ತಮ್ಮ ಮಕ್ಕಳು ಪರೀಕ್ಷೆಗೆ ಹಾಜರಾಗುವಂತೆ ಪ್ರಯತ್ನಿಸಿರಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ
ಉಡುಪಿ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎದುರಾಗಿರುವ ತಡೆಗಳ ಹೊರತಾಗಿಯೂ ಲಭ್ಯವಿರುವ ಎಲ್ಲಾ ಮಾರ್ಗಗಳನ್ನು ಬಳಸಿ ಪರೀಕ್ಷೆಗಳನ್ನು ಪೂರ್ತಿಕರಿಸಿ ಮುಂದಿನ ಹಂತಕ್ಕೆ ಸಾಗುವುದರ ಬಗ್ಗೆ ಆದ್ಯತೆಯನ್ನು ನೀಡಬೇಕಾಗಿದೆ. ತಮ್ಮ ಮಕ್ಕಳು ಪರೀಕ್ಷೆಗೆ ಹಾಜರಾಗುವಂತೆ ಪ್ರಯತ್ನಿಸಿರಿ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತಿಳಿಸಿದೆ.
ನಿಮ್ಮ ಮಕ್ಕಳ ಶೈಕ್ಷಣಿಕ ವರ್ಷವು ಕೊನೆಗೊಂಡಿದೆ. ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಯಾವ ರೀತಿಯಲ್ಲಿ ಅಧ್ಯಯನ ಮಾಡಿದ್ದಾರೆ ಮತ್ತು ಆ ಅಧ್ಯಯನವು ವಾರ್ಷಿಕ ಪರೀಕ್ಷೆಯಲ್ಲಿ ಯಾವ ರೀತಿಯಲ್ಲಿ ಫಲಿತಾಂಶ ನೀಡಲಿದೆ ಎಂಬ ಉತ್ಸುಕತೆಯಿಂದ ಪರೀಕ್ಷೆಗಳ ತಯಾರಿ ನಡೆಸುವಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಬೇಕಾದ ಸಮಯವಿದು. ಆದರೆ ಈ ಶೈಕ್ಷಣಿಕ ವರ್ಷ ಹಿಂದಿನಂತಿಲ್ಲ. ಹೆಣ್ಣು ಹೆತ್ತವರಿಗೆ ಅವರ ಹೆಣ್ಮಕ್ಕಳ ಜೀವದ ಭಾಗವಾಗಿರುವ ಹಿಜಾಬ್’ನ್ನು ಒಂದು ಸಮಸ್ಯೆಯಾಗಿ ಚಿತ್ರಿಸಿ ಅದನ್ನು ಅವರಿಂದ ಪ್ರತ್ಯೇಕಿಸುವ ಕೋಮು ದ್ವೇಷದಿಂದ ಪ್ರೇರಿತ ವ್ಯವಸ್ಥಿತ ಹುನ್ನಾರ ನಡೆದಿದೆ. ಸರಕಾರವು ಸ್ಪಷ್ಟವಾಗಿ ಪಕ್ಷಪಾತಿ ಧೋರಣೆಯನ್ನು ಅನುಸರಿಸಿ ತಾನು ಈ ಹುನ್ನಾರವನ್ನು ಕಾರ್ಯರೂಪಕ್ಕೆ ತರುವಲ್ಲಿ ಕಟಿಬದ್ಧನಾಗಿದ್ದೇನೆ ಎಂಬ ನಿಲುವನ್ನು ತಳೆದಿರುದಲ್ಲದೆ, ಎಲ್ಲ ಸರಕಾರಿ ಯಂತ್ರಗಳನ್ನು ಈ ಪಾಪ ಕಾರ್ಯಕ್ಕೆ ಬಳಸಿಕೊಳ್ಳುವ ಸ್ಪಷ್ಟ ಸೂಚನೆಯನ್ನು ನೀಡಿದೆ. ಮುಸ್ಲಿಮ್ ಮ್ಯಾನೇಜ್‌ಮೆಂಟ್ ಶಾಲೆಗಳ ವಿದ್ಯಾರ್ಥಿನಿಯರಿಗೆ ಹಿಜಾಬ್ ನೊಂದಿಗೆ ಪರೀಕ್ಷೆಗೆ ಹಾಜರಾಗುವ ಅವಕಾಶ ಸಿಗುವ ಸಾಧ್ಯತೆ ಈ ವರೆಗಿನ ಬೆಳವಣಿಗೆಯಿಂದ ತಿಳಿದುಬರುತ್ತಿದೆ.
ಒಕ್ಕೂಟವು ಮಕ್ಕಳು ಸುಗಮವಾಗಿ ಪರೀಕ್ಷೆಗಳನ್ನು ಎದುರಿಸಬೇಕೆಂಬ ಉದ್ದೇಶದಿಂದ ತನ್ನಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಅಡೆತಡೆಗಳು ಇನ್ನೂ ಬಾಕಿ ಇವೆ. ತಮ್ಮ ಮಕ್ಕಳು ಪರೀಕ್ಷೆಗೆ ಹಾಜರಾಗುವಂತೆ ಪ್ರಯತ್ನಿಸಿರಿ. ಇದರ ಹೊರತಾಗಿಯೂ ಹಿಜಾಬನ್ನು ತೆಗೆದೇ ಪರೀಕ್ಷೆ ಬರೆಯಬೇಕಾದ ಸನ್ನಿವೇಶ ಎದುರಾದರೆ ಆಗ ನಿರ್ಣಯ ತೆಗೆದುಕೊಳ್ಳ ಬೇಕಾದ ಜವಾಬ್ದಾರಿ ಖಂಡಿತವಾಗಿಯೂ ನಿಮ್ಮದಾಗಿರುತ್ತದೆ. ಏಕೆಂದರೆ ಮಾತಾಪಿತರು ಮಕ್ಕಳ ಪರಮೊಚ್ಚ ರಕ್ಷಕ ಪೋಷಕರು ಹಾಗೂ ಅವರ ಜೀವನದ ನಿರ್ಣಯ ತೆಗೆದುಕೊಳ್ಳುವವರು ಆಗಿರುತ್ತಾರೆ. ಸಂದರ್ಭದ ದೃಷ್ಟಿಯಿಂದ ನೀವೇನೆ ನಿರ್ಣಯ ತೆಗೆದುಕೊಂಡರೂ ಸಮುದಾಯದ ಸಾಮಾನ್ಯ ವೇದಿಕೆ ಎಂಬ ನೆಲೆಯಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.