ಒಮೈಕ್ರಾನ್ ಭೀತಿಯಿಂದಾಗಿ ಶೇರು ಮಾರುಕಟ್ಟೆ ಪಾತಾಳಕ್ಕೆ

Update: 2021-12-20 15:51 GMT
ಸಾಂದರ್ಭಿಕ ಚಿತ್ರ:PTI

ಮುಂಬೈ,ಡಿ.20: ವಿಶ್ವಾದ್ಯಂತ ಒಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಭೀತಿಯಿಂದಾಗಿ ಹೂಡಿಕೆದಾರರು ಮಾರಾಟಕ್ಕೆ ಮುಗಿಬಿದ್ದಿದ್ದರಿಂದ ಭಾರತೀಯ ಶೇರು ಮಾರುಕಟ್ಟೆಗಳು ವಾರದ ಆರಂಭದ ದಿನವಾದ ಸೋಮವಾರವೇ ತೀವ್ರ ಆಘಾತಕ್ಕೆ ಗುರಿಯಾಗಿವೆ. ಸತತ ಎರಡನೇ ವ್ಯವಹಾರದ ದಿನವೂ ಪ್ರಮುಖ ಸೂಚ್ಯಂಕಗಳು ಭಾರೀ ಇಳಿಕೆಯಾಗಿವೆ. ಬಾಂಬೆ ಶೇರು ವಿನಿಮಯ ಕೇಂದ್ರ (ಬಿಎಸ್ಇ)ದ ಸಂವೇದಿ ಸೂಚ್ಯಂಕ 1189.73(ಶೇ.2.09) ಅಂಶಗಳಷ್ಟು ಕುಸಿದು 55,822.01ರಲ್ಲಿ ದಿನದಾಟವನ್ನು ಮುಗಿಸಿದ್ದರೆ ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್ಎಸ್ಇ)ದ ನಿಫ್ಟಿ 371(ಶೇ.2.18) ಅಂಶಗಳಷ್ಟು ಕುಸಿದು 16,614.20ರಲ್ಲಿ ಅಂತ್ಯಗೊಂಡಿದ್ದು,ಹೂಡಿಕೆದಾರರು ಕೋಟ್ಯಂತರ ರೂ.ನಷ್ಟವನ್ನು ಅನುಭವಿಸಿದ್ದಾರೆ.

ಬಿಪಿಸಿಎಲ್,ಟಾಟಾ ಸ್ಟೀಲ್,ಟಾಟಾ ಮೋಟರ್ಸ್,‌ ಇಂಡಸ್ಇಂಡ್ ಬ್ಯಾಂಕ್ ಮತ್ತು ಎಸ್‌ಬಿಐ ಹೆಚ್ಚು ಕುಸಿತವನ್ನು ದಾಖಲಿಸಿರುವ ಶೇರುಗಳಲ್ಲಿ ಸೇರಿದ್ದರೆ, ಏರಿಕೆ ಕಂಡ ಶೇರುಗಳಲ್ಲಿ ಸಿಪ್ಲಾ, ಎಚ್‌ಯುಎಲ್ ಮತ್ತು ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಸೇರಿವೆ.

ಎರಡು ದಿನಗಳಲ್ಲಿ ಶೇರು ಮಾರುಕಟ್ಟೆಗಳಲ್ಲಿಯ ಕುಸಿತದಿಂದಾಗಿ ಹೂಡಿಕೆದಾರರು 11,23,010.78 ಕೋ.ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ. ಸೋಮವಾರದ ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 1879.06 ಮತ್ತು ನಿಫ್ಟಿ 575 ಅಂಶಗಳಷ್ಟು ಕುಸಿದಿದ್ದವು.

ವಿಶ್ವಾದ್ಯಂತ ಒಮೈಕ್ರಾನ್ ಪ್ರಕರಣಗಳಲ್ಲಿ ಏರಿಕೆಯಿಂದಾಗಿ ಎರಡೂ ಸೂಚ್ಯಂಕಗಳು ಬೆಳಿಗ್ಗೆ ಆರಂಭದಲ್ಲಿಯೇ ನಷ್ಟದಲ್ಲಿದ್ದವು. ಜೊತೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರ ಮಾರಾಟದಲ್ಲಿ ತೊಡಗಿರುವುದರಿಂದ ಟ್ರೇಡರ್‌ಗಳೂ ಹೆಚ್ಚಿನ ಎಚ್ಚರಿಕೆಯಿಂದ ವ್ಯವಹರಿಸಿದ್ದರು. ವಿದೇಶಿ ಹೂಡಿಕೆದಾರರು ಡಿಸೆಂಬರ್ನಲ್ಲಿ ಈವರೆಗೆ 17,696 ಕೋ.ರೂ.ಗಳನ್ನು ಭಾರತೀಯ ಮಾರುಕಟ್ಟೆಗಳಿಂದ ಹಿಂದೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News