ನಾನು ಕೇಳದೆ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರ ಮಾತನಾಡುತ್ತಿದ್ದಾರೆ: ಹಂಸಲೇಖ
ಬೆಂಗಳೂರು, ಆ.23: ನನಗೆ ಆರೋಗ್ಯ ತಪ್ಪಿದೆ ಅಂತ ಇಡೀ ಕರ್ನಾಟಕದಿಂದ ಕರೆಗಳು ಬಂದಿವೆ. ನಾನು ಆರೋಗ್ಯವಾಗಿದ್ದೀನಿ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಗೊತ್ತಾಗಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿ ಪಡೆಯೋಕೆ ನಾನು ತುಂಬಾನೆ ಸವೆದಿದ್ದೀನಿ. ಸಹಿಸಿದ್ದೀನಿ. ಅದರ ಸುಖ ಇವತ್ತು ಅನುಭವಿಸುತ್ತಿದ್ದೀನಿ.
ನಾನು ಕೇಳದೆ ನನ್ನ ಮನೆಗೆ ಸರಕಾರ ಭದ್ರತೆ ಕೊಟ್ಟಿದೆ. ನಾನು ಕೇಳದೆ ಇಡೀ ಕರ್ನಾಟಕದಲ್ಲಿ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸುತ್ತಿದ್ದಾರೆ.
ಅಭಿಮಾನ ಆವೇಶವಾಗಬಾರದು; ಆವೇಶ ಅವಗಢಗಳಿಗೆ ಕಾರಣವಾಗಬಾರದು; ಅಭಿಮಾನ ಹಾಡಿನಂತೆ ಇರಬೇಕು, ಹಾಡು ಕೇಳಿಸುತ್ತದೆ.. ಮುಟ್ಟಿಸುತ್ತದೆ ಎಂದು ಹಂಸಲೇಖ ಪತ್ರದ ಮೂಲಕ ನಾಡಿನ ಜನತೆಗೆ ವಿನಂತಿಸಿಕೊಂಡಿದ್ದಾರೆ.