ವಿದ್ಯಾರ್ಥಿನಿಯರು ಕಾಲೇಜಿನ ಶಿಸ್ತು, ನಿಯಮ ಮೀರಿದ್ದಾರೆ: ಪ್ರಾಂಶುಪಾಲ ರುದ್ರೇಗೌಡ ಆರೋಪ

Update: 2022-02-11 14:23 GMT

ಉಡುಪಿ, ಫೆ.11: ಕಾಲೇಜಿನ ಶಿಸ್ತು ನಿಯಮವನ್ನು ವಿದ್ಯಾರ್ಥಿನಿಯರು ಮೀರಿದ್ದಾರೆ. ಅಶಿಸ್ತಿನ ವರ್ತನೆಯನ್ನು ನಾವು ಒಂದು ತಿಂಗಳ ಕಾಲ ಸಹಿಸಿದ್ದೇವೆ. ಆಡಳಿತ ಮಂಡಳಿ ಹಾಗೂ ಕಾಲೇಜಿನ ತಾಳ್ಮೆ ಪರೀಕ್ಷೆ ಮಾಡಲು ಹೊರಟಿದ್ದಾರೆ ಎಂದು ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಎಸ್. ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯರ ವರ್ತನೆ ನೋಡುವಾಗ ಇವರು ನಮ್ಮವರಾ ಎಂಬ ಸಂಶಯ ಬರುತ್ತಿದೆ. ಕಾಲೇಜ್ ಕ್ಯಾಂಪಸ್ ಒಳಗೆ ಎಬಿವಿಪಿ- ಸಿಎಫ್‌ಐಗೆ ಪ್ರವೇಶ ಇಲ್ಲ. ನಾವು ಯಾವುದೇ ಸಂಘಟನೆಗಳಿಗೆ ಅವಕಾಶ ನೀಡುವುದಿಲ್ಲ. ಶಿಸ್ತಿನಲ್ಲಿದ್ದ ಕಾಲೇಜಿನಲ್ಲಿ ಅಶಿಸ್ತು ನಡೆದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಾಲೇಜು ಚರ್ಚೆಯಾಗಿದೆ ಎಂದರು.

ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವವರು ಇನ್ನಾದರೂ ಅವರ ಕೆಲಸ ನಿಲ್ಲಿಸಲಿ. ನಮ್ಮ ಮೇಲೆ ಏನೇ ಆರೋಪ ಮಾಡಿದರೂ ನಮ್ಮ ವಿದ್ಯಾರ್ಥಿನಿಯರ ಬಗ್ಗೆ ನಮಗೆ ಬಹಳ ಅನುಕಂಪ ಇದೆ. ಕಾಲೇಜಿನ 30 ವರ್ಷದ ಹೆಸರು ಉಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News