ಛತ್ತೀಸ್‌ಗಢ: ಎನ್‌ಕೌಂಟರ್ ಇಬ್ಬರು ಮಹಿಳಾ ಮಾವೋವಾದಿಗಳ ಸಾವು
ರಾಯಪುರ, ಡಿ. 18: ರಾಯಪುರದ ದಾಂತೆವಾಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಭದ್ರತಾ ಪಡೆ ಸಿಬ್ಬಂದಿ ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳು ಮೃತಪಟ್ಟಿದ್ದಾರೆ.
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಂತೆವಾಡ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಶೋಧ ಕಾರ್ಯಾಚರಣೆ ನಡೆಸಿತು. ಅರನಾಪುರ ಸಮೀಪದ ಗೊಂಡೇರಾಸ್ ಅರಣ್ಯ ಪ್ರದೇಶದ ಸಮೀಪಕ್ಕೆ ಭದ್ರತಾ ಪಡೆ ಆಗಮಿಸುತ್ತಿದ್ದಂತೆ, ಮಾವೋವಾದಿಗಳು ಗುಂಡು ಹಾರಿಸಿದರು. ಭದ್ರತಾ ಪಡೆ ಯೋಧರು ಪ್ರತಿ ದಾಳಿ ನಡೆಸಿದರು. ಅನಂತರ ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಶೋಧ ನಡೆಸಿದಾಗ ಇಬ್ಬರು ಮಹಿಳಾ ಮಾವೋವಾದಿಗಳ ಮೃತದೇಹ ಪತ್ತೆಯಾಯಿತು ಎಂದು ದಾಂತೆವಾಡದ ಎಸ್‌ಪಿ ಅಭಿಷೇಕ್ ಪಲ್ಲವ ಅವರು ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಮೃತಪಟ್ಟವರನ್ನು ಸಂಘಟನೆಯ ದರ್ಭಾ ವಿಭಾಗದ ಮಲ್ಲಂಗೇರ್ ಪ್ರದೇಶ ಸಮಿತಿಯ ಸದಸ್ಯೆ ಹಿಡ್ಮೆ ಕೊಹ್ರಾಮೆ, ಹಾಗೂ ಮಲ್ಲಂಗೇರ್ ಪ್ರದೇಶ ಸಮಿತಿಯ ನಿಲಾವಾಯದ ಸಾಂಸ್ಕೃತಿಕ ತಂಡ ಚೇತನಾ ನಾಟ್ಯ ಮಂಡಳಿಯ ಮುಖ್ಯಸ್ಥೆ ಪೊಜ್ಜೆ ಎಂದು ಗುರುತಿಸಲಾಗಿದೆ. ಕೊಹ್ರಾಮೆ ಹಾಗೂ ಪೊಜ್ಜೆ ಅವರ ತಲೆಗೆ ಕ್ರಮವಾಗಿ 5 ಲಕ್ಷ ರೂ. ಹಾಗೂ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.