ಚಿಕ್ಕಮಗಳೂರು: ಶಾಲಾರಂಭಕ್ಕೆ ದಿನಗಣನೆ; ಕಟ್ಟಡಕ್ಕಿಲ್ಲ ದುರಸ್ತಿ ಭಾಗ್ಯ

Update: 2022-05-14 05:16 GMT

ಚಿಕ್ಕಮಗಳೂರು, ಮೇ 14: ನಕ್ಸಲ್‌ಪೀಡಿತ ಗ್ರಾಮಗಳ ಅಭಿವೃದ್ಧಿಗೆ ಸರಕಾರ ಈ ಹಿಂದೆ ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿತ್ತು. ಈ ಅನು ದಾನದಡಿಯಲ್ಲಿ ನಕ್ಸಲ್ ಪೀಡಿತ ಗ್ರಾಮಗಳ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಲ್ಪಿಸುವುದು ಸರಕಾರದ ಉದ್ದೇಶವಾಗಿತ್ತು. ಆದರೆ ಸರಕಾರದ ಈ ಅನುದಾನ ನಕ್ಸಲ್ ಪೀಡಿತ ಗ್ರಾಮಗಳನ್ನು ಇಂದಿಗೂ ತಲುಪಿಲ್ಲ ಎಂಬುದಕ್ಕೆ ಕೊಪ್ಪ ತಾಲೂಕಿನ ಕವನಹಳ್ಳ ಎಂಬ ಕುಗ್ರಾಮದಲ್ಲಿರುವ ಸರಕಾರಿ ಶಾಲೆಯ ದುಸ್ಥಿತಿ ಜೀವಂತ ಸಾಕ್ಷಿಯಾಗಿದೆ.

ಜಿಲ್ಲೆಯ ಕೊಪ್ಪತಾಲೂಕಿನ ಬಸರೀಕಟ್ಟೆ ಗ್ರಾಮ ದಿಂದ ಕೇವಲ 6 ಕಿಮೀ ದೂರದಲ್ಲಿರುವ ಕವನ ಹಳ್ಳ ಎಂಬ ಕುಗ್ರಾಮ ನಕ್ಸಲ್ ಪೀಡಿತ ಗ್ರಾಮ ವಾಗಿತ್ತು. ಈ ಗ್ರಾಮದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಜನಾಂಗದ ನಿವಾಸಿಗಳೊಂದಿಗೆ ಇಲ್ಲಿನ ಗಿರಿಶ್ರೇಣಿಯಲ್ಲಿರುವ ಬದನೇಕಾನ್, ಮೇರ್ತಿಕಾನ್ ಮತ್ತಿತರ ಕಾಫಿ, ಟೀ ಎಸ್ಟೀಟ್‌ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹೆಚ್ಚಿ ನ ಸಂಖ್ಯೆಯಲ್ಲಿ ವಾಸವಿದ್ದಾರೆ. ಕವನಹಳ್ಳ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಮಕ್ಕಳ ವಿದ್ಯಾ ಭ್ಯಾಸಕ್ಕೆಂದು ಕವನಹಳ್ಳ ಗ್ರಾಮದಲ್ಲಿ 1-7ನೇ ತರಗತಿ ವರೆಗಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಈ ಶಾಲಾ ಕಟ್ಟಡದ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಿದೆ.

ಕವನಹಳ್ಳ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ನಿರ್ಮಿಸಿ ಯಾವ ಕಾಲವಾಗಿದೆಯೋ ಗೊತ್ತಿಲ್ಲ, ಆದರೆ ಇದುವರೆಗೂ ಈ ಶಾಲಾ ಕಟ್ಟಡ ಹಾಗೂ ಮೇಲ್ಚಾವಣಿ ದುರಸ್ತಿಯ ಭಾಗ್ಯ ಕಂಡಿಲ್ಲ.

ಶಾಲಾ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಒಂದೆಡೆಯಾದರೇ ಕಟ್ಟಡದ ಮೇಲ್ಚಾವಣಿ ಕುಸಿದು ಬೀಳುವ ಹಂತದಲ್ಲಿದೆ. ಮೇಲ್ಚಾವಣಿಗೆ ಹಾಕಲಾಗಿರುವ ಹೆಂಚುಗಳು ಅಲ್ಲಲ್ಲಿ ಗಾಳಿ ಮಳೆಗೆ ಹಾರಿ ಹೋಗಿದ್ದು, ಕಟ್ಟಡದ ಗೋಡೆಗಳ ಮೇಲೆ ಮಳೆ ನೀರು ಬಿದ್ದು ಸಂಪೂರ್ಣವಾಗಿ ಶಿಥಿಲಾವಸ್ಥೆಯ ಹಂತದಲ್ಲಿದೆ. ಕಟ್ಟಡದ ಮೇಲ್ಛಾವಣಿ ಬಾಗಿಕೊಂಡಿದ್ದು, ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಹಂತದಲ್ಲಿದೆ. 1-7ನೇ ತರಗತಿವರೆಗಿನ ಶಾಲೆಯಲ್ಲಿ ಸದ್ಯ 25-30ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಷ್ಟು ಮಕ್ಕಳಿಗೆ ಕೇವಲ ಒಂದೇ ಒಂದು ಶೌಚಾಲಯನ್ನು ಇದೆಯಾದರೂ ಶೌಚಾಲಯದ ನೈರ್ಮಲ್ಯ ಕಾಪಾಡದಿರುವುದರಿಂದ ಗಬ್ಬುನಾರುತ್ತಿದೆ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಎಂಬುದಿಲ್ಲವಾಗಿದೆ. ಶೌಚಾಲಯದ ಸುತ್ತಲು ಗಿಡಗಂಟಿಗಳು ಬೆಳೆದಿದ್ದು, ಶೌಚಾಲಯ ಹಾವು, ಚೇಳುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಇನ್ನು ಶಾಲಾ ಕಟ್ಟಡದ ಎದುರು ಗೇಟಿನ ವ್ಯವಸ್ಥೆ ಇಲ್ಲದ ಪರಿಣಾಮ ದನಕರುಗಳಿಗೆ ಈ ಶಾಲೆ ದೊಡ್ಡಿಯಂತಾಗಿದ್ದು, ಶಾಲೆಯ ಆವರಣದಲ್ಲಿ ದನದ ಸೆಗಣಿ ಎಲ್ಲೆಡೆ ಹರಡಿಕೊಂಡಿದೆ. ಮೇ 16ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಲಿದ್ದು, ಕವನಹಳ್ಳ ಶಾಲೆಯ ಬಾಗಿಲು ತೆರೆಯಲು ದಿನಗಣನೆ ಆರಂಭವಾಗಿದ್ದರೂ ಇದುವರೆಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶಾಲೆಯತ್ತ ಮುಖ ಮಾಡಿ ಶಾಲೆಯ ಕುಂದು ಕೊರತೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ.

ಬಡವರು, ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿರುವ ಈ ಶಾಲೆಯ ಕಟ್ಟಡ ಹಾಗೂ ಮೇಲ್ಛಾವಣಿ ದುರಸ್ತಿ ಮಾಡದೇ ಮಕ್ಕಳಿಗೆ ಕಟ್ಟಡದಲ್ಲಿ ಪಾಠ ಮಾಡಿದಲ್ಲಿ ಈ ಬಾರಿಯ ಮಳೆಗಾಲದಲ್ಲಿ ಗಾಳಿ ಮಳೆಗೆ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದು, ಶಾಲಾ ಮಕ್ಕಳ ಪ್ರಾಣಾಪಾಯಕ್ಕೆ ತೊಂದರೆಯಾಗುವುದು ನಿಶ್ಚಿತ. ಅದಕ್ಕೂ ಮೊದಲು ಸಂಬಂಧಿಸಿದ ಇಲಾಖಾಧಿಕಾರಿಗಳು ಶಾಲೆಯ ಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಕವನಹಳ್ಳ ಕುಗ್ರಾಮವಾಗಿದ್ದು, ಇಲ್ಲಿ ಆದಿವಾಸಿ ಸಮುದಾಯದವರು ಹಾಗೂ ಎಸ್ಟೇಟ್ ಕಾರ್ಮಿಕರು ಹೆಚ್ಚಿದ್ದಾರೆ. ಈ ಹಿಂದೆ ಈ ಗ್ರಾಮ ನಕ್ಸಲ್ ಪೀಡಿತ ಗ್ರಾಮವಾಗಿತ್ತು. ಸರಕಾರ ನಕ್ಸಲ್ ಪೀಡಿತ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ ಎನ್ನುತ್ತಾರೆ. ಆದರೆ ನಕ್ಸಲ್ ಪೀಡಿತ ಕವನಹಳ್ಳ ಗ್ರಾಮದಲ್ಲಿರುವ ಈ ಶಾಲೆಯ ಅಭಿವೃದ್ಧಿಗೆ ಯಾರೂ ಆಸಕ್ತಿ ತೋರದಿರುವುದು ಬೇಸರದ ಸಂಗತಿ. ಬಡವರ ಮಕ್ಕಳನ್ನು ಶಾಲೆಗೆ ಕಳುಹಿಸಿ ಎನ್ನುತ್ತಾರೆ. ಆದರೆ ಶಾಲೆಯ ಸ್ಥಿತಿ ನೋಡಿದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಬೇಡ ಎಂದೆನಿಸುತ್ತದೆ. ಈ ಶಾಲೆ ಮೇಲ್ಛಾವಣಿ ಮೊದಲು ದುರಸ್ತಿಯಾಗಬೇಕು. ಇಲ್ಲದಿದ್ದಲ್ಲಿ ನಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲ್ಲ. ಪರಿಣಾಮ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಬರುತ್ತೆ. ಇದಕ್ಕೆ ಸರಕಾರ, ಜನಪ್ರತಿನಿಧಿಗಳೇ ಹೊಣೆ.

ರಮೇಶ್, ಮೇರ್ತಿಕಾನ್ ಎಸ್ಟೇಟ್‌ನ ಕಾರ್ಮಿಕ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News