ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಧರಣಿ

Update: 2022-06-11 12:41 GMT

ಕುಂದಾಪುರ : ಕೊಲ್ಲೂರು ಹೆಮ್ಮಾಡಿ ಕುಂದಾಪುರ ಮತ್ತು ಕೆರಾಡಿ ಮಾರಣಕಟ್ಟೆ-ಕುಂದಾಪುರ ಮತ್ತು ಕೆರಾಡಿ-ಬೆಳ್ಳಾಲ-ಕುಂದಾಪುರ ಮಾರ್ಗದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವ ದಲ್ಲಿ ವಿದ್ಯಾರ್ಥಿಗಳು ಕುಂದಾಪುರದಲ್ಲಿ ಶನಿವಾರ ಧರಣಿ ನಡೆಸಿದರು.

ಕೊಲ್ಲೂರಿಗೆ ಈವರೆಗೆ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಕಲ್ಪಿಸಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ನಿತ್ಯ ಹಣ ನೀಡಿ ಹೋಗಬೇಕಾದ ಪರಿಸ್ಥಿತಿ ಇಂದಿಗೂ ಇದೆ. ಇದರಿಂದ ಬಡ ವಿದ್ಯಾರ್ಥಿ ಗಳಿಗೆ ತುಂಬಾ ಸಮಸ್ಯೆ ಯಾಗುತ್ತಿದೆ. ಕೆರಾಡಿ -ಮಾರಣಕಟ್ಟೆ ‘ಕುಂದಾಪುರ ಮಾರ್ಗದಲ್ಲಿ ೫೦೦ ಮತ್ತು ಕೆರಾಡಿ-ಬೆಳ್ಳಾಲ- ಕುಂದಾಪುರ ಮಾರ್ಗದಲ್ಲಿ ೪೦೦ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಈಗಾಗಲೇ ಈ ಮಾರ್ಗದಲ್ಲಿ ಪರವಾನಗಿ ಇದ್ದರೂ ಸಹ ಯಾವುದೇ ಸರಕಾರಿ ಬಸ್‌ಗಳು ಸಂಚರಿಸುತ್ತಿಲ್ಲ ಎಂದು ಧರಣಿ ನಿರತ ವಿದ್ಯಾರ್ಥಿಗಳು ದೂರಿದರು.

ಈ ಸಮಸ್ಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸದ್ದಿದ್ದಲ್ಲಿ ತಾಲೂಕು ಮಟ್ಟದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗುವ ಸಮಸ್ಯೆಗಳಿಗೆ ಅಧಿಕಾರಿಗಳೇ ನೇರ ಹೊಣೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

ಬಳಿಕ ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಎಬಿವಿಪಿ ಕುಂದಾಪುರ ತಾಲೂಕು ಸಂಚಾಲಕ ಜಯಸೂರ್ಯ ಶೆಟ್ಟಿ, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಧ್ವನಿ, ಭಂಡಾಕಾರ್ಸ್‌ ಕಾಲೇಜಿನ ವಿದ್ಯಾರ್ಥಿಗಳಾದ ನಾಗೇಶ್, ಶ್ರೀನಿಧಿ, ಬಿ.ಬಿ.ಹೆಗ್ಡೆ ಕಾಲೇಜಿನ ಅನುಷಾ, ಪ್ರಥ್ವಿ, ಕಿಶನ್, ಬಸ್ರೂರು ಶಾರದಾ ಕಾಲೇಜಿನ ದೀಪಾ, ರಂಜಿತ್, ಕೋಟೇಶ್ವರ ಕಾಲೇಜಿನ ಅಭಿ, ಆರ್.ಎನ್ ಶೆಟ್ಟಿ ಕಾಲೇಜಿನ ನಿತಿನ್, ಸುಜನ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News