ಉಡುಪಿ ಜಿಲ್ಲೆಯಲ್ಲಿ ಪ್ರಾರ್ಥನೆ, ಧ್ಯಾನದೊಂದಿಗೆ ಗುಡ್‌ಫ್ರೈಡೆ ಆಚರಣೆ
ಉಡುಪಿ : ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರ ವನ್ನು (ಗುಡ್ ಫ್ರೈಡೆ) ಉಡುಪಿ ಜಿಲ್ಲೆಯಾ ದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ಚರ್ಚುಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ಜರುಗಿತು.
ಧರ್ಮಪ್ರಾಂತದ ಪ್ರಧಾನ ದೇವಾಲಯವಾದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಢ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ.ಜೋಯ್ ಅಂದ್ರಾದೆ ಉಪಸ್ಥಿತರಿದ್ದರು.
ಧರ್ಮಾಧ್ಯಕ್ಷ ಅತಿ ವಂ. ಜೆರಾಲ್ಢ್ ಐಸಾಕ್ ಲೋಬೊ ತನ್ನ ಗುಡ್ ಫ್ರೈಡೆ ಸಂದೇಶದಲ್ಲಿ ಯೇಸುಸ್ವಾಮಿ ದಿನನಿತ್ಯ ಶಿಲುಬೆ ಏರುತ್ತಲೇ ಇದ್ದಾರೆ. ನ್ಯಾಯ ದಿಂದ ವಂಚಿತರಾದ ಮುಗ್ಧರ, ಆಸ್ಪತ್ರೆಗಳಲ್ಲಿ ನರಳುತ್ತಿರುವವರ, ಶೋಷಣೆ ಗೊಳಗಾದ ಜನರ ದುಃಖ ಸಂಕಟಗಳಲ್ಲಿ ಯೇಸುಸ್ವಾಮಿ ಶಿಲುಬೆ ಏರುತ್ತಾರೆ. ಅವರು ಈ ಮುಗ್ಧರ ನೋವುಗಳ ಪ್ರತಿರೂಪವಾಗಿದ್ದಾರೆ. ಅವರು ಶೋಷಿತರ ಕಣ್ಣೀರನ್ನು ಒರೆಸುವ, ಸತ್ಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸಬಲ್ಲ ಮಹಾಶಕ್ತಿ. ಶಿಲುಬೆ ಏರಿರುವ ಯೇಸುಸ್ವಾಮಿ ಜಗದ ದುಃಖವನ್ನು ತೊಡೆಯಲು ಶಕ್ತನಾದ ಮಹಾನುಭಾವ ಎಂದರು.
ಯೇಸು ಸ್ವಾಮಿಯನ್ನು ಗೊಲ್ಗೊಥಾ ಬೆಟ್ಟಕ್ಕೆ ಕರೆದೊಯ್ಯಲು ಮಾಡಿದ್ದ ಸಿದ್ಧತೆಗಳು ಇಂದೂ ಸ್ಪಷ್ಟವಾಗಿ ಕಾಣುತ್ತಿವೆ. ಅಂದಿನ ಆ ಬೀಬತ್ಸತೆ ಇಂದಿಗೂ ಮಾಯವಾಗಿಲ್ಲ. ಇಂದಿಗೂ ಅವು ಬಂದೂಕುಗಳು, ಟ್ಯಾಂಕ್, ಬಾಂಬು, ಗ್ರೆನೇಡುಗಳು, ರಾಕೆಟ್‌ಗಳ ರೂಪತಾಳಿ ಮತ್ತಷ್ಟು ಭೀಕರ ಸನ್ನಿವೇಶಗಳನ್ನು ಉಂಟು ಮಾಡುತ್ತಿವೆ. ರಷ್ಯಾ-ಯುಕ್ರೈನ್ ಯುದ್ಧವು ಇದನ್ನು ಸ್ಪಷ್ಟವಾಗಿ ತೋರಿಸಿದೆ. ಒಬ್ಬರನ್ನೊಬ್ಬರು ಪ್ರೀತಿಸುವ ಬದಲು ದ್ವೇಷದ ಜ್ವಾಲೆಯಲ್ಲಿ ಸೇಡು ತೀರಿಸಿಕೊಳ್ಳಲು ಬಲಿಷ್ಟ ಕೈಗಳು ಮುನ್ನುಗ್ಗಿ ಹೊರಟಂತಿವೆ ಎಂದು ಬಿಷಪ್ ನುಡಿದರು.
ಇಂದು ಜಗತ್ತಿನಾದ್ಯಂತ ಇರುವ ಕೆಟ್ಟತನಕ್ಕೆ ಯೇಸುಸ್ವಾಮಿಯ ಪ್ರೀತಿ, ಕರುಣೆ, ಕ್ಷಮೆ, ಔದಾರ್ಯಗಳೇ ಔಷಧವಾಗಬೇಕು. ಯೇಸುಸ್ವಾಮಿ ಮಾನವನ ಹೊಣೆಗೇಡಿತನಕ್ಕೆ, ಕ್ರೋಧಕ್ಕೆ, ತಿಳಿಗೇಡಿತನಕ್ಕೆ ಉತ್ತರವಾಗಿ ದ್ದಾರೆ. ಮಾನವನ ಸ್ವಾರ್ಥ ದೂರವಾಗಿ ದೈವೀರಾಜ್ಯದ ಆಗಮನದ ಸೂಚನೆಯಂತೆ ಯೇಸುಸ್ವಾಮಿ ಶಿಲುಬೆ ಏರಿದ್ದಾರೆ. ನನ್ನ ಶಿಷ್ಯರಾಗಲು ಬಯಸುವುದಾದರೆ ನಿಮ್ಮ ಶಿಲುಬೆ ಹೊತ್ತು ನನ್ನನ್ನು ಹಿಂಬಾಲಿಸಿ’ ಎಂಬ ಕರೆಯನ್ನು ಯೇಸುಸ್ವಾಮಿ ನೀಡಿದ್ದಾರೆ. ಜೀವನದಲ್ಲಿ ಎದುರಾಗುವ ಕಷ್ಟಗಳು, ದು:ಖ, ಸಾವು, ನೋವು, ಸಂಕಟಗಗಳನ್ನು ಹೊತ್ತು ತನ್ನ ಶಿಲುಬೆಯನ್ನು ಹೊತ್ತು ಯೇಸುಸ್ವಾಮಿ ಕಲ್ವಾರಿಯ ತುದಿಗೆ ನಡೆದಂತೆ ನಾವೂ ಕೂಡಾ ನಡೆದರೆ ನಾವೂ ಕೂಡಾ ಪುನರುತ್ಥಾನದ ಆನಂದವನ್ನು ಪಡೆಯಲಿದ್ದೇವೆ. ಮನುಷ್ಯ ತನ್ನ ಸ್ವಾರ್ಥವನ್ನು ತ್ಯಜಿಸಿ ಪರಪ್ರೀತಿ ಯಲ್ಲಿ ಬಾಳಲು ದೇವರು ತೋರುವ ದಾರಿಯೇ ಶಿಲುಬೆಯ ಹಾದಿ. ಆ ಶಿಲುಬೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿ ಯೇಸುಸ್ವಾಮಿ, ದೇವಪಿತನ ಚಿತ್ತವನ್ನು ನೆರವೇರಿಸಿದಂತೆ ನಾವು ಕೂಡಾ, ದೇವರ ಚಿತ್ತವನ್ನು ಪಾಲಿಸಿ ಧನ್ಯರಾಗೋಣ ಎಂದರು.
ಜಿಲ್ಲೆಯ ಕೆಲವು ಚರ್ಚುಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತಪಡಿಸಲಾಯಿತು. ಚರ್ಚಿನಲ್ಲಿ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸುಕ್ರಿಸ್ತನ ಕೊನೆಯ ಗಳಿಗೆಗಳ ವೃತ್ತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಭಕ್ತರು ಮುತ್ತಿಟ್ಟು ತಮ್ಮ ೪೦ ದಿನಗಳ ತ್ಯಾಗದ ಉಳಿಕೆಯ ಹಣವನ್ನು ಬಡ ಬಗ್ಗರಿಗಾಗಿ ನೀಡಿದರು.