119 ಪಾರ್ಕ್ ಗಳಲ್ಲಿ ಕ್ರೀಡಾ ಸಾಮಗ್ರಿ ಹಾಳಾಗಿವೆ: ಸಚಿವ ಆರ್.ಅಶೋಕ್
ಬೆಂಗಳೂರು, ಸೆ.22: ಬಿಬಿಎಂಪಿ ವ್ಯಾಪ್ತಿಯ 424 ಪಾರ್ಕ್‍ಗಳಲ್ಲಿ ಕ್ರೀಡಾ ಸಾಮಗ್ರಿಗಳನ್ನು ಅಳವಡಿಸಲಾಗಿದ್ದು, ಸದ್ಯ 119 ಪಾರ್ಕ್‍ಗಳಲ್ಲಿನ ಕ್ರೀಡಾ ಸಾಮಗ್ರಿಗಳು ಹಾಳಾಗಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು, ಪಾರ್ಕ್‍ಗಳಲ್ಲಿರುವ ಕ್ರೀಡಾ ಸಾಮಗ್ರಿಗಳ ನಿರ್ವಹಣೆಯನ್ನು ವಾರಂಟಿ ಕಾಲದಲ್ಲಿ ಸಾಮಗ್ರಿ ಸರಬರಾಜು ಮಾಡಿರುವ ಸಂಸ್ಥೆಯು ಮಾಡುತ್ತದೆ. ನಂತರ ಅವಶ್ಯಕತೆಗೆ ಅನುಗುಣವಾಗಿ ವಲಯವಾರು ಜಂಟಿ ಆಯುಕ್ತರು ತಮ್ಮ ಹಂತದಲ್ಲಿ ದುರಸ್ಥಿ ಕ್ರಮ ವಹಿಸುತ್ತಾರೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1190 ಪಾರ್ಕ್‍ಗಳಿವೆ. ಅಲ್ಲದೆ, ಬಿಬಿಎಂಪಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪಾರ್ಕ್‍ಗಳಲ್ಲಿ ಇರುವ ಕ್ರೀಡಾ ಸಾಮಗ್ರಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಅನುದಾನವನ್ನು ಮೀಸಲಿಟ್ಟಿಲ್ಲ ಎಂದು ತಿಳಿಸಿದರು.