ಉತ್ತರಪ್ರದೇಶದಲ್ಲಿ ಬೀಡಾಡಿ ದನಗಳ ಸಮಸ್ಯೆ

Update: 2022-02-15 19:30 GMT
ಸಾಂದರ್ಭಿಕ ಚಿತ್ರ (Source: PTI)

ಉತ್ತರಪ್ರದೇಶದಲ್ಲಿ ಬೀಡಾಡಿ ದನಗಳ ಸಮಸ್ಯೆ ಎಷ್ಟು ತೀವ್ರವಾಗಿದೆಯೆಂದರೆ, ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಬೀಡಾಡಿ ದನಗಳನ್ನು ಹಿಡಿಯಲು ಜನವರಿ 1ರಿಂದ 10ರವರೆಗೆ ವಿಶೇಷ ಅಭಿಯಾನವೊಂದನ್ನು ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಉದ್ದೇಶಕ್ಕೆ 10 ದಿನಗಳು ಸಾಕಾಗುವುದಿಲ್ಲ ಎನ್ನುವುದನ್ನು ಮನಗಂಡ ಅವರು ಅವಧಿಯನ್ನು ಇನ್ನೂ ಒಂದು ವಾರ ವಿಸ್ತರಿಸಿದರು.

 ಹಳ್ಳಿಗಳಲ್ಲಿರುವ ದನಗಳನ್ನು ಲಕ್ನೊಗೆ ಕೊಂಡೊಯ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ನಿವಾಸದಲ್ಲಿ ಕಟ್ಟಿಹಾಕುವಂತೆ ಒತ್ತಾಯಿಸಿ, ಸೋಶಿಯಲಿಸ್ಟ್ ಕಿಸಾನ್‌ಸಭಾ ಎನ್ನುವ ರೈತ ಸಂಘಟನೆಯೊಂದು ಒಂದು ವರ್ಷದಿಂದ ಹರ್ದೋಯಿ, ಉನ್ನಾವೊ ಮತ್ತು ಬಾರಾಬಂಕಿ ಜಿಲ್ಲೆಗಳಲ್ಲಿ ಅಭಿಯಾನವೊಂದನ್ನು ನಡೆಸುತ್ತಿದೆ. ಪ್ರತಿ ಬಾರಿ ಗ್ರಾಮಸ್ಥರು ಈ ಜಿಲ್ಲೆಗಳಿಂದ ಲಕ್ನೊಗೆ ಮೆರವಣಿಗೆ ಆರಂಭಿಸಿದಾಗ ಪೊಲೀಸರು ಮತ್ತು ಜಿಲ್ಲಾಡಳಿತ ಮಧ್ಯ ಪ್ರವೇಶಿಸುತ್ತದೆ. ಅಧಿಕಾರಿಗಳು ವಾಹನಗಳನ್ನು ತರಿಸಿ ಅದರಲ್ಲಿ ದನಗಳನ್ನು ಸಮೀಪದ ಗೋಶಾಲೆಗಳಿಗೆ ಸಾಗಿಸುತ್ತಾರೆ. ಈ ಅಭಿಯಾನವು ಕಳೆದ ವರ್ಷದ ಡಿಸೆಂಬರ್ ಕೊನೆಯ ವೇಳೆಗೆ ತೀವ್ರಗೊಂಡಿತು. ಹರ್ದೋಯಿ ಜಿಲ್ಲೆಯ ಭಾರವಾನ್ ವಿಭಾಗದ ಹಲವು ಗ್ರಾಮಗಳ ಗ್ರಾಮಸ್ಥರು 250-300 ದನಗಳೊಂದಿಗೆ ಒಟ್ಟು ಸೇರಿದರು. ಅವುಗಳನ್ನು ಜಿಲ್ಲಾಡಳಿತವು ತೆಗೆದುಕೊಂಡು ಹೋಗುತ್ತದೆ ಎನ್ನುವುದು ಅವರ ನಿರೀಕ್ಷೆಯಾಗಿತ್ತು. ಜನವರಿ 1, 4 ಮತ್ತು 5ರಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಮುಖ್ಯಮಂತ್ರಿ ನಿವಾಸದತ್ತ ನಡೆಯಲು ಆರಂಭಿಸಿದರು.

ಹರ್ದೋಯಿ ಜಿಲ್ಲಾಡಳಿತಕ್ಕೆ ಏನು ಮಾಡುವುದೆಂದು ತೋಚಲಿಲ್ಲ. ವಿವಿಧ ಗ್ರಾಮಗಳಲ್ಲಿ ಜನರು ಒಟ್ಟು ಹಾಕಿದ್ದ ಹೆಚ್ಚಿನ ಸಂಖ್ಯೆಯ ದನಗಳನ್ನು ನಿಭಾಯಿಸಲು ಅಧಿಕಾರಿಗಳು ಸಿದ್ಧರಾಗಿರಲಿಲ್ಲ. ಆಗ ಅಧಿಕಾರಿಗಳು ಗ್ರಾಮಸ್ಥರಿಗೆ ಪೊಳ್ಳು ಭರವಸೆಗಳನ್ನು ನೀಡಲು ಆರಂಭಿಸಿದರು. ಅಂತಿಮವಾಗಿ, ತಳ ಸ್ತರದ ಜನ ಪ್ರತಿನಿಧಿಗಳಾಗಿರುವ ಗ್ರಾಮ ಪ್ರಧಾನರ ಮೇಲೆ ತಮ್ಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ತಾತ್ಕಾಲಿಕ ಗೋಶಾಲೆಗಳನ್ನು ಆರಂಭಿಸುವಂತೆ ಒತ್ತಡ ಹೇರಲಾಯಿತು.

2021ರಲ್ಲಿ, ಸೋಶಿಯಲಿಸ್ಟ್ ಕಿಸಾನ್ ಸಭಾ ಬೀಡಾಡಿ ದನಗಳ ಕುರಿತ ಅಭಿಯಾನ ಆರಂಭಿಸಿದ ಬಳಿಕ, ಏಳು ಗ್ರಾಮ ಪಂಚಾಯತ್‌ಗಳಲ್ಲಿ ಖಾಯಂ ಗೋಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಸಂದಿಲ ತಾಲೂಕಿನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತೆಗೆದುಕೊಂಡರು. ಆ ಗ್ರಾಮಗಳೆಂದರೆ ಸಯ್ಯಾಪುರ್, ಮಹುವದಂಡ, ದಂಡ, ಜಾಜುಪುರ್, ಬಹೇರಿಯ, ಸಾಗರ್ ಗದಿ ಮತ್ತು ಜಗ್ಸಾರ. ಆದರೆ, ಈ ವಿಷಯದಲ್ಲಿ ಆ ಗ್ರಾಮಗಳ ಗ್ರಾಮ ಪ್ರಧಾನರುಗಳು ಈ ಬಗ್ಗೆ ಉತ್ಸುಕರಾಗಿರಲಿಲ್ಲ. ಹಾಗಾಗಿ, ಇದಕ್ಕೆ ಸಂಬಂಧಿಸಿದ ನಿರ್ಣಯವನ್ನು ಅನುಮೋದಿಸಲು ಈ ಗ್ರಾಮಗಳ ಜಮೀನು ನಿರ್ವಹಣಾ ಸಮಿತಿಗಳು ನಿರಾಕರಿಸಿದವು. ಯಾಕೆಂದರೆ, ತಮ್ಮ ಗ್ರಾಮಗಳಲ್ಲಿ ಖಾಯಂ ಗೋಶಾಲೆಗಳನ್ನು ಸ್ಥಾಪಿಸಿದರೂ, ಅವುಗಳ ನಿರ್ವಹಣೆಗೆ ಜಿಲ್ಲಾಡಳಿತದಿಂದ ಹಣ ಬರುವ ಬಗ್ಗೆ ಈ ಗ್ರಾಮ ಪಂಚಾಯತ್‌ಗಳಿಗೆ ವಿಶ್ವಾಸವಿಲ್ಲ.

ಗೋಶಾಲೆಯನ್ನು ನಡೆಸಲು ಆರಂಭದಲ್ಲಿ ನನ್ನ ಕಿಸೆಯಿಂದಲೇ ನಾನು ಹಣ ಹಾಕಬೇಕಾಯಿತು ಎಂದು ಸಹಂಗ್ವ ಗ್ರಾಮದ ಗ್ರಾಮ ಪ್ರಧಾನ ಮುಹಮ್ಮದ್ ಸಯೀದ್ ಹೇಳುತ್ತಾರೆ. ಬಳಿಕ, ಗೋಶಾಲೆಯ ಖರ್ಚಿನ ಒಂದು ಭಾಗವನ್ನು ಮಾತ್ರ ನೀಡಲು ಜಿಲ್ಲಾಡಳಿತ ನಿರ್ಧರಿಸಿತು. ಖಾಯಂ ಗೋಶಾಲೆಯನ್ನು ಸ್ಥಾಪಿಸಿದ ಬಳಿಕ ಅದನ್ನು ನಡೆಸಲು ಸರಕಾರದಿಂದ ಸಾಕಷ್ಟು ನಿಧಿ ಸಿಗದಿದ್ದರೆ ದನಗಳು ಹಸಿವೆಯಿಂದ ಬಳಲುತ್ತವೆ ಎಂಬುದಾಗಿ ಪ್ರಧಾನರು ಅಭಿಪ್ರಾಯಪಡುತ್ತಾರೆ. ಗೋಶಾಲೆಗಳಲ್ಲಿ ದನಗಳು ಸತ್ತರೆ ಅದರ ಹೊಣೆಯನ್ನು ವಹಿಸಿಕೊಳ್ಳಲು ಯಾರೂ ತಯಾರಿಲ್ಲ. ಪ್ರತಿ ದನಕ್ಕೆ ಒಂದು ದಿನಕ್ಕೆ 30 ರೂಪಾಯಿ ನೀಡಲಾಗುತ್ತದೆ ಎಂಬುದಾಗಿ ರಾಜ್ಯ ಸರಕಾರ ಜಾಹೀರಾತು ನೀಡುತ್ತದೆ. ಆದರೆ, ಆ ಹಣ ಮಾತ್ರ ಸಿಗುವುದಿಲ್ಲ.

 ವಾಸ್ತವ ಸಂಗತಿಯೆಂದರೆ, ರೈತನೊಬ್ಬ ತನ್ನ ನಿರುಪಯುಕ್ತ ದನವನ್ನು ಗೋಶಾಲೆಯೊಂದಕ್ಕೆ ತೆಗೆದುಕೊಂಡು ಹೋದರೆ ಅಲ್ಲಿ ಅದನ್ನು ಸೇರ್ಪಡೆ ಮಾಡಿಕೊಳ್ಳಲು 200ರಿಂದ 500 ರೂಪಾಯಿ ಲಂಚ ನೀಡಬೇಕಾದ ಪರಿಸ್ಥಿತಿಯಿದೆ. ಈ ಗೋಶಾಲೆಗಳಲ್ಲಿ ಉಸ್ತುವಾರಿಗಳಾಗಿ ನೇಮಕಗೊಂಡವರಿಗೆ ಅವರ ಗೌರವ ಧನವನ್ನು ನಿಯಮಿತವಾಗಿ ನೀಡಲಾಗುತ್ತಿಲ್ಲ. ಹಾಗಾಗಿ, ತಾವು ಬದುಕಲು ಬೇಕಾದ ವರಮಾನವನ್ನು ಸಂಪಾದಿಸಲು ಸ್ವಲ್ಪ ಸಮಯದ ಬಳಿಕ ದನಗಳನ್ನು ಬಿಟ್ಟು ಬಿಡುವುದಲ್ಲದೆ ಬೇರೆ ಆಯ್ಕೆ ಅವರಿಗಿಲ್ಲ. ಈ ಗೋವುಗಳು ಬಳಿಕ ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುತ್ತವೆ. ಇಲ್ಲಿ ರೈತರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ತಮ್ಮ ಬೆಳೆಗಳನ್ನು ರಕ್ಷಿಸಲು ಅವರು ಇಡೀ ರಾತ್ರಿ ಎಚ್ಚರದಿಂದಿರಬೇಕಾಗುತ್ತದೆ. ಕೆಲವು ರೈತರು ತಮ್ಮ ಹೊಲಗಳ ಸುತ್ತ ಬ್ಲೇಡ್‌ಗಳನ್ನೊಳಗೊಂಡ ತಂತಿಯ ಬೇಲಿ ಹಾಕಿದ್ದಾರೆ. ಆದರೆ, ಇದನ್ನು ಉತ್ತರಪ್ರದೇಶ ರಾಜ್ಯ ಸರಕಾರ ನಿಷೇಧಿಸಿದೆ. ಯೋಗಿ ಸರಕಾರವು ಪ್ರತೀಕಾರಾತ್ಮಕ ನೀತಿಗಳಿಗೆ ಪ್ರಸಿದ್ಧವಾಗಿದೆ. ಬೀಡಾಡಿ ದನಗಳ ಸಮಸ್ಯೆಯನ್ನು ಪರಿಹರಿಸುವ ಬದಲು ಅವರು ಬ್ಲೇಡ್‌ಯುಕ್ತ ತಂತಿ ಬೇಲಿ ಹಾಕಿರುವುದಕ್ಕಾಗಿ ರೈತರನ್ನು ಶಿಕ್ಷಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ರೈತರಿಗೆ ದಂಡ ವಿಧಿಸಲಾಗುತ್ತದೆ.

ಯೋಗಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ, ದನಗಳನ್ನು ರಕ್ಷಿಸುವ ತನ್ನ ಉದ್ದೇಶವನ್ನು ಅದು ಘೋಷಿಸಿತು. ಇದರಿಂದ ಉತ್ತೇಜನಗೊಂಡ ‘ಗೋರಕ್ಷಕರು’ ದನಗಳೊಂದಿಗೆ ಹೋಗುವ ಎಲ್ಲರಿಗೂ ಹೊಡೆಯಲಾರಂಭಿಸಿದರು. ಅವರೆಲ್ಲರೂ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆನ್ನುವುದು ಅವರ ಭಾವನೆಯಾಗಿತ್ತು. ಇದರಿಂದಾಗಿ ಜಾನುವಾರು ವ್ಯಾಪಾರ ಒಮ್ಮೆಲೆ ಕೊನೆಗೊಂಡಿತು ಹಾಗೂ ಬೀಡಾಡಿ ದನಗಳು 2017ರಲ್ಲೇ ರೈತರಿಗೆ ಹೊರೆಯಾದವು.

ರೈತರಿಗೆ ಮೂರು ಕಂತುಗಳಲ್ಲಿ ವರ್ಷವೊಂದಕ್ಕೆ 6,000 ರೂಪಾಯಿ ಕಿಸಾನ್ ಸಮ್ಮಾನ್ ನಿಧಿಯನ್ನು ನೀಡಲಾಗುತ್ತದೆ. ಇದನ್ನು ಬೀಡಾಡಿ ದನಗಳಿಂದ ಆಗಿರುವ ಹಾನಿಗಾಗಿ ರೈತರಿಗೆ ನೀಡಲಾಗುತ್ತಿರುವ ಪರಿಹಾರ ಎಂಬುದಾಗಿ ಭಾವಿಸಬಹುದಾಗಿದೆ. ಆದರೆ, ನೀಡಬೇಕಾದ ವಾಸ್ತವಿಕ ಪರಿಹಾರ ಇದಕ್ಕಿಂತ ತುಂಬಾ ಹೆಚ್ಚಾಗಿರಬೇಕು. ಉದಾಹರಣೆಗೆ; ಒಂದು ಎಕರೆ ಹೊಲದಲ್ಲಿ 18-20 ಕ್ವಿಂಟಾಲ್ ಭತ್ತ ಅಥವಾ ಗೋಧಿ ಬೆಳೆಯುತ್ತದೆ ಎಂದಾದರೆ, ಕನಿಷ್ಠ ಬೆಂಬಲ ಬೆಲೆಯ ಆಧಾರದಲ್ಲಿ ರೈತನಿಗೆ ಎಕರೆಗೆ 40,000 ರೂಪಾಯಿ ಪರಿಹಾರ ನೀಡಬೇಕಾಗುತ್ತದೆ. ಕಿಸಾನ್ ಸಮ್ಮಾನ್ ನಿಧಿಯು ರೈತರ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ರೂಪಿಸಲಾದ ನಿಯಂತ್ರಣ ಕವಾಟವಾಗಿದೆ.

ಭಾರೀ ಸಂಖ್ಯೆಯ ಬೀಡಾಡಿ ದನಗಳೊಂದಿಗೆ ರೈತರು ಮುಖ್ಯಮಂತ್ರಿಯ ನಿವಾಸದತ್ತ ಮೆರವಣಿಗೆಯನ್ನು ಆರಂಭಿಸಿದಾಗ ಅಧಿಕಾರಿಗಳು ಅಲ್ಲಿಗೆ ವಾಹನಗಳೊಂದಿಗೆ ಧಾವಿಸುತ್ತಾರೆ ಹಾಗೂ ದನಗಳನ್ನು ವಾಹನಕ್ಕೆ ತುಂಬಿಸುತ್ತಾರೆ. ಆದರೆ, ಅಸ್ತಿತ್ವದಲ್ಲಿರುವ ಎಲ್ಲ ಗೋಶಾಲೆಗಳಲ್ಲಿ ದನಗಳು ತುಂಬಿ ತುಳುಕುತ್ತಿವೆ. ಹಾಗಾದರೆ, ವಾಹನಗಳಿಗೆ ತುಂಬಿಸಿಕೊಂಡಿರುವ ದನಗಳನ್ನು ಏನು ಮಾಡುವುದು? ದಾರಿ ಮಧ್ಯೆ ಅವುಗಳನ್ನು ಇಳಿಸಿ ಹೋಗುತ್ತಾರೆ. ಅಂದರೆ, ಈ ಸಮಸ್ಯೆಯನ್ನು ಅವರು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ವರ್ಗಾಯಿಸುತ್ತಾರೆ.

ಸಮಸ್ಯೆಯ ಪ್ರಮಾಣ ಅಗಾಧವಾಗಿದೆ. ಒಂದು ಅಂದಾಜಿನ ಪ್ರಕಾರ, ಹರ್ದೋಯಿ ಮತ್ತು ಸೀತಾಪುರಗಳ ಜಿಲ್ಲೆಗಳ ಗಡಿಯಲ್ಲಿ, ಗೋಮತಿ ನದಿಯ ದಂಡೆಯ ಸಮೀಪ ಸಾವಿರಾರು ದನಗಳು ಅಂಡಲೆಯುತ್ತಿವೆ. ಭರವಸೆಯನ್ನೇ ಕಳೆದುಕೊಂಡಿರುವ ರೈತರು, ತಮ್ಮ ಹೊಲಗಳನ್ನು ಹಡಿಲು ಬಿಟ್ಟಿದ್ದಾರೆ. ಎಲ್ಲ ಬೀಡಾಡಿ ದನಗಳನ್ನು ಇಟ್ಟುಕೊಳ್ಳಲು ಸರಕಾರಿ ಗೋಶಾಲೆಗಳಲ್ಲಿ ಸ್ಥಳವೇ ಇಲ್ಲ. ಅದೂ ಅಲ್ಲದೆ, ಬೇಕಾಗುವ ಅಷ್ಟೊಂದು ಗೋಶಾಲೆಗಳನ್ನು ಕಟ್ಟಲು ಸರಕಾರದ ಬಳಿ ಸಂಪನ್ಮೂಲವೂ ಇಲ್ಲ.

ಜಾನುವಾರು ವ್ಯಾಪಾರವನ್ನು ನಿಲ್ಲಿಸಿದ ಮುಖ್ಯ ಉದ್ದೇಶ ಗೋಹತ್ಯೆಯನ್ನು ತಡೆಯುವುದಾಗಿದೆ. ಆದರೆ ದನಗಳು ಗೋಶಾಲೆಗಳಲ್ಲಿ ಹಸಿವಿನಿಂದ ಬಳಲಿ ಹಾಗೂ ಹೆದ್ದಾರಿಗಳಲ್ಲಿ ಅಪಘಾತಗಳಿಂದ ಸಾಯುತ್ತಿವೆ. ಜನವರಿ 8ರಂದು ಮುಹಮ್ಮದಾಪುರ್ ಗ್ರಾಮದ ಜನರು ಸಂಗ್ರಹಿಸಿದ 100 ದನಗಳ ಪೈಕಿ ಮೂರು ಸರಕಾರಿ ಪಶುವೈದ್ಯರ ನಿಗಾದಲ್ಲೇ ಸತ್ತಿವೆ. ಮುಚ್ಚಿದ ಜಾಗದಲ್ಲಿ ಆಕ್ರಮಣಕಾರಿ ಧೋರಣೆಯ ದನಗಳು ನಿತ್ರಾಣವಾಗಿರುವ ದನಗಳ ಮೇಲೆ ದಾಳಿ ನಡೆಸಿದಾಗ ಈ ದನಗಳು ಸತ್ತಿವೆ.

ಜನವರಿ 12ರಂದು, ತೆರ್ವಾ ಘಾಟ್‌ಗೆ ಸಮೀಪದ ಗೋಮತಿ ನದಿಯ ದಂಡೆಯಲ್ಲಿ 35-40 ದನಗಳು ಸತ್ತಿವೆ. ಸತ್ತ ದನಗಳನ್ನು ಅತ್ರ್‌ಲಿ ಪೊಲೀಸ್ ಠಾಣೆಯ ಪೊಲೀಸರು ಕ್ಷಿಪ್ರವಾಗಿ ವಿಲೇವಾರಿ ಮಾಡಿದರು. ಇಲ್ಲದಿದ್ದರೆ ಅದು ವಿವಾದವಾಗುತ್ತದೆ. ಈ ಸತ್ತ ದನಗಳು ನದಿಯಲ್ಲಿ ಮೇಲಿನ ಪ್ರದೇಶದಿಂದ ತೇಲಿಕೊಂಡು ಬಂದಿವೆ ಎಂದು ಹರ್ದೋಯಿ ಜಿಲ್ಲಾಡಳಿತ ಹೇಳಿಕೊಂಡಿದೆ. ಸಾವಿನ ಕಾರಣ ಮಾತ್ರ ನಿಗೂಢವಾಗಿದೆ.

ಆಕಳುಗಳನ್ನು ರಕ್ಷಿಸುವ ತನ್ನ ಮುಖ್ಯ ಗುರಿಯಲ್ಲಿ ಯೋಗಿ ಸರಕಾರ ವಿಫಲವಾಗಿದೆ. ಬದಲಿಗೆ, ಅದು ರೈತರಿಗೆ ದೈತ್ಯ ಸಮಸ್ಯೆಯೊಂದನ್ನು ನಿರ್ಮಿಸಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಗೊಂದಲದಲ್ಲಿದ್ದಾರೆ ಹಾಗೂ ಸಂಪನ್ಮೂಲಗಳು ಸೀಮಿತವಾಗಿವೆ. ರೈತರಿಗೆ ಪರಿಹಾರ ನೀಡುವ ಏಕೈಕ ವಿಧಾನವೆಂದರೆ, ಪ್ರತಿ ದನಕ್ಕೆ ಪ್ರತಿ ದಿನಕ್ಕೆ 30 ರೂಪಾಯಿಯಂತೆ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವುದು ಅಥವಾ ಜಾನುವಾರು ವ್ಯಾಪಾರವನ್ನು ಆರಂಭಿಸುವುದು. ಇದನ್ನು ಉಲ್ಲಂಘಿಸುವವರ ವಿರುದ್ಧ ಸರಕಾರವು ಗೋಹತ್ಯೆ ನಿಷೇಧ ಕಾನೂನನ್ನು ಬಳಸಬಹುದು. ಆದರೆ, ದನಗಳನ್ನು ರಕ್ಷಿಸುವ ಹೆಸರಿನಲ್ಲಿ ರೈತರು ಇನ್ನಷ್ಟು ಬಸವಳಿಯಲು ಬಿಡಬಾರದು.

ಕೃಪೆ: : counterview.net

Writer - ಸಂದೀಪ್ ಪಾಂಡೆ

contributor

Editor - ಸಂದೀಪ್ ಪಾಂಡೆ

contributor

Similar News