‘ಸ್ವತಂತ್ರವಾಗಿ ಯೋಚಿಸಿ, ಕಾರ್ಯನಿರ್ವಹಿಸಿ; ಬಾಹ್ಯ ಹಸ್ತಕ್ಷೇಪಕ್ಕೆ ಅವಕಾಶ ಬೇಡ’
ಮಣಿಪಾಲ: ನಮ್ಮ ಖಾಸಗಿ ಆಯ್ಕೆ ವಿಷಯಗಳಲ್ಲಿ ಯಾವುದೇ ಸರಕಾರದ ಹಸ್ತಕ್ಷೇಪವನ್ನು ಪರಿಗಣಿಸದೆ ದೃಢವಾಗಿರುವ ಮೂಲಕ ‘ಸ್ವತಂತ್ರವಾಗಿ ಯೋಚಿಸಿ ಮತ್ತು ಕಾರ್ಯನಿರ್ವಹಿಸಿ’ ಎಂದು ಖ್ಯಾತ ಲೇಖಕಿ- ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಶನಿವಾರ ಮಾಹೆಯ ಗಾಂಧೀಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ‘ವೈ ಐ ಆಮ್ ಎ ಲಿಬರಲ್’ ಪುಸ್ತಕದ ಲೇಖಕಿ ಸಾಗರಿಕಾ ಘೋಷ್, ವಿದ್ಯಾರ್ಥಿಗಳು ಏನನ್ನು ಧರಿಸಬೇಕು, ತಿನ್ನಬೇಕು, ಯೋಚಿಸಬೇಕು ಮತ್ತು ಹೇಗೆ ವರ್ತಿಸಬೇಕು ಹೀಗೆ ಅವರ ಅಗತ್ಯವನ್ನು ಸರಕಾರ ನಿರ್ಧರಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಎಲ್ಲ ಬಗೆಯ ಸ್ವಾತಂತ್ರ್ಯಗಳನ್ನೂ ವಿದ್ಯಾರ್ಥಿಗಳು, ಸರಕಾರದ ಯಾವುದೇ ಹಸ್ತಕ್ಷೇಪದ ವಿರುದ್ಧ ಎಚ್ಚರಿಕೆಯಿಂದ ಕಾಪಾಡಬೇಕು. ಇದೇ ನನ್ನ ಪುಸ್ತಕದ ಆತ್ಮವಾಗಿದೆ ಮತ್ತು ಈ ವಿಚಾರವನ್ನು ನಾನು ಮಹಾತ್ಮ ಗಾಂಧಿಯವರಿಂದಲೇ ಪಡೆದುಕೊಂಡಿದ್ದೇನೆ. ಸತ್ಯಾಗ್ರಹಿ ಒಬ್ಬ ಆದರ್ಶ ಆದರ್ಶವಾದಿ ಎಂದು ಸಾಗರಿಕ ಘೋಷ್ ನುಡಿದರು.
ಇಬ್ಬರು ದಿವಂಗತ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆಗಳನ್ನೂ ಬರೆದಿರುವ ಸಾಗರಿಕಾ, ಜೀವನಚರಿತ್ರೆ ಬರವಣಿಗೆಯ ಅವರ ವಿಧಾನವು ‘ಕಾಲ್ಪನಿಕ ಸ್ವರೂಪದಲ್ಲಿ ವಾಸ್ತವ ಘಟನೆಗಳನ್ನು ತೆರೆದಿಡುವುದಾಗಿದೆ’ ಎಂದು ಹೇಳಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದದ ವೇಳೆ ಅವರು ತಮ್ಮ ಎರಡೂ ಪುಸ್ತಕ ಗಳಿಂದ ಕೆಲವು ಆಯ್ದ ಭಾಗಗಳನ್ನು ಓದಿದರು.
ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವ್ಯಾಪಕ ಅನುಭವ ಹೊಂದಿರುವ ಸಾಗರಿಕಾ ಘೋಷ್, ಮಾಧ್ಯಮ ರಂಗವು ತಾಂತ್ರಿಕವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಮೌಲ್ಯಗಳು ಅಪಾಯದಲ್ಲಿವೆ. ಮತ್ತು ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ, ಸಂಸ್ಥೆಯ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಾಗರಿಕಾ ಅವರ ಸೃಜನಶೀಲ ಪತ್ರಿಕೋದ್ಯಮ, ಕಾದಂಬರಿ ಮತ್ತು ಜೀವನಚರಿತ್ರೆಯಂತಹ ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಿಗೊಂಡಿದೆ ಎಂಬುದನ್ನು ವಿವರಿಸಿದರು.