ಅಭಿನಯ ಶಾರದೆಯ ಸಿನಿ ಪಯಣ
ಜಯಂತಿಯವರು ಕನ್ನಡ ಚಿತ್ರರಂಗಕ್ಕೆ ಬಂದ ಕಾಲಘಟ್ಟ, ಅವರು ಬೆಳೆಯುತ್ತಿದ್ದಂತೆ ಸಂಭವಿಸಿದ ಪಲ್ಲಟಗಳು ಮತ್ತು ಬಹುದೀರ್ಘಕಾಲ ವೃತ್ತಿ ಜೀವನದಲ್ಲಿ ಬದುಕಿ ಉಳಿಯಲು ಅವರು ಎದುರಿಸಿದ ಸವಾಲುಗಳ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಅವಲೋಕಿಸಿದರೆ ಅವರ ನಿಜವಾದ ಸಾಮರ್ಥ್ಯ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಇತಿಹಾಸ ಕುಲುಮೆಯಲ್ಲಿ ಜಯಂತಿಯೆಂಬ ಅಪರಂಜಿಯಂತಹ ಕಲಾವಿದೆ ಪುಟಗೊಂಡ ಕಥಾನಕವೊಂದು ದೊರೆಯುತ್ತದೆ. ಪ್ರಮುಖವಾಗಿ ಕನ್ನಡ ಚಿತ್ರರಂಗದ ಇತಿಹಾಸವನ್ನು ಮಹಿಳಾ ಕಲಾವಿದರ ಹಿನ್ನೆಲೆಯಲ್ಲಿ ಕೆದಕಿದರೆ ಜಯಂತಿಯವರ ನಿಜ ಸಾಮರ್ಥ್ಯ ಬೆಳಕು ಕಾಣುತ್ತದೆ.
ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದಂತಹ ಅಪರೂಪದ ವಿದ್ಯಮಾನಗಳಲ್ಲಿ ಜಯಂತಿ ಎಂಬ ನಟಿಯ ಅಭಿನಯವೂ ಒಂದು. ಕನ್ನಡ ಚಿತ್ರರಂಗದ ಅತ್ಯದ್ಭುತ ಸಾಧನೆಯೆಂದು ಜಯಂತಿಯವರ ಕಲಾ ಬದುಕು ದಾಖಲಾಗದಿದ್ದರೂ, ಒಂದು ಚರಿತ್ರೆ ಪಡೆದುಕೊಳ್ಳುವ ಕಾಲವಿನ್ಯಾಸದಲ್ಲಿ ಅವರ ಅಭಿನಯ ಕೌಶಲ್ಯವೂ ಹೆಣೆದುಕೊಂಡಿರುವುದು ಸುಳ್ಳೇನಲ್ಲ. ವೈಯಕ್ತಿಕ ಬದುಕಿನಲ್ಲಿ ಹಲವರಿಗೆ ಅರ್ಥವಾಗದ ಜಯಂತಿಯವರ ವ್ಯಕ್ತಿತ್ವ ವೃತ್ತಿ ಬದುಕಿನಲ್ಲೂ ಅಭಿನಯಕ್ಕೆ ತಕ್ಕಂತೆ ಉಜ್ವಲವಾಗಿ ಪ್ರಕಾಶಿಸಲಿಲ್ಲ. ಕನ್ನಡ ನಾಡಿನ ಎಲ್ಲ ಪ್ರದೇಶದ, ವಯೋತಾರತಮ್ಯ ದಾಟಿದ ಪುರುಷ-ಮಹಿಳೆಯರ ಮನದ ಮೂಲೆಯನ್ನು ತಮ್ಮ ಮಾದಕತೆಯಿಂದ ಉದ್ದೀಪನಗೊಳಿಸಿ, ಅಭಿನಯ ಕೌಶಲ್ಯದಿಂದ ಪಾತ್ರಗಳಿಗೆ ಜೀವ ತುಂಬಿದ ಜಯಂತಿಯವರು ನಮ್ಮ ಕಣ್ಣ ಮುಂದೆಯೇ ಹೆಚ್ಚು ನಿಗೂಢವಾಗಿ ಉಳಿದಿದ್ದಾರೆ. ಅವರ ವೃತ್ತಿ ಬದುಕು ಮತ್ತು ಕಲಾಸಾಧನೆಯನ್ನು ಅವಲೋಕಿಸಿದಾಗ ನನಗೆ ಹಾಲಿವುಡ್‌ನ ಎರಡು ಲೆಜೆಂಡ್‌ಗಳಾದ ಮರ್ಲಿನ್ ಮನ್ರೋ ಮತ್ತು ಗ್ರೆಟಾ ಗಾರ್ಬೊ ಒಟ್ಟಿಗೇ ನೆನಪಾಗುತ್ತಾರೆ. ಈ ಹೋಲಿಕೆ ಸರಿಯಲ್ಲವೆಂದು ಅನೇಕರ ಅಭಿಪ್ರಾಯವಿರಬಹುದು. ಈ ಅಭಿಪ್ರಾಯಕ್ಕೆ ವಾಣಿಜ್ಯ ಚಿತ್ರಗಳ ಬಗ್ಗೆ ನಮಗಿರುವ ಉದಾಸೀನ ಮತ್ತು ಹೆಣ್ಣು ಪಾತ್ರಗಳ ಬಗ್ಗೆ ನಮಗಿರುವ ಅತಿರಂಜಿತ ಕಲ್ಪನೆ ಮತ್ತು ಅಸಡ್ಡೆಯ ಫಲವಾಗಿರಬಹುದೇ? ಈ ಅಸಡ್ಡೆಯ ತೆರೆಯನ್ನು ಸರಿಸಿ ಜಯಂತಿಯವರ ಸಹಜ ಪ್ರತಿಭೆಯ ಹಲವಾರು ರೂಹುಗಳನ್ನು ತೆರೆದಿಡುವುದೇ ಈ ಲೇಖನದ ಹಿಂದಿನ ಉದ್ದೇಶ.
ಹಾಗೆ ನೋಡಿದರೆ ಜಯಂತಿಯವರಿಗಿಂತ ಹೆಚ್ಚು ಸುಂದರಿಯರಾದ ನಟಿಯರು ಕನ್ನಡ ಚಿತ್ರರಂಗದಲ್ಲಿರಬಹುದು. ಅವರ ಅಭಿನಯದ ಸಾಮರ್ಥ್ಯವನ್ನು ಮೀರಿದ ಪ್ರತಿಭಾವಂತರೂ ಇರಬಹುದು. ಜಯಂತಿಯವರಿಗಿಂತ ಪ್ರೇಕ್ಷಕರ ಮೇಲೆ ಹೆಚ್ಚು ಮೋಡಿ ಹಾಕಿ ಥಿಯೇಟರ್‌ಗೆ ಸೆಳೆವಂತಹ ಅನೇಕ ನಟಿಯರೂ ಬಂದು ಹೋಗಿರುವುದು ಸುಳ್ಳಲ್ಲ. ಹಾಗೆಂದ ಮಾತ್ರಕ್ಕೆ ಅವರ ಸಾಧನೆಯೇನೂ ಕಡಿಮೆಯಲ್ಲ. ಜಯಂತಿಯವರು ಕನ್ನಡ ಚಿತ್ರರಂಗಕ್ಕೆ ಬಂದ ಕಾಲಘಟ್ಟ, ಅವರು ಬೆಳೆಯುತ್ತಿದ್ದಂತೆ ಸಂಭವಿಸಿದ ಪಲ್ಲಟಗಳು ಮತ್ತು ಬಹುದೀರ್ಘಕಾಲ ವೃತ್ತಿ ಜೀವನದಲ್ಲಿ ಬದುಕಿ ಉಳಿಯಲು ಅವರು ಎದುರಿಸಿದ ಸವಾಲುಗಳ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಅವಲೋಕಿಸಿದರೆ ಅವರ ನಿಜವಾದ ಸಾಮರ್ಥ್ಯ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಇತಿಹಾಸ ಕುಲುಮೆಯಲ್ಲಿ ಜಯಂತಿಯೆಂಬ ಅಪರಂಜಿಯಂತಹ ಕಲಾವಿದೆ ಪುಟಗೊಂಡ ಕಥಾನಕವೊಂದು ದೊರೆಯುತ್ತದೆ. ಪ್ರಮುಖವಾಗಿ ಕನ್ನಡ ಚಿತ್ರರಂಗದ ಇತಿಹಾಸವನ್ನು ಮಹಿಳಾ ಕಲಾವಿದರ ಹಿನ್ನೆಲೆಯಲ್ಲಿ ಕೆದಕಿದರೆ ಜಯಂತಿಯವರ ನಿಜ ಸಾಮರ್ಥ್ಯ ಬೆಳಕು ಕಾಣುತ್ತದೆ.
ನಟಿಯರ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಇತಿಹಾಸ ಒಂದು ವಿಧದಲ್ಲಿ ಭಿನ್ನವಾಗಿ ಕಾಣುತ್ತದೆ. 1934ರಲ್ಲಿ ತೆರೆಕಂಡ ‘ಸತಿ ಸುಲೋಚನಾ’ ವಾಕ್ಚಿತ್ರದಿಂದ ಆರಂಭಿಸಿ ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗದ ನಾಯಕಿಯರ ಪಾತ್ರವನ್ನು ವಹಿಸಿದವರು ಕನ್ನಡ ರಂಗಭೂಮಿಯ ಅಭಿನೇತ್ರಿಯರು. ಲಕ್ಷ್ಮೀಬಾಯಿ, ಎಂ.ವಿ. ರಾಜಮ್ಮ, ಬಿ. ಜಯಮ್ಮ, ಮಳವಳ್ಳಿ ಸುಂದರಮ್ಮ, ಅಮೀರ್‌ಬಾಯ್ ಕರ್ನಾಟಕಿ, ತ್ರಿಪುರಾಂಬ, ಬಳ್ಳಾರಿ ಲಲಿತ, ಕಮಲಾಬಾಯಿ, ಜಯಶ್ರೀ, ಹರಿಣಿ, ಪಂಡರೀಬಾಯಿ, ಪ್ರತಿಮಾದೇವಿ ಮುಂತಾದ ರಂಗಪ್ರತಿಭೆಗಳೇ ಕನ್ನಡ ಚಿತ್ರಗಳಲ್ಲಿ ನಾಯಕಿಯ ಪಟ್ಟವನ್ನಲಂಕರಿಸಿದ್ದವು. ಕನ್ನಡ ಮೂಲದ ಹಿಂದಿ-ಮರಾಠಿ ಚಿತ್ರಗಳ ನಟಿ ಶಾಂತಾ ಹುಬ್ಳೀಕರ್ ಮತ್ತು ತೆಲುಗಿನ ಸೂರ್ಯಕುಮಾರಿಯಂತಹವರು ಅಪರೂಪಕ್ಕೆ ಅಭಿನಯಿಸಿದ ಅಪವಾದಗಳನ್ನು ಹೊರತುಪಡಿಸಿದರೆ, ಆಗ ಕನ್ನಡ ಚಿತ್ರರಂಗದ ಮಹಿಳಾ ಪಾತ್ರಗಳನ್ನು ರಂಗಭೂಮಿಯ ಅಪ್ರತಿಮ ಕಲಾವಿದರೇ ನಿರ್ವಹಿಸಿದರು.
ಕನ್ನಡ ಚಿತ್ರರಂಗದ ಎರಡು ದಶಕಗಳ ಅಸ್ತಿತ್ವದ ನಂತರ ಪರಭಾಷಾ ಚಿತ್ರತಾರೆಯರ ಆರಂಭ ಪ್ರಾಯಶಃ ‘ಜಲದುರ್ಗ’(1954)ದಿಂದ ಆರಂಭವಾಯಿತೆನ್ನಬಹುದು. ತೆಲುಗಿನ ಕೃಷ್ಣಕುಮಾರಿಯವರು ಈ ಚಿತ್ರದ ಮೂಲಕ ಪರಭಾಷಾ ತಾರೆಯರ ಆಮದು ಪರಂಪರೆಯನ್ನು ಉದ್ಘಾಟಿಸಿದರು. ಅವರನ್ನು ಅನುಸರಿಸಿ ಅವರ ಸೋದರಿ ಸಾಹುಕಾರ್ ಜಾನಕಿ, ಸೂರ್ಯಕಲಾ, ಜಮುನಾ, ಭಾನುಮತಿ, ರಾಜಶ್ರೀ ಮುಂತಾದವರು ಕನ್ನಡ ಚಿತ್ರರಂಗಕ್ಕೆ ಆಗಮಿಸಿದರು. ಈ ಅವಧಿಯಲ್ಲೇ ಕನ್ನಡದ ಬಿ. ಸರೋಜಾದೇವಿಯಂತಹ ನಟಿಯರೂ ಆಗಮಿಸಿ ನಂತರ ತಮಿಳು-ತೆಲುಗು ಚಿತ್ರರಂಗದಲ್ಲಿ ಪ್ರಖ್ಯಾತಗೊಂಡ ವಿದ್ಯಮಾನವೂ ಸಂಭವಿಸಿತು.
ಜಯಂತಿಯವರು ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದು ನಟಿಯರ ದೃಷ್ಟಿಯಿಂದ ಸ್ಥಿತ್ಯಂತರದಲ್ಲಿದ್ದ ಆ ಘಟ್ಟದಲ್ಲಿ.
ಹಾಗೆ ನೋಡಿದರೆ ಜಯಂತಿಯವರು ರಂಗಭೂಮಿಯ ಅನುಭವ ಪಡೆದು ಚಿತ್ರರಂಗಕ್ಕೆ ಬಂದವರಲ್ಲ. ರಂಗಭೂಮಿ-ಸಿನೆಮಾ ಕ್ಷೇತ್ರದ ನಂಟಿದ್ದ ಕುಟುಂಬದಿಂದಲೂ ಬಂದವರಲ್ಲ. ಚಿತ್ರರಂಗವು ಅವರ ಆಯ್ಕೆಯಾಗಿತ್ತು ಎಂಬುದಕ್ಕೆ ಅವರ ಬಾಲ್ಯಕಾಲದ ಲಭ್ಯ ಮಾಹಿತಿಯನ್ನು ಅವಲೋಕಿಸಿದರೆ ಪುರಾವೆ ಸಿಗದು. ಅವರ ಸಿನೆಮಾ ಜಗತ್ತಿನ ಪ್ರವೇಶ ಅಚಾನಕ ಎನ್ನುವ ರೀತಿಯಲ್ಲೇ ಸಂಭವಿಸಿದಂತೆ ಕಾಣುತ್ತದೆ.
ಜಯಂತಿಯವರ ಮೂಲ ಹೆಸರು ಕಮಲಕುಮಾರಿ. ಚಿತ್ರರಂಗಕ್ಕೆ ಬಂದ ನಂತರ ಅವರ ಹೆಸರು ಬದಲಾಯಿತು. ತಾಯಿ ಸಂತಾನಲಕ್ಷ್ಮಿಯವರು ಬಳ್ಳಾರಿಯವರು. ತಂದೆ ಬಾಲಸುಬ್ರಮಣ್ಯಂ ತಮಿಳು ಭಾಷಿಕರು. ಹುಟ್ಟಿ-ಬೆಳೆದದ್ದು ಬಳ್ಳಾರಿಯಾದರೂ ಜಯಂತಿಯವರಿಗೆ ಕನ್ನಡ ಭಾಷೆ ಸ್ವಲ್ಪ ಮಟ್ಟಿಗೆ ಅಪರಿಚಿತವೇ ಆಗಿತ್ತು! ತಂದೆ ಮದರಾಸಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದವರು. ಹಾಗಾಗಿ ಸುಶಿಕ್ಷಿತ ಕುಟುಂಬದ ಹಿನ್ನೆಲೆಯ ಜಯಂತಿಯವರು ಚಿತ್ರರಂಗ ಪ್ರವೇಶಕ್ಕೆ ತಾಯಿಯವರ ಒತ್ತಾಸೆ ಕಾರಣವೆಂದು ಹೇಳಲಾಗುತ್ತದೆ. ಹಾಗಾಗಿ ಅವರ ಒತ್ತಾಯದಿಂದ ನೃತ್ಯ ತರಬೇತಿಗೆ ಸೇರಿದರು. ಬಾಲ್ಯದಿಂದಲೂ ಸ್ವಲ್ಪಸ್ಥೂಲದೇಹಿಯಾದ ಜಯಂತಿಯವರು ನೃತ್ಯ ಶಾಲೆಯ ವಿದ್ಯಾರ್ಥಿಗಳ ಅಪಹಾಸ್ಯದಿಂದ ನೃತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಆ ಅಪಹಾಸ್ಯ, ತಿರಸ್ಕಾರಗಳೇ ಅವರು ಕಲಾವಿದರಾಗಿ ಗಟ್ಟಿಯಾಗಲು ಬೀಜ ಬಿತ್ತಿದವು ಎಂದು ಕಾಣುತ್ತದೆ.
ತಾಯಿಯ ಒತ್ತಾಸೆಯಿಂದ ಸ್ಟುಡಿಯೋಗೆ ಎಡತಾಕಿದರೂ ಚಿಕ್ಕ ವಯಸ್ಸು ಎಂಬ ಕಾರಣಕ್ಕೆ ಅವರಿಗೆ ಅವಕಾಶ ಸಿಗಲಿಲ್ಲ. ತೆಲುಗಿನಲ್ಲಿ ಅತ್ಯಂತ ಯಶಸ್ವಿಯಾಗಿ ಕನ್ನಡಕ್ಕೂ ಡಬ್ ಆದ ‘ಜಗದೇಕವೀರುನಿ ಕಥಾ’(1961) ಚಿತ್ರದಲ್ಲಿ ಅವರು ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದ ದೃಷ್ಟಿಯಿಂದ ಕನ್ನಡಕ್ಕೆ ಡಬ್ ಆದ ಜಗದೇಕವೀರನ ಕತೆ ಚಿತ್ರಕ್ಕೆ ಅದರದೇ ಆದ ವಿಶಿಷ್ಟತೆಯಿದೆ. ತೆಲುಗಿನ ಎನ್.ಟಿ.ಆರ್. ಅವರು ನಾಯಕರಾಗಿದ್ದ ಈ ಚಿತ್ರದಲ್ಲಿ ನಾಲ್ವರು ನಾಯಕಿಯರು. ಅದರಲ್ಲಿ ಪ್ರಧಾನ ಭೂಮಿಕೆ ಬಿ. ಸರೋಜಾದೇವಿಯವರ ಪಾಲಿಗೆ. ಅದು ಅವರಿಗೆ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಗಳಿಸಿಕೊಟ್ಟಿತು. ಅದೇ ಚಿತ್ರದ ‘‘ತಿಳಿ ನೀರಾಟಗಳು ಕಲಕಲ ಪಾಟಗಳು’’ ಎಂದು ಸರೋಜಾದೇವಿಯವರು ಕೊಳದಲ್ಲಿ ಮಿಂದು ಹಾಡುವ ಸನ್ನಿವೇಶದಲ್ಲಿ ಜಯಂತಿಯವರೂ ಸಹಕಲಾವಿದೆಯಾಗಿ ಅಭಿನಯಿಸಿದ್ದರು. ‘‘ಶಿವಶಂಕರಿ ಶಿವಾನಂದ ಲಹರಿ’’ ಹಾಡಿನಿಂದ ಪ್ರಖ್ಯಾತವಾಗಿದ್ದ ಈ ಚಿತ್ರವು ಅಂದಿನ ಡಬ್ಬಿಂಗ್ ವಿರೋಧಿ ಕನ್ನಡ ಕಟ್ಟಾಳುಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಆದರೂ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಎರಡು ವಿಭಿನ್ನ ಪ್ರತಿಭೆಯ ಜಯಂತಿ ಮತ್ತು ಬಿ. ಸರೋಜಾದೇವಿಯವರ ಸಂಗಮದ ಚಿತ್ರ ಅದಾಗಿತ್ತು.
ಎಲ್ಲ ಭಾಷೆಗಳಲ್ಲೂ ಅವಕಾಶಗಳಿಗಾಗಿ ತಡಕಾಡುತ್ತಿದ್ದ ಜಯಂತಿಯ ವರನ್ನು ಗುರುತಿಸಿದವರು ನಿರ್ದೇಶಕ ವೈ.ಆರ್. ಸ್ವಾಮಿ ಅವರು. ಆ ಕಾಲಕ್ಕೆ ಸಹಜವಾಗಿದ್ದ ಕೌಟುಂಬಿಕ ವಿಘಟನೆ ಮತ್ತು ಐಕ್ಯತೆಯ ಹಿನ್ನೆಲೆಯಿದ್ದ ‘ಜೇನುಗೂಡು’ (1963) ಚಿತ್ರದ ಎರಡನೇ ನಾಯಕಿಯ ಪಾತ್ರಕ್ಕೆ ಅವರನ್ನು ಆರಿಸಿದರು. ಕತೆಯೇ ಪ್ರಧಾನವಾದ ಆ ಚಿತ್ರದ ಕಥಾ ನಾಯಕರು ಕೆ.ಎಸ್. ಅಶ್ವಥ್-ಪಂಡರೀಬಾಯಿ. ಆದರೂ ನಟ ಸೂರ್ಯಕುಮಾರ್ ಅವರ ಜೋಡಿಯಾಗಿ ನಟಿಸಿದ ಜಯಂತಿ ಅವರು ತಮ್ಮ ಸಹಜಾಭಿನಯದ ಮುದ್ರೆಯನ್ನು ಆ ಚಿತ್ರದಲ್ಲಿ ಒತ್ತಿದ್ದರು. ಅಲ್ಲಿಂದಾಚೆಗೆ ಜಯಂತಿಯವರ ವೃತ್ತಿ ಬದುಕಿನ ಗೆರೆ ಊರ್ಧ್ವಮುಖವಾಗಿ ಮೇಲೇರತೊಡಗಿತು.
ಜಯಂತಿಯವರು ಚಿತ್ರರಂಗಕ್ಕೆ ಬಂದಾಗ ಕೃಷ್ಣಕುಮಾರಿ, ಸಾಹುಕಾರ್ ಜಾನಕಿ, ಪಂಡರೀಬಾಯಿ, ಹರಿಣಿ, ಬಿ. ಸರೋಜಾದೇವಿ ನಟಿಯರಾಗಿ ಜನಪ್ರಿಯರಾಗಿದ್ದರು. ಮುಖ್ಯವಾಗಿ ರಾಜ್-ಲೀಲಾವತಿ ಜೋಡಿ ಜನಪ್ರಿಯತೆಯನ್ನು ಗಳಿಸಿಕೊಂಡು ಗಟ್ಟಿಯಾಗಿತ್ತು. ಆ ಹಿನ್ನೆಲೆಯಲ್ಲಿ ಎರಡನೇ ನಾಯಕಿಯಾಗಿ ಆಗಮಿಸಿದ ಜಯಂತಿಯವರು ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಂಡ ವಿಧಾನವೇ ವಿಶಿಷ್ಟವಾದದ್ದು. ‘ಜೇನುಗೂಡು’ ನಂತರ ‘ರಾಮಾಂಜನೇಯ ಯುದ್ಧ’ದಂತಹ ಚಿತ್ರಗಳಲ್ಲಿ ಪುಟ್ಟ ಪಾತ್ರ ನಿರ್ವಹಿಸಿದರೂ ಜಯಂತಿಯವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ‘ಚಂದವಳ್ಳಿಯ ತೋಟ’ (1964)ದಲ್ಲಿ ತಾನೆಂಥ ಪ್ರಬುದ್ಧ ನಟಿಯಾಗಿ ಬೆಳೆಯಬಲ್ಲೆ ಎಂಬ ಸಂದೇಶವನ್ನು ರವಾನಿಸಿಬಿಟ್ಟರು.
‘ಚಂದವಳ್ಳಿಯ ತೋಟ’ ಒಂದು ಸಂಸಾರದ ವಿಘಟನೆಯ ಮೂಲಕ ಊರೊಂದು ಅವನತಿಯ ಹಾದಿ ಹಿಡಿಯುವ ಭಾರತದ ಹಳ್ಳಿಯ ಮಾದರಿ ಕತೆಯೊಂದನ್ನು ಆಧರಿಸಿದ ಚಿತ್ರ. ಆಧುನಿಕ ಬದುಕಿನ ಕೆಲ ಸಂಗತಿಗಳು ಮತ್ತು ಹೊರಗಿನ ವ್ಯಕ್ತಿಗಳು ಊರೊಳಗೆ ಪ್ರವೇಶಿಸಿದಾಗ ಆಗುವ ಪಲ್ಲಟಗಳನ್ನು, ದುರಂತವನ್ನು ವಿವರಣಾತ್ಮಕವಾಗಿ ಕಟ್ಟಿಕೊಟ್ಟ ಚಿತ್ರವದು. ಊರಿನ ಹಿರಿಯ ಶಿವನಂಜೇಗೌಡನ ಹಿರಿಯ ಮಗ ಹನುಮನ ಹೆಂಡತಿಯ ಪಾತ್ರ ಜಯಂತಿಯವರ ಪಾಲಿಗೆ. ಅದೊಂದು ಸಂಕೀರ್ಣ ಪಾತ್ರ. ಸವಾಲಿನ ಪಾತ್ರ. ಜೀವನ ಮೌಲ್ಯಗಳನ್ನು ಪ್ರತಿನಿಧಿಸುವ, ಊರಿಗೆ ಬುದ್ಧಿ ಹೇಳುವ ಶಿವನಂಜೇಗೌಡನ ಕಿರಿಯ ಮಗ ರಾಮ ಹಾದಿ ತಪ್ಪಿದಾಗ ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಉಗ್ರಕೋಪಿಷ್ಠ ಹನುಮನ ಮಡದಿಯಾಗಿ, ಸಂಸಾರವನ್ನು ಹಿಡಿದಿಟ್ಟುಕೊಳ್ಳಬೇಕೆಂಬ ಹಂಬಲದ ಶಿವನಂಜೇಗೌಡನ ಸೊಸೆಯಾಗಿ ಜಯಂತಿಯವರು ಆ ವಯಸ್ಸಿಗೆ ಮತ್ತು ಅನುಭವದ ಕೊರತೆಯ ಹಿನ್ನೆಲೆಯಲ್ಲಿ ಪಾತ್ರ ನಿರ್ವಹಿಸಿದ ರೀತಿ ಬೆರಗು ಮೂಡಿಸುತ್ತದೆ. ಸ್ವಾತಂತ್ರ್ಯ ಬಂದ ನಂತರದ ಆಧುನಿಕತೆಗೆ ತೆರೆದುಕೊಂಡ ಬಯಲು ಸೀಮೆಯ ಹೆಣ್ಣು ಮಕ್ಕಳ ಜೀವಂತಿಕೆ, ಸಂಸಾರವನ್ನು ಒಂದು ಸುಂದರ ಘಟಕವನ್ನಾಗಿ ಕಾಪಾಡಬೇಕೆಂಬ ಅವರ ಹಂಬಲ, ಆ ನಿಟ್ಟಿನಲ್ಲಿ ಎದುರಿಸುವ ತಳಮಳ, ಹಿರಿಯರ ಬಗೆಗಿನ ಮಡುಗಟ್ಟಿದ ಪ್ರೀತಿ, ಸಂಸಾರದ ಸದಸ್ಯರೊಡನೆ ತೋರುವ ವಾತ್ಸಲ್ಯ, ಸಂಕಷ್ಟ ಕಾಲದಲ್ಲಿ ಮೆರೆಯಬೇಕಾದ ಸಂಯಮ-ಹೀಗೆ ಅನೇಕ ಭಾವಗಳನ್ನು ಒಂದೇ ಚಿತ್ರದಲ್ಲಿ ಹೊಮ್ಮಿಸಬೇಕಾದ ಪಾತ್ರವದು. ನಾಯಕಿಯಾದ ಮೊದಲನೇ ಚಿತ್ರದಲ್ಲಿಯೇ ಜಯಂತಿಯವರು ಗಮನ ಸೆಳೆಯುವ ರೀತಿಯಲ್ಲಿ ತಮ್ಮ ಸಹಜಾಭಿನಯ ಚಾತುರ್ಯವನ್ನು ನಿರೂಪಿಸಿದರು.
ಹಾಗೆ ನೋಡಿದರೆ ಭಾರತೀಯ ವಾಣಿಜ್ಯ ಚಿತ್ರ ಪರಂಪರೆಯು ನಾಯಕಿಯರ ಬಗೆಗೆ ಆ ಕಾಲದಲ್ಲಿ ಹಾಕಿಕೊಂಡಿದ್ದ ಮಾನದಂಡಗಳನ್ನು ಅನ್ವಯಿಸಿದರೆ ಜಯಂತಿಯವರಿಗೆ ನಾಯಕಿಯಾಗಲು ಅರ್ಹತೆ ಕಡಿಮೆಯಿತ್ತೆಂದೇ ಹೇಳಬಹುದು. ಸ್ವಲ್ಪಸ್ಥೂಲವಾದ ದೇಹ; ಆರಂಭದಲ್ಲಿ ಸ್ವಲ್ಪ ಕೀರಲು ಧ್ವನಿಯ ಲೇಪನವಿದ್ದಂತೆ ಸಂಭಾಷಣೆ ಹೇಳುತ್ತಿದ್ದರು. ನೃತ್ಯದಲ್ಲಿ ಪರಿಶ್ರಮವಿದ್ದಂತೆ ಕಾಣದು. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡ ನಾಡಿನ ಹೆಣ್ಣು ಮಕ್ಕಳ ಭಾವನೆಯನ್ನು ಅರ್ಥಮಾಡಿಕೊಳ್ಳಬಲ್ಲ ಪರಿಸರದಲ್ಲಿ ಅವರು ಬೆಳೆದವರಾಗಿರಲಿಲ್ಲ. ಕನ್ನಡ ಭಾಷೆಯ ಪರಿಚಯವೂ ಹೆಚ್ಚಿದ್ದಂತೆ ತೋರುವುದಿಲ್ಲ. ಆದರೂ ಜಯಂತಿಯವರಿಗೆ ಆಂಗಿಕ ಅಭಿನಯ ಸಹಜವಾಗಿ ಸಿದ್ಧಿಸಿತ್ತು. ಅದರಿಂದಲೇ ತಮ್ಮೆಲ್ಲ ಕೊರತೆಗಳನ್ನು ನೀಗಿಕೊಂಡು ಅಭಿನಯ ಸಾಮರ್ಥ್ಯದಿಂದ ಉಳಿದುಬಂದರು. ಒಂದು ಪಾತ್ರದ ಹಿನ್ನೆಲೆ ಮತ್ತು ಅದು ವ್ಯಕ್ತಪಡಿಸಬೇಕಾದ ಭಾವನೆಗಳನ್ನು ತಮ್ಮ ಕಣ್ಣು, ಮುಖಭಾವ ಮತ್ತು ಅಂಗಾಂಗ ಚಲನೆಯಿಂದಲೇ ಹೊರಹಾಕಿ ಗೆದ್ದವರು ಜಯಂತಿ. ಈ ಅಂಶಗಳ ಹಿನ್ನೆಲೆಯಲ್ಲಿಯೂ ಜಯಂತಿಯವರ ಸಾಧನೆಯನ್ನು ಅಳೆಯಬೇಕು.
‘ಚಂದವಳ್ಳಿಯ ತೋಟ’ ಚಿತ್ರದ ನಂತರ ಅವರು ಅಭಿನಯಿಸಿದ ಚಿತ್ರ ‘ಕಲಾವತಿ’. ಇಲ್ಲಿ ಜಯಂತಿಯವರಿಗೆ ಸಂಪೂರ್ಣ ವಿಭಿನ್ನವಾದ ಪಾತ್ರ. ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು. ಅದೂ ಪ್ರೇಕ್ಷಕರ ಸಹಾನುಭೂತಿಗೆ ಅರ್ಹವಲ್ಲದ ಪಾತ್ರ. ನೃತ್ಯ ಬಾರದ ಅಸೂಯೆ ಹೆಣ್ಣಾಗಿ, ಯಶಸ್ಸು ಸಾಧಿಸಬೇಕೆಂಬ ಹಠಕ್ಕೆ ಬಿದ್ದು ಎದುರಾಳಿಯನ್ನು ಸೋಲಿಸಲು ವಾಮಮಾರ್ಗಗಳನ್ನು ಹಿಡಿಯುವ ವನಜಾ ಪಾತ್ರ. ಜಯಂತಿಯವರು ಈ ಅಗ್ನಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ ತಮ್ಮ ಅಭಿನಯ ಪ್ರತಿಭೆಯ ಮತ್ತೊಂದು ಮುಖವನ್ನು ತೆರೆದಿಟ್ಟರು.
1964ರಲ್ಲಿಯೇ ಬಿಡುಗಡೆಯಾದ ‘ಮುರಿಯದ ಮನೆ’ ಚಿತ್ರದಲ್ಲಿ ಜಯಂತಿಯವರು ‘ಚಂದವಳ್ಳಿಯ ತೋಟ’ದಲ್ಲಿನ ತಮ್ಮ ಅಭಿನಯ ಸಹಜತೆಯನ್ನು ಮುಂದುವರಿಸಿದರು. ಚಿತ್ರ ತಮಿಳಿನ ರೀಮೇಕ್ ಆದರೂ, ಗ್ರಾಮೀಣ ಪರಿಸರದ ಮಾದರಿ ಕತೆಯೊಂದಾದ ಕಾರಣ ಕನ್ನಡದ ಕತೆಯೆಂಬಂತೆ ಸ್ವಾಭಾವಿಕವಾಗಿ ಮೂಡಿ ಬಂತು. ವಿಚ್ಛಿದ್ರಗೊಳ್ಳುತ್ತಿದ್ದ ಸಂಸಾರದಲ್ಲಿದ್ದ ಹೆಳವನನ್ನು ಮದುವೆಯಾಗಿ ಮನೆತನದ ಪ್ರತಿಷ್ಠೆಯನ್ನು ಕಾಪಾಡುವ ಹೆಣ್ಣಾಗಿ ಜಯಂತಿಯವರು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದರು. ಹೆಳವ ಚೆನ್ನನ ಪಾತ್ರದಲ್ಲಿ ರಾಜ್‌ಕುಮಾರ್ ಮತ್ತು ಅವರ ಪತ್ನಿಯಾಗಿ ಜಯಂತಿಯವರು ಗ್ರಾಮೀಣ ಪರಿಸರದ ಸಹಾನುಭೂತಿ ಬೆಸೆದ ಜೋಡಿಯಾಗಿ ಗಮನ ಸೆಳೆದರು. ಮತ್ತೆ ಜೋಡಿಯ ಜನಪ್ರಿಯತೆ ಬಿ.ಎಸ್. ರಂಗಾ ನಿರ್ದೇಶನದ ‘ಪ್ರತಿಜ್ಞೆ’(1964) ಚಿತ್ರದಲ್ಲಿ ಮುಂದುವರಿಯಿತು.
ಒಂದು ವಿಧದಲ್ಲಿ ಜಯಂತಿಯವರ ವೃತ್ತಿ ಬದುಕು ಸಾಗಿ ಬಂದದ್ದು ಹೋರಾಟದ ಹಾದಿಯಲ್ಲಿ. ಅವರು ಕನ್ನಡ ಚಲನಚಿತ್ರರಂಗವನ್ನು ಪ್ರವೇಶಿಸಿದಾಗ ಹರಿಣಿ, ಲೀಲಾವತಿ, ಕಲ್ಪನಾ, ಬಿ. ಸರೋಜಾದೇವಿಯವರಂಥ ಅಚ್ಚ ಕನ್ನಡಿತಿಯರು ನೆಲೆ ಕಂಡುಕೊಳ್ಳುತ್ತಿದ್ದರು. ಸಾಹುಕಾರ್ ಜಾನಕಿ, ಕೃಷ್ಣಕುಮಾರಿ, ರಾಜಶ್ರೀಯವರಂತಹ ಆಮದು ನಟಿಯರು ಆಗಮಿಸಿದ್ದರು. ಇವರ ನಡುವೆ ಹೋರಾಡಿ ತಮ್ಮ ನೆಲೆಯನ್ನು ಅವರು ಕಂಡುಕೊಳ್ಳಬೇಕಿತ್ತು. ಆ ನಂತರದಲ್ಲಿ ಅವರು ಜಯಲಲಿತಾ, ಚಂದ್ರಕಲಾ, ಭಾರತಿಯವರಂತಹ ಹೊಸ ತಲೆಮಾರಿನ ನಟಿಯರ ಸ್ಪರ್ಧೆಗೆ ಒಡ್ಡಿಕೊಳ್ಳಬೇಕಾಯಿತು. ಅದರಲ್ಲೂ ನಟಿ ಕಲ್ಪನಾರವರು ಅಭಿನಯದ ಹೊಸ ಶಾಖೆಯೊಂದನ್ನು ಉದ್ಘಾಟಿಸಿದ ಕಾಲ. ಪ್ರೇಕ್ಷಕರು ಅದನ್ನು ಒಪ್ಪಿಕೊಂಡಿದ್ದಂತಹ ಘಟ್ಟ. ಎಪತ್ತರ ದಶಕದಲ್ಲಿ ಆಧುನಿಕ ಶಿಕ್ಷಣ ಪಡೆದು, ಸಿನೆಮಾ ವೃತ್ತಿಯನ್ನು ಗಂಭೀರವಾಗಿ ಸ್ವೀಕರಿಸಿದ ಆರತಿ, ಮಂಜುಳಾ, ಜಯಮಾಲಾ ಮತ್ತು ಅನೇಕ ಪರಭಾಷಾ ನಟಿಯರ ತೀವ್ರ ಸ್ಪರ್ಧೆಯಲ್ಲಿ ಜಯಂತಿ ಅವರು ತಮ್ಮ ಪ್ರತಿಭೆಯ ಟಿಸಿಲುಗಳನ್ನು ಚಾಚಬೇಕಿತ್ತು. ಆದರೆ 1964ರಿಂದ 1982ರವರೆಗೆ ಇವುಗಳನ್ನೆಲ್ಲ ಸವಾಲಾಗಿ ಸ್ವೀಕರಿಸಿ ಸುಮಾರು ಎರಡು ದಶಕಗಳ ಕಾಲ ತಮ್ಮ ನಾಯಕಿ ಪಟ್ಟವನ್ನು ಉಳಿಸಿಕೊಂಡವರು ಜಯಂತಿ. ಕನ್ನಡದ ಸಂದರ್ಭದಲ್ಲಿ ಜಯಂತಿಯವರಷ್ಟು ದೀರ್ಘಕಾಲ ನಾಯಕಿ ಪಟ್ಟವನ್ನು ಉಳಿಸಿಕೊಂಡ ಮತ್ತೊಂದು ಉದಾಹರಣೆ ಸಿಕ್ಕುವುದಿಲ್ಲ. ಇದು ಸಹ ದಾಖಲಾಗಬೇಕಾದ ಸಂಗತಿ.
1964ರಲ್ಲಿ ಆರಂಭವಾದ ಅವರ ಯಶೋಗಾಥೆ ಮುಂದಿನ ಹದಿನೈದು ವರ್ಷ ಅಬಾಧಿತವಾಗಿ ಮುಂದುವರಿಯಿತು. ಅವರು ಅಭಿನಯಿಸಿದ ಚಿತ್ರಗಳು 1964, 1965ರಲ್ಲಿ ತಲಾ ಆರು ಚಿತ್ರಗಳು ಬಿಡುಗಡೆಯಾದರೆ, 1966ರಲ್ಲಿ ಆ ಸಂಖ್ಯೆ ಏಳಕ್ಕೆ ಏರಿತು. ಮಾರನೇ ವರ್ಷ ಒಂಭತ್ತನ್ನು ದಾಟಿತು. 1968ರಲ್ಲಿ ಅವರು ಅಭಿನಯಿಸಿದ ನಾಲ್ಕು ಚಿತ್ರಗಳು ಬಿಡುಗಡೆಯಾದರೆ, 1969ರಲ್ಲಿ ಬರೊಬ್ಬರಿ ಹತ್ತು ಚಿತ್ರಗಳು ಬಿಡುಗಡೆಯಾದವು. 1971ರಲ್ಲಿ ಈ ಸಂಖ್ಯೆ ಮತ್ತೆ ಪುನರಾವರ್ತನೆಯಾಯಿತು. ಈ ವಿದ್ಯಮಾನ, ಪ್ರತಿವರ್ಷವೂ ನವೀಕರಣವಾಗುತ್ತಾ ಸಾಗಿತು. 1982ರಲ್ಲಿ ಬಿಡುಗಡೆಯಾದ ‘ಧರ್ಮದಾರಿ ತಪ್ಪಿತು’ ಅವರು ಅಭಿನಯಿಸಿದ ನೂರನೇ ಕನ್ನಡ ಚಿತ್ರವೆಂದು ಕಾಣುತ್ತದೆ. ಆ ಚಿತ್ರದ ಅಭಿನಯಕ್ಕಾಗಿ ಜಯಂತಿಯವರು ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿಯನ್ನು ಪಡೆದರು. ಚಿತ್ರರಂಗವೂ ಪುರುಷ ಪ್ರಾಬಲ್ಯದ ಕ್ಷೇತ್ರ. ಹಾಗಾಗಿ ಸಣ್ಣ ಪುಟ್ಟ ನಟರು ಶತಚಿತ್ರ ಪೂರೈಸಿದರೂ ಸುದ್ದಿಯಾಗುತ್ತದೆ. ಅಭಿನಯದಲ್ಲಿ ಹೊಸ ಶೈಲಿಯೊಂದನ್ನು ಬರೆದ ಜಯಂತಿಯವರ ನೂರನೇ ಚಿತ್ರ ಯಾವುದಿರಬಹುದೆಂಬ ಲೆಕ್ಕವನ್ನು ನಮ್ಮ ಚಿತ್ರರಂಗ ಇಡಲಿಲ್ಲ.
1965ರಲ್ಲಿ ಬಿಡುಗಡೆಯಾದ ‘ಬೆಟ್ಟದ ಹುಲಿ’ ಚಿತ್ರವು ಜಯಂತಿಯವರ ಪಾಲಿಗೆ ಮತ್ತೊಂದು ಮಹತ್ವದ ಚಿತ್ರ. ಎ.ವಿ. ಶೇಷಗಿರಿರಾವ್ ಅವರ ನಿರ್ದೇಶನದ ಬೆಟ್ಟದ ಹುಲಿ ಸಾಹಸ ಚಿತ್ರಗಳಲ್ಲಿ ವಿಶಿಷ್ಟವಾದದ್ದು. ಪೊಲೀಸ್ ಅಧಿಕಾರಿಯ ಮನೆಯಲ್ಲಿ ಬೆಳೆದ ಹೆಣ್ಣು ಮಗಳೊಬ್ಬಳು ಸಾಹಸ ಬದುಕಿಗೆ ಆಕರ್ಷಿತಳಾಗುವ ಪಾತ್ರ. ಜೊತೆಗೆ ತಮ್ಮ ಮಾದಕತೆಯಿಂದ ಪ್ರೇಕ್ಷಕರ ಅಂತರಂಗಕ್ಕೆ ಲಗ್ಗೆಯಿಟ್ಟ ಜಯಂತಿಯವರು ಅಶ್ಲೀಲತೆಯ ಸೋಂಕಿಲ್ಲದೆಯೆ ಪರಿಶುದ್ಧ ಪ್ರಣಯ ಭಾವವನ್ನು ಉದ್ದೀಪನಗೊಳಿಸಲು ಸಾಧ್ಯವೆಂಬುದನ್ನು ನಿರೂಪಿಸಿದರು.
ಅದೇ ವರ್ಷ ಬಿಡುಗಡೆಯಾದ ‘ಮಿಸ್ ಲೀಲಾವತಿ’ ಜಯಂತಿಯವರ ವೃತ್ತಿ ಜೀವನಕ್ಕೆ ಮತ್ತೊಂದು ತಿರುವು ನೀಡಿದ ಚಿತ್ರ. ಆ ಕಾಲಕ್ಕೆ ಬೋಲ್ಡ್ ಎನಿಸಿದ ಕಥಾವಸ್ತು. ಆ ಚಿತ್ರದಲ್ಲಿ ನಾಯಕಿಯಾಗಿ ತಮ್ಮ ಪ್ರತಿಭೆಯನ್ನು ಹೊರಹಾಕಲು ಎಲ್ಲ ಅವಕಾಶಗಳಿದ್ದವು. ಜಯಂತಿಯವರು ಅದನ್ನು ಸಮರ್ಥವಾಗಿ ಬಳಸಿಕೊಂಡರು.
1968ರಲ್ಲಿ ಬಿಡುಗಡೆಯಾದ ‘ಜೇಡರ ಬಲೆ’ ಅಭಿನಯದ ದೃಷ್ಟಿಯಿಂದ ಮಹತ್ವದ್ದು ಎನಿಸದು ನಿಜ. ಆದರೆ ಅದರ ಚಾರಿತ್ರಿಕ ಮಹತ್ವವನ್ನು ಅಲ್ಲಗಳೆಯಲಾಗದು. ‘ಮಿಸ್ ಲೀಲಾವತಿ’ಗಿಂತ ವಿಭಿನ್ನವಾದ ಪಾತ್ರವಿದು. ಆ ಚಿತ್ರದ ಸಾಹಸ ದೃಶ್ಯಗಳಷ್ಟೇ ಜಯಂತಿಯವರು ಡ್ರೆಸ್ ಪ್ರೇಕ್ಷಕರನ್ನು ಸೆಳೆದಿತ್ತು. ಬಾಂಡ್ ಮಾದರಿಯ ಚಿತ್ರಗಳಲ್ಲಿ ಅಭಿನಯಿಸಿದ ರಾಜ್‌ರವರಿಗೆ ದಕ್ಕಿದಷ್ಟೇ ಪ್ರಸಿದ್ಧಿ ತುಂಡುಡುಗೆಯುಟ್ಟ ಜಯಂತಿಯವರಿಗೂ ದೊರಕಿತ್ತು.
ಎಂ.ಆರ್. ವಿಠಲ್‌ರವರು ನಿರ್ದೇಶಿಸಿದ ‘ಎರಡು ಮುಖ’ (1969) ಜಯಂತಿಯವರ ಅಭಿನಯ ಸೂಕ್ಷ್ಮಗಳನ್ನು ಅನಾವರಣಗೊಳಿಸಿದ ಚಿತ್ರ. ಇದು ಮೊದಲ ಕನ್ನಡದ ಮನೋವೈಜ್ಞಾನಿಕ ಚಿತ್ರ. ಸೀಳು ವ್ಯಕ್ತಿತ್ವದ ವ್ಯಕ್ತಿಯ ಮಾನಸಿಕ ವಿಶ್ಲೇಷಣೆಯನ್ನು ಗಂಭೀರವಾಗಿ ನಿರೂಪಿಸಿದ ಚಿತ್ರ. ನಿರ್ದೇಶಕ ಎಂ.ಆರ್. ವಿಠಲ್‌ರವರ ನಿರೀಕ್ಷೆಯನ್ನು ಹುಸಿ ಮಾಡದೆ ಅಮೋಘವಾಗಿ ರಮಾ ಮತ್ತು ಉಮಾ ಪಾತ್ರಗಳಿಗೆ ಜಯಂತಿಯವರು ಜೀವ ತುಂಬಿದರು. ಕನ್ನಡ ಚಿತ್ರರಂಗದಲ್ಲಿ ಒಂದು ಮಾನಸಿಕ ರೋ