ಬಂಗಾಳ ಬಿಜೆಪಿಗೆ ಹೊಸ ಅಧ್ಯಕ್ಷ ನೇಮಕಕ್ಕೆ ಕಾರಣ ಏನು ಗೊತ್ತೇ?
ಹೊಸದಿಲ್ಲಿ, ಸೆ.21: ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಟಿಎಂಸಿ ಸೇರಿದ ಬೆನ್ನಲ್ಲೇ ಪಶ್ಚಿಮ ಬಂಗಾಲದ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಸ್ಥಾನಕ್ಕೆ ಬಲೂರ್‌ಘಾಟ್ ಸಂಸದ ಸುಕಾಂತ ಮಜೂಂದಾರ್ ಅವರನ್ನು ಪಕ್ಷ ನೇಮಕ ಮಾಡಿದೆ.
ದಿಲೀಪ್ ಘೋಷ್ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಭವಾನಿಪುರ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಟಿಎಂಸಿ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಠಿಣ ಸ್ಪರ್ಧೆ ನೀಡಲು ಬಿಜೆಪಿ ಸಜ್ಜಾಗುತ್ತಿರುವ ನಡುವೆಯೇ ಮಜೂಂದಾರ್ ಅವರ ನೇಮಕ ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಇತ್ತೀಚೆಗೆ ಉತ್ತರಾಖಂಡ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ಬೇಬಿರಾಣಿ ಮೌರ್ಯ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿಯೋಜಿಸಿದ್ದಾರೆ. ಘೋ ಹಾಗೂ ಮೌರ್ಯ ಇತರ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ದೇಶದಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿರುವ ಈ ಸಮುದಾಯವನ್ನು ತಲುಪುವ ಪ್ರಯತ್ನವಾಗಿ ಈ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಚ್ಚರಿಯ ವಿಷಯವೆಂದರೆ ಇತ್ತೀಚಿನ ಕೇಂದ್ರ ಸಂಪುಟ ಪುನರ್ರಚನೆ ವೇಳೆ ಸ್ಥಾನ ಕಳೆದುಕೊಂಡಿದ್ದ ಪ್ರಕಾಶ್ ಜಾವ್ಡೇಕರ್ ಮತ್ತು ರವಿಶಂಕರ ಪ್ರಸಾದ್ ಅವರನ್ನು ಪಕ್ಷ ಸಂಘಟನೆಗೂ ತೊಡಗಿಸಿಕೊಂಡಿಲ್ಲ.
ಈ ವರ್ಷದ ಕೊನೆಯವರೆಗೂ ಅಧಿಕಾರಾವಧಿ ಹೊಂದಿದ್ದ ದಿಲೀಪ್ ಘೋಷ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯಿಂದ ಕಿತ್ತುಹಾಕಲು ಪಕ್ಷದ ರಾಜ್ಯ ಘಟಕದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಕಾರಣ ಎಂದು ಹೇಳಲಾಗುತ್ತಿದೆ. ಬಾಬುಲ್ ಸುಪ್ರಿಯೊ, ಬಹಿರಂಗವಾಗಿ ಘೋಷ್ ಜತೆ ಸಂಘರ್ಷಕ್ಕೆ ಇಳಿದಿದ್ದರು. ಘೋಷ್ ಅವರ ನಾಯಕತ್ವದಲ್ಲಿ ಪಕ್ಷದಲ್ಲಿ ಮುಂದುವರಿಯಲಾರೆ ಎಂದು ಸುಪ್ರಿಯೊ ಹೇಳಿದ್ದರು.