ಗೌರಿ ಲಂಕೇಶ್ ಇಲ್ಲದ ದಿನಗಳು

Update: 2022-09-05 04:38 GMT

ಸಂಶೋಧಕ ಡಾ. ಎಂ.ಎಂ.ಕಲ್ಬುರ್ಗಿ, ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ, ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಮತ್ತು ಗೌರಿ ಲಂಕೇಶ್.
ಈ ನಾಲ್ವರು ಜೀವ ತೆತ್ತಿದ್ದು ಆಸ್ತಿಪಾಸ್ತಿಗಳ ವ್ಯಾಜ್ಯಕ್ಕಲ್ಲ. ಇವರಿಗೆ ವೈಯಕ್ತಿಕವಾಗಿ ಯಾರೂ ಶತ್ರುಗಳಿರಲಿಲ್ಲ. ಮನೆತನದ ಹಳೆಯ ಹಗೆತನವೂ ಯಾರ ಜೊತೆಗಿರಲಿಲ್ಲ. ಕೇವಲ ಅಂದರೆ ಕೇವಲ ಇವರು ಜೀವ ತೆತ್ತಿದ್ದು ತಾವು ನಂಬಿದ್ದ ಜೀವ ಪರ ಮತ್ತು ಜನಪರ ಸಿದ್ಧಾಂತಕ್ಕಾಗಿ.

ಜಾತಿ ಮತ ಭೇದವಿಲ್ಲದ ಸಮಾನತೆಯ ಸಮಾಜ ಇವರೆಲ್ಲರ ಕನಸಾಗಿತ್ತು.ಈ ಕನಸನ್ನು ನನಸಾಗಿಸಲು ಇವರು ತಮ್ಮ ವೈಯಕ್ತಿಕ ಸುಖ,ಸಂತೋಷಗಳನ್ನು ಕಡೆಗಣಿಸಿ ಹಗಲಿರುಳು ದುಡಿಯುತ್ತಿದ್ದರು. ಆದರೂ ಇವರು ಹತ್ಯೆಗೀಡಾದರು. ಹತ್ಯೆ ಮಾಡಿದವರ ಜೊತೆಗೂ ಇವರಿಗೆ ವೈರತ್ವ ಇರಲಿಲ್ಲ. ಆದರೆ ಹಂತಕರ ದೃಷ್ಟಿಯಲ್ಲಿ ಇವರು ವಿಲನ್‌ಗಳಾಗಿದ್ದರು. ಗೌರಿ ಲಂಕೇಶ್ ಹತ್ಯೆ ಹೊರತುಪಡಿಸಿ ಉಳಿದವರನ್ನು ಕೊಂದವರು ಯಾರೆಂದು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಆದರೆ, ಇವರನ್ನು ಕೊಂದವರು ಯಾವ ಸಿದ್ಧಾಂತದಿಂದ ಪ್ರೇರಣೆ ಪಡೆದರೆಂಬುದು ಎಲ್ಲರಿಗೂ ಗೊತ್ತಿದೆ. ಗಾಂಧೀಜಿಯವರ ಎದೆಗೆ ಗುಂಡಿಕ್ಕಿದವ ನಂಬಿದ ಸಿದ್ಧಾಂತವನ್ನೇ ಇವರೂ ನಂಬಿದ್ದರು.
ಗೌರಿ ಲಂಕೇಶ್ ಹಂತಕರ ಗುಂಡಿಗೆ ಬಲಿಯಾಗಿ ಇಂದಿಗೆ ಐದು ವರ್ಷಗಳಾದವು. ಆ ಕರಾಳ ದಿನದ ಸಂಜೆ ಮನೆಯಲ್ಲಿ ಯಾವುದೋ ಪುಸ್ತಕ ಓದುತ್ತ ಕುಳಿತಾಗ ಸ್ನೇಹಿತರೊಬ್ಬರು ಫೋನ್ ಮಾಡಿ ಗೌರಿಯ ಮೇಲೆ ಗುಂಡಿನ ದಾಳಿ ನಡೆದ ಸುದ್ದಿ ತಿಳಿಸಿದಾಗ ನಂಬಲು ಆಗಲಿಲ್ಲ. ನಂತರ ಟಿವಿ ಚಾಲೂ ಮಾಡಿದಾಗ ಈ ಆಘಾತಕಾರಿ ಘಟನೆಯ ವಿವರಗಳು ಬರುತ್ತಿದ್ದವು. ಮರು ದಿನ ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಶೋಕತಪ್ತ ಗೆಳೆಯರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಮೇಲೆ ಪಕ್ಕದ ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗಿದ್ದ ಗೌರಿಯ ಜೀವವಿಲ್ಲದ ದೇಹಕ್ಕೆ ಗೌರವ ಸಲ್ಲಿಸಿದ್ದಾಯಿತು.
ಗೌರಿ ಹತ್ಯೆಯ ಹಿಂದಿನ ವರ್ಷ ಧಾರವಾಡದಲ್ಲಿ ಹೆಸರಾಂತ ಸಂಶೋಧಕ ಡಾ. ಎಂ.ಎಂ.ಕಲ್ಬುರ್ಗಿ ಅವರನ್ನು ಅವರ ಮನೆಯ ಬಾಗಿಲಲ್ಲೇ ಹಣೆಗೆ ಗುಂಡಿಕ್ಕಿ ಕೊಂದಿದ್ದರು. ಅದರ ಹಿಂದಿನ ವರ್ಷ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಖ್ಯಾತ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಅವರನ್ನು ಬೆಳಗಿನ ಜಾವದಲ್ಲಿ ವಾಯು ವಿಹಾರಕ್ಕೆ ಹೊರಟಾಗ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯೆಯ ಹಿಂದಿನ ವರ್ಷ ಪುಣೆಯಲ್ಲಿ ಅಂಧಶ್ರದ್ಧ್ದೆಗಳ ವಿರುದ್ಧ ಹೋರಾಡಲು ಸಂಘಟನೆಯನ್ನು ಕಟ್ಟಿದ್ದ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಕೂಡ ನಸುಕಿನ ಜಾವ ವಾಕಿಂಗ್ ಮಾಡುವಾಗ ಕೊಂದಿದ್ದರು.

ಈ ನಾಲ್ಕೂ ಹತ್ಯೆಗಳು ನಡೆದಾಗ ನಿಜವಾದ ಪಾತಕಿಗಳನ್ನು ರಕ್ಷಿಸಲು ವದಂತಿಗಳ ಅಲೆಯನ್ನೆಬ್ಬಿಸಲಾಯಿತು. ಪನ್ಸಾರೆ ಹತ್ಯೆಯಾದಾಗ ಅವರ ಹತ್ಯೆಗೆ ಅವರು ವಿರೋಧಿಸುತ್ತ ಬಂದಿದ್ದ ಟೋಲ್ ನಾಕಾದ ಮಾಫಿಯಾ ಕಾರಣವೆಂದು ಮೊದಲಿಗೆ ವದಂತಿ ಹರಡಿದರು. ಆದರೆ, ಕೊಂದವರು ಸೈತಾನ ಸಂಘಟನೆಯವರೆಂದು ನಂತರ ಬಯಲಿಗೆ ಬಂತು. ಡಾ.ಕಲ್ಬುರ್ಗಿ ಅವರ ಹತ್ಯೆಯಾದಾಗ ಅವರ ಹತ್ಯೆಗೆ ವೈಯಕ್ತಿಕ ಆಸ್ತಿ ಜಗಳ ಕಾರಣವೆಂದು ಅವರ ಅಂತ್ಯಕ್ರಿಯೆ ನಡೆಯುವ ಮುನ್ನವೇ ಪ್ರಚಾರ ನಡೆಯಿತು. ಆದರೆ, ಕಲ್ಬುರ್ಗಿ ಅವರ ಹಂತಕರು ಯಾರೆಂದು ಗೌರಿ ಲಂಕೇಶ್ ಹತ್ಯೆಯ ನಂತರ ಸುಳಿವು ದೊರಕಿತು. ಗೌರಿ ಲಂಕೇಶ್ ಹತ್ಯೆಯಾದಾಗಲೂ ಅವರ ಹತ್ಯೆಗೆ ಕಾಡಿನಲ್ಲಿ ಇರುವ ನಕ್ಸಲರು ಕಾರಣ ಎಂದು ಕತೆ ಕಟ್ಟಿ ವದಂತಿ ಹರಿ ಬಿಟ್ಟರು. ಈ ರೀತಿ ವದಂತಿ ಹರಡುವವರು ನಿಜವಾದ ಹಂತಕರನ್ನು ರಕ್ಷಿಸಲು ಕಸರತ್ತು ನಡೆಸಿದರೇ ಎಂದು ಸಂದೇಹ ಬಂತು.
ಆದರೆ, ಕಾಡಿನಲ್ಲಿ ಇರುವ ನಕ್ಸಲ್ ಚಳವಳಿಯಿಂದ ಹೊರಬಂದು ಮುಖ್ಯ ವಾಹಿನಿ ಜೊತೆಗೆ ಗುರುತಿಸಿಕೊಂಡ ಸಿರಿಮನೆ ನಾಗರಾಜ ಮತ್ತು ನೂರ್ ಶ್ರೀಧರ್ ಪತ್ರಿಕಾಗೋಷ್ಠಿ ಮಾಡಿ ಕಾಡಿನಲ್ಲಿ ಇರುವ ನಕ್ಸಲರ ಮೇಲಿನ ಆರೋಪವನ್ನು ತಳ್ಳಿ ಹಾಕಿದರು.
ಗೌರಿ ಲಂಕೇಶ್ ಹತ್ಯೆಯಾದಾಗ ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ಅವರು ತಕ್ಷಣ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆಗೆ ಇಳಿಸಿದಾಗ ನಿಜವಾದ ಹಂತಕರ ಪತ್ತೆಯಾಯಿತು. ಅವರಿನ್ನೂ ಜೈಲಿನಲ್ಲಿ ಇದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಗೌರಿ ಲಂಕೇಶ್, ಪನ್ಸಾರೆ, ಕಲ್ಬುರ್ಗಿ, ದಾಭೋಲ್ಕರ್ ಹತ್ಯೆ ನಡೆದು ವರ್ಷಗಳೇ ಗತಿಸಿವೆ. ಭಾರತ ಎಂಬ ಈ ಬಹುತ್ವದ ಭೂಮಿ ದಿನದಿಂದ ದಿನಕ್ಕೆ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಲೇ ಇದೆ. ಸ್ವಾತಂತ್ರಾ ನಂತರ ಈ ದೇಶವನ್ನು ಕಾಪಾಡಿಕೊಂಡು ಬಂದ ಸಂವಿಧಾನ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಅಲುಗಾಡುತ್ತಿವೆ. ಏಕ ಧರ್ಮ,ಏಕ ಸಂಸ್ಕೃತಿ ಮತ್ತು ಏಕ ಭಾಷೆಯನ್ನು ಬಹುತ್ವ ಭಾರತದ ಮೇಲೆ ಹೇರುವ ಮಸಲತ್ತು ನಡೆದಿದೆ. ಬಾಬಾಸಾಹೇಬರು ರೂಪಿಸಿದ ಸಂವಿಧಾನಕ್ಕೆ ಪರ್ಯಾಯವಾಗಿ ಹಿಂದೂ ರಾಷ್ಟ್ರದ ಸಂವಿಧಾನದ ಕರಡನ್ನು ಧರ್ಮ ಗುರುಗಳು ಈಗಾಗಲೇ ಸಿದ್ಧಪಡಿಸಿದ್ದಾರೆ.
ಸಿಬಿಐನಂಥ ಸಾಂವಿಧಾನಿಕ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ಪ್ರತಿರೋಧವನ್ನು ಮಾತ್ರವಲ್ಲ ಪ್ರತಿಪಕ್ಷ ಗಳನ್ನೇ ನಾಶ ಮಾಡುವ ಹುನ್ನಾರ ನಡೆದಿದೆ. ಯಾವುದೇ ರಾಜ್ಯದಲ್ಲಿ ಪ್ರತಿಪಕ್ಷ ಸರಕಾರ ಬಂದರೆ ಆ ಸರಕಾರಗಳನ್ನು ಉರುಳಿಸಲು ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಉದಾಹರಣೆಗೆ, ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿಯನ್ನು ತ್ಯಜಿಸಿದ ನಿತೀಶ್ ಕುಮಾರ್ ಆರ್‌ಜೆಡಿ ಜೊತೆಗೆ ಸೇರಿ ಸರಕಾರ ರಚಿಸಲು ಮುಂದಾದಾಗ ಲಾಲು ಪುತ್ರನ ಮನೆಯ ಮೇಲೆ ಸಿಬಿಐ ದಾಳಿ ನಡೆಯಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆಗೆ ಸೇರಿ ಸರಕಾರ ರಚಿಸಿದ ಶಿವಸೇನೆಯ ಕೆಲವು ನಾಯಕರ ಮನೆಗಳ ಮೇಲೂ ಸಿಬಿಐ ದಾಳಿ ನಡೆಯಿತು.
ಇತ್ತೀಚೆಗೆ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ, ಉಪ ಮುಖ್ಯಮಂತ್ರಿ ಸಿಸೋಡಿಯ ಅವರ ಮನೆಯ ಮೇಲೂ ಸಿಬಿಐ ದಾಳಿ ನಡೆಯಿತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿರುವ ಆಮ್ ಆದ್ಮಿ ಪಕ್ಷವನ್ನು ಒಡೆಯಲು ಈ ದಾಳಿ ನಡೆದಿದೆ ಎಂದು ಅರವಿಂದ ಕೇಜ್ರಿವಾಲ್ ಆರೋಪ ಮಾಡಿದ್ದಾರೆ.
ಗೌರಿ ಲಂಕೇಶ್ ಹತ್ಯೆಯ ಆರೋಪಿಗಳ ಬಂಧನದ ನಂತರ ಕ್ರಿಯಾಶೀಲರನ್ನು ಗುರುತಿಸಿ ಸಾಲು ಸಾಲಾಗಿ ಕೊಲ್ಲುವುದೇನೋ ನಿಂತಿತು. ಆದರೆ, ರಾಜಕೀಯ ಅದರಲ್ಲೂ ಸೈದ್ಧಾಂತಿಕ ವಿರೋಧಿಗಳನ್ನು ಪಟ್ಟಿ ಮಾಡಿ ಜೈಲಿಗೆ ಹಾಕುವ ಮತ್ತು ಆರೋಪ ಪಟ್ಟಿ ಸಲ್ಲಿಸದೇ ಸೆರೆಮನೆಯಲ್ಲಿ ಇಡುವ ಹೊಸ ದಮನ ಸತ್ರ ಆರಂಭವಾಯಿತು. ಅಂತರ್ ರಾಷ್ಟ್ರೀಯ ಮಟ್ಟದ ಚಿಂತಕ,ಲೇಖಕ ಆನಂದ ತೇಲ್ತುಂಬ್ಡೆ ಹೆಸರಾಂತ ನ್ಯಾಯವಾದಿ ಸುಧಾ ಭಾರದ್ವಾಜ್, ಕವಿ ವರವರರಾವ್, ಪತ್ರಕರ್ತ ಗೌತಮ್ ನವ್ಲಾಕ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರನ್ನು ಯಾವುದೇ ಆರೋಪ ಪಟ್ಟಿ ಸಲ್ಲಿಸದೆ ಜೈಲಿನಲ್ಲಿ ಬಂಧಿಸಿ ಇಡಲಾಗಿದೆ. ಗುಜರಾತ್ ಹತ್ಯಾಕಾಂಡದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಸ್ವತಃ ಗುಜರಾತ್‌ಗೆ ಹೋಗಿ ನೊಂದವರ ಕಣ್ಣೀರು ಒರೆಸಿದ ಹೆಸರಾಂತ ವಕೀಲರಾದ ತೀಸ್ತಾ ಸೆಟಲ್ವಾಡ್ ಅವರನ್ನೂ ಇತ್ತೀಚೆಗೆ ಬಂಧಿಸಿ ಸೆರೆಮನೆಯಲ್ಲಿ ಇಡಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಜಾಮೀನು ಮೇಲೆ ಬಿಡುಗಡೆ ಮಾಡಿದೆ.
ಹೀಗಾಗಿ ಭಾರತದಲ್ಲಿ ಈಗ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಂಥ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶ ಮಾಡುವ ಅತ್ಯಂತ ವ್ಯವಸ್ಥಿತವಾದ ಹುನ್ನಾರ ನಡೆದಿದೆ.
ಸಂವಿಧಾನದ ಆಧಾರ ಸ್ತಂಭಗಳಲ್ಲಿ ಒಂದಾದ ನ್ಯಾಯಾಂಗ ಕೂಡ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವ ಸಂದೇಹಕ್ಕೆ ಈಡಾಗಿದೆ. ಹಿಂದೆ ಇನ್ನೂ ಸೇವೆಯಲ್ಲಿ ಇದ್ದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಮಾಧ್ಯಮ ಮುಂದೆ ಬಂದು ಅಂದಿನ ಮುಖ್ಯ ನ್ಯಾಯಮೂರ್ತಿಯವರು ಸರಕಾರಕ್ಕೆ ಅನುಕೂಲ ವಾಗುವಂತೆ ವರ್ತಿಸಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಈ ಆರೋಪ ಸುಳ್ಳಲ್ಲ ಎಂಬುದು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನಿವೃತ್ತಿ ನಂತರ ರಾಜ್ಯಸಭೆಯ ಸದಸ್ಯರಾದಾಗ ಬಟಾಬಯಲಾಯಿತು.ಮಹಾರಾಷ್ಟ್ರದ ನ್ಯಾಯಾಧೀಶ ರಾಗಿದ್ದ ಲೋಯಾ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಮುಂಬೈಹೈಕೋರ್ಟ್ ನಲ್ಲಿ ವಿಚಾರಣೆ ನಡೆದಾಗಲೇ ಸುಪ್ರೀಂ ಕೋರ್ಟಿಗೆ ವರ್ಗಾವಣೆ ಮಾಡಿಸಿದ್ದು ಯಾರು ಎಂಬುದು ಗುಟ್ಟಾಗಿ ಉಳಿದಿಲ್ಲ.
ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ಮತದಾರರನ್ನು ದಾರಿ ತಪ್ಪಿಸಲು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಬಹುಸಂಖ್ಯಾತ ಸಮುದಾಯಗಳನ್ನು ಎತ್ತಿಕಟ್ಟುವ ಮಸಲತ್ತು ನಿರಂತರವಾಗಿ ನಡೆದಿದೆ. ಹಿಜಾಬ್, ಗೋಹತ್ಯೆ, ಮತಾಂತರ, ಲವ್ ಜಿಹಾದ್, ಟಿಪ್ಪು, ಇಂಥ ವಿವಾದಗಳನ್ನು ಹುಟ್ಟುಹಾಕಿ ಹಿಂದೂ ಓಟ್ ಬ್ಯಾಂಕ್ ನಿರ್ಮಿಸಲು ಒಂದೆಡೆ ಮಸಲತ್ತು ನಡೆಸಿ ಇನ್ನೊಂದೆಡೆ ದಲಿತ, ಹಿಂದುಳಿದ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ದೊರೆತ ಹಕ್ಕು ಮತ್ತು ಸೌಕರ್ಯಗಳನ್ನು ನಾಶ ಮಾಡುವ ಹುನ್ನಾರ ನಡೆದಿದೆ.
 ಜಾರಿ ನಿರ್ದೇಶನಾಲಯ(ಈ.ಡಿ) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆಗಳನ್ನು ಉಪಯೋಗಿಸಿಕೊಳ್ಳುತ್ತಿರುವ ಒಕ್ಕೂಟ ಸರಕಾರ ಪ್ರತಿಪಕ್ಷ ಗಳನ್ನು, ಪ್ರತಿರೋಧದ ಧ್ವನಿಗಳನ್ನು ಹೊಸಕಿ ಹಾಕಲು ಯತ್ನಿಸುತ್ತಿದೆ.ಚುನಾವಣೆಗಳು ಬಂದಾಗ ವಿರೋಧಿಗಳನ್ನು ಹತ್ತಿಕ್ಕಲು ಈ ಸಂಸ್ಥೆಗಳನ್ನು ಬಳಸಿಕೊಂಡು ದಾಳಿಗಳು ನಡೆಯುತ್ತಿವೆ.
ಜನರ ಮುಂದೆ ಹೋಗಿ ತಮ್ಮ ಸರಕಾರದ ಸಾಧನೆಗಳನ್ನು ಹೇಳಿಕೊಳ್ಳುವ ಅರ್ಹತೆ ಇಲ್ಲದವರು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ಅಗ್ಗದ ಆಟ ಆಡುತ್ತ ರಾಜಕೀಯ ಮೌಲ್ಯಗಳಿಗೆ ಧಕ್ಕೆ ತರುತ್ತಿದ್ದಾರೆ. ಕೇಂದ್ರ ಮಂತ್ರಿಗಳು ಕೂಡ ಇಂಥ ಅಗ್ಗದ ಪ್ರಹಸನಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ.
ಜೀವನವಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೇರಿ ಜನಸಾಮಾನ್ಯರ ಬದುಕು ಅಸಹನೀಯವಾಗಿದೆ.ಇವರು ಅಧಿಕಾರಕ್ಕೆ ಬರುವ ಮುನ್ನ ಕೇವಲ ಐವತ್ತು ರೂಪಾಯಿ ಗಿಂತ ಕಡಿಮೆಯಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಈಗ ನೂರೈವತ್ತನ್ನು ದಾಟುವ ಹಂತದಲ್ಲಿ ಇದೆ.ಅಡುಗೆ ಅನಿಲ ಸಿಲಿಂಡರ್ ಬೆಲೆ ಹಿಂದೆ 400 ರೂ. ಇದ್ದುದು ಈಗ ಒಂದುವರೆ ಸಾವಿರವನ್ನು ದಾಟಿದೆ. ಇನ್ನೊಂದೆಡೆ ಅಂಬಾನಿ ಮತ್ತು ಅದಾನಿಗಳ ಸಂಪತ್ತಿನ ಸಾಮ್ರಾಜ್ಯ ವಿಸ್ತರಿಸುತ್ತಲೇ ಇದೆ.ಇಂಥ ಕಾರ್ಪೊರೇಟ್ ಬಂಡವಾಳಶಾಹಿಗಳ ಹತ್ತು ಲಕ್ಷ ಕೋಟಿ ರೂ. ಬ್ಯಾಂಕ್ ಸಾಲವನ್ನು ಈ ಸರಕಾರ ಮನ್ನಾ ಮಾಡಿದೆ.
ಇದು ಗೌರಿ ಲಂಕೇಶ್, ಪನ್ಸಾರೆ, ಕಲ್ಬುರ್ಗಿ ಮತ್ತು ದಾಭೋಲ್ಕರ್ ಅವರ ಹತ್ಯೆಯ ನಂತರದ ಭಾರತದ ದಾರುಣ ಚಿತ್ರ. ವ್ಯವಸ್ಥೆ ಹದಗೆಡುತ್ತಲೇ ಇದೆ. ಪ್ರತಿರೋಧದ ಧ್ವನಿಗಳು ಕ್ಷೀಣಿಸುತ್ತಿವೆ. ಭರವಸೆಯ ಬೆಳಕು ಕಾಣುತ್ತಿಲ್ಲ. ಆದರೆ, ವ್ಯವಸ್ಥೆ ಅವ್ಯವಸ್ಥೆಯಾಗಿ ಕುವ್ಯವಸ್ಥೆಯ ರೂಪ ತಾಳಿದಾಗ ನಾಶವಾಗುತ್ತದೆ. ಆಗ ಹೊಸ ವ್ಯವಸ್ಥೆಯ ಉದಯವಾಗುತ್ತದೆ ಎಂಬ ರಾಮ ಮನೋಹರ ಲೋಹಿಯಾ ಅವರ ಮಾತನ್ನು ನಂಬಿ ಬಹುತ್ವ ಭಾರತದ ಒಳ್ಳೆಯ ದಿನಗಳಿಗಾಗಿ ಕಾಯೋಣ

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ