ವಾರದಲ್ಲಿ ಲಕ್ಷ ದಾಟಿದ ಕೋವಿಡ್ ಪ್ರಕರಣ; 4 ತಿಂಗಳಲ್ಲೇ ಗರಿಷ್ಠ
ಹೊಸದಿಲ್ಲಿ: ರವಿವಾರ ಅಂತ್ಯವಾದ ಒಂದು ವಾರದ ಅವಧಿಯಲ್ಲಿ ದೇಶಾದ್ಯಂತ ಒಂದು ಲಕ್ಷ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ನಾಲ್ಕು ತಿಂಗಳಲ್ಲೇ ಗರಿಷ್ಠ ಸಂಖ್ಯೆಯಾಗಿದೆ. ಮಹಾರಾಷ್ಟ್ರ, ದೆಹಲಿ, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರೂ, ಬಂಗಾಳ, ತಮಿಳುನಾಡು, ಒಡಿಶಾ, ಬಿಹಾರ, ಆಂಧ್ರಪ್ರದೇಶ, ಅಸ್ಸಾಂ ಹಾಗೂ ಇತರ ಕೆಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕರಣಗಳು ಹೆಚ್ಚಿರುವುದು ಒಟ್ಟಾರೆ ಪ್ರಕರಣಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.1 ಲಕ್ಷಕ್ಕೆ ಏರಿಕೆಯಾಗಿದ್ದು, ಒಂದು ವಾರದ ಅವಧಿಯಲ್ಲಿ ಕನಿಷ್ಠ 192 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಹಿಂದಿನ ಏಳು ದಿನಗಳಲ್ಲಿ ಸೋಂಕಿಗೆ ಬಲಿಯಾದ 125 ಜನಕ್ಕೆ ಹೋಲಿಸಿದರೆ ಈ ವಾರ ಸಾವಿನ ಸಂಖ್ಯೆ ಶೇಕಡ 54ರಷ್ಟು ಹೆಚ್ಚಿದೆ. ದೇಶಾದ್ಯಂತ ಮೃತಪಟ್ಟವರ ಪೈಕಿ ಕೇರಳದ ಪಾಲು ಶೇಕಡ 44ರಷ್ಟಾಗಿದೆ.
ಕಳೆದ ವಾರ ದೇಶದಲ್ಲಿ 97,555 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಈ ವಾರ ಶೇಕಡ 14ರಷ್ಟು ಹೆಚ್ಚು ಪ್ರಕರಣಗಳು ದಾಖಲಾಗಿದೆ. ಫೆಬ್ರವರಿ 14-20ರ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಸತತ ಆರು ವಾರಗಳಿಂದ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ ವಾರ ಶೇಕಡ 23ರಷ್ಟು, ಅದಕ್ಕೂ ಹಿಂದಿನ ಎರಡು ವಾರಗಳಲ್ಲಿ ಶೇಕಡ 63 ಮತ್ತು ಶೇಕಡ 91ರಷ್ಟು ಪ್ರಕರಣಗಳು ಹೆಚ್ಚಿದ್ದವು.
ಹಲವು ರಾಜ್ಯಗಳಲ್ಲಿ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಹಿಂದಿನ ವಾರ 26917 ಪ್ರಕರಣಗಳು ವರದಿಯಾಗಿದ್ದ ಮಹಾರಾಷ್ಟ್ರದಲ್ಲಿ ಈ ವಾರ ಪ್ರಕರಣಗಳ ಸಂಖ್ಯೆ 22630ಕ್ಕೆ ಇಳಿದಿದೆ. 11 ವಾರಗಳಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರಕರಣಗಳು ಇಳಿದಿವೆ. ದೆಹಯಲ್ಲಿ 40%, ಹರ್ಯಾಣದಲ್ಲಿ 27% ಮತ್ತು ಉತ್ತರ ಪ್ರದೇಶದಲ್ಲಿ ಶೇಕಡ 22ರಷ್ಟು ಪ್ರಕರಣಗಳು ಇಳಿದಿವೆ. ಕೇರಳದಲ್ಲಿ ಮಾತ್ರ ಶೇಕಡ 7ರಷ್ಟು ಪ್ರಕರಣಗಳು ಹೆಚ್ಚಿ ಈ ವಾರ 26606ನ್ನು ತಲುಪಿದೆ.