ವಿಶ್ವ ತಂಬಾಕು ರಹಿತ ದಿನಾಚರಣೆ: ಪರಿಸರ ಸ್ನೇಹಿ ಕಲಾಕೃತಿ ಪ್ರದರ್ಶನ
ಉಡುಪಿ: ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ತಂಬಾಕು ಸೇವನೆ ಅಪಾಯದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ್ ರಚಿಸಿರುವ ಪರಿಸರ ಸ್ನೇಹಿ ವಿಶಿಷ್ಟ ಕಲಾಕೃತಿಯನ್ನು ಶನಿವಾರ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರದರ್ಶಿಸಲಾಯಿತು.
ಕಲಾಕೃತಿಗೆ ಚಾಲನೆ ನೀಡಿದ ಹಿರಿಯ ಕಲಾವಿದ ರಮೇಶ್ ರಾವ್ ಮಾತನಾಡಿ, ಉತ್ತಮ ಸಂದೇಶ ಕೊಡುವ ಅನುಸ್ಥಾಪನಾ ಕಲೆ ಇದಾಗಿದೆ. ತಂಬಾಕಿನಿಂದ ಹಲವು ದುಷ್ಪರಿಣಾಮಗಳಿದ್ದು, ಅವುಗಳನ್ನು ದೂರ ಮಾಡುವ ಪ್ರಯತ್ನವನ್ನು ಕಲಾವಿದರು ಈ ಕಲೆಯ ಮೂಲಕ ಮಾಡುತ್ತಿದ್ದಾರೆ. ಇಂದು ಸಿಗರೇಟು, ತಂಬಾಕು ಸೇವನೆ ದುಶ್ಚಟವಾಗಿ ವ್ಯಾಪಿಸಿದ್ದು, ಇದರ ಹೊಗೆಯಿಂದ ಪರಿಸರಕ್ಕೆ ಹಾಗೂ ಮಾನವನ ಜೀವಕ್ಕೂ ಅಪಾಯವಾಗಿದೆ. ಸರಕಾರ ಇದರ ಬಗ್ಗೆ ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯ ಇದೆ ಎಂದು ತಿಳಿಸಿದರು.
ಕಲಾವಿದ ಶ್ರೀನಾಥ್ ಮಣಿಪಾಲ್ ಮಾತನಾಡಿ, ‘ನಮ್ಮ ಪರಿಸರವನ್ನು ತಂಬಾಕಿನ ಅಪಾಯದಿಂದ ರಕ್ಷಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ತಂಬಾಕಿ ನಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಈ ಕಲಾಕೃತಿಯನ್ನು ಪ್ರದರ್ಶಿಸಲಾಗಿದೆ. ಇದನ್ನು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ರಚಿಸಲಾಗಿದೆ. ಮುಖ್ಯವಾಗಿ ಕಾರ್ಡ್ ಬೋರ್ಡ್‌ಗಳನ್ನು ಉಪಯೋಗಿಸ ಲಾಗಿದೆ ಎಂದು ಹೇಳಿದರು.
ಈ ಕಲಾಕೃತಿಯಲ್ಲಿನ ಏಡಿಯು ಕ್ಯಾನ್ಸರ್‌ನ್ನು ಪ್ರತಿಬಿಂಬಿಸುತ್ತದೆ. ಕೊಡೆಯನ್ನು ಇರಿಸಿ, ಕ್ಯಾನ್ಸರ್‌ನ ನೆರಳು ನಮ್ಮ ಪರಿಸರದ ಮೇಲೆ ಬಿದ್ದಿರುವುದನ್ನು ಇದರಲ್ಲಿ ತೋರಿಸಲಾಗಿದೆ. ಆ ಮೂಲಕ ನಮ್ಮ ಪರಿಸರವನ್ನು ರಕ್ಷಿಸುವ ಸಂದೇಶವನ್ನು ಸಾರಲಾಗಿದೆ. ಅದೇ ರೀತಿ ತಂಬಾಕಿನ ಮೂಲಕ ಪಂಜರವನ್ನು ನಿರ್ಮಿಸಿದ್ದು, ಆ ಪಂಜರದಲ್ಲಿ ಸಿಲುಕಿರುವ ನಮ್ಮ ಪರಿಸರವನ್ನು ಹೊರ ತರಬೇಕೆಂಬ ಸಂದೇಶ ಕೂಡ ಕಲಾಕೃತಿಯಲ್ಲಿ ಅಡಕವಾ ಗಿದೆ. ಈ ಕಲಾಕೃತಿಯನ್ನು ಮುಂದೆ ಜನ ಸೇರುವ ಸ್ಥಳಗಳಲ್ಲಿ ಇರಿಸಿ ಜನಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.