ಮಲ್ಪೆ: ಹೆಚ್ಚುತ್ತಿರುವ ಕಳ್ಳತನ; ಕ್ರಮಕ್ಕೆ ಅಂಬೇಡ್ಕರ್ ಯುವಸೇನೆ ಮನವಿ

Update: 2022-07-05 15:23 GMT

ಮಲ್ಪೆ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ, ಅಂಗಡಿ, ಶಾಲೆ, ಮುಂಗಟ್ಟುಗಳ ಮೇಲೆ ನಿರಂತರ ಕಳ್ಳತನ ನಡೆಯುತ್ತಿದ್ದರೂ ಮಲ್ಪೆ ಪೊಲೀಸರ ನಿರ್ಲಕ್ಷವನ್ನು ಖಂಡಿಸಿ  ಅಂಬೇಡ್ಕರ್ ಯುವಸೇನೆಯ ಮಲ್ಪೆ ನಗರ ಶಾಖೆ ಇಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಆಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ ಅವರಿಗೆ ಮನವಿ ಅರ್ಪಿಸಿತು.

ಮಲ್ಪೆ ಪೊಲೀಸ್ ಠಾಣೆಯ ನಾಲ್ಕು ಹೆಚ್ಚೆಯ ಅಂತರದಲ್ಲಿರುವ  ಬಲರಾಮ ನಗರದ ಸುತ್ತುಮುತ್ತಲಿನ ದಲಿತ ಹಾಗೂ ಹಿಂದುಳಿದ ವರ್ಗಗಳ ಮನೆಗಳಿಗೆ ಕಳೆದ ಹಲವು ದಿನಗಳಿಂದ ಕಳ್ಳತನಕ್ಕೆ ಸಂಚು ಹಾಕಿದ್ದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳದೆ, ನಾಗರಿಕರಲ್ಲಿ ಧೈರ್ಯವನ್ನೂ ತುಂಬದೆ, ಕಳ್ಳತನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದಕ್ಕೆ ಅಂಬೇಡ್ಕರ್ ಯುವಸೇನೆಯ ಮಲ್ಪೆ ನಗರಶಾಖೆಯ ಅಧ್ಯಕ್ಷ ಕೃಷ್ಣ ಶ್ರೀಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಇದೇ ಪರಿಸರದಲ್ಲಿ ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ರೂ. ಬೆಲೆಬಾಳುವ ಹಣ,ಆಭರಣ ದೋಚಿರುವ ಘಟನೆ ಮೇಲಿಂದ ಮೇಲೆ ನಡೆಯುತ್ತಿದ್ದರೂ ಮಲ್ಪೆ ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಮತ್ತು ರಾತ್ರಿ ವೇಳೆ ಗಸ್ತು ಹೆಸರಿನಲ್ಲಿ ಬೈಕಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಕೃಷ್ಣ ಶ್ರೀಯಾನ್ ನೇತೃತ್ವದ ಈ ನಿಯೋಗದಲ್ಲಿ ದಲಿತ ಚಿಂತಕ ಜಯನ್ ಮಲ್ಪೆ, ಹರೀಶ್ ಸಾಲ್ಯಾನ್, ಮಂಜುನಾಥ ಕಪ್ಪೆಟ್ಟು, ಗಣೇಶ್ ನೆರ್ಗಿ, ಸಂತೋಷ್ ಕಪ್ಪೆಟ್ಟು, ಗುಣವಂತ ತೊಟ್ಟಂ, ಪ್ರಸಾದ್ ಮಲ್ಪೆ, ಸತೀಶ್ ಕಪ್ಪೆಟ್ಟು, ವಿನಯ ಬಲರಾಮನಗರ, ಅಶೋಕ್ ಪುತ್ರನ್, ಬಿ.ಎನ್.ಪ್ರಶಾಂತ್, ಭಗವಾನ್ ಮಲ್ಪೆ, ಅರುಣ್ ಸಾಲ್ಯಾನ್, ಸುಮಿತ್ ಕಪ್ಪೆಟ್ಟು ಮುಂತಾದವರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News