ಮಧ್ಯಪ್ರದೇಶದ ಸ್ಥಳೀಯ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ
Update: 2022-05-18 07:23 GMT
ಭೋಪಾಲ್: ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ನೀಡಲು ಸುಪ್ರೀಂಕೋರ್ಟ್ ಬುಧವಾರ ಅನುಮತಿ ನೀಡಿದೆ. ಈ ತೀರ್ಪಿನಿಂದ ಮಧ್ಯಪ್ರದೇಶ ಸರಕಾರ ನಿಟ್ಟುಸಿರು ಬಿಟ್ಟಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ವರದಿಯನ್ನು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್, ಒಂದು ವಾರದೊಳಗೆ ಚುನಾವಣೆಯನ್ನು ಘೋಷಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗವು ತನ್ನ ವರದಿಯನ್ನು ಮಂಡಿಸಿದ್ದು ಅದರಲ್ಲಿ "ತ್ರಿವಳಿ ಪರೀಕ್ಷೆ" ಅನುಸರಿಸಲಾಗಿದೆ ಎಂದು ಹೇಳಿದೆ.
ಸ್ಥಳೀಯ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿಯನ್ನು ತೆರವುಗೊಳಿಸದ ಸುಪ್ರೀಂ ಕೋರ್ಟ್‌ನ ಮೇ 10 ರ ಆದೇಶಕ್ಕೆ ಬದಲಾವಣೆಗಳನ್ನು ಕೋರಿ ಮಧ್ಯಪ್ರದೇಶ ಸರಕಾರವು ತಿದ್ದುಪಡಿ ಅರ್ಜಿಯನ್ನು ಸಲ್ಲಿಸಿತ್ತು.
ಮಧ್ಯಪ್ರದೇಶದಲ್ಲಿ ಎರಡು ವರ್ಷಗಳಿಂದ 23,000 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆ ಸ್ಥಾನಗಳು ಖಾಲಿ ಇದ್ದು ಚುನಾವಣೆಗಾಗಿ ಕಾಯುತ್ತಿವೆ.