ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ: ಮಾಜಿ ಶಾಸಕ ಮಧು ಬಂಗಾರಪ್ಪ
ಶಿವಮೊಗ್ಗ, ಮಾ.2 : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಸೊರಬ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.
ಅವರು ಬುಧವಾರ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ನಿಮಿತ್ತ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಿ, ಗಣ್ಯರಿಂದ ಅಭಿನಂದನೆ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಸಂಘಟನೆ ಮತ್ತು ಹೋರಾಟದ ಮೂಲಕವೇ ಕಟ್ಟಲಾಗುವುದು. ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡಲಾಗುವುದು. ಪಕ್ಷದ ಎಲ್ಲಾ ಹಿರಿಯರ ಆಶಯವೂ ಇದೇ ಆಗಿದೆ. ಅಭಿವೃದ್ಧಿಯತ್ತ ಸಾಗುವುದೇ ನಮ್ಮ ಗುರಿಯಾಗಿದೆ. ನಮ್ಮ ತಂದೆ ಎಸ್. ಬಂಗಾರಪ್ಪ ಅವರೇ ಹೇಳಿದಂತೆ ಸೋತು ರಾಜಕಾರಣ ಮಾಡುವುದು ಕೂಡ ಒಂದು ಪಾಠವಾಗುತ್ತದೆ. ಇದರ ಜೊತೆಗೆ ನಾಡಿನಲ್ಲಿ ಸಂತೋಷದ ವಾತಾವರಣ ಇರಲಿ. ಪ್ರೀತಿಯಿಂದ ಬಾಳೋಣ. ನಾನು ತೆಗೆದುಕೊಂಡ ರಾಜಕೀಯ ನಿರ್ಧಾರ ಸರಿಯಾಗಿದೆ ಎಂದವರು ಸಮರ್ಥಿಸಿಕೊಂಡರು.
ಸೊರಬ ಹಾಗೂ ಜಿಲ್ಲೆ ಮತ್ತು ರಾಜ್ಯದಲ್ಲಿ ಬಗರ್ ಹುಕುಂ ಸಮಸ್ಯೆ ತೀವ್ರವಾಗಿದೆ. ಯಾವುದೇ ಕಾರಣಕ್ಕೂ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅವರ ಪರವಾಗಿ ಶಾಸಕನಾಗಿದ್ದಾಗಲೂ ಹೋರಾಟ ಮಾಡಿದ್ದೇನೆ. ಈಗಲೂ ಮಾಡುವೆ. ಹಂತ ಹಂತವಾಗಿ ಸೊರಬದಿಂದಲೇ ಈ ಹೋರಾಟ ಆರಂಭವಾಗಿ ಇಡೀ ರಾಜ್ಯಾದ್ಯಂತ ವಿಸ್ತಾರಗೊಳ್ಳುತ್ತದೆ ಎಂದರು. ಅರಣ್ಯ ಮತ್ತು ಕಂದಾಯ ಇಲಾಖೆಯ ಸಾಗುವಳಿದಾರರು ಕಳೆದ ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಇವರಿಗೆ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಸೊರಬ ಒಂದರಲ್ಲಿಯೇ ಸುಮಾರು 7200 ಅರ್ಜಿಗಳಿವೆ. ಹಲವು ಸಾವಿರ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಈಗಿನ ಬಿಜೆಪಿ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತಂದು ಸಾಗುವಳಿದಾರರ ಹಿತ ಕಾಪಾಡಬಹು ದಿತ್ತು. ಆದರೆ, ಹಾಗೇ ಮಾಡದೇ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿದೆ. ಇದರಿಂದ ಅಧಿಕಾರಿಗಳು ದಾಖಲೆಗಳು ಸರಿ ಇಲ್ಲ ಎಂಬ ಒಂದೇ ಕಾರಣಕ್ಕೆ ಸಾಗುವಳಿದಾರರ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ದೂರಿದರು.
2006ರ ನಂತರ ಯಾರೇ ಸಾಗುವಳಿ ಮಾಡಿದ್ದರೂ ಹಕ್ಕು ಪತ್ರ ಕೊಡುವುದು ಬೇಡ, ಆದರೆ, ಅದಕ್ಕಿಂತ ಮೊದಲು ಸಾಗುವಳಿ ಮಾಡಿದವರಿಗೆ ಕಾನೂನುಬದ್ದವಾಗಿಯೇ ಹಕ್ಕು ಪತ್ರ ನೀಡಬೇಕು. ಹಕ್ಕುಪತ್ರ ನೀಡದಿದ್ದಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟವನ್ನೇ ನಡೆಸಲಿದೆ. ಶಿವಮೊಗ್ಗದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್, ಮಾಜಿ ಶಾಸಕ ಆರ್. ಪ್ರಸನ್ನಕುಮಾರ್, ಮುಖಂಡ ರಾದ ಹುಲ್ತಿಕೊಪ್ಪ ಶ್ರೀಧರ್, ಬಂಡಿ ರಾಮಚಂದ್ರ, ಪಿ.ಒ. ಶಿವಕುಮಾರ್, ಶ್ವೇತಾ ಬಂಡಿ, ರಮೇಶ್ ಶಂಕರಘಟ್ಟ, ಇಕ್ಕೇರಿ ರಮೇಶ್, ಪಾರ್ವತಮ್ಮ, ಜಿ.ಡಿ. ಮಂಜುನಾಥ್, ವೈ.ಹೆಚ್. ನಾಗರಾಜ್, ಎಸ್.ಪಿ. ಶೇಷಾದ್ರಿ, ಪಲ್ಲವಿ, ವಾಸಪ್ಪಗೌಡ, ಚಿನ್ನಪ್ಪö, ರವಿ ಮೊದಲಾದವರಿದ್ದರು.