ತುಳು ಸಂಸ್ಕೃತಿ, ಭಾಷೆಯ ಉಳಿವಿಗೆ ಪ್ರಯತ್ನಿಸಿ: ಬಾಬು ಅಮೀನ್

Update: 2022-04-18 15:01 GMT

ಉಡುಪಿ : ತುಳುನಾಡಿನ ಮೌಖಿಕ ಗ್ರಂಥಗಳು ಎನಿಸಿಕೊಂಡಿರುವ ತುಳು ಸಂಧಿ ಪಾಡ್ದನಗಳ ಬಗ್ಗೆ ಹಾಗೂ ಕಾರಣಿಕ ಮೆರೆದ ದೈವ ದೇವರುಗಳ ಬಗ್ಗೆ ಇಂದಿನ ಯುವಜನಾಂಗಕ್ಕೆ ಸ್ಪಷ್ಟವಾದ ತಿಳಿವಳಿಕೆ ನೀಡುವ  ಅಗತ್ಯ ಇದೆ. ಜೊತೆಗೆ ವಿದೇಶಿ ಒಲವನ್ನು ಬಿಟ್ಟು ತುಳುನಾಡ ಸಂಸ್ಕೃತಿ, ತುಳು ಭಾಷೆಯ ಉಳಿವಿಗೆ ಪ್ರಯತ್ನಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಹೇಳಿದ್ದಾರೆ.

ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ಉಡುಪಿ ಗಣೇಶ್ ಟ್ರೇಡಿಂಗ್ ಕಂಪೆನಿಯ ಮಿನಿ ಸಭಾಂಗಣದಲ್ಲಿ ನಡೆದ ಪಾಡ್ದನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ತುಳುವರ ಸತ್ಯನಿಷ್ಠೆ, ಪ್ರಾಮಾಣಿಕ ಬದುಕನ್ನು ಕಾಣಬೇಕಾದರೆ ಪಾಡ್ದನವನ್ನು ಕೇಳಬೇಕು. ಪ್ರಸ್ತುತ ಪರಿಸ್ಥಿತಿ ಯಲ್ಲಿ ಪಾಡ್ದನ ಕಲಾವಿದರ ಸಂಖ್ಯೆ ಕಡಿಮೆಯಾಗು ತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭ ಕಾಪು ಮಲ್ಲಾರಿನ 76 ವರ್ಷದ ಪಾಡ್ದನ ಕಲಾವಿದೆ ಸುಶೀಲ ಶೆಟ್ಟಿ ಅವರಿಗೆ ಶ್ರೀಮತಿ ಕೊಲ್ಲು ಕೆ. ಶೆಟ್ಟಿ ದೆಂದೂರು ಸ್ಮಾರಕ ದೀಪಾ ಚೇತನ್ ಕುಮಾರ್ ಶೆಟ್ಟಿ ಕೊಡ ಮಾಡಿರುವ ಪಾಡ್ದನ ಪ್ರಶಸ್ತಿಯನ್ನು ಪ್ರದಾನ ಮಾಡ ಲಾಯಿತು. 5 ಸಾವಿರ ನಗದು ಸಹಿತ ಅಕ್ಕಿಮುಡಿ, ಬಾಳೆಗೊನೆ ಬುಟ್ಟಿಯೊಂದಿಗೆ ಹಾಳೆ ಕಿರೀಟದೊಂದಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಕಾಪು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕಾಪು ಲೀಲಾಧರ್ ಶೆಟ್ಟಿ ವಹಿಸಿದ್ದರು. ಉಡುಪಿ ಸಂಚಾರ ಪೊಲೀಸ್ ಉಪನಿರೀಕ್ಷಕ ಅಬ್ದುಲ್ ಖಾದರ್, ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದಿವಾಕರ್ ಸನಿಲ್, ಬೆಳ್ಳೆ ಗ್ರಾಪಂ ಸದಸ್ಯ ಹರೀಶ್ ಶೆಟ್ಟಿ, ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಡಿಎಕ್ಸ್ ಎನ್ ಮಾರ್ಕೆಟ್ ಇಂಡಿಯಾ ಮುಖ್ಯಸ್ಥ ಎಸ್.ಎನ್. ಶೆಟ್ಟಿ, ಅಮೃತಾ ಶೆಟ್ಟಿ, ಮಹಮ್ಮದ್ ಫಾರೂಕ್ ಚಂದ್ರನಗರ, ದಿವಾಕರ್ ಶೆಟ್ಟಿ ಕಳತ್ತೂರ್, ಅಮೃತ ಪ್ರಕಾಶನದ ಮುಖ್ಯಸ್ಥೆ ಗುಣವತಿ ಶೆಟ್ಟಿ ಉಪಸ್ಥಿತರಿದ್ದರು.‌

ಫೌಂಡೇಶನ್ ಮುಖ್ಯಸ್ಥ ದಯಾನಂದ ಕೆ.ಶೆಟ್ಟಿ ದೆಂದೂರ್ ಸ್ವಾಗತಿಸಿದರು. ಉಡುಪಿ ದೇವಾಡಿಗರ ಯುವವೇದಿಕೆ ಅಧ್ಯಕ್ಷ ಅಶೋಕ್ ಶೇರಿಗಾರ್ ಅಲೆವೂರು ವಂದಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News