ಶಾಲಾರಂಭಕ್ಕೆ ದಿನಗಣನೆ: ಮಲೆನಾಡು ಭಾಗದ ಸರಕಾರಿ ಶಾಲೆಗಳ ಸ್ಥಿತಿ ದೇವರಿಗೆ ಪ್ರೀತಿ
ಚಿಕ್ಕಮಗಳೂರು, ಅ.22: ಕೋವಿಡ್ ಕಾರಣದಿಂದಾಗಿ ಬಂದ್ ಆಗಿದ್ದ ಪ್ರಾಥಮಿಕ ಶಾಲೆಗಳ ಬಾಗಿಲು ತೆರೆಯಲು ರಾಜ್ಯ ಸರಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಅ.25ರಿಂದ ಜಿಲ್ಲಾದ್ಯಂತ ಶಾಲೆಗಳು ಪುನಾರಂಭಗೊಳ್ಳುತ್ತಿವೆ. ಶಾಲೆಗಳ ಪುನಾರಂಭಕ್ಕೆ ಶಿಕ್ಷಣ ಇಲಾಖೆ ಆದೇಶ ನೀಡಿದೆಯಾದರೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಪರಿಹಾರ ಒದಗಿಸದೇ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮಲೆನಾಡು ಭಾಗದ ಕಳಕೋಡು ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲಾ ಮಕ್ಕಳ ಭವಿಷ್ಯ ಅತಂತ್ರಸ್ಥಿತಿಯಲ್ಲಿದೆ.
ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯಲ್ಲಿರುವ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಳಕೋಡು ಗ್ರಾಮದಲ್ಲಿ ಗಿರಿಜನರೇ ಹೆಚ್ಚಿರುವ ಗ್ರಾಮವಾಗಿದೆ. ಈ ಗ್ರಾಮ ಕಳಸ ಪಟ್ಟದಿಂದ 15 ಕಿಮೀ ದೂರದಲ್ಲಿದ್ದು, ಕಳಕೋಡು ಸುತ್ತಮುತ್ತಲಿನ ಹಲವುಗಳ ಜನರು ರಸ್ತೆ, ಸೇತುವೆ, ಮೊಬೈಲ್‍ನೆಟ್‍ವರ್ಕ್‍ನಂತಹ ಆಧುನಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಜನರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಕಳಕೋಡು ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೇ ಅವಲಂಭಿಸಿದ್ದಾರೆ.
1ರಿಂದ 7ನೇ ತರಗತಿವರೆಗಿನ ಈ ಶಾಲೆಯಲ್ಲಿ ಸುಮಾರು 50 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಹಿಂದಿನಿಂದಲೂ ಈ ಶಾಲೆ ಶಿಕ್ಷಕರ ಕೊರತೆಯ ಸಮಸ್ಯೆ ಎದುರಿಸುತ್ತಿರುವುದು, ಶಾಲೆಯ ಕಟ್ಟಡ ಶಿಥಿಲಗೊಂಡಿರುವುದು, ಶಿಕ್ಷರ ಗೈರು ಹಾಜರಿಯಂತಹ ಸಮಸ್ಯೆಗಳಿಂದಾಗಿ ಈ ಶಾಲೆಯ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಕಳಕೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ತಮ್ಮ ಮಕ್ಕಳನ್ನು ಈ ಸರಕಾರಿ ಶಾಲೆಯಿಂದ ಬಿಡಿಸಿ ಕಳಸ ಪಟ್ಟಣದಲ್ಲಿರುವ ಸರಕಾರಿ, ಖಾಸಗಿ ಶಾಲೆಗಳಿಗೆ ಸೇರಿದ್ದರು. ಪರಿಣಾಮ ಕಳಕೋಡು ಗ್ರಾಮದ ಸರಕಾರಿ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು. ಈ ವೇಳೆ ಶಾಲೆಯ ಕೆಲ ಶಿಕ್ಷಕರು ಮಕ್ಕಳ ಪೋಷಕರ ಮನವೊಲಿಸಿ ಕಳಸ ಪಟ್ಟಣದ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳನ್ನು ಮತ್ತೆ ಇದೇ ಶಾಲೆಗೆ ಸೇರಿದ್ದರು. ಮೂವರು ಶಿಕ್ಷಕರು ಈ ಹಿಂದೆ ಈ ಶಾಲೆಗೆ ಬಂದು ಪಾಠ ಮಾಡುತ್ತಿದ್ದರಿಂದ ಶಾಲೆ ಬಾಗಿಲು ಮುಚ್ಚುವ ಸ್ಥಿತಿಯಿಂದ ಪಾರಾಗಿತ್ತು.
ಆದರೆ ಶಿಕ್ಷಕರು ಕುಗ್ರಾಮವಾಗಿರುವ ಕಳಕೋಡು ಗ್ರಾಮಕ್ಕೆ ಕಳಸ ಪಟ್ಟಣದಿಂದ ಬಂದು ಹೋಗಿ ಪಾಠ ಮಾಡಬೇಕಾದ ಪರಿಣಾಮ ಈ ಶಾಲೆಗೆ ಬರುವ ಶಿಕ್ಷಕರು ಹೆಚ್ಚು ದಿನ ಇಲ್ಲಿರದೇ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದು, ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಮರೀಚಿಕೆಯಾಗಿತ್ತು. ಇಂತಹ ಪರಿಸ್ಥಿತಿಯಲ್ಲೇ ಕೊರೋನಾ ಕಾರಣದಿಂದಾಗಿ ಈ ಶಾಲೆ ಕಳೆದ ಎರಡು ವರ್ಷಗಳಿಂದ ಬಂದ್ ಆಗಿದ್ದು, ಶಾಲೆಯ ಮಕ್ಕಳು ಬಿಎಸೆನೆಲ್ ನೆಟ್‍ವರ್ಕ್ ಸಮಸ್ಯೆಯ ಮಧ್ಯೆಯೂ ಆನ್‍ಲೈನ್ ಮೂಲಕ ಶಿಕ್ಷಣ ಪಡೆದುಕೊಳ್ಳುತ್ತಿದ್ದರು. ಸದ್ಯ ಶಿಕ್ಷಣ ಇಲಾಖೆ ಅ.25ರಿಂದ 1-5ನೇತರಗತಿವರೆಗಿನ ಶಾಲೆಗಳ ಪುನಾರಂಭಕ್ಕೆ ಆದೇಶ ನೀಡಿದ್ದು, ಈ ಶಾಲೆಯ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
ಶಾಲಾರಂಭದ ಹಿನ್ನೆಲೆಯಲ್ಲಿ ಗುರುವಾರ ಮಕ್ಕಳ ಪೋಷಕರು ಶಾಲೆಯ ಬಳಿ ಬಂದು ಶಿಕ್ಷಕರ ಬರುವಿಕೆಗಾಗಿ ಗಂಟೆಗಟ್ಟಲೆ ಕಾದು ಎದುರು ನೋಡಿದರೂ ಶಿಕ್ಷಕರು ಮಾತ್ರ ಶಾಲೆಯತ್ತ ತಲೆ ಹಾಕಿಲ್ಲ. ಶಾಲೆಯಲ್ಲಿ ಈ ಹಿಂದೆ ಶಿಕ್ಷರೊಬ್ಬರಿಗೆ ಕರೆ ಮಾಡಿ ವಿಚಾರಿಸಿದರೇ ತನಗೆ ಬೇರೆಡೆ ವರ್ಗಾವಣೆಯಾಗಿದ್ದು, ಬೇರೆ ಶಿಕ್ಷಕರು ಬರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಮಕ್ಕಳ ಪೋಷಕರು ಬೆಳಗಿನಿಂದ ಸಂಜೆವರೆಗೆ ಶಿಕ್ಷಕರ ಬರುವಿಕೆಗಾಗಿ ಕಾದರೂ ಶಿಕ್ಷಕರ ಪತ್ತೆಯೇ ಇಲ್ಲ ಎಂದು ಗ್ರಾಮದ ನಿವಾಸಿಗಳು ದೂರು ಹೇಳಿಕೊಂಡಿದ್ದಾರೆ.
ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯಲ್ಲಿರುವ ಕಳಕೋಡು ಗ್ರಾಮ ಸೇರಿದಂತೆ ಸುತ್ತಲಿನ ಕಾರ್ಲೆ, ಮೇಗನಮಕ್ಕಿ, ಕಾಲಸಂಕ, ಈಚಿಲುಹೊಳೆ ಮೊದಲಾದ ಹಳ್ಳಗಳ ಬಡಜನರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಈ ಸರಕಾರಿ ಶಾಲೆಯನ್ನೇ ಅಲವಂಭಿಸಿದ್ದಾರೆ. ಶಾಲೆಯ ಅವ್ಯವಸ್ಥೆಯನ್ನು ಕಂಡು ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕಳಕೋಡು ಸರಕಾರಿ ಶಾಲೆಯಿಂದ ಮಕ್ಕಳನ್ನು ಬಿಡಿಸಿ ಕಳಸ ಪಟ್ಟಣದ ಶಾಲೆಗೆ ಸೇರಿಸಿದ್ದರೂ ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿಗಳು ಪೋಷಕರ ಮೇಲೆ ಒತ್ತಡ ಹೇರಿದ್ದರಿಂದ ಕಳಸ ಪಟ್ಟಣದ ಶಾಲೆಗಳಿಂದ ಕರೆತಂದ ಮತ್ತೆ ಇದೇ ಶಾಲೆಗೆ ಮಕ್ಕಳನ್ನು ಸೇರಿಸಿದ್ದು, ಸದ್ಯ ಶಾಲೆಗೆ ಅಗತ್ಯವಿರುವ ಮೂವರು ಶಿಕ್ಷಕರನ್ನು ನೇಮಿಸದ ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅ.25ರಿಂದ ಶಾಲೆಗಳು ಆರಂಭವಾಗುತ್ತಿದ್ದರೂ ಶಾಲೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಯಾರೂ ಬಂದಿಲ್ಲ, ಹಿಂದೆ ಇದ್ದ ಶಿಕ್ಷಕರನ್ನು ಕೇಳಿದರೇ ನಾನು ಬರಲ್ಲ, ಬೇರೆಯವರು ಬರುತ್ತಾರೆ ಎನ್ನುತ್ತಿದ್ದಾರೆ. ಬಿಇಒ ಅವರಿಗೆ ಕರೆ ಮಾಡಿದರೇ ಅವರು ಕರೆ ಸ್ವೀಕರಿಸುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ. ನೆಟ್‍ವರ್ಕ್ ಸಮಸ್ಯೆಯಿಂದ ಆನ್‍ಲೈನ್ ಪಾಠವೂ ಮಕ್ಕಳಿಗೆ ಸಿಕ್ಕಿಲ್ಲ. ಬೇರೆ ಶಾಲೆಗಳಿಗೆ ಮಕ್ಕಳನ್ನು ಸೇರಿಸಲೂ ಇಲಾಖೆಯವರು ಬಿಡುತ್ತಿಲ್ಲ. ಒಟ್ಟಾರೆ ನಮ್ಮ ಮಕ್ಕಳ ಭವಿಷ್ಯದೊಂದಿಗೆ ಇಲಾಖಾಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ಗ್ರಾಮದ ನಿವಾಸಿಗಳಾದ ಕೇಶವ, ಶಶಿಕಲಾ ಎಂಬವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಳಕೋಡು ಶಾಲೆ ಎರಡು ವರ್ಷಗಳಿಂದ ಬಾಗಿಲು ತೆರದಿಲ್ಲ. ಅ.25ರಿಂದ ಶಾಲೆಗಳನ್ನು ತೆರೆಯಲು ಸರಕಾರ ಸೂಚನೆ ನೀಡಿದೆ. ಗುರುವಾರ ಶಾಲೆಯ ಬಾಗಿಲು ತೆರೆಯುವಂತೆ ಇಲಾಖೆಯವರು ತಿಳಿಸಿದ್ದರು. ಆದ್ದರಿಂದ ಶಾಲೆಗೆ ಬಂದಿದ್ದೆ. ಆದರೆ ಓರ್ವ ಶಿಕ್ಷಕರೂ ಬಂದಿಲ್ಲ. ಆದ್ದರಿಂದ ಬಿಸಿಯೂಟವನ್ನೂ ತಯಾರಿಸಿಲ್ಲ.
- ಸುಮಿತ್ರಾ, ಶಾಲೆಯ ಅಕ್ಷರದಾಸೋಹ ಸಿಬ್ಬಂದಿ
ಕಳಕೋಡು ಭಾಗದಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಇರುವುದು ಇದೊಂದೇ ಸರಕಾರಿ ಶಾಲೆಯಾಗಿದೆ. ಮೊದಲಿನಿಂದಲೂ ಈ ಶಾಲೆ ಶಿಕ್ಷಕರ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಶಾಲೆಗೆ ಮೂವರು ಶಿಕ್ಷಕರ ಅಗತ್ಯವಿದ್ದು, ಕೇವಲ ಓರ್ವ ಶಿಕ್ಷಕರು ಮಾತ್ರ ಈ ಹಿಂದಿನಿಂದಲೂ ಪಾಠ ಮಾಡುತ್ತಿದ್ದಾರೆ. ಗುರುವಾರದಿಂದ ಬಿಸಿಯೂಟ ಆರಂಭಕ್ಕೆ ಸರಕಾರದ ಆದೇಶಿಸಿದೆ. ಆದರೆ ಶಾಲೆಗೆ ಶಿಕ್ಷಕರೇ ಬಂದಿಲ್ಲ. ಬಿಸಿಯೂಟವನ್ನೂ ತಯಾರಿಸಿಲ್ಲ. ಮಳೆ ಗಾಳಿಗೆ ಶಾಲೆ ಶಿಥಿಲಗೊಂಡಿದ್ದು, ಶಾಲೆಯ ಸ್ಥಿತಿಗತಿ ನೋಡಲಾದರೂ ಇಲಾಖೆಯಿಂದ ಯಾರಾದರೂ ಬರಬೇಕಿತ್ತು. ಇಡೀ ದಿನ ಕಾದರೂ ಯಾರೂ ಬಂದಿಲ್ಲ. ಶಿಕ್ಷಕರಿಗೆ ಕರೆ ಮಾಡಿದರೇ ನನ್ನ ಬಳಿ ಬರುತ್ತೇನೆ ಎಂದು ಹೇಳಿದ್ದರು. ಮತ್ತೊಬ್ಬರು ಕರೆ ಮಾಡಿದಾಗ ನಾನು ಬರಲ್ಲ ಎಂದಿದ್ದಾರೆ. ಶಿಕ್ಷಣ ಇಲಾಖೆ ಹೀಗೆ ಬೇಜವಬ್ದಾರಿ ತೋರಿದರೇ ಬಡ ಮಕ್ಕಳ ಗತಿ ಏನು? ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ. ಈ ಶಾಲೆಯನ್ನು ಶಾಶ್ವತವಾಗಿ ಮುಚ್ಚಲಿ.
- ಗೋಪಾಲಗೌಡ, ಕಳಕೋಡು ಗ್ರಾಮದ ನಿವಾಸಿ