ವಿಚ್ಛೇದನ ಕೋರಿದ್ದ ದಂಪತಿಗಳಿಗೆ ನ್ಯಾಯಾಧೀಶೆಯಿಂದ ಮರುಮದುವೆ
ವಿಜಯಪುರ, ಡಿ.23: ವಿಚ್ಛೇದನ ಕೋರಿದ್ದ ಎರಡು ಜೋಡಿಗೆ ವಿಜಯಪುರದಲ್ಲಿ ನಡೆದ ಮೆಗಾ ಲೋಕ ಅದಾಲತ್ ಆಯೋಜನೆಯಿಂದ ಮರು ಮದುವೆಯಾಗಿದ್ದು, ಸಂಸಾರಕ್ಕೆ ಮರುಜೀವ ದೊರತಿದೆ.
ಮೆಗಾ ಅದಾಲತ್‍ನಲ್ಲಿ ಜೀವನಾಂಶ ಹಾಗೂ ವಿಚ್ಛೇದನ ಕೋರಿ ಎರಡು ಪ್ರತ್ಯೇಕ ಅರ್ಜಿ ದಾಖಲಾಗಿದ್ದವು. ಈ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶೆ ಕೆ. ಭಾಗ್ಯ ಅವರು, ಎರಡು ದಂಪತಿಗೆ ಒಂದಾಗಿ ಬಾಳ್ವೆ ನಡೆಸಿದರೆ ಆಗುವ ತೃಪ್ತಿ ಬಗ್ಗೆ ಬುದ್ಧಿವಾದ ಹೇಳಿದರು. ಇದಕ್ಕೆ ಒಪ್ಪಿದ ಎರಡು ದಂಪತಿ ತಮ್ಮ ಅರ್ಜಿಗಳನ್ನು ವಾಪಸ್ ಪಡೆದುಕೊಂಡರು.
ಮರು ಮದುವೆ ಮಾಡಿಕೊಳ್ಳಲು ಒಪ್ಪಿದ ಎರಡು ಜೋಡಿ ಹೆಸರು ಬಹಿರಂಗ ಪಡಿಸಲು ನ್ಯಾಯಾಧೀಶರು ನಿರಾಕರಿಸಿದರು. ಈ ವೇಳೆ ತಮ್ಮ ಅನುಭವವನ್ನು ಹಂಚಿಕೊಂಡ ದಂಪತಿ ಮೆಗಾ ಅದಾಲತ್‍ನಲ್ಲಿ ನಡೆದ ಸಂಧಾನ ಪ್ರಕ್ರಿಯೆ ತಮಗೆ ಬದುಕಿನ ಪಾಠ ಕಲಿಸಿಕೊಟ್ಟಿದೆ.
ಭವಿಷ್ಯದ ದಿನಗಳಲ್ಲಿ ಚಿಕ್ಕಪುಟ್ಟ ಮನಸ್ತಾಪಕ್ಕೆ ನ್ಯಾಯಾಲಯದ ಮೆಟ್ಟಿಲೇರುವುದಿಲ್ಲ. ನ್ಯಾಯಾಧೀಶೆ ಕೆ. ಭಾಗ್ಯ ಅವರು, ದಂಪತಿ ಒಂದಾಗಿ ಇರುವ ಪಾಠ ಹೇಳಿಕೊಟ್ಟಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ನಂತರ ಖುದ್ದು ನ್ಯಾಯಾಧೀಶರು ದಂಪತಿಗೆ ಆರತಿ ಬೆಳಗಿ ಶುಭಕೋರಿದರು. ಆಮೇಲೆ ದಂಪತಿ ಪರಸ್ಪರ ಹೂ ಮಾಲೆ ಬದಲಿಸಿಕೊಂಡು ಮರು ಮದುವೆ ಮಾಡಿಕೊಂಡರು.