ಚಿಕ್ಕಮಗಳೂರು: ಎನ್.ಆರ್.ಪುರ ನ್ಯಾಯಾಲಯಕ್ಕೆ ನಕ್ಸಲ್ ಮುಖಂಡ ಬಿ.ಜಿ.ಕೃಷ್ಣಮೂರ್ತಿಯನ್ನು ಹಾಜರುಪಡಿಸಿದ ಪೊಲೀಸರು

Update: 2022-02-24 12:29 GMT

ಚಿಕ್ಕಮಗಳೂರು, ಫೆ.24: ಇತ್ತೀಚೆಗೆ ಕೇರಳದ ವಯನಾಡ್‍ನ ಸುಲ್ತಾನ್ ಭತ್ತೇರಿಯಲ್ಲಿ ಎಟಿಎಸ್ ತಂಡದಿಂದ ಬಂಧನಕ್ಕೊಳಗಾಗಿದ್ದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಗುರುವಾರ ಜಿಲ್ಲೆಯ ನರಸಿಂಹರಾಜಪುರ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಚಳವಳಿ ಮುಂಚೂಣಿಯಲ್ಲಿದ್ದ ಸಂದರ್ಭದಲ್ಲಿ ಬಿ.ಜಿ.ಕೃಷ್ಣಮೂರ್ತಿ ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಈ ವೇಳೆ ಬಿ.ಜಿ.ಕೃಷ್ಣಮೂರ್ತಿ ಮೇಲೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 53ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯಲ್ಲಿ ನಕ್ಸಲ್ ಚಳವಳಿಗೆ ಹಿನ್ನಡೆಯಾದ ಬಳಿಕವೂ ನಕ್ಸಲ್ ಚಳವಳಿಯಿಂದ ವಿಮುಖರಾಗದೇ ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ನಕ್ಸಲ್ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಇತ್ತೀಚೆಗೆ ಎಟಿಎಸ್ ತಂಡ ಕೇರಳದಲ್ಲಿ ಬಂಧಿಸಿದ್ದರು. ಕೃಷ್ಣಮೂರ್ತಿಯೊಂದಿಗೆ ಮಲೆನಾಡಿನವರೇ ಆದ ಸಾವಿತ್ರಿ ಎಂಬವರನ್ನೂ ಬಂಧಿಸಲಾಗಿತ್ತು.

ಬಿ.ಜಿ.ಕೃಷ್ಣಮೂರ್ತಿ ಅವರ ಬಂಧನವಾಗಿ ಸುಮಾರು 3 ತಿಂಗಳ ಬಳಿಕ ಪೊಲೀಸರು ಗುರುವಾರ ಕೃಷ್ಣಮೂರ್ತಿ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಶೃಂಗೇರಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಕರೆತರಲಾಗಿದ್ದು, ನ್ಯಾಯಾಧೀಶರು ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಕೆ ಅವರನ್ನು ನರಸಿಂಹರಾಜಪುರ ತಾಲೂಕಿನ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಿ.ಜಿ.ಕೃಷ್ಣಮೂರ್ತಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಹಿನ್ನೆಲೆಯಲ್ಲಿ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಗ್ರಾಮದವರಾದ ಬಿ.ಜಿ.ಕೃಷ್ಣಮೂರ್ತಿ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ಬಳಿಕ ಶಿವಮೊಗ್ಗದಲ್ಲಿ ಎಲ್‍ಎಲ್‍ಬಿ ಪದವಿಯನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ನಕ್ಸಲ್ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಅವರು, 2000ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. 2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಪೊಲೀಸ್ ಎನ್‍ಕೌಂಟರ್‍ನಲ್ಲಿ ಮೃತಪಟ್ಟ ಬಳಿಕ ಪಶ್ವಿಮಘಟ್ಟದ ನಕ್ಸಲ್ ಚಳವಳಿಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆದ ಕೆಲ ಅಪರಾಧ ಪ್ರಕರಣಗಳಲ್ಲಿ ಬಿಜಿಕೆ ಭಾಗಿಯಾಗಿರುವ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ 26 ಮತ್ತು ಜಯಪುರ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಬಿಜೆಕೆ ಮೇಲೆ ಕರಾವಳಿ ಜಿಲ್ಲೆಗಳಲ್ಲೂ ಕೆಲ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ.

ಮಲೆನಾಡಿನ ಪಶ್ವಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಚಳವಳಿಯ ಪ್ರಾಬಲ್ಯ ಕ್ಷೀಣಿಸಿದ್ದರಿಂದ ಕೇರಳ ರಾಜ್ಯಕ್ಕೆ ತೆರಳಿದ್ದ ಬಿಜಿಕೆ ಅವರನ್ನು ಇತ್ತೀಚೆಗೆ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಗೆ ಪದೋನ್ನತಿಗೊಳಿಸಲಾಗಿತ್ತು. ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ನಿಲಂಬೂರಿಯಲ್ಲಿ 2016ರ ನವೆಂಬರ್‍ನಲ್ಲಿ ನಡೆದ ಪೊಲೀಸರ ದಾಳಿಯಲ್ಲಿ ಕುಪ್ಪು ದೇವರಾಜ ಎಂಬವರು ಸಾವನಪ್ಪಿದ್ದು, ಬಳಿಕ ಬಿ.ಜಿ.ಕೃಷ್ಣಮೂರ್ತಿ ಸಿಪಿಐ (ಮಾವೋವಾದಿ) ಸಂಘಟನೆಯ ಹಂಗಾಮಿ ಕಾರ್ಯದರ್ಶಿಯಾಗಿದ್ದರು ಎಂದು ತಿಳಿದು ಬಂದಿದೆ.

ನಕ್ಸಲ್ ಚಳವಳಿಯಲ್ಲಿದ್ದ ಸಂದರ್ಭದಲ್ಲಿ ಬಿಜಿಕೆ ಎಂದೇ ಗುರುತಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿಯನ್ನು ಕೇರಳದಲ್ಲಿ ಎಟಿಎಸ್ ದಳದವರು ಬಂಧಿಸಿದ್ದರು. ಮೂರು ತಿಂಗಳ ಬಳಿಕ ಬಿ.ಜಿ.ಕೃಷ್ಣಮೂರ್ತಿಯನ್ನು ನರಸಿಂಹರಾಜಪುರ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬಿ.ಜಿ.ಕೃಷ್ಣಮೂರ್ತಿ ಅವರನ್ನು ಗುರುವಾರ ಶೃಂಗೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಮಯ ನಿಗಧಿ ಪಡಿಸಿದ್ದು, ನ್ಯಾಯಾಧೀಶರು ರಜೆಯಲ್ಲಿರುವ ಕಾರಣ ನರಸಿಂಹರಾಜಪುರ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಗುರುವಾರ ಎಟಿಎಸ್ ತಂಡ ಬಿ.ಜಿ.ಕೃಷ್ಣಮೂರ್ತಿಯನ್ನು 11:30ಕ್ಕೆ ಶೃಂಗೇರಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ 12:30ಕ್ಕೆ ನರಸಿಂಹರಾಜಪುರ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಬಿಜಿಕೆ ಅವರನ್ನು ಫೆ.28ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ತಿಳಿದು ಬಂದಿದೆ.

ಎನ್.ಆರ್.ಪುರ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಪೊಲೀಸರು ಹಾಜರುಪಡಿಸಿದ ವೇಳೆ ನ್ಯಾಯಾಧೀಶರು ಆರೋಪಿ ಪರ ವಕೀಲರ ಬಗ್ಗೆ ಕೇಳಿದಾಗ, ತನ್ನ ಮೇಲಿನ ಆರೋಪಗಳ ಬಗ್ಗೆ ತಾನೇ ವಾದಿಸುವುದಾಗಿ ಬಿಜಿಕೆ ಹೇಳಿದ್ದಾರೆ. ಆ ಬಳಿಕ ನ್ಯಾಯಾಧೀಶರು ಕೆಲ ಪ್ರಶ್ನೆಗಳನ್ನು ಕೇಳಿದ್ದು, ಪೊಲೀಸರು ತನ್ನ ಮೇಲೆ ದಾಖಲಿಸಿರುವ ಪ್ರಕರಣಗಳ ಬಗ್ಗೆ ಮಾಹಿತಿ ಇಲ್ಲ. ಮಾಹಿತಿಯನ್ನೂ ಪೊಲೀಸರು ನೀಡುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆಂದು ತಿಳಿದು ಬಂದಿದೆ. 

ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿ 2003ರಿಂದ ಭೂಗತರಾದ್ದರು. 2018ರಲ್ಲಿ ಅವರ ತಂದೆ ಗೋಪಾಲ ರಾವ್ ನಿಧನರಾದಾಗಲೂ ಅಂತ್ಯಕ್ರಿಯೆಯಲ್ಲೂ ಬಿ.ಜಿ.ಕೃಷ್ಣಮೂರ್ತಿ ಭಾಗಿಯಾಗಿರಲಿಲ್ಲ. ಇತ್ತೀಚಿಗಷ್ಟೇ ಪಕ್ಷದ ಕೇಂದ್ರ ಸಮಿತಿಗೆ ಪದೋನ್ನತಿಗೊಂಡಿದ್ದ ಕೃಷ್ಣಮೂರ್ತಿ ಬಂಧನ ಪೆÇಲೀಸರ ಪಾಲಿಗೆ ದೊಡ್ಡ ಸಾಧನೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಬಿ.ಜಿ.ಕೃಷ್ಣಮೂರ್ತಿ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 53 ಪ್ರಕರಣಗಳಿದ್ದರೆ, 36 ವರ್ಷದ ಸಾವಿತ್ರಿ ಮೇಲೆ 22 ಪ್ರಕರಣಗಳು ದಾಖಲಾಗಿವೆ.

ಬಿ.ಜಿ.ಕೃಷ್ಣಮೂರ್ತಿ ಅವರ ಮೇಲೆ ಜಿಲ್ಲೆಯಲ್ಲಿ 27 ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ಅವರನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಬಾಡಿ ವಾರೆಂಟ್ ಮೇಲೆ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಶೃಂಗೇರಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿತ್ತು. ಆದರೆ ನ್ಯಾಯಾಧೀಶರ ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಎನ್.ಆರ್.ಪುರ ಜೆಎಂಎಫ್‍ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿಲಾಗಿದೆ. ನ್ಯಾಯಾಲಯ ಆರೋಪಿಯನ್ನು ಫೆ.28ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

- ಹರಿಣಾಕ್ಷಿ, ಸರಕಾರಿ ಅಭಿಯೋಜಕಿ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News