ಹಿರಿಯಡ್ಕ; ಬೈಕ್ ಕಳವು: ಎರಡು ಗಂಟೆಯೊಳಗೆ ಆರೋಪಿ ಸೆರೆ
Update: 2022-04-04 16:29 GMT
ಉಡುಪಿ : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಹಿರಿಯಡ್ಕ ಪೊಲೀಸರು ಎರಡು ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶರಾವತಿ ನಗರದ ಟೈಲರ್ ಕುಮಾರ್(37) ಬಂಧಿತ ಆರೋಪಿ.
ಎ.3ರಂದು ಸಂಜೆ 4.30ಕ್ಕೆ ಆತ್ರಾಡಿ ಕಾಂಪ್ಲೆಕ್ಸ್‌ನ ಮಹಾದೇವಿ ಸ್ಟೋರ್‌ನ ಎದುರು ಪ್ರಸನ್ನ ಕುಮಾರ್ ಎಂಬವರು ಬೈಕ್ ನಿಲ್ಲಿಸಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಈ ವೇಳೆ ಇವರ ಬೈಕ್‌ನ್ನು ಕಳವು ಮಾಡಿದ ಆರೋಪಿ, ಹಿರಿಯಡ್ಕ ಕಡೆಗೆ ಹೋಗಿದ್ದನು. ಈ ಬಗ್ಗೆ ಹಿರಿಯಡ್ಕ ಠಾಣೆಗೆ ಪ್ರಸನ್ನ ಕುಮಾರ್ ದೂರು ನೀಡಿದರು.
ಕೂಡಲೇ ಕಾರ್ಯಪ್ರವೃತ್ತರಾದ ಹಿರಿಯಡ್ಕ ಪೊಲೀಸರು ಅಂಜಾರು ಗ್ರಾಮದ ಓಂತಿಬೆಟ್ಟು ಎಂಬಲ್ಲಿ ನಾಕಾಬಂಧಿ ನಿರ್ಮಿಸಿ ವಾಹನ ತಪಾಸಣೆ ನಡೆಸುತ್ತಿರುವಾಗ ಸಂಜೆ 5.50 ಗಂಟೆಯ ವೇಳೆಗೆ ಕಳವು ಮಾಡಿದ ಬೈಕ್ ಚಲಾಯಿಸಿಕೊಂಡು ಬಂದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.