ಮಕ್ಕಳಿಂದ ದುಡಿಸಿಕೊಳ್ಳುವ ಮಾಲಕರ ವಿರುದ್ಧ ಕಾನೂನು ಕ್ರಮ: ನ್ಯಾ. ಶರ್ಮಿಳಾ

Update: 2022-07-01 14:33 GMT

ಉಡುಪಿ : ಮಕ್ಕಳಿಗೆ ಬಾಲ್ಯದಲ್ಲಿ ಶಿಕ್ಷಣ ಕೊಡಿಸುವುದು ಮುಖ್ಯ ಕರ್ತವ್ಯವಾಗಿದ್ದು, ಮಕ್ಕಳಿಂದ ದುಡಿಮೆ ಮಾಡಿಸು ವುದು ಶಿಕ್ಷಾರ್ಹ ಅಪರಾಧ ವಾಗಿದೆ. ಇಂತಹ ಘಟನೆಗಳು ಕಂಡುಬಂದಲ್ಲಿ ದುಡಿಸಿಕೊಳ್ಳುವ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಹೇಳಿದ್ದಾರೆ.  

ಮಲ್ಪೆಯ ಓಷಿಯನ್ ಫ್ರೆಶ್ ಎಕ್ಸ್‌ಪೋರ್ಟ್ ಸಂಸ್ಥೆಯಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಹಾಗೂ ಓಷಿಯನ್ ಫ್ರೆಶ್ ಎಕ್ಸ್‌ಪೋರ್ಟ್ ಮಲ್ಪೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ೨೦೧೬ರ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

೧೪ ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಕೆಲಸಕ್ಕೆ ನೇಮಿಸಿ ಕೊಳ್ಳುವಂತಿಲ್ಲ. ೧೮ ವರ್ಷದ ಒಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ದುಡಿಸಿಕೊಳ್ಳುವುದು ಸಹ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಇದಕ್ಕೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾ ಗುವುದು. ಈ ಅಪರಾಧಕ್ಕೆ ೬ ತಿಂಗಳುಗಳಿಗೂ ಕಡಿಮೆ ಇಲ್ಲದಂತೆ ೨ ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ಕನಿಷ್ಠ ರೂ. ೨೦,೦೦೦ದಿಂದ ಗರಿಷ್ಠ ೫೦,೦೦೦ ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದರು.

ಬಾಲ ಕಾರ್ಮಿಕರನ್ನು ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ದುಡಿಸಿ ಕೊಳ್ಳುತ್ತಿರುವುದು ಕಂಡು ಬಂದಲ್ಲಿ ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ: ೧೦೯೮ಗೆ ತಕ್ಷಣ ಕರೆಮಾಡಿ ದೂರು ನೀಡಬಹುದಾಗಿದೆ ಎಂದವರು ಹೇಳಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಮಾತನಾಡಿ, ಬಾಲ ಕಾರ್ಮಿಕ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯಡಿ, ನಿರೀಕ್ಷಕರಾಗಿ ಅಧಿಸೂಚಿಸಲ್ಪಟ್ಟ ಅಧಿಕಾರಿಗಳು ಜಿಲ್ಲೆಯಲ್ಲಿ ನಿರಂತರವಾದ ಯೋಜಿತ ಹಾಗೂ ಅನಿರೀಕ್ಷಿತ ದಾಳಿ ನಡೆಸಿ, ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸುತ್ತಿದ್ದಾರೆ. ಬಾಲಕಾರ್ಮಿಕರನ್ನು ದುಡಿಸಿ ಕೊಳ್ಳುವುದು ಗುರುತರ ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಮೊಕದ್ದಮೆಗಳನ್ನು ಹೂಡಲು ಪೊಲೀಸ್ ಅಧಿಕಾರಿಗಳು, ಕಾರ್ಮಿಕ ಅಧಿಕಾರಿ ಗಳ ಜೊತೆಗೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ದಿವಾಕರ ಕುಮಾರ್, ರಸಿಕ, ಕವಿತಾ, ಓಷಿಯನ್ ಫ್ರೆಶ್ ಎಕ್ಸ್‌ಪೋರ್ಟ್‌ನ ಪಾಲುದಾರ ರಾಮಚಂದ್ರ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು. 

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮೃತಾ ಕಾರ್ಯಕ್ರಮ ನಿರೂಪಿಸಿದರು. ಪ್ರಭಾರ ಕಾರ್ಮಿಕ ನಿರೀಕ್ಷಕ ರಾಜಶೇಖರ ರೆಡ್ಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News