ಹೆಮ್ಮಾಡಿ: ಸ್ಥಳೀಯ ಸಮಸ್ಯೆಗಳ ವಿರುದ್ಧ ಸಿಪಿಎಂ ಪ್ರತಿಭಟನೆ

Update: 2022-08-26 14:53 GMT

ಕುಂದಾಪುರ, ಆ.26: ಸಿಪಿಎಂ ಪಕ್ಷದ ಹೆಮ್ಮಾಡಿ  ಶಾಖೆಯ ನೇತೃತ್ವದಲ್ಲಿ  ಹೆಮ್ಮಾಡಿ ಗ್ರಾಮದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವಂತೆ  ಆಗ್ರಹಿಸಿ ಹೆಮ್ಮಾಡಿ ಗ್ರಾಮ ಪಂಚಾಯತ್ ಎದುರು ಇಂದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಬೈಂದೂರು ವಲಯ ಸಮಿತಿ ಮುಖಂಡ ಸಂತೋಷ ಹೆಮ್ಮಾಡಿ, ಹೆಮ್ಮಾಡಿ ಗ್ರಾಮದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಕಳೆದ ಹಲವು ವರ್ಷಗಳಿಂದ ಮನವಿ ನೀಡಲಾಗುತ್ತಿದೆ. ಆದರೆ ಕೆಲವು ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಜನರ ಬೇಡಿಕೆಗಳ ಬಗ್ಗೆ ಆದ್ಯತಾ ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ತಮ್ಮ ಆಗ್ರಹವಾಗಿದೆ ಎಂದರು.

ಬೇಡಿಕೆಗಳು: ಕಾಸನಾಡಿ ಬೊಬ್ಬರ್ಯ ದೈವಸ್ಥಾನ -ನಡುಬೆಟ್ಟು ರಸ್ತೆಯ ಕಾಂಕ್ರೀಟಿಕರಣ ಪೂರ್ಣಗೊಳಿಸಬೇಕು. ಹೆಮ್ಮಾಡಿ ಪೇಟೆಯ ಕೊಲ್ಲೂರು ರಸ್ತೆಯ ಪ್ರದೇಶದಲ್ಲಿ ಭಟ್ರಬೆಟ್ಟು ಮನೆಗಳಿಗೆ ನುಗ್ಗುತ್ತಿರುವ ನೀರನ್ನು ತಡೆಯಲು ಚರಂಡಿ ವ್ಯವಸ್ಥೆ ಮಾಡಬೇಕು. ಕಟ್ಟಿನ ರಸ್ತೆಯ ಬದಿಯಲ್ಲಿರುವ ಸುಗ್ಗಿ ತೋಡಿನ ಹೂಳೆತ್ತಬೇಕು. ಹೆಮ್ಮಾಡಿ ಕೊಟ್ಟು ರಸ್ತೆಯ ಕೃಷಿ ಭೂಮಿ ಮುಳುಗಡೆ ತಪ್ಪಿಸಲು ಚರಂಡಿ ವ್ಯವಸ್ಥೆ ದುರಸ್ತಿ ಮಾಡಬೇಕು. ಕನ್ನಡಕುದ್ರು, ಕಟ್ಟು, ಸಂತೋಷ ನಗರಗಳಿಗೆ ಹಲವಾರು ವರ್ಷಗಳ ಬೇಡಿಕೆಯಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾದ ಸುಧಾಕರ ಎನ್ ದೇವಾಡಿಗ, ಮಾಜಿ ಅಧ್ಯಕ್ಷ ಸತ್ಯನಾರಾಯಣ ರಾವ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ ಮನವಿ ಸ್ವೀಕರಿಸಿದರು.

ಪಕ್ಷದ ಶಾಖಾ ಕಾರ್ಯದರ್ಶಿ ಜಗದೀಶ ಆಚಾರ್ಯ, ಕಟ್ಟಡ ಕಾರ್ಮಿಕರ ಘಟಕದ ಅಧ್ಯಕ್ಷ ಗಣೇಶ್ ಆಚಾರ್ಯ, ಕಾರ್ಯದರ್ಶಿ ನರಸಿಂಹ ದೇವಾಡಿಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News