಕ್ಕೆ ಬಂದವರು ವಿದ್ಯಾನಿಧಿಗೆ ಬಾರದಿರಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ವಿದ್ಯಾನಿಧಿ ಕನ್ನಡಿಗರ ಬದುಕಿನ ಅಂಗವಾಯಿತು. ಯೂನಿವರ್ಸಿಟಿಗೆ ಬರುತ್ತಿದ್ದ ಸುನೀತಾ ಶೆಟ್ಟಿ ಮೊದಲಾದವರು, ಊಟದ ಸಂದರ್ಭ ಸುತ್ತಾಡಲೆಂದು ಹೊರಡುವ ವೇಣುಗೋಪಾಲ್, ಶಿವಬಿಲ್ಲವ, ರವಿ ಆಂಚನ್, ಎಸ್ಕೆ, ಎ. ನರಸಿಂಹ ಮೊದಲಾದವರು, ವಿದ್ಯಾನಿಧಿ ಮೇಲಿದ್ದ ಸದಾನಂದ ಸುವರ್ಣರನ್ನು ಕಾಣಲೆಂದು ಬರುತ್ತಿದ್ದ ಡಾ. ನಿಂಜೂರು, ವಿದ್ವಾನ್ ರಾಮಚಂದ್ರ ಉಚ್ಚಿಲ್, ಶಿವಮುಂಜೆ ಪರಾರಿ, ಬಿ. ಎಸ್. ಕುರ್ಕಾಲ್ ಹೀಗೆ ಎಲ್ಲ ಸಾಹಿತ್ಯಾಸಕ್ತರು ಒಟ್ಟು ಸೇರುತ್ತಿದ್ದ, ಚರ್ಚಿಸುತ್ತಿದ್ದ ಸಾಹಿತ್ಯ ಕೇಂದ್ರವಾಗಿ ಪರಿಣಮಿಸಿತು ಆ ಪುಸ್ತಕದಂಗಡಿ. ಯಾರೇ ಬಂದು ಯಾವುದೇ ಕೃತಿಗಳ ಬಗ್ಗೆ ವಿಚಾರಿಸಿದರೂ ಇಲ್ಲ ಎಂದು ಬೇಸರಿಸಿ ಹಿಂದಿರುಗಿ ಹೋದವರಿಲ್ಲ. ಕೃತಿ ಅಲಭ್ಯವಿದ್ದರೆ ಆ ಕೃತಿಯನ್ನು ಒಂದು ವಾರದೊಳಗೆ ತರಿಸಿ ಕೊಡುತ್ತಿದ್ದವರು ಎಂ.ಎಸ್. ಕೋಟ್ಯಾನ್. ಇಲ್ಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಬೇಡಿಕೆಯಂತೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆಯ ‘ಕನ್ನಡ ಸಾಹಿತ್ಯ ಚರಿತ್ರೆ’ಯ ಬೃಹತ್ ಸಂಪುಟಗಳು (ಪ್ರತಿ ಸಂಚಿಕೆ ಸುಮಾರು 800ರಿಂದ 900 ಪುಟ) ಕೇವಲ 30 ರೂಪಾಯಿಗಳಿಗೆ ದೊರೆಯುತ್ತಿತ್ತು. ಹಾಗೆಯೇ ‘ಕನ್ನಡ ಛಂದಸ್ಸಿನ ಚರಿತ್ರೆ’ (697 ಪುಟ) ರೂ. 25ಕ್ಕೆ ಸಿಗುತ್ತಿದ್ದ ಕಾಲವದು. ‘‘ಹಳೆಯ ಹುಲಿಗಳ ಪೈಕಿ ಡಾ.ಶಿವರಾಮ ಕಾರಂತ ಮತ್ತು ಡಾ. ಎಸ್.ಎಲ್. ಬೈರಪ್ಪರವರ ಕೃತಿಗಳು ಹೆಚ್ಚು ಮಾರಾಟವಾಗುತ್ತಿದ್ದುದಲ್ಲದೆ, ಲೇಖಕಿಯರಾದ ತ್ರಿವೇಣಿ, ಎಂ.ಕೆ. ಇಂದಿರಾ ಕಾದಂಬರಿಗಳ ಜೊತೆ ಸಾಯಿಸುತೆ, ಉಷಾ ನವರತ್ನರಾಮ್, ಅಶ್ವಿನಿ, ರಾಧಾ ಮೊದಲಾದವರ ಕಾದಂಬರಿಗಳು, ಲೇಖಕರ ಪೈಕಿ ಟಿ.ಕೆ. ರಾಮರಾವ್, ಕೆ.ಟಿ. ಗಟ್ಟಿ ಮೊದಲಾದವರ ಕಾದಂಬರಿಗಳಿಗೆ ಹೆಚ್ಚು ಬೇಡಿಕೆಯಿತ್ತು’’ ಎಂದು ಎಂ. ಎಸ್. ಕೋಟ್ಯಾನ್ ಅಂದಿನ ಓದುಗರ ಅಭಿರುಚಿಯ ಬಗ್ಗೆ ಬಣ್ಣಿಸುತ್ತಾರೆ.

ಪತ್ತೇದಾರಿ ಕಾದಂಬರಿಗಳಲ್ಲಿ ಎನ್. ನರಸಿಂಹಯ್ಯ, ಬಿ. ಕೆ. ಸುಂದರ್ ರಾಜ್ ಮೊದಲಾದವರ ಕೃತಿಗಳು ಹೆಚ್ಚಾಗಿ ಮಾರಾಟಗೊಳ್ಳುತ್ತಿತ್ತು. ‘‘ಕುವೆಂಪುರವರ ‘ಶ್ರೀರಾಮಾಯಣ ದರ್ಶನಂ’ ಕೇವಲ 6 ರೂಪಾಯಿಗೆ ನಾನು ವಿದ್ಯಾನಿಧಿಯಿಂದ ಖರೀದಿಸಿದ್ದೆ. ಕನ್ನಡ ವಿಶ್ವಕೋಶ ಸಂಪುಟ ನನಗೆ ಅಂದು 40 ರೂಪಾಯಿಗೆ ದೊರೆತಿತ್ತು’’ ಎಂದು ಹಿರಿಯ ಸಾಹಿತ್ಯಪ್ರಿಯರೋರ್ವರು ಅಭಿಮಾನದಿಂದ ನೆನೆಯುತ್ತಾರೆ. ಕಲ್ಯಾಣ್‌ನಿಂದ ವಿಟಿ, ವಸಾಯಿಯಿಂದ ಚರ್ಚ್‌ಗೇಟ್ ತನಕ ದಿನನಿತ್ಯದ ರೈಲಿನಲ್ಲಿ ಸುಮಾರು ಒಟ್ಟು ಮೂರರಿಂದ ನಾಲ್ಕುಗಂಟೆ ಪ್ರಯಾಣಿಸುತ್ತಿದ್ದ ಅಂದಿನ ಕನ್ನಡಿಗರು ಕತೆ, ಕಾದಂಬರಿ ಹಾಗೂ ಇತರ ಕೃತಿಗಳನ್ನು ಓದಲೆಂದು ಆ ಸಮಯ ವಿನಿಯೋಗಿಸುತ್ತಿದ್ದರು. ಒಂದು ಪ್ರತಿ ಮುಗಿದ ಕೂಡಲೇ ಮತ್ತೆ ವಿದ್ಯಾನಿಧಿಯತ್ತ ದಾಪುಗಾಲು ಇಡುತ್ತಿದ್ದರು. ಇದು ಅಂದಿನ ಕನ್ನಡಿಗರನ್ನು ಓದು ಸಂಸ್ಕೃತಿಗೆ ಹಚ್ಚಿದ ಸುಂದರ ದಿನಗಳು. ಕತೆ, ಕಾದಂಬರಿ ಅಥವಾ ಶಾಲಾ-ಕಾಲೇಜು, ಎಂ.ಎ. ವಿದ್ಯಾರ್ಥಿಗಳ ಪುಸ್ತಕಗಳು ಮಾತ್ರ ಅಲ್ಲಿ ಸಿಗುತ್ತಿದ್ದವು ಎಂದರ್ಥವಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳ ಜೊತೆ ಕರ್ನಾಟಕದ ಜನಪ್ರಿಯ ದೈನಿಕ, ಸಾಪ್ತಾಹಿಕ, ಪಾಕ್ಷಿಕ ಮತ್ತು ಮಾಸಿಕ ಸಂಚಿಕೆಗಳು ಹೇರಳವಾಗಿ ಇಲ್ಲಿ ಸಿಗುತ್ತಿದ್ದವು. ಅಂದಿನ ದಿನಗಳಲ್ಲಿ ಕರಾವಳಿಯ ದೈನಿಕವೊಂದು 3 ದಿನಗಳ ನಂತರ ಮುಂಬೈಗೆ ಬಂದರೂ 6 ಸಾವಿರ ಪ್ರತಿ ಮಾರಾಟವಾಗುತ್ತಿತ್ತು, ಸಾಪ್ತಾಹಿಕವೊಂದು 9ಸಾವಿರ ಮಾರಾಟವಾಗುತ್ತಿತ್ತು ಎಂಬುದನ್ನು ನಾವು ಊಹಿಸುವುದೂ ಅಸಾಧ್ಯ.

ಹೀಗೆ ಮುಂಬೈಗೆ ದೈನಿಕ ಹಾಗೂ ನಿಯತಕಾಲಿಕೆಗಳು ಬರುವುದಕ್ಕೆ ಮುಖ್ಯ ಕಾರಣರು ಎಂ.ಎಸ್. ಕೋಟ್ಯಾನ್. ಅವರು ಅವುಗಳ ಏಜೆನ್ಸಿ ತೆಗೆದುಕೊಂಡು ಪತ್ರಿಕಾರಂಗದಲ್ಲೂ ತನ್ನ ಸೇವೆಯನ್ನು ಮಾಡಿದ್ದಾರೆ. ಓರ್ವ ರಾತ್ರಿಶಾಲಾ ವಿದ್ಯಾರ್ಥಿಯಾಗಿ ಅನುಭವವಿದ್ದ ಎಂ.ಎಸ್. ಕೋಟ್ಯಾನ್, ವಿದ್ಯಾರ್ಥಿಗಳಿಗಾಗಿ ಬಹುಮುಖ್ಯವಾದ ‘ಸರ್ಕ್ಯುಲೇಟಿಂಗ್ ಲೈಬ್ರರಿ’ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಆಧಾರವಾಗಿ ನಿಂತರು. ಆಗ ಆಂಗ್ಲಮಾಧ್ಯಮ, ಮರಾಠಿ ಮತ್ತು ಗುಜರಾತಿ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶಿಕೆಗಳು ಇದ್ದವು. ನಮ್ಮ ವಿದ್ಯಾರ್ಥಿಗಳು, ಅದರಲ್ಲೂ ಎಸ್‌ಎಸ್‌ಸಿ ವಿದ್ಯಾರ್ಥಿಗಳ ಬವಣೆ ಅರಿತು ಅವರಿಗಾಗಿ ಪರಿಶ್ರಮಪಟ್ಟು ಮಾರ್ಗದರ್ಶಿಕೆ ಗಳನ್ನು ಸಿದ್ಧಗೊಳಿಸಿ, ಅಚ್ಚು ಹಾಕಿಸಿ ಮಕ್ಕಳಿಗೆ ದೊರೆಯುವಂತೆ ಮಾಡಿ ಆ ಕೊರತೆಯನ್ನೂ ನಿವಾರಿಸಿದರು. ಎಂ.ಎಸ್. ಕೋಟ್ಯಾನ್ ಬಗ್ಗೆ ಹಿರಿಯ ಲೇಖಕಿ ಡಾ. ಸುನೀತಾ ಎಂ. ಶೆಟ್ಟಿ, ‘‘ವಿದ್ಯಾನಿಧಿ ಬರೀ ಪುಸ್ತಕದಂಗಡಿಯಲ್ಲ, ಅದು ಜ್ಞಾನ ವ್ಯವಹಾರದ ಕೇಂದ್ರ’’ ಎಂದು ಹೇಳಿದ್ದರಲ್ಲಿ ಎಲ್ಲೂ ಅತಿಶಯೋಕ್ತಿಯಿಲ್ಲ.

ಎಂ.ಎಸ್. ಕೋಟ್ಯಾನ್ ಅಗತ್ಯಬಿದ್ದಾಗ ಹಲವಾರು ಕೃತಿಗಳ ಪ್ರಕಾಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರೇ ಸಿದ್ಧಪಡಿಸಿದ ಮಾರ್ಗದರ್ಶಿಕೆಗಳು, ಮಗ್ಗಿ ಮತ್ತು ಕನ್ನಡ ಅಂಕಿಗಳ ಮಹತ್ವದ ಪುಸ್ತಕಗಳೇ ಆಗಿರಲಿ ಅಥವಾ ಹಿರಿಯ ಸಾಹಿತಿ ಬಿ. ಎ. ಸನದಿಯವರ ‘ಮುಂಬೈ ಮಳೆ’ಯಂತಹ ಕೃತಿಗಳೇ ಆಗಿರಲಿ ಹಲವು ಮೌಲಿಕ ಕೃತಿಗಳು ವಿದ್ಯಾನಿಧಿ ಪ್ರಕಾಶನದ ಮೂಲಕ ಬೆಳಕು ಕಂಡಿವೆ. ಅಂದಿನ ದಿನಗಳಲ್ಲಿ ಕರ್ನಾಟಕದ ಪ್ರಕಾಶಕರು ಅಥವಾ ಇಲ್ಲಿನ ಪ್ರಕಾಶಕರು ಮುಂಬೈ ಲೇಖಕರ ಕೃತಿ ಹೊರತಂದರೆ ಅವುಗಳಲ್ಲಿ ‘ಅಧಿಕೃತ ಪ್ರಮುಖ ಮಾರಾಟಗಾರರು/ವಿತರಕರು ವಿದ್ಯಾನಿಧಿ ಬುಕ್ ಡಿಪೋ’ ಎಂದು ನಮೂದಿಸಲ್ಪಡುತ್ತಿತ್ತು. ಅದು ಕಡಂದಲೆಯ ನವಶಕ್ತಿ ಪ್ರಕಾಶನದ ಶ್ರೀನಿವಾಸ ಜೋಕಟ್ಟೆಯವರ ಚೊಚ್ಚಲ ಕೃತಿ ‘ಪರಾವಲಂಬಿ’ಯಾಗಿದ್ದಿರಬಹುದು ಅಥವಾ ಸದಾನಂದ ಸುವರ್ಣರ ಜನಪ್ರಿಯ ನಾಟಕ ‘ಗುಡ್ಡೆದ ಭೂತ’ ತುಳು ನಾಟಕ ಕೃತಿಯಾಗಿದ್ದಿರಬಹುದು. ಕಳೆದ ಶತಮಾನದ ತೊಂಭತ್ತರ ದಶಕದಲ್ಲಿ ಕ್ಯಾಸೆಟ್/ಸಿಡಿಗಳನ್ನು ಪುಸ್ತಕ ಮಾರಾಟದ ಜೊತೆ ಸೇರಿಸಿದ್ದರು. ಯಕ್ಷಗಾನ, ತಾಳಮದ್ದಲೆ, ಹರಿಕಥೆ, ಭಜನೆ ಧ್ವನಿ ಸುರುಳಿಗಳ ಕ್ಯಾಸೆಟ್/ಸಿಡಿಗಳು ಆಗ ಬಹುಬೇಡಿಕೆ ಪಡೆದಿದ್ದವು. ಅದಕ್ಕೆ ಸಹಕಾರಿಯಾಗಿ ಅಗತ್ಯ ಬಿದ್ದವರಿಗೆ ರೆಕಾರ್ಡ್ ಮಾಡಿ ಕೊಡುವ ವ್ಯವಸ್ಥೆಯನ್ನೂ ಮಾಡಿದ್ದರು. ಹೀಗೆ ಓದುಗರ ಅಥವಾ ಸಾಹಿತ್ಯಕ, ಸಂಗೀತಾಸಕ್ತರ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿದ್ದ ವಿದ್ಯಾನಿಧಿಯ ಕಾರ್ಯವೈಖರಿ ಅನುಕರಣೀಯ.

 1956ರಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಮುಂಬೈ ಆಕಾಶವಾಣಿಯಲ್ಲಿ ನಿರಂತರವಾಗಿ ಕನ್ನಡ ಯಕ್ಷಗಾನ ತಾಳಮದ್ದಲೆ ಸಂಯೋಜಿಸುತ್ತಾ ಬಂದಿದ್ದಾರೆ. ಬಿಲ್ಲವರ ಅಸೋಸಿಯೇಶನ್‌ನ ಕಲಾವಿದರನ್ನು ಒಟ್ಟು ಸೇರಿಸಿ, ಕಾಲಮಿತಿಗೆ ಕೂಡುವಂತೆ ಪ್ರಸಂಗಗಳನ್ನು ತಾಳ್ಮೆಯಿಂದ ಸಂಯೋಜಿಸುತ್ತಿದ್ದ ಎಂ.ಎಸ್. ಕೋಟ್ಯಾನ್, ಈ ಕಾರ್ಯವನ್ನು ಸುಮಾರು ತೊಂಭತ್ತರ ದಶಕದವರೆಗೂ ಚಾಚೂ ತಪ್ಪದೆ ನಿರ್ವಹಿಸುತ್ತಿದ್ದರು. ತಾಳಮದ್ದಳೆಯಲ್ಲಿ ಹಿರಿಯ ಅರ್ಥದಾರಿ ಅಡ್ವೆ ವಾಸು ಶೆಟ್ಟಿ, ಬಿ.ಎಸ್. ಕುರ್ಕಾಲ್, ಡಾ. ತಾಳ್ತಜೆ ವಸಂತಕುಮಾರ್ ಮೊದಲಾದವರು ಭಾಗವಹಿಸಿದ್ದನ್ನು ನಾವಿಂದು ನೆನಪಿಸಿಕೊಳ್ಳಬಹುದು. ಅಲ್ಲದೆ ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ಕೃತಿಗಳನ್ನು ಕೂಡಾ ಬೆಳಕಿಗೆ ತಂದಿದ್ದಾರೆ. ಬಿಲ್ಲವರ ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿಯ ಕ್ರಿಯಾಶೀಲ ಸದಸ್ಯನಾಗಿದ್ದು, ಅಸೋಸಿಯೇಶನ್‌ನ ಬೆಳವಣಿಗೆಯಲ್ಲಿ ಮಹತ್ವದ ದೇಣಿಗೆ ನೀಡಿದ್ದಾರೆ. ಅಸೋಸಿಯೇಶನ್ ಸ್ಥಾಪಿಸಿದ ‘ಭಾರತ್ ಕೋ ಆಪರೇಟಿವ್ ಬ್ಯಾಂಕ್’ನ ಹುಟ್ಟಿನ ಹಿಂದೆ ಮಹತ್ವದ ಕಾರ್ಯ ಮಾಡಿದವರು ಎಂ.ಎಸ್. ಕೋಟ್ಯಾನ್. ಬಿಲ್ಲವರ ಅಸೋಸಿಯೇಶನ್‌ಗೆ ತನ್ನದೇ ಆದ ಒಂದು ಮುಖವಾಣಿಯ ಅಗತ್ಯವನ್ನು ಮನಗಂಡು ಅದು ‘ಅಕ್ಷಯ’ ಮಾಸಿಕವಾಗಿ ಹೊರಬರುವಲ್ಲಿ ಮುಖ್ಯಪಾತ್ರ ವಹಿಸಿದ್ದವರು ಅವರು. ಮುಖವಾಣಿಯೂ ಬೇಕು, ಅದು ಸ್ವಾವಲಂಬಿಯೂ ಆಗಿರಬೇಕು ಎಂಬ ಮುಂದಾಲೋಚನೆಯಿಂದ ‘ಅಕ್ಷಯ’ದ ಒಟ್ಟು ರೂಪರೇಖೆಯನ್ನು ಸಿದ್ಧಪಡಿಸಿದವರು ಅವರು.

ಅವರ ಸಂಪಾದಕತ್ವದಲ್ಲಿ ಅಕ್ಷಯ ಇತರ ಮುಖವಾಣಿಗಳಿಗಿಂತ ಭಿನ್ನವಾಗಿ ಮತ್ತು ಮಾದರಿಯಾಗಿ ಕಾಣಿಸಿಕೊಂಡಿತು. ಬಾಂಬ್ ಸ್ಫೋಟವಾಗಿ ಮುಂಬೈ ತತ್ತರಿಸಿದ್ದ ಸಂದರ್ಭ, ಮಳೆಯ ಆರ್ಭಟದಿಂದಾಗಿ ಮುಂಬೈ ರೈಲು ಸ್ತಬ್ಧಗೊಂಡಾಗಲೆಲ್ಲ ಕೋಟೆಯ ಪರಿಸರದಲ್ಲಿ ಸಿಕ್ಕಿಕೊಂಡ ಕನ್ನಡಿಗರಿಗೆ ಮೊದಲು ನೆನಪಾಗುತ್ತಿದ್ದುದು ವಿದ್ಯಾನಿಧಿಯ ಎಂ.ಎಸ್. ಕೋಟ್ಯಾನ್. ಅವರನ್ನು ಸಂಪರ್ಕಿಸಿ ಅವರ ಮನೆಯಲ್ಲಿ ಆಶ್ರಯ ಪಡೆಯುವುದೆಂದರೆ ತಮ್ಮದೇ ಮನೆಯಲ್ಲಿ ತಾವಿದ್ದೇವೆ ಅನ್ನುವ ಅನುಭವ ಆಗುತ್ತಿತ್ತು. ಅಲ್ಲದೆ ಕೋಟೆ ಪರಿಸರದಲ್ಲಿ ಯಾರಾದರೂ ಕನ್ನಡಿಗರಿಗೆ ಅಪಘಾತ, ಅವಘಡ ಸಂಭವಿಸಿತೆಂದರೆ ಮೊದಲಿಗೆ ಸುದ್ದಿ ದೊರಕುತ್ತಿದ್ದುದು ವಿದ್ಯಾನಿಧಿಗೆ. ಆಗ ಹಿಂದೆ ಮುಂದೆ ನೋಡದೆ ಕೂಡಲೇ ತಮ್ಮ ಮಗ ಹೇಮು ಹಾಗೂ ತಮ್ಮ ಅಳಿಯ ಯಕ್ಷಗಾನ ಕಲಾವಿದ ಪ್ರಕಾಶ್ ಪಣಿಯೂರು ಅವರನ್ನು ಕಳುಹಿಸಿ ಆಸ್ಪತ್ರೆಗೆ ಆ ವ್ಯಕ್ತಿಗಳನ್ನು ಸೇರಿಸುವುದರಿಂದ ಮೊದಲ್ಗೊಂಡು ಅವರ ನೆರವಿಗೆ ನಿಲ್ಲುತ್ತಿದ್ದರು. ಅಂತಹ ಮಾನವೀಯ ಕಳಕಳಿಯ, ಸಾಹಿತ್ಯ ಆರಾಧನಾ ಕೇಂದ್ರ, ಜ್ಞಾನಭಂಡಾರ, ಸಾಹಿತಿಗಳ ಕೂಡು ಕೇಂದ್ರ ‘ವಿದ್ಯಾನಿಧಿ’ಯು ಎಂ.ಎಸ್. ಕೋಟ್ಯಾನ್ ಅವರ ಜೊತೆಗೆ ನಿಶ್ಯಬ್ದವಾಗಿ ಈಗಾಗಲೇ 2 ದಶಕಗಳು (ನಿಧನ: 1.3.2000)ಸಂದಿವೆ. ಈಗ ಇಲ್ಲಿ ಮುಂಬೈ ಕನ್ನಡಿಗರಿಗೆ ಬೇಕಾದ ಕೃತಿಗಳೂ ಸಿಗುವುದಿಲ್ಲ. ಇಲ್ಲಿನ ಲೇಖಕರ ಕೃತಿಗಳನ್ನು ಮಾರುವ ಕೇಂದ್ರವಿಲ್ಲ. ಮುಂಬೈ ಕನ್ನಡಿಗರ ಪಾಲಿಗೆ ಪುಸ್ತಕಗಳ ಹರಿವು ಒಂದು ರೀತಿಯಲ್ಲಿ ನಿಂತ ನೀರಾಗಿದೆ.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News