ನಾಟಿವೈದ್ಯೆ ಪದ್ಮಾವತಿ ಆಚಾರ್ಯಗೆ ಜಾನಪದ ಅಕಾಡಮಿ ಗೌರವ ಪುರಸ್ಕಾರ
Update: 2022-01-22 15:37 GMT
ಉಡುಪಿ, ಜ. 22: ಕರ್ನಾಟಕ ಜಾನಪದ ಅಕಾಡಮಿಯ 2021ನೇ ಸಾಲಿನ ಗೌರವ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯಿಂದ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿಯ ನಾಟಿವೈದ್ಯೆ ಪದ್ಮಾವತಿ ಆಚಾರ್ಯ ಆಯ್ಕೆಯಾಗಿದ್ದಾರೆ.
ಇವರು ತಮ್ಮ ಪರಿಣಾಮಕಾರಿ ನಾಟಿ ಔಷಧದ ಮೂಲಕ ಅನೇಕ ಕಾಯಿಲೆ ಗಳನ್ನು ಗುಣಪಡಿಸಿದ್ದಾರೆ. ಸರ್ಪಸುತ್ತು, ವಾತ, ಮಕ್ಕಳ ಚಿಹ್ನೆ ಕಾಯಿಲೆ, ಪಾರ್ಶ್ವ ವಾಯು, ಹಲ್ಲುನೋವು, ಕಿವಿನೋವು, ನಿದ್ರೆ ಬಾರದಿರುವುದು, ಕೂದಲು ಉದುರುವಿಕೆ, ಹೊಟ್ಟೆನೋವು, ಕಜ್ಜಿ ಮೊದಲಾದ ಕಾಯಿಲೆಗಳಿಗೆ ಈಶ್ವರ ಬೇರು, ಗರುಡಪಾತಾಳ, ಚೂರಿಮುಳ್ಳು, ನಿಂಬೆರಸ, ತೆಂಗಿನ ಎಣ್ಣೆ, ಅರಸಿನ, ಶ್ರೀಗಂಧ, ಅಮೃತಬಳ್ಳಿ ಮೊದಲಾದ ಗಿಡಮೂಲಿಕೆಗಳಿಂದ ತಯಾರಿಸಿದ ಮದ್ದನ್ನು ನೀಡುತ್ತಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಹಲವು ಸಂಘಸಂಸ್ಥೆಗಳು ಗೌರವ ಸನ್ಮಾನ ಮಾಡಿದೆ. ಇದೀಗ ಇವರಿಗೆ ರಾಜ್ಯಮಟ್ಟದ ಗೌರವ ದೊರೆತಿದ್ದು, ಈ ಬಗ್ಗೆ ಪದ್ಮಾವತಿ ಆಚಾರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.