ಉಡುಪಿ: ಬೆಳ್ಳಂಪಳ್ಳಿಯಲ್ಲಿ ಎರಡು ಗುಹಾಸಮಾಧಿ ಕುರುಹು ಪತ್ತೆ!
ಉಡುಪಿ, ಎ.25: ಬೆಳ್ಳಂಪಳ್ಳಿಯ ಭೂತರಾಜ ಸನ್ನಿಧಿಯ ಸಮೀಪ ಈ ಹಿಂದೆ ಕಂಡುಬಂದಂತೆ, ಅನತಿ ದೂರದ ಬೆಳ್ಳಂಪಳ್ಳಿಯ ನಡುಮನೆ ಆಶಾಲತಾ ದಿವಾಕರ ಶೆಟ್ಟಿ ಅವರ ಬೆಟ್ಟುಗದ್ದೆಯಲ್ಲಿ ಗುಹ ಸಮಾಧಿಯೊಂದು ಇರುವ ಕುರುಹು ಪತ್ತೆಯಾಗಿದೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಶಿರ್ವ ಸುಂದರಾಮ್ ಶೆಟ್ಟಿ ಕಾಲೇಜಿನ ಪುರಾತತ್ವ ಇತಿಹಾಸ ಸಂಶೋಧಕ ಹಾಗೂ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಬೆಳ್ಳಂಪಳ್ಳಿಯ ಗುಹಾ ಸಮಾಧಿ ಇರುವ ಸ್ಥಳಕ್ಕೆ ಭೇಟಿ ನೀಡಿ, ಈ ಭಾಗದಲ್ಲಿ ಎರಡು ಗುಹಾಸಮಾಧಿ ಇರುವುದನ್ನು ಖಚಿತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಗುಹಾಸಮಾಧಿಯ ಉತ್ಖನನ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಗದ್ದೆಯ ಮಾಲಕರಾದ ಆಶಾಲತಾ ದಿವಾಕರ ಶೆಟ್ಟಿ ಅವರು ಹೇಳುವ ಪ್ರಕಾರ, ಎರಡು ವರ್ಷಗಳ ಹಿಂದೆ ಈ ಬೆಟ್ಟುಗದ್ದೆಯಲ್ಲಿ ಕೃಷಿ ಮಾಡಲು ನೀರನ್ನು ಹಾಯಿಸಿದಾಗ ನೀರೆಲ್ಲವೂ ಗದ್ದೆಯಲ್ಲಿರುವ ಹೊಂಡಗಳ ಮೂಲಕ ಹೋಗುವುದು ಗಮನಕ್ಕೆ ಬಂತು. ಅದರ ಸುತ್ತಲೂ ಹೆಂಚನ್ನು ತಡೆಗೋಡೆಯಂತೆ ಇಟ್ಟು ನೀರು ಹರಿದುಹೋಗದಂತೆ ಮಾಡಿದ್ದೇವೆ. ಆದರೂ ಕೂಡ ನೀರು ಮಾತ್ರ ಮಾತ್ರ ಎಲ್ಲಿಗೆ ಹೋಗುತ್ತಿದ ಎಂದು ತಿಳಿಯಲಾಗಲಿಲ್ಲ ಎಂದರು.
ಆದರೆ, ಐದಾರು ಗದ್ದೆ ಆಚೆಯ ಕೆಳಭಾಗದಲ್ಲಿರುವ ಗದ್ದೆಯಲ್ಲಿ ಕೆಸರಿನಿಂದ ಕೂಡಿದ ನೀರು ಕಾಣಸಿಗುತ್ತಿತ್ತು. ಕೆಳಗಿನ ಗದ್ದೆಯಲ್ಲಿ ನೀರು ಭೂಮಿಯ ಒಳಭಾಗದಲ್ಲಿ ಸಂಚರಿಸುತ್ತದೆ. ಈ ನೀರು ಕೆಸರಿನಿಂದ ಕೂಡಿರುತ್ತದೆ ಎಂದು ಭೂಮಾಲಕಿ ತಿಳಿಸಿದ್ದಾರೆ.
ಪತ್ತೆಯಾದ ಹೊಸ ಈ ಗುಹಾಸಮಾಧಿಯ ಆನತಿದೂರದಲ್ಲಿ ನಾಗಬನ ಇದೆ. ಹಾಗೆಯೇ ಬೆಳ್ಳಂಪಳ್ಳಿಯ ಭೂತರಾಜರ ಸನ್ನಿಧಿಯ ಎದುರೇ ಈ ಹಿಂದೆ ಕಾಂಕ್ರೆಟ್ ರಸ್ತೆ ಆಗುತ್ತಿರುವಾಗ ಭಾರವಾದ ಸಿಮೆಂಟಿನ ಲಾರಿ ಚಲಿಸಿ ಕುಸಿದ ಚಪ್ಪಡಿಯಿಂದ ವೃತ್ತಾಕಾರದ ಹೊಂಡ ಕಾಣಿಸಿದ್ದು, ಅಲ್ಲಿ ಕಾಮಗಾರಿ ನಡೆಸದೆ, ಆ ಪ್ರದೇಶವನ್ನು ರಕ್ಷಣೆ ಮಾಡಲಾಗಿದೆ. ಅಲ್ಲಿ ಕೂಡ ಪಕ್ಕದಲ್ಲಿಯೇ ನಾಗಬನ ಇದೆ ಎಂದು ಭೂತರಾಜ ಸನ್ನಿಧಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ ತಿಳಿಸಿದ್ದಾರೆ.
ಸಂಶೋಧಕ ಪ್ರೊ. ಟಿ.ಮುರುಗೇಶಿ ಅವರು ಅದನ್ನು ಪರಿಶೀಲಿಸಿದ್ದು, ಈ ಭಾಗದಲ್ಲಿ ಪತ್ತೆಯಾಗಿರುವುದು ಎರಡನೇ ಗುಹಾ ಸಮಾಧಿಯಾಗಿದೆ ಎಂದು ತಿಳಿಸಿದ್ದಾರೆ. ಪರ್ಕಳದ ಸಾಮಾಜಿಕ ಕಾರ್ಯಕರ್ತರಾದ ಗಣೇಶ್‌ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಅವರ ಸಹಕಾರದಿಂದ ಈ ಭಾಗದಲ್ಲಿ ಭೂತ ರಾಜನ ಸಾನಿಧ್ಯದ ಅಳಿದುಳಿದ ಕುರುಹು ಇರುವುದನ್ನು ಕೂಡ ಪತ್ತೆಹಚ್ಚಿದ್ದಾರೆ.
ಈ ಸಂದರ್ಭದಲ್ಲಿ ಪ್ರೊ.ಟಿ.ಮುರುಗೇಶಿ, ಸ್ಥಳೀಯರಾದ ಪ್ರವೀಣ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಆಶಾಲತಾ ದಿವಾಕರ್ ಶೆಟ್ಟಿ ಜೊತೆಗಿದ್ದು ಸಹಕರಿಸಿದ್ದಾರೆ.