ಬ್ರಿಟನ್-ಪ್ರಜಾಸತ್ತೆಯ ಜೀವಂತಿಕೆಗೆ ಜ್ವಲಂತ ಉದಾಹರಣೆ

Update: 2022-07-16 07:59 GMT

ಬೊರಿಸ್ ಜಾನ್ಸನ್ ಹೊರದಬ್ಬಲ್ಪಟ್ಟಿರುವುದು ಬ್ರಿಟಿಷ್ ಪ್ರಜಾಸತ್ತೆಯ ಸ್ವಾಯತ್ತ ಸಂಸ್ಥೆಗಳಿಗೆ ಸಂದ ಗೌರವವಾಗಿದೆ. ತಾವು ಹೇಗೆ ಕಾರ್ಯನಿರ್ವಹಿಸಬೇಕಾಗಿತ್ತೋ ಹಾಗೆ ಕಾರ್ಯನಿರ್ವಹಿಸುವ ಮೂಲಕ, ಮಾಧ್ಯಮಗಳು, ಸಂಸತ್, ನಾಗರಿಕ ಸೇವೆಗಳು, ಪ್ರತಿಪಕ್ಷ ಮತ್ತು ಆಡಳಿತಾರೂಢ ಪಕ್ಷಗಳೆಲ್ಲವೂ, ಬ್ರಿಟಿಷ್‌ರಾಜಕೀಯ ವ್ಯವಸ್ಥೆಯು ಬದುಕುಳಿಯಲು ಮತ್ತು ಪುನಶ್ಚೇತನಗೊಳ್ಳಲು ನೆರವಾಗಿವೆ. ಆದರೆ, ದುರದೃಷ್ಟವಶಾತ್, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಈ ಐದು ಸಂಸ್ಥೆಗಳು ನಿಷ್ಕ್ರಿಯವಾಗಿವೆ ಅಥವಾ ರಾಜಿ ಮಾಡಿಕೊಂಡಿವೆ. ನಾವು ಭಾರತೀಯರು ಬ್ರಿಟಿಷರನ್ನು ಅವರ ಸಾಮ್ರಾಜ್ಯಶಾಹಿ ಇತಿಹಾಸಕ್ಕಾಗಿ ಬಯ್ಯಬಹುದು ಮತ್ತು ನಿಂದಿಸಬಹುದು. ಆದರೆ, ತಮ್ಮ ಪ್ರಜಾಸತ್ತಾತ್ಮಕ ವರ್ತಮಾನವನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಅವರಿಂದ ಕಲಿಯುವ ಪಾಠಗಳೂ ಹಲವಿರಬಹುದು.



2018ರಲ್ಲಿ, ಇಬ್ಬರು ಹಾರ್ವರ್ಡ್ ಪ್ರೊಫೆಸರ್‌ಗಳು ‘ಪ್ರಜಾಸತ್ತೆಗಳು ಹೇಗೆ ಸಾಯುತ್ತವೆ?’ ಎಂಬ ಶೀರ್ಷಿಕೆಯಲ್ಲಿ ಪುಸ್ತಕವೊಂದನ್ನು ಬರೆದರು. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಶ್ಚರ್ಯಕರ ರೀತಿಯಲ್ಲಿ ಆಯ್ಕೆಯಾದ ವಿದ್ಯಮಾನದಿಂದ ಪ್ರಭಾವಿತರಾಗಿ ಅವರು ಆ ಪುಸ್ತಕವನ್ನು ಬರೆದರು. ತಮ್ಮ ರಾಜಕೀಯ ವ್ಯವಸ್ಥೆಯು ಶಾಶ್ವತವಾಗಿರುತ್ತದೆ ಎಂಬ ನಿರ್ಲಕ್ಷ ಧೋರಣೆಯನ್ನು ಹಳೆಯ ಮತ್ತು ಸ್ಥಾಪಿತ ಪ್ರಜಾಸತ್ತೆಗಳೂ ತಳೆಯಬಾರದು ಎಂಬುದಾಗಿ ಆ ಪುಸ್ತಕ ಹೇಳುತ್ತದೆ. ಯಾಕೆಂದರೆ, ಜನರ ಪೂರ್ವಾಗ್ರಹಗಳು ಮತ್ತು ಹುಚ್ಚು ಭಾವನೆಗಳನ್ನು ಬಡಿದೆಬ್ಬಿಸಬಲ್ಲ ನಾಯಕನೊಬ್ಬ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ವಾಯತ್ತತೆಯನ್ನೇ ಕಡೆಗಣಿಸಿ ಕ್ಷಿಪ್ರವಾಗಿ ಪ್ರಜಾಸತ್ತೆಯ ಕಾರ್ಯವಿಧಾನವನ್ನೇ ಬದಲಾಯಿಸಬಲ್ಲ ಎಂದು ಪುಸ್ತಕ ಹೇಳುತ್ತದೆ.
ಬ್ರಿಟನ್‌ನಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳಿಂದ ಪ್ರೇರಿತವಾಗಿ, ‘ಪ್ರಜಾಸತ್ತೆಗಳು ಹೇಗೆ ಬದುಕುತ್ತವೆ?’ ಎಂಬ ಶೀರ್ಷಿಕೆಯಲ್ಲಿ ಈ ಪುಸ್ತಕದ ಎರಡನೇ ಭಾಗವನ್ನು ಬರೆಯಬಹುದೆನಿಸುತ್ತದೆ. ಇದರಲ್ಲಿ, ಬ್ರಿಟನ್‌ನಲ್ಲಿ ನಡೆದ ಇತ್ತೀಚಿನ ವಿದ್ಯಮಾನಗಳನ್ನು ಪ್ರಧಾನ ವಿಷಯವಾಗಿ ಚರ್ಚಿಸಬಹುದಾಗಿದೆ. ಬ್ರಿಟನ್ ಚುನಾವಣೆಯಲ್ಲಿ ತನ್ನ ಕನ್ಸರ್ವೇಟಿವ್ ಪಕ್ಷವನ್ನು ಬೃಹತ್ ವಿಜಯದತ್ತ ಮುನ್ನಡೆಸಿದ ಕೇವಲ ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಬೊರಿಸ್ ಜಾನ್ಸನ್ ರಾಜೀನಾಮೆ ನೀಡಬೇಕಾಯಿತು.
ಬ್ರಿಟಿಷ್ ಸಂಸದೀಯ ಚುನಾವಣೆಗಳಲ್ಲಿ ಎರಡು (ಅಥವಾ ಹೆಚ್ಚಿನ) ಪಕ್ಷಗಳು ಪರಸ್ಪರ ಸ್ಪರ್ಧಿಸುತ್ತವೆ. ಅಲ್ಲಿನ ಚುನಾವಣೆಗಳು ಅಧ್ಯಕ್ಷೀಯ ಮಾದರಿಯಲ್ಲಿ ನಡೆದಿರುವುದು ತೀರಾ ಅಪರೂಪ. ಆದರೆ, 2019ರಲ್ಲಿ ನಡೆದ ಚುನಾವಣೆಯನ್ನು ಕನ್ಸರ್ವೇಟಿವ್ ಪಕ್ಷವು ಮುಖ್ಯವಾಗಿ ಬೊರಿಸ್ ಜಾನ್ಸನ್‌ರ ವರ್ಚಸ್ಸು ಮತ್ತು ಜನಪ್ರಿಯತೆಯಿಂದಲೇ ಗೆದ್ದಿತು. ಅವರೊಬ್ಬ ಚತುರ ಮಾತುಗಾರ. ಅವರ ಕೆದರಿದ ಕೂದಲು ಮತ್ತು ಅಸ್ತವ್ಯಸ್ತ ಬಟ್ಟೆಗಳನ್ನು ಸಾಮಾನ್ಯ ಬ್ರಿಟಿಷ್ ಮತದಾರರು ಇಷ್ಟಪಟ್ಟಂತೆ ಕಂಡರು. ಆ ಚುನಾವಣೆಯಲ್ಲಿ, ಅವರ ಪಕ್ಷವು 1987ರ ನಂತರದ ಅತಿ ಹೆಚ್ಚಿನ ಸ್ಥಾನಗಳನ್ನು (365) ಗೆದ್ದಿತು ಮತ್ತು 1979ರ ನಂತರದ ಗರಿಷ್ಠ ಮತದ ಪಾಲನ್ನು ಪಡೆಯಿತು. ಅದರ ಪ್ರಧಾನ ಎದುರಾಳಿ ಲೇಬರ್ ಪಕ್ಷಕ್ಕೆ ಕೇವಲ 202 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಇದು 1935ರ ಬಳಿಕ ಆ ಪಕ್ಷದ ಅತ್ಯಂತ ಕಳಪೆ ಸಾಧನೆಯಾಗಿದೆ. ಉತ್ತರ ಬ್ರಿಟನ್‌ನಲ್ಲಿರುವ ಶ್ರಮಿಕ ವರ್ಗದ ಜಿಲ್ಲೆಗಳು ಹಿಂದಿನಿಂದಲೂ ಲೇಬರ್ ಪಕ್ಷಕ್ಕೆ ಮತಗಳನ್ನು ಹಾಕುತ್ತಾ ಬಂದಿದ್ದವು. ಆದರೆ, ಕಳೆದ ಬಾರಿ ಅಲ್ಲಿನ ಬಹುತೇಕ ಮತಗಳು ಕನ್ಸರ್ವೇಟಿವ್ ಪಕ್ಷಕ್ಕೆ ಸಾಮೂಹಿಕ ವಲಸೆ ಹೋದವು.
ಚುನಾವಣೆಯಲ್ಲಿ ಪಡೆದ ಅಗಾಧ ಯಶಸ್ಸಿನ ಹಿನ್ನೆಲೆಯಲ್ಲಿ, ಬೊರಿಸ್ ಜಾನ್ಸನ್ ಸಹಜವಾಗಿಯೇ ತನ್ನ ಪಕ್ಷದ ಮೇಲೆ ಪ್ರಾಬಲ್ಯ ಗಳಿಸಿದರು. ಮೊದಲ ಬಾರಿಗೆ ಆಯ್ಕೆಯಾದ ಕನ್ಸರ್ವೇಟಿವ್ ಸಂಸದರಂತೂ ಬೊರಿಸ್ ಜಾನ್ಸನ್‌ರನ್ನು ಆರಾಧ್ಯ ದೈವವೆಂಬಂತೆ ಕಂಡರು. ಅವರನ್ನು ಎಲ್ಲಾ ರೀತಿಯ ಟೀಕೆಗಳಿಂದ ರಕ್ಷಿಸುತ್ತಾ ಬಂದರು. ಜಾನ್ಸನ್, ಟ್ರಂಪ್‌ರ ಯಶಸ್ಸಿನಿಂದ ಪ್ರಭಾವಿತರಾಗಿರುವುದು ಸ್ಪಷ್ಟವಾಗಿತ್ತು. ಅವರ ರಾಜಕೀಯವು ಅಮೆರಿಕದ ಜನಮರುಳು ನಾಯಕ ಟ್ರಂಪ್‌ರಿಂದ ಆಂಶಿಕವಾಗಿ ಪ್ರಭಾವಿತಗೊಂಡಿತ್ತು. ಅವರು ಪಕ್ಷದ ವ್ಯವಸ್ಥೆಯನ್ನು ಕಡೆಗಣಿಸಿ ನೇರವಾಗಿ ಜನ ಸಮೂಹದ ಓಲೈಕೆಯಲ್ಲಿ ತೊಡಗಿದರು. ಅವರು ಸಲಹೆಗಾಗಿ ತನ್ನ ಸಚಿವರಿಗಿಂತಲೂ ಹೆಚ್ಚು ಜನರಿಂದ ಆಯ್ಕೆಯಾಗದ ಸಲಹೆಗಾರರ ತಂಡವೊಂದನ್ನು ಅವಲಂಬಿಸಿದರು. ಬ್ರಿಟನನ್ನು ಮತ್ತೊಮ್ಮೆ ಶ್ರೇಷ್ಠ ನಾಡನ್ನಾಗಿ ಮಾಡುವ ಬಗ್ಗೆ ಅಬ್ಬರದ ಮಾತುಗಳನ್ನು ಆಡಿದರು.
2019ರ ಚುನಾವಣೆಯಲ್ಲಿ ತನ್ನ ಪಕ್ಷವನ್ನು ವಿಜಯದತ್ತ ಮುನ್ನಡೆಸಿದಾಗ ಬೊರಿಸ್ ಜಾನ್ಸನ್‌ಗೆ ಕೇವಲ 55 ವರ್ಷ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗ ನರೇಂದ್ರ ಮೋದಿಗೆ 63 ವರ್ಷ. ಜಾನ್ಸನ್ ಮೋದಿಗಿಂತ 8 ವರ್ಷ ಕಿರಿಯ. ಡೊನಾಲ್ಡ್ ಟ್ರಂಪ್‌ಗಿಂತ 15 ವರ್ಷ ಚಿಕ್ಕವರು. 2019ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗ, ಎರಡು ಅಥವಾ ಮೂರು ಅವಧಿಗಳ ಅಧಿಕಾರದ ಮೇಲೆ ಬಹುಶಃ ಅವರು ಕಣ್ಣಿಟ್ಟಿರಬೇಕು. ಯಾಕೆಂದರೆ, ಅವರಲ್ಲಿ ಯೌವನವಿತ್ತು ಹಾಗೂ ಪಕ್ಷ ಮತ್ತು ಮತದಾರರ ಮೇಲೆ ನಿಯಂತ್ರಣ ಹೊಂದಿದ್ದರು. ಅದೂ ಅಲ್ಲದೆ, ಪ್ರಧಾನ ಪ್ರತಿಪಕ್ಷ ಲೇಬರ್ ಪಕ್ಷವು ದುರ್ಬಲವಾಗಿತ್ತು.
ಇವೆಲ್ಲವುಗಳ ಹೊರತಾಗಿಯೂ, ಅಧಿಕಾರದ ಅರ್ಧಾವಧಿಯಲ್ಲಿಯೇ ಅವರು ರಾಜೀನಾಮೆ ನೀಡಬೇಕಾಯಿತು. ಅವರು ತನ್ನ ಸ್ವ-ಇಚ್ಛೆಯಿಂದೇನೂ ಅಧಿಕಾರದಿಂದ ಕೆಳಗಿಳಿಯಲಿಲ್ಲ; ಅವರ ನಿರ್ಗಮನ ಅವಮಾನಕಾರಿಯಾಗಿತ್ತು. ಹಾಗಾದರೆ, ಇವೆಲ್ಲ ಹೇಗೆ ಸಂಭವಿಸಿತು? ಯಾಕೆಂದರೆ, ಬ್ರಿಟನ್‌ನ ಪ್ರಜಾಪ್ರಭುತ್ವ ಈಗಲೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ, ಅಲ್ಲಿನ ಪ್ರಜಾಪ್ರಭುತ್ವದ ಸ್ವಾಯತ್ತ ಸಂಸ್ಥೆಗಳು ಪ್ರಧಾನಿಯನ್ನು ಅವರ ಕೃತ್ಯಗಳಿಗೆ ಉತ್ತರದಾಯಿಯಾಗಿಸಿದವು.
ಟ್ರಂಪ್‌ರಂತೆಯೇ, ಜಾನ್ಸನ್ ಕೂಡ ಸುಳ್ಳು ಹೇಳುವವರು ಎಂಬ ಉಪಾಧಿಯನ್ನು ರಾಜಕೀಯವನ್ನು ಪ್ರವೇಶಿಸುವ ಮೊದಲೇ ಅವರು ಹೊಂದಿದ್ದರು. ವಾಸ್ತವಾಂಶಗಳನ್ನು ಬದಿಗಿಟ್ಟು ಸುಳ್ಳು ಹೇಳುವ ಅವರ ಪ್ರವೃತ್ತಿಯು ಲಂಡನ್ ಮೇಯರ್ ಆಗಿದ್ದಾಗ ಅಥವಾ ವಿದೇಶ ವ್ಯವಹಾರಗಳ ಸಚಿವರಾಗಿದ್ದಾಗಲೂ ದೊಡ್ಡ ವಿಷಯವಾಗಲಿಲ್ಲ. ಆದರೆ, ಪ್ರಧಾನಿಯಾದ ಬಳಿಕ ಅವರು ಸ್ವತಂತ್ರ ಮಾಧ್ಯಮಗಳ ಕಠಿಣ ಪರಿಶೀಲನೆಗಳಿಗೆ ಒಳಗಾದರು. ಜಾನ್ಸನ್ ಸಾರ್ವಜನಿಕರಿಗಾಗಿ ಲಾಕ್‌ಡೌನ್‌ಗಳನ್ನು ಹೇರಿದರೂ, ಆ ಅವಧಿಯಲ್ಲಿ ಅವರು ತನ್ನ ಸಿಬ್ಬಂದಿಯೊಂದಿಗೆ ಪಾರ್ಟಿ ಮಾಡುತ್ತಿದ್ದರು ಎನ್ನುವ ಸಂಗತಿ ಬಯಲಾಯಿತು. ಈ ಉಲ್ಲಂಘನೆಗಳು ಪತ್ರಿಕೆಗಳು ಮತ್ತು ಟೆಲಿವಿಷನ್ ಚಾನೆಲ್‌ಗಳಲ್ಲಿ ವ್ಯಾಪಕವಾಗಿ ವರದಿಯಾದವು.
ಬ್ರಿಟನ್‌ನಷ್ಟು ಚೆನ್ನಾಗಿ ಕಾರ್ಯನಿರ್ವಹಿಸದ ಕೆಲವು ಪ್ರಜಾಸತ್ತೆಗಳಲ್ಲಿ (ಉದಾಹರಣೆಗೆ; ಭಾರತ), ಪ್ರಧಾನಿಯ ಸುಳ್ಳುಗಳು ಮತ್ತು ವಂಚನೆಗಳನ್ನು ಪತ್ರಿಕೆಗಳು, ರೇಡಿಯೊ ಮತ್ತು ಟೆಲಿವಿಷನ್‌ಗಳು ಅಷ್ಟೊಂದು ನಿಕಟವಾಗಿ ಪರಿಶೀಲಿಸುತ್ತಿರಲಿಲ್ಲ. ಬ್ರಿಟನ್‌ನಲ್ಲಿ ಲೇಬರ್ ಪಕ್ಷದ ಪರ ಸಹಾನುಭೂತಿ ಹೊಂದಿರುವ ಮಾಧ್ಯಮಗಳೂ ಇವೆ, ಕನ್ಸರ್ವೇಟಿವ್ ಪಕ್ಷದ ಪರವಾಗಿರುವ ಮಾಧ್ಯಮಗಳೂ ಇವೆ. ಆದರೆ, ಅದೃಷ್ಟವಶಾತ್, ಅಧಿಕಾರದಲ್ಲಿರುವ ರಾಜಕಾರಣಿಗಳಿಂದ ಸೂಚನೆಗಳನ್ನು ಪಡೆಯುವ ‘ಗೋದಿ ಮಾಧ್ಯಮ’ ಮಾತ್ರ ಅಲ್ಲಿಲ್ಲ.
ಬ್ರಿಟಿಷ್ ಪ್ರಧಾನಿಯಿಂದ ನಡೆದ ಕಾನೂನು ಮತ್ತು ಔಚಿತ್ಯದ ಉಲ್ಲಂಘನೆಯು ಪತ್ರಿಕೆಗಳಲ್ಲಿ ವರದಿಯಾದ ಬಳಿಕ, ಆ ವಿಷಯವನ್ನು ದೇಶದ ಸಂಸತ್ತು ಕೈಗೆತ್ತಿಕೊಂಡಿತು. ವಿಷಯಗಳು ದೊಡ್ಡದಿರಲಿ, ಚಿಕ್ಕದಿರಲಿ, ಭಾರತಕ್ಕೆ ವ್ಯತಿರಿಕ್ತವಾಗಿ, ಬ್ರಿಟಿಷ್ ಸಂಸತ್‌ನಲ್ಲಿ ಅವುಗಳ ಬಗ್ಗೆ ನೈಜ ಚರ್ಚೆಗಳು ನಡೆಯುತ್ತವೆ. ಭಾರತದಲ್ಲಿ ಮಹತ್ವದ ಮಸೂದೆಗಳನ್ನು ನಿಮಿಷಗಳಲ್ಲಿ ಅನುಮೋದಿಸಲಾಗುತ್ತದೆ ಹಾಗೂ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಧಾನಿಗೆ ಸೂಚಿಸುವ ಪರಿಪಾಠವೇ ಇಲ್ಲ. ಆದರೆ, ಬ್ರಿಟನ್‌ನಲ್ಲಿ ಹಾಗಲ್ಲ; ಅಲ್ಲಿ ‘ಪ್ರಧಾನಿಯ ಪ್ರಶ್ನೆಗಳು’ ಎಂಬ ಒಂದು ಸಂಪ್ರದಾಯವೇ ಇದೆ. ಈ ಅವಕಾಶವನ್ನು ಬಳಸಿಕೊಂಡು ಲೇಬರ್ ಪಕ್ಷದ ನೂತನ ನಾಯಕ ಕೇರ್ ಸ್ಟಾರ್ಮರ್, ಜಾನ್ಸನ್‌ಗೆ ಪ್ರಶ್ನೆಗಳ ಸುರಿಮಳೆಗೈದರು. ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶವನ್ನು ಜಾನ್ಸನ್‌ಗೂ ನೀಡಲಾಯಿತು. ಆದರೆ, ಪರಿಣಾಮಕಾರಿ ಹಾಗೂ ಮನದಟ್ಟಾಗುವಂತಹ ಸಮರ್ಥನೆಯನ್ನು ನೀಡಲು ಅವರಿಂದ ಸಾಧ್ಯವಾಗಲಿಲ್ಲ.
ಲೇಬರ್ ಪಕ್ಷದ ನಾಯಕ ಸ್ಟಾರ್ಮರ್‌ರಲ್ಲಿ ವರ್ಚಸ್ಸಿನ ಕೊರತೆ ಇರಬಹುದು. ಆದರೆ ಅವರು ತನ್ನ ಪೂರ್ವಾಧಿಕಾರಿ ಜೆರೆಮಿ ಕಾರ್ಬಿನ್‌ಗಿಂತ ಹೆಚ್ಚಿನ ಕಾರ್ಯನಿಷ್ಠೆ ಹೊಂದಿದ್ದಾರೆ ಮತ್ತು ಕಠಿಣ ಪರಿಶ್ರಮಿಯಾಗಿದ್ದಾರೆ. ಪಕ್ಷದ ನೀತಿಯ ಬಗ್ಗೆ ಅವರಲ್ಲಿ ಹೆಚ್ಚಿನ ಒಲವಿದೆ. ಕಾರ್ಬಿನ್ ನೇತೃತ್ವದಲ್ಲಿ ಲೇಬರ್ ಪಕ್ಷವು ಬೆನ್ನು ಬೆನ್ನಿಗೆ ಎರಡು ಚುನಾವಣೆಗಳಲ್ಲಿ ಸೋತಾಗ, ಅವರನ್ನು ಪಕ್ಷವು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತು ಹಾಗೂ ಆ ಮೂಲಕ ಚುನಾವಣಾ ಕಣದಲ್ಲಿ ತನ್ನನ್ನು ಮತ್ತೊಮ್ಮೆ ಸ್ಪರ್ಧಾತ್ಮಕವಾಗಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ಪ್ರಧಾನ ಪ್ರತಿಪಕ್ಷಕ್ಕೆ ತನ್ನ ಅಸಮರ್ಥ ಪ್ರಥಮ ಕುಟುಂಬವನ್ನು ಹೊರಹಾಕಲು ಇನ್ನೂ ಸಾಧ್ಯವಾಗಿಲ್ಲ. ಮತ ಗಳಿಕೆಯಲ್ಲಿ ರಾಹುಲ್ ಗಾಂಧಿಯ ವೈಫಲ್ಯ ಸಾಬೀತಾಗಿದೆ. ಕುಟುಂಬ ಜಹಗೀರಿನಂತಿದ್ದ ಕ್ಷೇತ್ರದಿಂದ ಮರು ಆಯ್ಕೆಗೊಳ್ಳುವಲ್ಲಿಯೂ ಅವರು ವಿಫಲರಾಗಿದ್ದಾರೆ. ಅವರ ತಾಯಿ ಈಗ ಮೂರು ವರ್ಷಗಳಿಂದ ಪಕ್ಷದ ‘ಮಧ್ಯಂತರ ಅಧ್ಯಕ್ಷೆ’ಯಾಗಿದ್ದಾರೆ. ಪಕ್ಷದ ಮುಂದಿನ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಬಹುದು ಎಂಬುದಾಗಿ ತಾಯಿ ನಿರ್ಧರಿಸುವಾಗ ಪಕ್ಷದ ಅಧ್ಯಕ್ಷತೆಯನ್ನು ಮರಳಿ ಪಡೆಯಲು ಅವರು ಸಿದ್ಧರಾಗಿರುವಂತೆ ಕಂಡುಬರುತ್ತಿದೆ.
ಜೆರೆಮಿ ಕಾರ್ಬಿನ್‌ರನ್ನು ಪಕ್ಷದ ಅಧ್ಯಕ್ಷರಾಗಿ ಹೊಂದುವುದರಿಂದ ಎದುರಾಳಿ ಕನ್ಸರ್ವೇಟಿವ್ ಪಕ್ಷಕ್ಕೇ ಲಾಭ ಎನ್ನುವುದನ್ನು ಲೇಬರ್ ಪಕ್ಷವು ತಡವಾಗಿಯಾದರೂ ಅರ್ಥ ಮಾಡಿಕೊಂಡಿತು. ಆದರೆ, ರಾಹುಲ್ ಗಾಂಧಿಗೆ ಪಕ್ಷದ ನಾಯಕತ್ವವನ್ನು ಒದಗಿಸುವುದು, ನರೇಂದ್ರ ಮೋದಿ ಮತ್ತು ಅವರ ಭಾರತೀಯ ಜನತಾ ಪಕ್ಷಕ್ಕೆ ತಾನು ನೀಡಬಹುದಾದ ದೊಡ್ಡ ಉಡುಗೊರೆ ಎನ್ನುವುದನ್ನು ಕಾಂಗ್ರೆಸ್ ಪಕ್ಷವು ಯಾವತ್ತೂ ಅರ್ಥ ಮಾಡಿಕೊಳ್ಳುವುದಿಲ್ಲ. (ಈ ಅಂಕಣವನ್ನು ಬರೆಯುತ್ತಿರುವ ಹೊತ್ತಿಗೆ, ರಾಹುಲ್ ಗಾಂಧಿ ಯುರೋಪ್‌ಗೆ ಇನ್ನೊಮ್ಮೆ ರಜೆಯಲ್ಲಿ ಹೋಗಿದ್ದಾರೆ ಎನ್ನುವ ಸುದ್ದಿ ಬಂದಿದೆ. ಅವರು ಬಿಜೆಪಿಯ ಅತ್ಯಂತ ವಿಶ್ವಾಸಾರ್ಹ ರಾಜಕೀಯ ಮಿತ್ರನಾಗಿಯೇ ಮುಂದುವರಿದಿದ್ದಾರೆ ಎನ್ನುವುದಕ್ಕೆ ಇದು ಮತ್ತೊಂದು ಪುರಾವೆಯಾಗಿದೆ).
ಬ್ರಿಟನ್‌ನಲ್ಲಿ, ಪತ್ರಿಕೆಗಳು ಪ್ರಧಾನಿಯ ದುರ್ವರ್ತನೆಯನ್ನು ಬಹಿರಂಗಗೊಳಿಸಿದವು ಮತ್ತು ಸಂಸತ್ತು ಆ ಬಗ್ಗೆ ಚರ್ಚೆಗಳನ್ನು ನಡೆಸಿತು. ಹಾಗಾಗಿ, ಈ ಆರೋಪಗಳ ಬಗ್ಗೆ ಅಧಿಕೃತ ತನಿಖೆಗೆ ಪ್ರಧಾನಿ ಬೊರಿಸ್ ಜಾನ್ಸನ್ ಅನಿವಾರ್ಯವಾಗಿ ಆದೇಶ ನೀಡಬೇಕಾಯಿತು. ತನಿಖೆಯ ಜವಾಬ್ದಾರಿ ತಮಗೆ ಬಂದಾಗ, ಬ್ರಿಟಿಷ್ ಪೊಲೀಸರು ಮತ್ತು ನಾಗರಿಕ ಅಧಿಕಾರಿಗಳು ಅಸಾಧಾರಣ ದಕ್ಷತೆಯಿಂದ ತಮ್ಮ ಕರ್ತವ್ಯ ನಿಭಾಯಿಸಿದರು. ಅಧಿಕಾರದಲ್ಲಿರುವ ರಾಜಕಾರಣಿಗಳ ದುಷ್ಕೃತ್ಯಗಳನ್ನು ದಾಖಲಿಸುವುದರಿಂದ ಅವರು ಹಿಂಜರಿಯಲಿಲ್ಲ. ಮತ್ತೊಮ್ಮೆ ಬ್ರಿಟನ್ ವ್ಯವಸ್ಥೆಯನ್ನು ಭಾರತದ ವ್ಯವಸ್ಥೆಯೊಂದಿಗೆ ಹೋಲಿಸುವುದು ಅನಿವಾರ್ಯವಾಗುತ್ತದೆ. ಮೋದಿ ಸರಕಾರವು, ಆಡಳಿತದಲ್ಲಿನ ವೈಫಲ್ಯಗಳ ಅಧಿಕೃತ ತನಿಖೆಗೆ ಅಂಗೀಕಾರ ನೀಡುವುದು ಬಿಡಿ, ಮಹತ್ವದ ಮಸೂದೆಗಳನ್ನು ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಒಪ್ಪಿಸುವುದೂ ಇಲ್ಲ. ಸರಕಾರವು ತನಿಖೆಗೆ ಒಪ್ಪಿಸಿದರೂ, ಮೋದಿಯ ಅಡಿಯಲ್ಲಿರುವ ಅತ್ಯಂತ ಪುಕ್ಕಲ ಹಾಗೂ ಅಪಾಯವನ್ನು ಎದುರು ಹಾಕಿಕೊಳ್ಳದ ಭಾರತೀಯ ನಾಗರಿಕ ಸೇವೆಯು, ಪ್ರಧಾನಿಗೆ ಅಪಖ್ಯಾತಿ ತರಬಹುದಾದ ಯಾವುದನ್ನೂ ದಾಖಲೆಗೆ ತೆಗೆದುಕೊಳ್ಳಲಾರದು.
ಈ ತನಿಖೆಗಳು ನಡೆಯುತ್ತಿರುವಂತೆಯೇ ಹಾಗೂ ಮಾಧ್ಯಮಗಳು ಮತ್ತು ಸಂಸತ್‌ನಲ್ಲಿ ಚರ್ಚೆಗಳು ತಾರಕಕ್ಕೇರುತ್ತಿರುವಂತೆಯೇ, ತಾನೋರ್ವ ಜಾಗತಿಕ ಮಟ್ಟದಲ್ಲಿ ಬ್ರಿಟನ್‌ನ ಪ್ರತಿಷ್ಠೆಯನ್ನು ಹೆಚ್ಚಿಸುತ್ತಿರುವ ಅಂತರ್‌ರಾಷ್ಟ್ರೀಯ ಮುತ್ಸದ್ದಿ ಎಂಬುದಾಗಿ ತನ್ನನ್ನು ತಾನು ಬಿಂಬಿಸಿಕೊಂಡು ಪ್ರಜಾಸತ್ತಾತ್ಮಕ ಕಲಾಪಗಳನ್ನು ನಿವಾರಿಸಿಕೊಳ್ಳಲು ಬಯಸಿದರು. ತಾನು ಶೋಷಿತರ ಪರವಾಗಿದ್ದೇನೆ ಎಂಬುದಾಗಿ ತೋರಿಸಿಕೊಳ್ಳಲು ಅವರು ರಶ್ಯದ ದಾಳಿಗೆ ಒಳಗಾಗಿರುವ ಉಕ್ರೇನ್ ದೇಶದ ರಾಜಧಾನಿ ಕೀವ್‌ಗೆ ಭೇಟಿ ನೀಡಿದರು. ಜಾನ್ಸನ್‌ರನ್ನು ‘ಆತ್ಮೀಯ ಸ್ನೇಹಿತ’ ಎಂಬುದಾಗಿ ನಾನು ಪರಿಗಣಿಸಿದ್ದೇನೆ ಎಂದು ಹೇಳಿದ ವ್ಯಕ್ತಿಯೊಂದಿಗೆ ವ್ಯಾಪಾರ ಒಪ್ಪಂದವನ್ನು ಏರ್ಪಡಿಸುತ್ತೇನೆ ಎಂದು ಹೇಳಿಕೊಂಡು ಅವರು ಭಾರತಕ್ಕೂ ಬಂದರು.
ಈ ಪ್ರಚಾರ ಕೋರುವ ಕ್ರಮಗಳ ಮೂಲಕ ತನ್ನದೇ ಪಕ್ಷದೊಳಗಿನ ಬೆಂಬಲವನ್ನು ಪಡೆಯಲು ಅವರು ಬಯಸಿದ್ದರು. ಆದರೆ, ಇದು ಅಸಾಧ್ಯವೆನ್ನುವುದು ಸಾಬೀತಾಯಿತು. ತಮ್ಮ ನಾಯಕನ ವಂಚನಾತ್ಮಕ ಕಾರ್ಯಗಳನ್ನು ಮಾಧ್ಯಮಗಳು ಬಹಿರಂಗಪಡಿಸಿದಾಗ, ಸಂಸತ್ ಚರ್ಚೆ ನಡೆಸಿದಾಗ ಮತ್ತು ನಿಷ್ಪಕ್ಷಪಾತ ಪೊಲೀಸ್ ಮತ್ತು ನಾಗರಿಕ ಅಧಿಕಾರಿಗಳ ತನಿಖೆಯು ಅವುಗಳನ್ನು ದೃಢಪಡಿಸಿದಾಗ, ಹೆಚ್ಚೆಚ್ಚು ಸಂಖ್ಯೆಯ ಕನ್ಸರ್ವೇಟಿವ್ ಸಂಸದರು ಜಾನ್ಸನ್‌ರಿಂದ ದೂರ ಸರಿದರು. 2019ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಇದೇ ವ್ಯಕ್ತಿಯು ತಮ್ಮನ್ನು ಗೆಲ್ಲಿಸಿದ್ದರು ಎನ್ನುವುದೂ ಆಗ ಈ ಸಂಸದರಿಗೆ ಮುಖ್ಯವಾಗಿರಲಿಲ್ಲ.
ಪಕ್ಷದ ಸಂಸದರಿಂದ ವಿಶ್ವಾಸ ಮತವನ್ನು ಕೋರಲಾಯಿತು. ಅದರಲ್ಲಿ, ಕಡಿಮೆ ಮತಗಳ ಅಂತರದಿಂದ ಅವರು ವಿಜಯಿಯಾದರು. ಸೂಚನೆಗಳನ್ನು ಅರ್ಥ ಮಾಡಿಕೊಂಡ ಅವರ ಸಂಪುಟ ಸದಸ್ಯರು ಒಬ್ಬೊಬ್ಬರಾಗಿ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು. ಅಂತಿಮವಾಗಿ, ಸ್ವತಃ ಪ್ರಧಾನಿಯೇ ಮನಸ್ಸಿಲ್ಲದ ಮನಸ್ಸಿನಿಂದ ರಾಜೀನಾಮೆ ನೀಡಬೇಕಾಯಿತು.
ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷ ಹಾಗೂ ಮೋದಿ ಮತ್ತು ಬಿಜೆಪಿ ಮಾದರಿಯಲ್ಲಿ, ಬೊರಿಸ್ ಜಾನ್ಸನ್ ತನ್ನ ಸುತ್ತ ಅತಿರಂಜಿತ ವ್ಯಕ್ತಿತ್ವವೊಂದನ್ನು ನಿರ್ಮಿಸಲು ಬಯಸಿದ್ದರು. ಆದರೆ, ಅದರಲ್ಲಿ ಅವರು ವಿಫಲರಾದರು. ವಿಫಲಗೊಳ್ಳಲು ಒಂದು ಕಾರಣವೆಂದರೆ, ಯಾವತ್ತೂ ಎಚ್ಚರಿಕೆಯಲ್ಲಿರುವ ಬ್ರಿಟಿಷರು ವ್ಯಕ್ತಿ ಪೂಜೆಯತ್ತ ಹೆಚ್ಚಿನ ಒಲವು ತೋರಿಸುವುದಿಲ್ಲ. ಅವರು ದ್ವಿತೀಯ ಮಹಾಯುದ್ಧದ ಬಳಿಕ ವಿನ್‌ಸ್ಟನ್ ಚರ್ಚಿಲ್‌ರನ್ನೂ ಹೊರಹಾಕಿದ್ದರು. ಇನ್ನೊಂದು ಪ್ರಮುಖ ಕಾರಣವೆಂದರೆ, ಪಕ್ಷದ ನಾಯಕನಾಗಲು ಅಥವಾ ಪ್ರಧಾನಿಯಾಗಲು ಜಾನ್ಸನ್ ಅನರ್ಹ ಎನ್ನುವುದನ್ನು ಈ ವೇಳೆಗೆ ಕನ್ಸರ್ವೇಟಿವ್ ಸಂಸದರು ಕಂಡುಕೊಂಡಿದ್ದರು.
ಇಲ್ಲಿಯೂ ಬ್ರಿಟನ್ ಮತ್ತು ಭಾರತಗಳ ನಡುವೆ ಅಗಾಧ ವೈರುಧ್ಯವಿದೆ. ಬಿಜೆಪಿಯ 300ಕ್ಕೂ ಅಧಿಕ ಸಂಸದರ ಪೈಕಿ ಒಬ್ಬರಿಗೂ ಪಕ್ಷದ ಸಭೆಯಲ್ಲಿ ಪ್ರಧಾನಿಯನ್ನು ಸೌಮ್ಯವಾಗಿಯಾದರೂ ಟೀಕಿಸುವ ಧೈರ್ಯವಾಗಲಿ, ಸ್ವಾತಂತ್ರವಾಗಲಿ ಇಲ್ಲ. ಕರೆನ್ಸಿ ನೋಟ್‌ಗಳ ನಿಷೇಧ ಮತ್ತು ಆರಂಭಿಕ ಲಾಕ್‌ಡೌನ್ ಹೇರಿಕೆಯಂಥ ವಿಪತ್ತುಕಾರಕ ನೀತಿಗಳ ಬಗ್ಗೆಯೂ ಒಬ್ಬರೂ ಚಕಾರವೆತ್ತಲಿಲ್ಲ. ಅದಕ್ಕೆ ಬದಲಾಗಿ, ತಮ್ಮ ಶ್ರೇಷ್ಠ ನಾಯಕನನ್ನು ಭಟ್ಟಂಗಿಗಳ ಮಾದರಿಯಲ್ಲಿ ಸಾರ್ವಜನಿಕವಾಗಿ ಹೊಗಳಲು ಅವರು ಪರಸ್ಪರ ಸ್ಪರ್ಧಿಸಿದರು.
ಬೊರಿಸ್ ಜಾನ್ಸನ್ ಹೊರದಬ್ಬಲ್ಪಟ್ಟಿರುವುದು ಬ್ರಿಟಿಷ್ ಪ್ರಜಾಸತ್ತೆಯ ಸ್ವಾಯತ್ತ ಸಂಸ್ಥೆಗಳಿಗೆ ಸಂದ ಗೌರವವಾಗಿದೆ. ತಾವು ಹೇಗೆ ಕಾರ್ಯನಿರ್ವಹಿಸಬೇಕಾಗಿತ್ತೋ ಹಾಗೆ ಕಾರ್ಯನಿರ್ವಹಿಸುವ ಮೂಲಕ, ಮಾಧ್ಯಮಗಳು, ಸಂಸತ್, ನಾಗರಿಕ ಸೇವೆಗಳು, ಪ್ರತಿಪಕ್ಷ ಮತ್ತು ಆಡಳಿತಾರೂಢ ಪಕ್ಷಗಳೆ ಲ್ಲವೂ, ಬ್ರಿಟಿಷ್ ರಾಜಕೀಯ ವ್ಯವಸ್ಥೆಯು ಬದುಕುಳಿಯಲು ಮತ್ತು ಪುನಶ್ಚೇತನಗೊಳ್ಳಲು ನೆರವಾಗಿವೆ. ಆದರೆ, ದುರದೃಷ್ಟವಶಾತ್, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಈ ಐದು ಸಂಸ್ಥೆಗಳು ನಿಷ್ಕ್ರಿಯ ವಾಗಿವೆ ಅಥವಾ ರಾಜಿ ಮಾಡಿಕೊಂಡಿವೆ. ನಾವು ಭಾರತೀಯರು ಬ್ರಿಟಿಷರನ್ನು ಅವರ ಸಾಮ್ರಾಜ್ಯಶಾಹಿ ಇತಿಹಾಸಕ್ಕಾಗಿ ಬಯ್ಯ ಬಹುದು ಮತ್ತು ನಿಂದಿಸಬಹುದು. ಆದರೆ, ತಮ್ಮ ಪ್ರಜಾಸತ್ತಾತ್ಮಕ ವರ್ತಮಾನವನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಅವರಿಂದ ಕಲಿಯುವ ಪಾಠಗಳೂ ಹಲವಿರಬಹುದು.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75