ಉಕ್ರೇನ್ ಬಗ್ಗೆ ಮೌನ: ಭಾರತಕ್ಕೆ ಅವಮಾನ

Update: 2022-07-30 05:17 GMT

ಉಕ್ರೇನ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಭಾರತ ಸರಕಾರ ನೀಡುತ್ತಿರುವ ಅತ್ಯಂತ ಅತೃಪ್ತಿಕರ ಪ್ರತಿಕ್ರಿಯೆಯ ಹಿಂದೆ ಕಾರಣಗಳಿವೆ ಎಂದು ಯಾರಾದರೂ ಹೇಳಬಹುದು. ಬಹುಶಃ ಸೇನಾ ಸಲಕರಣೆಗಳ ಪೂರೈಕೆಗಾಗಿ ಭಾರತ ರಶ್ಯವನ್ನು ಅವಲಂಬಿಸಿರುವುದು ಇದಕ್ಕೆ ಕಾರಣ ಎಂದು ಅವರು ಹೇಳಬಹುದು. ಬಹುಶಃ ಸ್ವತಂತ್ರ ದೇಶವನ್ನು ಹೊಂದುವ ಉಕ್ರೇನ್‌ನ ಹಕ್ಕನ್ನು ನಾವು ಬೆಂಬಲಿಸಿದರೆ, ಕಾಶ್ಮೀರಿಗಳು ಮತ್ತು ನಾಗಾಗಳೂ ಅದೇ ರೀತಿಯ ಬೇಡಿಕೆಗಳನ್ನು ಮುಂದಿಡಬಹುದು ಎಂಬ ಭೀತಿಯನ್ನು ಆಡಳಿತಾರೂಢ ಪಕ್ಷದ ಚಿಂತಕರು ಹೊಂದಿರಬಹುದು. ಬಹುಶಃ ನಮ್ಮ ತೈಲ ಮೂಲಗಳ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಹಣದುಬ್ಬರವನ್ನು ಹಿಡಿತದಲ್ಲಿಡಲು ಮತ್ತು ಆ ಮೂಲಕ ಸಾಮಾಜಿಕ ಅತೃಪ್ತಿಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಸರಕಾರ ಭಾವಿಸಿರಬಹುದು. ಬಹುಶಃ ಪ್ರಧಾನಿಯಾಗಿ ಎಂಟು ವರ್ಷಗಳನ್ನು ಪೂರೈಸಿದ ಬಳಿಕವೂ ನರೇಂದ್ರ ಮೋದಿಯವರು, ಜಾಗತಿಕ ರಾಜಕಾರಣದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಂಡಿಲ್ಲ; ಹಾಗಾಗಿ, ಅವರಿಗೆ ನಿಲುವು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.



ರಶ್ಯದ ಮೊದಲ ಯುದ್ಧ ಟ್ಯಾಂಕ್‌ಗಳು ಉಕ್ರೇನ್ ಭೂಭಾಗವನ್ನು ಪ್ರವೇಶಿಸಿ ಹಾಗೂ ಮೊದಲ ಯುದ್ಧ ವಿಮಾನಗಳು ಉಕ್ರೇನ್ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಬಾಂಬ್‌ಗಳ ಮಳೆ ಸುರಿಸಿ ಐದು ತಿಂಗಳುಗಳಾಗಿವೆ. ಈ ಭೀಕರ ಯುದ್ಧದಲ್ಲಿ ಸುಮಾರು 20,000 ರಶ್ಯ ಸೈನಿಕರು ಹತರಾಗಿದ್ದಾರೆ ಹಾಗೂ ಬಹುಶಃ ಅದರ ಎರಡು ಪಟ್ಟು ಉಕ್ರೇನ್ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ನಾಗರಿಕರೂ ಬೃಹತ್ ಸಂಖ್ಯೆಯಲ್ಲಿ ಸಾವು-ನೋವಿಗೆ ಒಳಗಾಗಿದ್ದಾರೆ. ಲಕ್ಷಾಂತರ ಉಕ್ರೇನಿಯನ್ನರು ತಾಯ್ನೆಲವನ್ನು ತೊರೆದು ಬೇರೆ ದೇಶಗಳಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ಆಶ್ರಯ ಪಡೆದಿದ್ದಾರೆ. ಉಕ್ರೇನ್‌ನ ಆರ್ಥಿಕತೆ ನೆಲಸಮವಾಗಿದೆ. ಯುದ್ಧ ನಿಂತ ಬಳಿಕ, ತನ್ನ ಹಿಂದಿನ ಸ್ಥಿತಿಗೆ ಬರಲು ಉಕ್ರೇನ್‌ಗೆ ದಶಕಗಳೇ ಬೇಕಾಗಬಹುದು. ಇನ್ನೊಂದು ಕಡೆ, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರಂಭಿಸಿದ ಯುದ್ಧದ ಅಗಾಧ ವೆಚ್ಚ ಮತ್ತು ಪಾಶ್ಚಾತ್ಯ ದೇಶಗಳ ದಿಗ್ಬಂಧನಗಳಿಂದಾಗಿ ರಶ್ಯದ ಸಾಮಾನ್ಯ ಜನರ ಬದುಕು ಮತ್ತು ಜೀವನೋಪಾಯ ಅಗಾಧ ಸಂಕಷ್ಟಕ್ಕೆ ಸಿಲುಕಿವೆ.
ರಶ್ಯ ಸೇನೆಯ ಬರ್ಬರತೆ, ಅದರ ಸೈನಿಕರು ನಡೆಸಿದ ನಗರ ಮೂಲಸೌಕರ್ಯಗಳ ಸಮಗ್ರ ನಾಶ, ಆಸ್ಪತ್ರೆಗಳು ಮತ್ತು ನಾಗರಿಕರ ಆಶ್ರಯತಾಣಗಳ ಮೇಲೆ ಅವರು ನಡೆಸುತ್ತಿರುವ ಭೀಕರ ದಾಳಿಗಳು, ಉಕ್ರೇನ್ ಮಹಿಳೆಯರ ಮೇಲೆ ಅವರು ನಡೆಸುತ್ತಿರುವ ಅಮಾನುಷ ದಾಳಿಗಳು- ಇವೆಲ್ಲವುಗಳನ್ನು ಮಾನವ ಜನಾಂಗದ ಓರ್ವ ಸದಸ್ಯನಾಗಿ ನೋಡಿ ನಾನು ತತ್ತರಿಸಿ ಹೋಗಿದ್ದೇನೆ. ಓರ್ವ ಭಾರತೀಯ ನಾಗರಿಕನಾಗಿ ಈ ನರಮೇಧವನ್ನು ನೋಡುವಾಗ, ನನ್ನ ದೇಶದ ಸರಕಾರದ ಹೇಡಿತನದ ಬಗ್ಗೆ ನಾಚಿಕೆಯಾಗುತ್ತದೆ. ಆಕ್ರಮಣವನ್ನು ಖಂಡಿಸಲೂ ಅದು ನಿರಾಕರಿಸಿರುವುದು ಮತ್ತು ರಶ್ಯದ ದೌರ್ಜನ್ಯಗಳ ಬಗ್ಗೆ ವೌನವಾಗಿರುವುದನ್ನು ನೋಡಿ ಅಸಹ್ಯವಾಗುತ್ತದೆ.
ಫೆಬ್ರವರಿ ಕೊನೆಯಲ್ಲಿ ಯುದ್ಧ ಆರಂಭವಾದಾಗ ಹಾಗೂ ಮಾರ್ಚ್ ತಿಂಗಳಲ್ಲಿಯೂ, ಬಹುಶಃ ಕಾದು ನೋಡುವ ನೀತಿಯನ್ನು ಅನುಸರಿಸುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಯುದ್ಧವು ಎಷ್ಟು ಸಮಯ ಮುಂದುವರಿಯುತ್ತದೆ ಎನ್ನುವುದು ಆಗ ಸ್ಪಷ್ಟವಿರಲಿಲ್ಲ. ಯುದ್ಧ ಶೀಘ್ರವೇ ಮುಕ್ತಾಯಗೊಳ್ಳಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿದ್ದವು. ಅದೂ ಅಲ್ಲದೆ, ಉಕ್ರೇನ್‌ನಲ್ಲಿದ್ದ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವುದು ಖಂಡಿತವಾಗಿಯೂ ಮೊದಲ ಆದ್ಯತೆಯಾಗಿತ್ತು.
ಆದರೆ, ಮಾರ್ಚ್ ಹೋಗಿ ಎಪ್ರಿಲ್ ಬಂತು; ಎಪ್ರಿಲ್ ಹೋಗಿ ಮೇ ಬಂತು. ರಶ್ಯ ಸೈನಿಕರ ಕ್ರೌರ್ಯ ಮೇರೆ ಮೀರಿತು. ಈ ಹಂತದಲ್ಲೂ ಭಾರತ ತನ್ನ ತಟಸ್ಥ ನಿಲುವನ್ನು ಮುಂದುವರಿಸಿರುವುದು ಮಾತ್ರ ಅಸಹನೀಯ. ಉಕ್ರೇನ್ ಮೇಲೆ ರಶ್ಯ ನಡೆಸಿದ ಆಕ್ರಮಣವು ಪಾಶ್ಚಾತ್ಯ ದೇಶಗಳ ಪ್ರಚೋದನೆಗೆ ಅದು ನೀಡಿದ ಪ್ರತಿಕ್ರಿಯೆಯಾಗಿತ್ತು ಎಂಬ ವಾದಗಳೂ ಈ ವೇಳೆಗೆ ಪೊಳ್ಳು ಎಂದು ಸಾಬೀತಾಗಿದ್ದವು. ಪುಟಿನ್ ಈ ಯುದ್ಧವನ್ನು ಮಾಡುತ್ತಿರುವುದು ನೇಟೊ ಸೇರದಂತೆ ಉಕ್ರೇನನ್ನು ತಡೆಯುವುದಕ್ಕಲ್ಲ; ಬದಲಿಗೆ, ತಾನು ಹೇಳಿದಂತೆ ಕೇಳದಿರುವುದಕ್ಕಾಗಿ ಉಕ್ರೇನಿಯನ್ನರಿಗೆ ಪಾಠ ಕಲಿಸಲು ಎನ್ನುವುದನ್ನು ಸ್ವಲ್ಪವಾದರೂ ಪ್ರಜ್ಞೆಯಿರುವ ಯಾರೇ ಆದರೂ ಅರ್ಥಮಾಡಿಕೊಳ್ಳಬಹುದಾಗಿತ್ತು.
ರಶ್ಯ ಮತ್ತು ಅದರ ನೆರೆಯ ದೇಶಗಳನ್ನು ಓರ್ವ ಸರ್ವಶಕ್ತ ನಾಯಕನ ಅಧಿಪತ್ಯದಲ್ಲಿ ಒಂದೇ ದೇಶವಾಗಿ ಒಗ್ಗೂಡಿಸಲು ಮುಂದಾಗಿರುವ ಮಧ್ಯಕಾಲೀನ ಚಕ್ರವರ್ತಿಯೊಬ್ಬನ ಆಧುನಿಕ ಅವತಾರ ತಾನು ಎಂಬ ಭ್ರಮೆಯಿಂದ ರಶ್ಯ ಅಧ್ಯಕ್ಷರು ಬಳಲುತ್ತಿದ್ದಾರೆ ಅನಿಸುತ್ತಿದೆ. ಈ ಅತಿರಂಜಿತ ರಮ್ಯ ಕಲ್ಪನೆ (ಫ್ಯಾಂಟಸಿ)ಗಳನ್ನು ನನಸು ಮಾಡಲು ಪುಟಿನ್ ಮತ್ತು ಅವರ ಸೇನೆ ಶ್ರಮಿಸುತ್ತಿದೆ. ಇದಕ್ಕೆ ಉಕ್ರೇನಿಯನ್ನರು ಅಥವಾ ಸ್ವತಃ ರಶ್ಯನ್ನರೇ ಯಾವ ಬೆಲೆ ತೆರಬೇಕಾದರೂ ಪುಟಿನ್ ಲೆಕ್ಕಿಸುವುದಿಲ್ಲ. (ಪುಟಿನ್ ಸರಕಾರದ ಅಪ್ರಾಮಾಣಿಕತೆಗೆ ಇತ್ತೀಚಿನ ಉದಾಹರಣೆಯೆಂದರೆ, ಗೋಧಿ ರಫ್ತು ಮಾಡಲು ಉಕ್ರೇನ್‌ಗೆ ಅವಕಾಶ ನೀಡುವ ಒಪ್ಪಂದಕ್ಕೆ ಸಹಿ ಹಾಕಿದ ಮರುಕ್ಷಣವೇ ಒಡೆಸಾ ಬಂದರು ನಗರದ ಮೇಲೆ ಅದು ಬಾಂಬ್ ದಾಳಿಗಳನ್ನು ನಡೆಸಿತು).
ಉಕ್ರೇನಿಯನ್ನರು ನಿಜವಾಗಿಯೂ ಇನ್ನೊಂದು ಹೆಸರಿನ ರಶ್ಯನ್ನರು, ಹಾಗಾಗಿ ಅಗತ್ಯವಿದ್ದರೆ ಬಲಪ್ರಯೋಗದಿಂದಲಾದರೂ ಉಕ್ರೇನಿಯನ್ನರನ್ನು ಅವರ ತಾಯ್ನೊಡಿನೊಂದಿಗೆ ಸೇರಿಸಿಕೊಳ್ಳುವುದು ಅಗತ್ಯ ಎಂಬುದಾಗಿ ಪುಟಿನ್ ಭಾವಿಸಿದ್ದಾರೆ.
ಆದರೆ, ಈ ಐದು ತಿಂಗಳ ಯುದ್ಧದಿಂದ ತಿಳಿದುಕೊಳ್ಳುವುದು ಏನಾದರೂ ಇದ್ದರೆ, ಅದು ಉಕ್ರೇನಿಯನ್ನರಲ್ಲಿ ಆಳವಾಗಿ ಬೇರುಬಿಟ್ಟಿರುವ ರಾಷ್ಟ್ರೀಯತೆಯ ಭಾವನೆ. ಅವರು ತಮ್ಮನ್ನು ತಾವು ವಿಭಿನ್ನ ಹಾಗೂ ವಿಶಿಷ್ಟ ಜನರು ಎಂಬುದಾಗಿ ಭಾವಿಸುತ್ತಾರೆ; ತಮ್ಮದೇ ಆದ ರಾಷ್ಟ್ರೀಯ ಗುರುತನ್ನು ಹೊಂದಲು ತಾವು ಅರ್ಹರಾಗಿದ್ದೇವೆ ಮತ್ತು ಆ ಗುರುತನ್ನು ಉಳಿಸಿಕೊಳ್ಳಲೇಬೇಕು ಎಂಬ ನಿಲುವನ್ನು ಅವರು ಹೊಂದಿದ್ದಾರೆ. ಆದಾಗ್ಯೂ, ಆಕ್ರಮಣಕ್ಕೆ ಮೊದಲು, ರಶ್ಯದೊಂದಿಗೆ ತಾವು ಹೊಂದಿರುವ ಸಾಂಸ್ಕೃತಿಕ ಬಾಂಧವ್ಯದ ಬಗ್ಗೆ ಹೆಚ್ಚಿನ ಸಂಖ್ಯೆಯ ಉಕ್ರೇನಿಯನ್ನರು ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು. ಅದರ ಬಗ್ಗೆ ಸಂತೋಷದಿಂದಲೇ ಮಾತನಾಡುತ್ತಿದ್ದರು. ಆದರೆ ಈಗ ಹಾಗಿಲ್ಲ. ಮನೆಯಲ್ಲಿ ರಶ್ಯನ್ ಭಾಷೆ ಮಾತನಾಡುವವರೂ ಸೇರಿದಂತೆ ಬಹುಸಂಖ್ಯಾತ ಉಕ್ರೇನಿಯನ್ನರು, ರಶ್ಯದೊಂದಿಗಿನ ರಾಜಕೀಯ ಒಕ್ಕೂಟಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.
ರಶ್ಯದ ಸಾಮ್ರಾಜ್ಯಶಾಹಿತ್ವಕ್ಕೆ ಉಕ್ರೇನ್‌ನ ಪ್ರತಿರೋಧವನ್ನು ರೂಪಿಸಿದ್ದು ಉಕ್ರೇನಿಯನ್ನರ ರಾಷ್ಟ್ರೀಯತೆಯ ಭಾವನೆ. ಇದನ್ನು ವಿಯೆಟ್ನಾಮ್‌ನ ರಾಷ್ಟ್ರೀಯತೆಯ ಭಾವನೆಗೆ ಹೋಲಿಸಬಹುದಾಗಿದೆ. ಒಂದು ಕಾಲದಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿತ್ವಕ್ಕೆ ವಿಯೆಟ್ನಾಮ್ ಒಡ್ಡಿದ ಪ್ರತಿರೋಧಕ್ಕೆ ಸ್ಫೂರ್ತಿಯಾಗಿದ್ದು ಇದೇ ರಾಷ್ಟ್ರೀಯತೆಯ ಭಾವನೆ.
ಭಾರತ ಹುಟ್ಟಿದ್ದು ಕೂಡ ಸಾಮ್ರಾಜ್ಯಶಾಹಿ ಶಕ್ತಿಯ ವಿರುದ್ಧ ನಡೆಸಲಾದ ಯಶಸ್ವಿ ಸ್ವಾತಂತ್ರ ಚಳವಳಿಯಿಂದ. ಹಾಗಾಗಿ, ಭಾರತವು ಸಹಜವಾಗಿಯೇ ವಿಯೆಟ್ನಾಮ್‌ಗೆ ಬೆಂಬಲ ಸೂಚಿಸಿತು. ಅದು ಎರಡು ಬಾರಿ ವಿಯೆಟ್ನಾಮ್ ಪರವಾಗಿ ನಿಂತಿತು. ಮೊದಲು, ವಿಯೆಟ್ನಾಮ್ ಫ್ರಾನ್ಸ್‌ನ ಅಧೀನದಿಂದ ಸ್ವತಂತ್ರಗೊಳ್ಳಲು ಬಯಸಿದಾಗ, ಮತ್ತು ಎರಡನೇ ಬಾರಿ ಅದು ಅಮೆರಿಕದ ಆಕ್ರಮಣವನ್ನು ಎದುರಿಸಿ ನಿಂತಾಗ. 1960ರ ದಶಕದಲ್ಲಿ, ಭಾರತವು ಅಮೆರಿಕದ ಆರ್ಥಿಕ ಮತ್ತು ಸೇನಾ ನೆರವನ್ನು ಅವಲಂಬಿಸಿತ್ತು. ಅದರಲ್ಲೂ ಮುಖ್ಯವಾಗಿ, ಕ್ಷಾಮವನ್ನು ಎದುರಿಸಲು ಭಾರತಕ್ಕೆ ಅಮೆರಿಕದ ಆರ್ಥಿಕ ನೆರವು ಅತ್ಯಂತ ಅಗತ್ಯವಾಗಿತ್ತು. ಆದರೆ, ವಿಯೆಟ್ನಾಮ್‌ನಲ್ಲಿ ನೀವು ಮಾಡುತ್ತಿರುವುದು ನೈತಿಕವಾಗಿ ತಪ್ಪು ಹಾಗೂ ರಾಜಕೀಯವಾಗಿ ಅವಿವೇಕದ ಕೃತ್ಯ ಎನ್ನುವುದನ್ನು ಅಮೆರಿಕ ಸರಕಾರಕ್ಕೆ ನೇರವಾಗಿ ಹೇಳಲು ನಾವು ಅಂದು ಹಿಂಜರಿಯಲಿಲ್ಲ.
ಇಂಥ ದಿಟ್ಟತನಕ್ಕೆ ಇನ್ನೊಂದು ಉದಾಹರಣೆಯನ್ನು ಕೊಡಬಹುದಾಗಿದೆ. 1970ರಲ್ಲಿ, ಅಂದಿನ ಪಶ್ಚಿಮ ಪಾಕಿಸ್ತಾನದಿಂದ ತಾವು ಆರ್ಥಿಕವಾಗಿ ಶೋಷಣೆಗೊಳಗಾಗುತ್ತಿದ್ದೇವೆ, ಸಾಮಾಜಿಕವಾಗಿ ತಾರತಮ್ಯಕ್ಕೊಳಗಾಗುತ್ತಿದ್ದೇವೆ ಮತ್ತು ರಾಜಕೀಯವಾಗಿ ದಮನಿತರಾಗುತ್ತಿದ್ದೇವೆ ಎಂಬ ಭಾವನೆಯು ಅಂದಿನ ಪೂರ್ವ ಪಾಕಿಸ್ತಾನದ ಜನರಲ್ಲಿ ದಿನೇ ದಿನೇ ಹೆಚ್ಚುತ್ತಿತ್ತು. ಅವರಲ್ಲಿ ಅಂತರ್ಗತವಾಗಿದ್ದ ಬಂಗಾಳಿ ರಾಷ್ಟ್ರೀಯತೆಯು ತಮ್ಮ ಮೇಲೆ ಹೇರಲಾದ ಇಸ್ಲಾಮಿಕ್ ಗುರುತಿನ ವಿರುದ್ಧ ಸೆಟೆದು ನಿಂತಿತ್ತು. ಅವರು ತಮ್ಮದೇ ಆದ ದೇಶವನ್ನು ಬಯಸಿದರು. ಆದರೆ, ಎಲ್ಲದಕ್ಕೂ ಮೊದಲು ಪೂರ್ವ ಬಂಗಾಳಿಗರು ಪಾಕಿಸ್ತಾನಿಗಳಾಗಿದ್ದಾರೆ ಎಂಬುದಾಗಿ ಅಂದು ಇಸ್ಲಾಮಾಬಾದ್‌ನಲ್ಲಿ ಅಧಿಕಾರದಲ್ಲಿದ್ದ ಸೇನಾಡಳಿತವು ಹೇಳಿತು. ಬಂಡಾಯವನ್ನು ಹಿಂಸಾತ್ಮಕವಾಗಿ ಹತ್ತಿಕ್ಕಲು ಇಸ್ಲಾಮಾಬಾದ್ ಮುಂದಾಯಿತು. ಆಗ ಭಾರತ ಮಧ್ಯಪ್ರವೇಶಿಸಿ ಸ್ವತಂತ್ರ ಬಾಂಗ್ಲಾದೇಶವನ್ನು ಸೃಷ್ಟಿಸಿತು.
ಇಂದು ಉಕ್ರೇನಿಯನ್ನರು ರಶ್ಯನ್ನರಿಗೆ ಏನಾಗಿದ್ದಾರೊ, ಅದೇ ರೀತಿ ಅಂದು ಬಾಂಗ್ಲಾದೇಶೀಯರು ಪಾಕಿಸ್ತಾನೀಯರಿಗೆ ಆಗಿದ್ದರು. ಅಂದರೆ, ನಿಮ್ಮ ಗುರುತು ಮತ್ತು ನಿಮ್ಮ ಇತಿಹಾಸ ನಮ್ಮದು ಕೂಡಾ ಎಂಬುದಾಗಿ ತಪ್ಪಾಗಿ ಹೇಳಿಕೊಳ್ಳುವ ಬಲಿಷ್ಠ ದೇಶವೊಂದರ ಪ್ರಭಾವದಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳಲು ಮುಂದಾಗಿರುವ, ತಮ್ಮದೇ ಆದ ಸ್ವತಂತ್ರ ರಾಷ್ಟ್ರೀಯ ಗುರುತು ಹೊಂದಿರುವ ಜನರು.
1970-71ರಲ್ಲಿ, ಪಾಕಿಸ್ತಾನಿ ಸೇನೆಯ ದೌರ್ಜನ್ಯ ಮಿತಿ ಮೀರಿದಾಗ, ಭಾರತವು ಅದನ್ನು ಬಗ್ಗುಬಡಿಯಿತು, ಪೂರ್ವ ಪಾಕಿಸ್ತಾನದ ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ ನೀಡಿತು ಹಾಗೂ ಇದಕ್ಕಾಗಿ ಅಗತ್ಯವೆನಿಸಿದಾಗ ತನ್ನ ಸೇನಾಬಲದ ಒಂದು ಸಣ್ಣ ಭಾಗವನ್ನು ಬಳಸಿಕೊಂಡಿತು. ಇದೆಲ್ಲವನ್ನೂ ಭಾರತ ಸರಿಯಾಗಿಯೇ ಮಾಡಿತು.
ಅದೇ ವೇಳೆ, ಬಾಂಗ್ಲಾದೇಶ ನಮ್ಮ ಪಕ್ಕದಲ್ಲೇ ಇದೆ, ಆದರೆ ಉಕ್ರೇನ್ ತುಂಬಾ ದೂರದಲ್ಲಿದೆ. ಹಾಗಾಗಿ, ಉಕ್ರೇನ್ ಪ್ರಕರಣದಲ್ಲಿ ಈ ರೀತಿಯ ಭೌತಿಕ ಬೆಂಬಲ ನೀಡುವುದು ಕಾರ್ಯಸಾಧುವಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಹಾಗಂತ, ವಿರುದ್ಧ ನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಉಕ್ರೇನ್ ಮೇಲಿನ ರಶ್ಯ ಆಕ್ರಮಣವನ್ನು ಖಂಡಿಸಲು ನಿರಾಕರಿಸುವ ಮೂಲಕ ಉಕ್ರೇನ್‌ನಲ್ಲಿ ಪುಟಿನ್ ಮತ್ತು ಅವರ ಸೈನಿಕರು ನಡೆಸುತ್ತಿರುವ ಅಪರಾಧಗಳಲ್ಲಿ ಭಾಗಿಯಾಗಬೇಕೇ?
ಉಕ್ರೇನ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಭಾರತ ಸರಕಾರ ನೀಡುತ್ತಿರುವ ಅತ್ಯಂತ ಅತೃಪ್ತಿಕರ ಪ್ರತಿಕ್ರಿಯೆಯ ಹಿಂದೆ ಕಾರಣಗಳಿವೆ ಎಂದು ಯಾರಾದರೂ ಹೇಳಬಹುದು. ಬಹುಶಃ ಸೇನಾ ಸಲಕರಣೆಗಳ ಪೂರೈಕೆಗಾಗಿ ಭಾರತ ರಶ್ಯವನ್ನು ಅವಲಂಬಿಸಿರುವುದು ಇದಕ್ಕೆ ಕಾರಣ ಎಂದು ಅವರು ಹೇಳಬಹುದು. ಬಹುಶಃ ಸ್ವತಂತ್ರ ದೇಶವನ್ನು ಹೊಂದುವ ಉಕ್ರೇನ್‌ನ ಹಕ್ಕನ್ನು ನಾವು ಬೆಂಬಲಿಸಿದರೆ, ಕಾಶ್ಮೀರಿಗಳು ಮತ್ತು ನಾಗಾಗಳೂ ಅದೇ ರೀತಿಯ ಬೇಡಿಕೆಗಳನ್ನು ಮುಂದಿಡಬಹುದು ಎಂಬ ಭೀತಿಯನ್ನು ಆಡಳಿತಾರೂಢ ಪಕ್ಷದ ಚಿಂತಕರು ಹೊಂದಿರಬಹುದು. ಬಹುಶಃ ನಮ್ಮ ತೈಲ ಮೂಲಗಳ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಹಣದುಬ್ಬರವನ್ನು ಹಿಡಿತದಲ್ಲಿಡಲು ಮತ್ತು ಆ ಮೂಲಕ ಸಾಮಾಜಿಕ ಅತೃಪ್ತಿಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಸರಕಾರ ಭಾವಿಸಿರಬಹುದು. ಬಹುಶಃ ಪ್ರಧಾನಿಯಾಗಿ ಎಂಟು ವರ್ಷಗಳನ್ನು ಪೂರೈಸಿದ ಬಳಿಕವೂ ನರೇಂದ್ರ ಮೋದಿಯವರು, ಜಾಗತಿಕ ರಾಜಕಾರಣದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಂಡಿಲ್ಲ; ಹಾಗಾಗಿ, ಅವರಿಗೆ ನಿಲುವು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕಾರಣಗಳು ಏನೇ ಇದ್ದರೂ, ಉಕ್ರೇನ್ ಕುರಿತಂತೆ ಭಾರತ ಸರಕಾರದ ನಿಲುವು- ಅಥವಾ ನಿಖರವಾಗಿ ಹೇಳಬೇಕೆಂದರೆ, ನಿಲುವೇ ಇಲ್ಲದಿರುವುದು- ನೈತಿಕವಾಗಿ ಅಸಮರ್ಥನೀಯ ಮತ್ತು ರಾಜಕೀಯವಾಗಿ ಅಪ್ರಬುದ್ಧ. ನಮ್ಮ ವಿದೇಶ ವ್ಯವಹಾರಗಳ ಸಚಿವ (ಎಸ್. ಜೈಶಂಕರ್)ರು, ಕೃಷ್ಣ ಮೆನನ್ (ಜವಾಹರಲಾಲ್ ನೆಹರೂ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದರು) ಧಾಟಿಯಲ್ಲಿ ಮಾತನಾಡುತ್ತಾ, ಯುರೋಪಿಯನ್ ದೇಶಗಳು ಸೋಗಲಾಡಿಗಳಾಗಿವೆ ಎಂದು ಆರೋಪಿಸಿದ್ದಾರೆ. ಅವುಗಳು ಒಂದು ಕಡೆ, ರಶ್ಯದ ಅನಿಲವನ್ನು ಬಳಸುತ್ತಿವೆ ಮತ್ತು ಇನ್ನೊಂದು ಕಡೆ, ರಶ್ಯದ ತೈಲವನ್ನು ಖರೀದಿಸುತ್ತಿರುವುದಕ್ಕಾಗಿ ಭಾರತವನ್ನು ಟೀಕಿಸುತ್ತಿವೆ ಎಂದು ಅವರು ದೂರಿದ್ದಾರೆ.
ಪಾಶ್ಚಿಮಾತ್ಯ ದೇಶಗಳು ಸೋಗಲಾಡಿತನ ಹೊಂದಿವೆ ಎನ್ನುವುದು ದೊಡ್ಡ ಸುದ್ದಿಯೇನಲ್ಲ. ಈ ವಿಷಯದಲ್ಲಿ ಭಾರತ ಸರಕಾರದ ಸೋಗಲಾಡಿತನವೇ ಮುಖ್ಯ ವಿಷಯವಾಗಿದೆ. ಬ್ರಿಟಿಷ್ ವಸಾಹತುಶಾಹಿಯ ಆಳ್ವಿಕೆಯಿಂದ ಮುಕ್ತಗೊಂಡು 75 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ನಾವು ಮುಂದಿನ ತಿಂಗಳು ಆಚರಿಸಲಿದ್ದೇವೆ. ಈ ಆಚರಣೆಗೆ ಮೋದಿ ಸರಕಾರ ವ್ಯಾಪಕ ಪ್ರಚಾರ ನೀಡಿದೆ. ‘ಇದು ನಮ್ಮ ಆಝಾದಿ ಕಾ ಅಮೃತ ಮಹೋತ್ಸವ’ ಎಂಬ ಬರಹ ಇರದ ಒಂದೇ ಒಂದು ಸರಕಾರಿ ಜಾಹೀರಾತು, ಪತ್ರಿಕಾ ಪ್ರಕಟನೆ ಅಥವಾ ಇಮೇಲ್‌ಗಳಿಲ್ಲ. ಆದರೆ, 75 ವರ್ಷಗಳ ರಾಜಕೀಯ ಸ್ವಾತಂತ್ರದ ಸಂಭ್ರಮಾಚರಣೆಯ ವೇಳೆ, ಇಂದಿನ ಜಗತ್ತಿನಲ್ಲೂ ಸಾಮ್ರಾಜ್ಯಶಾಹಿತ್ವದ ಅಸ್ತಿತ್ವ ಮುಂದುವರಿದಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಭಾರತ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಉಕ್ರೇನ್ ಮೇಲಿನ ರಶ್ಯ ಆಕ್ರಮಣದಲ್ಲಿ ಇದು ಅತ್ಯಂತ ಸ್ಪಷ್ಟವಾಗಿ ಗೋಚರವಾಗುತ್ತಿದೆ.
ರಶ್ಯ ಆಕ್ರಮಣದ ವಿರುದ್ಧ ಉಕ್ರೇನ್ ಜನತೆ ತೋರಿಸಿರುವ ದಿಟ್ಟ ಪ್ರತಿರೋಧಕ್ಕೆ ಬೆಂಬಲ ನೀಡಬೇಕಾಗಿರುವುದು ಭಾರತದ ನೈತಿಕ ಜವಾಬ್ದಾರಿಯಾಗಿದೆ. ಅದರ ಜೊತೆಗೆ, ರಾಜಕೀಯ ಜವಾಬ್ದಾರಿಯೂ ನಮಗಿದೆ ಎಂಬುದಾಗಿ ನಾನು ಭಾವಿಸುತ್ತೇನೆ. ನಮ್ಮ ಆರ್ಥಿಕತೆ ಮತ್ತು ಜನಸಂಖ್ಯೆಯ ಗಾತ್ರ ಹಾಗೂ ನಮ್ಮ ಸೇನೆ ಮತ್ತು ಇತರ ಸೊತ್ತುಗಳನ್ನು ಗಣನೆಗೆ ತೆಗೆದುಕೊಂಡು, ಭಾರತವನ್ನು ಸ್ವಲ್ಪ ಸಮಯ ಜಾಗತಿಕ ಸಾರ್ವಜನಿಕ ವ್ಯವಹಾರಗಳಲ್ಲಿ ಸಾಕಷ್ಟು ಗಂಭೀರವಾಗಿಯೇ ಪರಿಗಣಿಸಲಾಗಿತ್ತು. ಪುಟಿನ್‌ರ ಕೃತ್ಯಗಳಿಗೆ ಚೀನಾ ಸಾರಾ ಸಗಟು ಬೆಂಬಲ ನೀಡಿದಾಗ, ನಮ್ಮ ಸರಕಾರ ಆ ಆಕ್ರಮಣವನ್ನು ತಕ್ಷಣ ಖಂಡಿಸಿದ್ದರೆ, ಅದು ಪುಟಿನ್ ಮತ್ತು ಅವರ ಸರಕಾರದ ಮೇಲೆ ಒತ್ತಡವನ್ನು ಬೀರಲು ಸಹಾಯ ಮಾಡುತ್ತಿತ್ತು. ಉಕ್ರೇನ್‌ಗೆ ಭಾರತ ಬೆಂಬಲ ನೀಡಿದ್ದರೆ, ಜನಾಭಿಪ್ರಾಯವು ನಿರ್ಣಾಯಕವಾಗಿ ರಶ್ಯದ ವಿರುದ್ಧ ಹೋಗುತ್ತಿತ್ತು. ಆಗ ಮಾತುಕತೆಯ ಮೇಜಿಗೆ ಬರಬೇಕಾದ ಒತ್ತಡ ರಶ್ಯದ ಮೇಲಿರುತ್ತಿತ್ತು.
ನಮ್ಮ ಸರಕಾರ ಹೀಗೆ ಮಾಡಿದ್ದರೆ, ಅದು ಜಾಗತಿಕ ವೇದಿಕೆಯಲ್ಲಿ ನಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತಿತ್ತು ಮತ್ತು ಉಕ್ರೇನಿಯನ್ನರ ಸಂಕಷ್ಟವನ್ನು ಕೊನೆಗೊಳಿಸಲು ನೆರವು ನೀಡುತ್ತಿತ್ತು

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News