ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು, ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳಲಾಗುವುದು: ಸಿಎಂ ಬೊಮ್ಮಾಯಿ

Update: 2022-03-15 13:30 GMT
ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು, ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳಲಾಗುವುದು: ಸಿಎಂ ಬೊಮ್ಮಾಯಿ
  • whatsapp icon

ಬೆಂಗಳೂರು, ಮಾ. 15: ‘ಹೈಕೋರ್ಟ್ ವಸ್ತ್ರಸಂಹಿತೆಯ ಕುರಿತ ಪ್ರಕರಣದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿದೆ. ಸಮವಸ್ತ್ರವನ್ನು ಎತ್ತಿ ಹಿಡಿದಿದೆ ಮತ್ತು ಹಿಜಾಬ್(ಸ್ಕಾರ್ಫ್) ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎನ್ನುವುದನ್ನು ಹೇಳಿದೆ. ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಇದು ನಮ್ಮ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದುದ್ದು ಬೇರೊಂದಿಲ್ಲ. ಹೀಗಾಗಿ ಹೈಕೋರ್ಟಿನ ತ್ರಿಸದಸ್ಯ ಪೀಠ ನೀಡಿರುವ ತೀರ್ಪನ್ನು ನಾವೆಲ್ಲರೂ ಪಾಲಿಸಬೇಕು. ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು. ಶಾಂತಿಯನ್ನು ಕಾಪಾಡಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬಹಳ ಮುಖ್ಯ. ಜನತೆ, ಎಲ್ಲ ಸಮುದಾಯದ ನಾಯಕರು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡಿ, ತೀರ್ಪಿನ ಅನ್ವಯ ಶಿಕ್ಷಣ ನೀಡಲು ಸಹಕರಿಸಬೇಕು' ಎಂದು ವಿನಂತಿ ಮಾಡಿದರು.

ಪರೀಕ್ಷೆಗಳಿಂದ ಹೊರಗುಳಿಯದಿರಿ: ‘ಎಲ್ಲ ವಿದ್ಯಾರ್ಥಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ನಿಮ್ಮ ಶಿಕ್ಷಣ ಬಹಳ ಮುಖ್ಯ. ಪರೀಕ್ಷೆಗಳಿಂದ ಹೊರಗುಳಿಯದೆ, ಎಲ್ಲರೂ ತರಗತಿಗಳಿಗೆ ಹಾಜರಾಗಬೇಕು, ನಿಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಲು ನಾವು ನೀವೆಲ್ಲರೂ ಚಿಂತಿಸಬೇಕು' ಎಂದು ಬಸವರಾಜ ಬೊಮ್ಮಾಯಿ ಕರೆ ನೀಡಿದರು. 

ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ: ‘ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಹೈಕೋರ್ಟ್ ತೀರ್ಪಿನಿಂದ ಪ್ರಕರಣ ಇತ್ಯರ್ಥವಾಗಿರುವುದರಿಂದ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು. ಇದಕ್ಕೆ ವ್ಯತಿರಿಕ್ತವಾಗಿ ಕಾನೂನನ್ನು ಕೈಗೆ ತೆಗೆದುಕೊಂಡರೆ ಗೃಹ ಇಲಾಖೆ ಕಠಿಣ ಕ್ರಮ ಜರುಗಿಸಲಿದೆ' ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News