ಅಂಬೇಡ್ಕರ್ ಫೋಟೋ ತೆರವು ಗೋಲ್ವಾಳ್ಕರ್‌ವಾದಿಗಳ ಹುನ್ನಾರ: ಪ್ರೊ.ಫಣಿರಾಜ್

Update: 2022-01-28 15:53 GMT

ಉಡುಪಿ, ಜ.28: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವ ಚಿತ್ರ ತೆರವುಗೊಳಿಸಿರುವುದು ಮತ್ತು ಈ ಕಾರ್ಯಕ್ರಮದಲ್ಲಿ ಗಾಂಧಿ ಫೋಟೋ ಬಿಟ್ಟು ಬೇರೆ ಯಾರ ಫೋಟೋ ಇಡಬಾರದೆಂದು ಹೈಕೋರ್ಟ್ ರಿಜಿಸ್ಟ್ರಾರ್ ಆದೇಶ ಹೊರಡಿಸಿರುವುದು ಬಹಳ ದೊಡ್ಡ ಸ್ಕಾಮ್ ಆಗಿದೆ. ಇದು ಆರೆಸ್ಸೆಸ್ ಹಾಗೂ ಗೋಲ್ವಾಳ್ಕರ್‌ ವಾದಿಗಳ ಹುನ್ನಾರವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಮಗ್ರ ತನಿಖೆ ನಡೆಸಬೇಕು ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಒತ್ತಾಯಿಸಿದ್ದಾರೆ.

ರಾಯಚೂರಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇರಿಸಿದ್ದ ಅಂಬೇಡ್ಕರ್ ಭಾವಚಿತ್ರ ತೆರವು ಗೊಳಿಸಿ ಧ್ವಜಾರೋಹಣ ಮಾಡಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಶುಕ್ರವಾರ ಹಮ್ಮಿಕೊಳ್ಳಲಾದ ಪ್ರತಿಭಟನೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಹೈಕೋರ್ಟ್ ರಿಜಿಸ್ಟ್ರಾರ್ ಈ ರೀತಿಯ ಆದೇಶ ಹೊರಡಿಸಿದ್ದರೆ ಅದು ಸಂವಿಧಾನ ಆಧಾರದಲ್ಲಿಯೇ ಅಥವಾ ಬೇರೆಯವರ ಕುಮ್ಮಕ್ಕಿನಿಂದ ಹೊರಡಿಸಿ ದ್ದಾರೆಯೇ ಎಂಬುದು ಬಹಿರಂಗವಾಗಬೇಕು. ಇನ್ನು ಮುಂದೆ ಗಣರಾಜ್ಯೋತ್ಸವದಲ್ಲಿ ಅಂಬೇಡ್ಕರ್ ಫೋಟೋವನ್ನು ಕಡ್ಡಾಯವಾಗಿ ಇಡಬೇಕೆಂಬ ಒತ್ತಾಯ ವನ್ನು ಸರಕಾರಕ್ಕೆ ಮಾಡಬೇಕು ಎಂದರು.

ದಲಿತ ಚಿಂತಕ ನಾರಾಯಣ ಮಣೂರು ಮಾತನಾಡಿ, ಅಂಬೇಡ್ಕರ್ ಮೇಲಿನ ಧ್ವೇಷ ಹಾಗೂ ಸಂವಿಧಾನದ ಕುರಿತ ಅಸಮಾಧಾನ ಇವತ್ತು ನಿನ್ನೆ ಹುಟ್ಟಿ ಕೊಂಡದಲ್ಲ. ಸಂವಿಧಾನ ರಚನೆ ಕ್ರಿಯೆ ಆರಂಭವಾಗಿರುವುದರಿಂದ ಈ ದೇಶದ ಮನುವಾದಿಗಳು ಅಂಬೇಡ್ಕರ್ ವಿಚಾರಧಾರೆಯನ್ನು ತಿರಸ್ಕರಿಸಿದ್ದಾರೆ. ಆದು ದರಿಂದ ಮನುವಾದಿ ಗಳ ಈ ಎಲ್ಲ ಹುನ್ನಾರವನ್ನು ಹಿಂದುಳಿದವರ್ಗದವರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ದೇಶದ ಮನುವಾದಿಗಳು ಈ ಹಿಂದೆ ಮಾಡಿರುವ ಪ್ರತಿಯೊಂದು ಹಿಡನ್ ಅಜೆಂಡಾಗಳ ಮುಂದುವರೆದ ಭಾಗ ಇದಾಗಿದೆ. ಹಾಗಾಗಿ ಈ ನ್ಯಾಯಾಧೀಶರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಬಿಜೆಪಿ ಸರಕಾರ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಯನ್ನಾಗಿ ಪದನ್ನೋತಿ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಆ ಮಟ್ಟದಲ್ಲಿ ಸರಕಾರ ಹಾಗೂ ಬಿಜೆಪಿ ಮುಖಂಡರು ಈ ವಿಚಾರದಲ್ಲಿ ವೌನವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬರಹಗಾರ ಸಂವರ್ಥ್ ಸಾಹಿಲ್, ನ್ಯಾಯವಾದಿ ಮಂಜುನಾಥ್ ವಿ., ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಮಾತನಾಡಿದರು.

ಪ್ರತಿಭಟನೆಯಲ್ಲಿ ದಸಂಸ ಸಂಘಟನಾ ಕಾರ್ಯದರ್ಶಿ ಶ್ಯಾಮ್‌ರಾಜ್ ಬಿರ್ತಿ, ದಲಿತ ಮುಖಂಡರಾದ ಪರಮೇಶ್ವರ ಉಪ್ಪೂರು, ಶಿವಾನಂದ ಮೂಡ ಬೆಟ್ಟು, ಮುಸ್ಲಿಮ್ ಒಕ್ಕೂಟದ ಮಾಜಿ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಇದ್ರೀಸ್ ಹೂಡೆ, ಹುಸೈನ್ ಕೋಡಿಬೆಂಗ್ರೆ, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ಮೊದಲಾದವರು ಉಪಸ್ಥಿತರಿದ್ದರು.

ಅಣಕು ಶವಯಾತ್ರೆ- ಪ್ರತಿಕೃತಿ ದಹನ

ಪ್ರತಿಭಟನೆಯ ಕೊನೆಯಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನಕಾರರು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿದರು.

ಬಳಿಕ ಆಕ್ರೋಶಿತ ದಸಂಸ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ನ್ಯಾಯಾಧೀಶರ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿದರು. ತದನಂತರ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

''ಸಂವಿಧಾನ ಹಾಗೂ ಅಂಬೇಡ್ಕರ್ ವಿಚಾರಧಾರೆಯನ್ನು ಕಡೆಗಣಿಸಿರುವ ಈ ನ್ಯಾಯಾಧೀಶರ ಚಿಂತನೆ ಮನುವಾದಿಯಾಗಿದೆ. ಆದುದರಿಂದ ಈ ಕೊಳಕು ಮನಸ್ಸಿನ ಮನುವಾದಿ ನ್ಯಾಯಾಧೀಶರಿಂದ ಎಸ್ಸಿಎಸ್ಟಿ ಸಮುದಾಯದ ಪ್ರಕರಣ ದಲ್ಲಿ ಯಾವ ರೀತಿಯ ನ್ಯಾಯ ನಿರೀಕ್ಷಿಸಲು ಸಾಧ್ಯ''.
-ಸುಂದರ್ ಮಾಸ್ತರ್, ದಸಂಸ ಮುಖಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News