ಕವಿ ಡಾ.ಸಿದ್ದಲಿಂಗಯ್ಯ ಹೆಸರಿನಲ್ಲಿ ಪ್ರಶಸ್ತಿ ಘೋಷಿಸಿದ ರಾಜ್ಯ ಸರಕಾರ

Update: 2022-01-29 14:43 GMT
ಕವಿ ಡಾ.ಸಿದ್ದಲಿಂಗಯ್ಯ

ಬೆಂಗಳೂರು, ಜ.29: ಕನ್ನಡ ಸಾಹಿತ್ಯದ ಕವಿ ಡಾ.ಸಿದ್ದಲಿಂಗಯ್ಯ ಹೆಸರಿನಲ್ಲಿ ನಾಡೋಜ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರಶಸ್ತಿಯು ಐದು ಲಕ್ಷ ರೂ. ನಗದು, ಫಲಕ, ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲವನ್ನು ಒಳಗೊಂಡಿರುತ್ತದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ವಾರ್ಷಿಕ ಪ್ರಶಸ್ತಿಗಳ ಸಾಮಾನ್ಯ ನಿಯಮಾವಳಿಗಳು ಈ ಪ್ರಶಸ್ತಿಗೂ ಅನ್ವಯವಾಗಲಿದ್ದು, ಪಠ್ಯ ಪುಸ್ತಕ, ಸಂಶೋಧನಾ ಪ್ರಬಂಧ, ಪುಸ್ತಕ ಲೇಖಕರನ್ನು ಹಾಗೂ ಸಹ ಲೇಖಕರನ್ನು ಪ್ರಶಸ್ತಿಗೆ ಪರಿಗಣಿಸುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ತಳ ವರ್ಗದ ಸೃಜನಶೀಲ ಲೇಖಕ ಹಾಗೂ ಶೋಷಿತ ತಳ ಸಮುದಾಯಗಳ ಧ್ವನಿಯಾಗಿ ಶ್ರಮಿಸಿದ ಸೃಜನಶೀಲ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು. ವಿಶಿಷ್ಟ ಸಂದರ್ಭಗಳಲ್ಲಿ ಸೂಚಿತ ಆಶಯಗಳಿಗೆ ಪೂರಕವಾಗಿ ಸಾಧನೆಗೈದ ಅನ್ಯ ಲೇಖಕರನ್ನು ಪರಿಗಣಿಸಬಹುದಾಗಿದ್ದು, ಒಂದು ವರ್ಷ ಕನ್ನಡ ಲೇಖಕರಿಗೂ ಮತ್ತೊಂದು ವರ್ಷ ಅನ್ಯ ರಾಜ್ಯಗಳ ಕನ್ನಡೇತರ ಭಾಷೆಗಳ ಲೇಖಕರಿಗೆ ಕೊಡಬೇಕು. ಹಾಗೆಯೇ ಪ್ರಶಸ್ತಿ ಆಯ್ಕೆಗೆ ಪರಿಗಣಿಸುವ ಸಾಧಕರು ಕನಿಷ್ಠ 10 ರಿಂದ 15 ವರ್ಷಗಳ ಸೇವೆ ಸಲ್ಲಿಸಿರಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ನಾಡೋಜ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ ಆಯ್ಕೆ ಉಪಸಮಿತಿ ಹಾಗೂ ಮಾರ್ಗಸೂಚಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಸ್ಪಂದಿಸುವ ಹಿರಿಯ ಲೇಖಕರು ಆಯ್ಕೆ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಗುವುದು. ಒಬ್ಬ ಪ್ರಾಧ್ಯಾಪಕ, ಒಬ್ಬ ಹಿರಿಯ ಕವಿ ಅಥವಾ ಲೇಖಕ ಹಾಗೂ ಶೋಷಿತ ಸಮುದಾಯಗಳ ನಡುವೆ ಸಾಮಾಜಿಕ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಾಧಕರೊಬ್ಬರು ಸದಸ್ಯರಾಗಿ ನೇಮಕವಾಗಲಿದ್ದು, ಸಮಿತಿಯಲ್ಲಿ ಒಬ್ಬರು ಮಹಿಳಾ ಸದಸ್ಯರಿರಬೇಕು ಎಂದು ತಿಳಿಸಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರಶಸ್ತಿ ಆಯ್ಕೆ ಉಪಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News