ಭಾರತ ಫುಟ್ಬಾಲ್‌ಗೆ ಕವಿದ ಕಾರ್ಮೋಡ
ಭಾರತದ ಬಹುತೇಕ ಕ್ರೀಡಾ ಸಂಸ್ಥೆಗಳ ಆಡಳಿತ ರಾಜಕಾರಣಿಗಳ ಕಪಿಮುಷ್ಠಿಯಲ್ಲಿದ್ದು, ಕ್ರೀಡಾ ಆಡಳಿತದಲ್ಲಿ ತಮ್ಮ ಸ್ವಾರ್ಥಕ್ಕಾಗಿ ನಿಯಮಬಾಹಿರವಾಗಿ ಏನೇನೋ ಮಾಡಲು ಹೊರಟ ಪರಿಣಾಮವಾಗಿ ಕ್ರೀಡಾಪಟುಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆ ಎದುರಿಸುವಂತಾಗಿದೆ.
ಕ್ರಿಕೆಟ್, ಹಾಕಿ ಆಡಳಿತದ ವಿವಾದ ತಣ್ಣಗಾದ ಬಳಿಕ ಇದೀಗ ಭಾರತದ ಫುಟ್ಬಾಲ್ ಆಟಗಾರರಿಗೆ ಸಮಸ್ಯೆ ಎದುರಾಗಿದೆ. ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಆಡಳಿತದಲ್ಲಿ ಮೂರನೇ ವ್ಯಕ್ತಿಗಳ ಮಧ್ಯಪ್ರವೇಶವನ್ನು ಗುರುತಿಸಿರುವ ಅಂತರ್ ರಾಷ್ಟ್ರೀಯ ಫುಟ್ಬಾಲ್‌ನ ಜಾಗತಿಕ ಮಂಡಳಿ ಫಿಫಾ ಎಐಎಫ್‌ಎಫ್‌ನ್ನು ಅಮಾನತುಗೊಳಿಸಿದೆ. ಇದರಿಂದಾಗಿ ಭಾರತದ ಫುಟ್ಬಾಲ್ ಜಾಗತಿಕವಾಗಿ ಮಾನ್ಯತೆಯನ್ನು ಕಳೆದುಕೊಂಡಂತಾಗಿದೆ. ಫಿಫಾ ನಿಯಮ ಪ್ರಕಾರ ಫಿಫಾದ ಅಧೀನಕ್ಕೊಳಪಟ್ಟ ಫುಟ್ಬಾಲ್ ಸಂಸ್ಥೆಗಳ ಆಡಳಿತದಲ್ಲಿ ದೇಶದ ಸರಕಾರ ಅಥವಾ ಇನ್ನಿತರ ಸಂಸ್ಥೆಗಳು ಹಸ್ತಕ್ಷೇಪ ಮಾಡುವಂತಿಲ್ಲ. ಭಾರತದ ಫುಟ್ಬಾಲ್‌ನ ಆಡಳಿತದಲ್ಲಿ ನಿಯಮಬಾಹಿರ ಚಟುವಟಿಕೆಯನ್ನು ಗಮನಿಸಿದ್ದ ಸುಪ್ರೀಂಕೋರ್ಟ್ ಇದರ ಮೇಲೆ ನಿಗಾ ಇರಿಸಲು ಕಳೆದ ಮೇ ತಿಂಗಳಲ್ಲಿ ಮೂವರು ಸದಸ್ಯರ ಆಡಳಿತಾಧಿಕಾರಿಗಳ ಸಮಿತಿಯನ್ನು ನೇಮಕ ಮಾಡಿತ್ತು. ಫಿಫಾ ನಿಯಮ ಪ್ರಕಾರ ಫುಟ್ಬಾಲ್ ಆಡಳಿತದಲ್ಲಿ ಮೂರನೇ ವ್ಯಕ್ತಿಗಳಿಗೆ ಹಸ್ತಕ್ಷೇಪ ನಡೆಸಲು ಅವಕಾಶ ಇಲ್ಲ. ಭಾರತದ ಫುಟ್ಬಾಲ್‌ನ ಬೆಳವಣಿಗೆಯನ್ನು ಗಮನಿಸಿದ ಫಿಫಾ ಈ ಕಾರಣವನ್ನು ಮುಂದಿಟ್ಟುಕೊಂಡು ಆಗಸ್ಟ್ 15ರಂದು ಎಐಎಫ್‌ಎಫ್‌ನ್ನು ಅಮಾನತುಮಾಡಿತ್ತು.
ಫಿಫಾದ ಈ ಕ್ರಮದಿಂದಾಗಿ ಎಐಎಫ್‌ಎಫ್ ಹಾಗೂ ಅದರ ಆಟಗಾರರಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಮಾನ್ಯತೆ ಇಲ್ಲದಾಗಿದೆ. ಹೀಗಾಗಿ ಭಾರತದ ಫುಟ್ಬಾಲ್‌ಗೆ ಕಾರ್ಮೋಡ ಕವಿದಿದೆ. ಅಮಾನತು ರದ್ದಾಗುವ ತನಕ ಭಾರತದಲ್ಲಿ ಯಾವುದೇ ಅಂತರ್‌ರಾಷ್ಟ್ರೀಯ ಲೀಗ್‌ಗಳನ್ನು ನಡೆಸಲು ಸಾಧ್ಯವಿಲ್ಲ. ಅದಕ್ಕಿಂತಲೂ ದೊಡ್ಡ ಸಮಸ್ಯೆ ಏನೆಂದರೆ ಭಾರತ ಅಕ್ಟೋಬರ್‌ನಲ್ಲಿ ಆಯೋಜಿಸಲು ಉದ್ದೇಶಿಸಿದ್ದ ವನಿತೆಯರ ಅಂಡರ್ -17 ಫುಟ್ಬಾಲ್ ಟೂರ್ನಮೆಂಟ್ ಕೂಡ ರದ್ದಾಗಿದೆ. ಭಾರತಕ್ಕೆ ನೀಡಿದ್ದ ಈ ಟೂರ್ನಮೆಂಟ್‌ನ ಆತಿಥ್ಯದ ಹಕ್ಕನ್ನು ಫಿಫಾ ಕಿತ್ತುಕೊಂಡಿದೆ. ಇನ್ನೊಂದು ವಿಚಾರವೆಂದರೆ ಭಾರತಕ್ಕೆ ಆತಿಥ್ಯ ಕೈ ತಪ್ಪಿರುವ ಜೊತೆಗೆ ಭಾರತದ ವನಿತೆಯರಿಗೆ ಅಂಡರ್ -17 ಟೂರ್ನಿಯಲ್ಲಿ ಪಾಲ್ಗೊಳ್ಳಲೂ ಸಾಧ್ಯವಿಲ್ಲ. ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಅವರು ಇಷ್ಟರ ತನಕ ನಡೆಸಿದ ತಯಾರಿಯ ಶ್ರಮ ವ್ಯರ್ಥಗೊಳ್ಳುವಂತಾಗಿದೆ. ಇಂಡಿಯನ್ ವುಮೆನ್ಸ್ ಚಾಂಪಿಯನ್ ಗೋಕುಲಮ್ ಕೇರಳ ತಂಡಕ್ಕೆ ಏಶ್ಯನ್ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಕೈ ತಪ್ಪಿದೆ. ಎಎಫ್‌ಸಿ ಅನ್ನು ಫಿಫಾ ಅಮಾನತುಗೊಳಿಸಿರುವುದನ್ನು ಘೋಷಿಸಿದಾಗ ಗೋಕುಲಂ ಕೇರಳ ಉಜ್ಬೆಕಿಸ್ತಾನದಲ್ಲಿತ್ತು. ಭಾರತದ ಪುರುಷರ ತಂಡ ಏಶ್ಯಕಪ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದ್ದರೂ, ಫಿಫಾದ ಅಮಾನತು ಆದೇಶ ಮುಂದುವರಿದರೆ ತಂಡಕ್ಕೆ ಮುಂದಿನ ವರ್ಷ ಆಡುವ ಅವಕಾಶ ಸಿಗುವುದು ಕಷ್ಟ ಸಾಧ್ಯ. ಈಗಾಗಲೇ ಸಿಂಗಾಪುರ ಮತ್ತು ವಿಯೆಟ್ನಾಂ ವಿರುದ್ಧ ಸೆಪ್ಟಂಬರ್‌ನಲ್ಲಿ ನಡೆಯಬೇಕಿದ್ದ ಭಾರತದ ಪುರುಷರ ರಾಷ್ಟ್ರೀಯ ತಂಡದ ಪಂದ್ಯಗಳು ರದ್ದಾಗಿವೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಸುಪ್ರೀಂ ಕೋರ್ಟ್ ಭಾರತದ ಫುಟ್ಬಾಲ್‌ನ ಹಿತದೃಷ್ಟಿಯಿಂದ ಫಿಫಾದೊಂದಿಗಿನ ಸಮಸ್ಯೆಯನ್ನು ಬಗೆಹರಿಸಲು ಗಮನ ನೀಡುವಂತೆ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು.
ಮೇ 18ರಂದು ಎಐಎಫ್‌ಎಫ್ ಆಡಳಿತದ ಉಸ್ತುವಾರಿಯನ್ನು ನೋಡಿಕೊಳ್ಳಲು ನೇಮಕ ಮಾಡಲಾಗಿದ್ದ ಆಡಳಿತಾಧಿಕಾರಿಗಳ ಸಮಿತಿಯನ್ನು ಸುಪ್ರೀಂ ಕೋರ್ಟ್ ಆ.22ರಂದು ವಿಸರ್ಜಿಸಿದೆ. ರಾಷ್ಟ್ರೀಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿರುವ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ನೇತೃತ್ವದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಇದೇ ವೇಳೆ ಎಐಎಫ್‌ಎಫ್‌ನ ದೈನಂದಿನ ವ್ಯವಹಾರವನ್ನು ನೋಡಿಕೊಳ್ಳಲು ಉಸ್ತುವಾರಿ ಕಾರ್ಯದರ್ಶಿ ಸುನಂದೊ ಧರ್ ನೇತೃತ್ವದ ಸಮಿತಿಗೆ ವಹಿಸಿಕೊಟ್ಟಿದೆ. 23 ಸದಸ್ಯರ ಸಮಿತಿ: ಎಐಎಫ್‌ಎಫ್‌ನ ಹೊಸ ಕಾರ್ಯಕಾರಿ ಮಂಡಳಿಯು 23 ಸದಸ್ಯರನ್ನು ಒಳಗೊಂಡಿರುತ್ತದೆ. ಅವರಲ್ಲಿ ಅಧ್ಯಕ್ಷರು, ಖಜಾಂಚಿ ಮತ್ತು ಒಬ್ಬ ಉಪಾಧ್ಯಕ್ಷರು ಸೇರಿದಂತೆ 17 ಸದಸ್ಯರು ದೇಶದ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 36 ಪ್ರತಿನಿಧಿಗಳ ಮೂಲಕ ಆಯ್ಕೆಯಾಗುತ್ತಾರೆ. 17 ಸದಸ್ಯರನ್ನು ಹೊರತುಪಡಿಸಿ, ಆರು ಖ್ಯಾತ ಆಟಗಾರರನ್ನು (ನಾಲ್ಕು ಪುರುಷರು, ಇಬ್ಬರು ಮಹಿಳೆಯರು) ಮತದಾನದ ಹಕ್ಕುಗಳೊಂದಿಗೆ ಸಮಿತಿಗೆ ಕೋ-ಆಪ್ಟ್ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇದೇ ವೇಳೆ ಸುಪ್ರೀಂ ಕೋರ್ಟ್ ಎಐಎಫ್‌ಎಫ್‌ನ ಚುನಾವಣೆಯನ್ನು ಒಂದು ವಾರ ಮುಂದೂಡಿದೆ. ಈ ಮೊದಲು ಆಗಸ್ಟ್ 28 ಚುನಾವಣೆ ನಿಗದಿಯಾಗಿತ್ತು.
ಕ್ರೀಡಾ ಸಚಿವಾಲಯದ ಪ್ರಯತ್ನ: ಭಾರತದ ಕ್ರೀಡಾ ಸಚಿವಾಲಯವು ಫಿಫಾ ಮತ್ತು ಎಎಫ್‌ಎಫ್‌ಗೆ ಭಾರತದ ಆಟಗಾರರಿಗೆ ಟೂರ್ನಿಗಳಲ್ಲಿ ಅವಕಾಶ ನೀಡುವಂತೆ ಈಗಾಗಲೇ ಮನವಿ ಮಾಡಿದ್ದು, ಆದರೆ ಫಿಫಾ ಜಾರಿಗೊಳಿಸಿರುವ ಅಮಾನತು ಆದೇಶ ಹಿಂಪಡೆಯುವ ತನಕ ಭಾರತದ ಫುಟ್ಬಾಲ್ ಆಟಗಾರರಿಗೆ ಮತ್ತು ಆಟಗಾರ್ತಿಯರಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಅವಕಾಶ ಸಿಗಲಾರದು. ಸುಪ್ರೀಂ ಕೋರ್ಟ್ ಭಾರತದ ಫುಟ್ಬಾಲ್‌ನ ಹಿತದೃಷ್ಟಿಯಿಂದ ಕೈಗೊಂಡಿರುವ ನಿರ್ಧಾರವನ್ನು ಕ್ರೀಡಾ ಸಚಿವಾಲಯವು ಜಾಗತಿಕ ಫುಟ್ಬಾಲ್ ಸಂಸ್ಥೆಗೆ ತಿಳಿಸಿ, ಅಮಾನತು ಹಿಂಪಡೆಯುವಂತೆ ಮನವಿ ಮಾಡಬೇಕಾಗಿದೆ. ಫಿಫಾಕ್ಕೆ ಸುಪ್ರೀಂಕೋರ್ಟ್ ನಿರ್ಧಾರ ತೃಪ್ತಿಯಾದರೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆಗಸ್ಟ್ 15 ರಂದು, ಫಿಫಾ ಪ್ರಧಾನ ಕಾರ್ಯದರ್ಶಿ ಫಾತ್ಮಾ ಸಮೌರಾ ಅವರು ಧರ್ ಅವರಿಗೆ ಬರೆದ ಪತ್ರದಲ್ಲಿ, ಸಿಒಎ ಸಮಿತಿಯನ್ನು ನೇಮಕಗೊಳಿಸಿದ್ದ ಆದೇಶವನ್ನು ಪೂರ್ಣವಾಗಿ ಹಿಂದೆಗೆದುಕೊಂಡ ನಂತರ ಮತ್ತು ಎಐಎಫ್‌ಎಫ್ ಚುನಾಯಿತ ಆಡಳಿತ ಸಮಿತಿಯ ಕೈಗೆ ಭಾರತದ ಫುಟ್ಬಾಲ್‌ನ ಪೂರ್ಣ ಅಧಿಕಾರ ರವಾನೆಯಾದ ಬಳಿಕ ಅಮಾನತು ಆದೇಶವನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಎಐಎಫ್‌ಎಫ್‌ನ್ನು ಅಮಾನತುಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿ ಫಿಫಾ ಆ.20ರಂದು ಭಾರತದ ಕ್ರೀಡಾ ಸಚಿವಾಲಯ ಮತ್ತು ಎಐಎಫ್‌ಎಫ್‌ಗೆ ನೀಡಿರುವ ಪತ್ರದಲ್ಲಿ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.