ಕಾರ್ಮಿಕರ ಅಖಿಲ ಭಾರತ ಮುಷ್ಕರಕ್ಕೆ ಉಡುಪಿ ಜಿಲಾ ಕಟ್ಟಡ ಕಾರ್ಮಿಕರ ಬೆಂಬಲ
ಉಡುಪಿ, ಮಾ.25: ಕಾರ್ಮಿಕ ವಿರೋಧಿ ಕಾನೂನುಗಳ ರದ್ಧತಿ, ಬೆಲೆ ಏರಿಕೆ ನಿಯಂತ್ರಣ, ಅಡುಗೆ ಅನಿಲ, ಪೆಟ್ರೋಲ್, ಡೀಸಲ್ ಬೆಲೆ ಇಳಿಸಲು, ಸಿಮೆಂಟ್, ಕಬ್ಬಿಣ, ಪೆಯಿಂಟ್ ಬೆಲೆ ನಿಯಂತ್ರಣವೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.28 ಮತ್ತು 29ರಂದು ನಡೆಸಲುದ್ದೇಶಿಸಿರುವ ಅಖಿಲ ಭಾರತ ಮುಷ್ಕರಕ್ಕೆ ಉಡುಪಿ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
28ರಂದು ಆಯಾ ಗ್ರಾಪಂ, ಪುರಸಭೆಗಳ ಮೂಲಕ ಸಂಘದ ಪದಾಧಿಕಾರಿ ಗಳು ಪ್ರಧಾನಿಗೆ ಮನವಿ ಸಲ್ಲಿಸಲಿದ್ದಾರೆ. 29ರಂದು ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಯಲಿದೆ. ಎರಡೂ ದಿನ ಜಿಲ್ಲೆಯ 13,000ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಮುಷ್ಕರದಲ್ಲಿ ಭಾಗವಹಿಸುತ್ತಾರೆ ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾಗೂ ಕಾರ್ಯದರ್ಶಿ ಶೇಖರ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಷರ ದಾಸೋಹ ನೌಕರರ ಮುಷ್ಕರ: ಅಕ್ಷರದಾಸೋಹ ನೌಕರರಿಗೆ ಕನಿಷ್ಠ 21000 ರೂ. ವೇತನ, ನೌಕರಿ ಖಾಯಂಗೊಳಿಸಲು, 45 ಮತ್ತು 46ನೇ ಭಾರತ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಬಿಸಿಯೂಟ ಯೋಜನೆಯಲ್ಲಿ ದುಡಿಯುವವರನ್ನು ಕಾರ್ಮಿಕರೆಂದು ಪರಿಗಣಿಸಲು, ಕಾರ್ಮಿಕರ ನೂತನ ಸಂಹಿತೆಗಳನ್ನು ಹಾಗೂ ಬೆಲೆ ಏರಿಕೆ ವಾಪಾಸ್ಸು ಪಡೆಯುವಂತೆ ಒತ್ತಾಯಿಸಿ ಮಾ.28 ಮತ್ತು 29ರಂದು ರಾಷ್ಟ್ರವ್ಯಾಪಿ ನಡೆಯುವ ಮುಷ್ಕರಕ್ಕೆ ಜಿಲ್ಲೆಯ ಅಕ್ಷರ ದಾಸೋಹ ನೌಕರರು ಬೆಂಬಲ ಘೋಷಿಸಿದ್ದಾರೆ.
ಮಾ.29ರಂದು ಜಿಲ್ಲೆಯಲ್ಲಿ ಬಿಸಿಯೂಟ ಬಂದ್ ಮಾಡಿ ಮಣಿಪಾಲ ಟೈಗರ್ ಸರ್ಕಲ್‌ನಿಂದ ಬೆಳಗ್ಗೆ 10:30ಕ್ಕೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ ಪಡುವರಿ ಹಾಗೂ ಪ್ರಧಾನ ಕಾರ್ಯದರ್ಶಿ ಸುನಂದ ತಿಳಿಸಿದ್ದಾರೆ
ಗೇರುಬೀಜ ಕಾರ್ಖಾನೆ ಕಾರ್ಮಿಕರ ಮುಷ್ಕರ: ಕುಂದಾಪುರದ ವಿವಿಧ ಕ್ಷೇತ್ರ ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸರಕಾರ ಕಳೆದ ಒಂದು ವರ್ಷದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಇಎಸ್‌ಐ ಸೇವೆ ನಿರಾಕರಿಸಿ ವಂಚಿಸಿದೆ. ಅಲ್ಲದೇ ಕುಂದಾಪುರದ ಇಎಸ್‌ಐ ಡಿಸ್ಪೇಷನರಿಯಲ್ಲೂ ವೈದ್ಯರಿಲ್ಲದೇ ಕಾರ್ಮಿಕರು ಪರದಾಡುವಂತಾಗಿದೆ. ಈ ಹಿಂದಿನಂತೆ ಖಾಸಗಿ ಆಸ್ಪತ್ರೆಯಲ್ಲಿ ಇಎಸ್ಐ ಸೌಲಭ್ಯ ಕಲ್ಪಿಸುವಂತೆ ಸರಕಾರವನ್ನು ಒತ್ತಾಯಿಸಿ, ನೂತನ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಾಸ್ಸು ಪಡೆಯಲು ಆಗ್ರಹಿಸಿ ಮಾ.29ರಂದು ಕೆಲಸ ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲೆಯ ಗೇರುಬೀಜ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷೆ ಗಿರಿಜಾ, ಪ್ರಧಾನ ಕಾರ್ಯದರ್ಶಿ ಜ್ಯೋತಿ, ಖಜಾಂಚಿ ವಿಶಾಲ ತಿಳಿಸಿದ್ದಾರೆ.