ಫಾ. ಸ್ಟ್ಯಾನ್‌ ಸ್ವಾಮಿಗೆ ಜಿನೀವಾ ಮಾನವ ಹಕ್ಕುಗಳ ಘಟಕದಿಂದ ವಿಶೇಷ, ಮರಣೋತ್ತರ ಗೌರವ ಪ್ರಶಸ್ತಿ ಪ್ರದಾನ

Update: 2022-06-02 14:45 GMT

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿ, ಕಳೆದ ವರ್ಷ ಜೈಲಿನಲ್ಲೇ ನಿಧನರಾದ ಜಾರ್ಖಂಡ್‌ನ ಜೆಸ್ಯೂಟ್ ಪಾದ್ರಿ ಮತ್ತು ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಫಾದರ್ ಸ್ಟಾನ್ ಸ್ವಾಮಿ ಅವರು ಜಿನೀವಾದ ಮಾರ್ಟಿನ್ ಎನ್ನಲ್ಸ್ ಪ್ರಶಸ್ತಿ-2022 ರ “ವಿಶೇಷ, ಮರಣೋತ್ತರ ಗೌರವ”ಕ್ಕೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಮಾನವ ಹಕ್ಕುಗಳ ಕಾರ್ಯಕರ್ತರ ನೊಬೆಲ್ ಪ್ರಶಸ್ತಿ ಎಂದೂ ಪರಿಗಣಿಸಲಾಗುತ್ತದೆ.  

ಬುರ್ಕಿನಾ ಫಾಸೊದ ದೌಡಾ ಡಿಯಲ್ಲೊ, ವಿಯೆಟ್ನಾಂನ ಫಾಮ್ ಡೊನ್ ಟ್ರಾಂಗ್ ಮತ್ತು ಬಹ್ರೇನ್‌ನ ಅಬ್ದುಲ್-ಹಾದಿ ಅಲ್-ಖವಾಜಾ ಅವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

"ಫಾದರ್ ಸ್ಟಾನ್ ಅವರನ್ನು 2021 ರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು, ಆದರೆ ಅದು ಅವರನ್ನು ತಲುಪುವ ಮೊದಲೇ ಅವರು ನಿಧನರಾಗಿದ್ದಾರೆ" ಎಂದು ಪ್ರಶಸ್ತಿ ತೀರ್ಪುಗಾರರ ಅಧ್ಯಕ್ಷ ಹ್ಯಾನ್ಸ್ ಥೂಲೆನ್ ಹೇಳಿದ್ದಾರೆ. "ಮಾನವ ಹಕ್ಕುಗಳಿಗೆ ಫಾದರ್ ಸ್ಟಾನ್ ಅವರು ನೀಡಿದ ಅನೇಕ ಕೊಡುಗೆಗಳ ಮೇಲೆ ಬೆಳಕು ಚೆಲ್ಲಲು ತೀರ್ಪುಗಾರರು ಬಯಸಿದ್ದಾರೆ, ಅದನ್ನು ಭಾರತೀಯ ಅಧಿಕಾರಿಗಳು ಅನ್ಯಾಯದ ಸೆರೆವಾಸ ವಿಧಿಸಿ ಮರೆಮಾಚಲು ಸಾಧ್ಯವಿಲ್ಲ" ಎಂದು ಅವರು ಪ್ರಶಸ್ತಿ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ಫಾದರ್ ಸ್ಟಾನ್ ಅವರನ್ನು 2020 ರ ಅಕ್ಟೋಬರ್ 8 ರಂದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿಯಲ್ಲಿ ಬಂಧಿಸಲಾಗಿತ್ತು.  ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ತಿನ ಹಿಂಸಾಚಾರದಲ್ಲಿ ಸ್ಟಾನ್‌ ಸ್ವಾಮಿ ಸಂಬಂಧ ಹೊಂದಿದ್ದಾರೆಂದು ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News