ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ: ನಳಿನ್‍ ಕುಮಾರ್ ಕಟೀಲ್ ಆರೋಪ

Update: 2022-09-27 12:38 GMT

ವಿಜಯಪುರ, ಸೆ.27: ತಾನು ಜೈಲಿಗೆ ಹೋಗಬಾರದೆಂದು ಲೋಕಾಯುಕ್ತವನ್ನು ಸಿದ್ದರಾಮಯ್ಯ ಮುಚ್ಚಿಹಾಕಿದ್ದರು. ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ. ಈ ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಮಂಗಳವಾರ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪೇಸಿಎಂ ಕಾಂಗ್ರೆಸ್, ಭ್ರಷ್ಟಾಚಾರದ ಇನ್ನೊಂದು ಹೆಸರು ಕಾಂಗ್ರೆಸ್. ದೇಶ ಮತ್ತು ರಾಜ್ಯವನ್ನು ಲೂಟಿ ಮಾಡಿದ್ದು ಕಾಂಗ್ರೆಸ್. ಹಗರಣ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‍ನವರಿಗೆ ನೈತಿಕತೆ ಇಲ್ಲ ಎಂದರು.

ಖರ್ಗೆ, ಪರಮೇಶ್ವರ್ ಅವರಂಥ ಹಿರಿಯ ನಾಯಕರಿದ್ದರು. ದಲಿತ ಸಿಎಂ ವಿಚಾರ ಆಗ ಜೋರಾಗಿ ಚರ್ಚೆಯಲ್ಲಿತ್ತು. ಡಿ.ಕೆ.ಶಿವಕುಮಾರ್, ದೇಶಪಾಂಡೆ ಅವರಂಥ ಪ್ರಮುಖರ ಮಧ್ಯೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ ಅಂದರೆ, ಹಣ ಕೊಟ್ಟೇ ಆಗಿದ್ದಾರೆ. 5 ವರ್ಷ ಮೇಡಂಗೆ ಹಣ ಕೊಟ್ಟೇ ಆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಪೇಮೆಂಟ್ ಮೂಲಕ ಸಿದ್ದರಾಮಯ್ಯ ಸೀಟು ಗಟ್ಟಿ ಮಾಡಿಕೊಂಡರು. ‘ಪೇ ಕಾಂಗ್ರೆಸ್ ಮೇಡಂ’ ಎಂಬ ಅರ್ಥ ಪೇಸಿಎಂ ಎಂಬುದರಲ್ಲಿ ಅಡಗಿದೆ. ಇದನ್ನು ಬುದ್ಧಿವಂತಿಕೆಯಿಂದ ಡಿ.ಕೆ.ಶಿವಕುಮಾರ್ ‘ಪೇಸಿಎಂ’ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ಉದ್ದೇಶಿಸಿ ಈ ಶಬ್ದ ತಂದಿದ್ದಾರೆ. ನಮ್ಮ ಬಾಯಲ್ಲಿ ಇದನ್ನು ಹೇಳಿಸಲು ಡಿ.ಕೆ.ಶಿವಕುಮಾರ್ ಇದನ್ನು ಮಾಡಿದ್ದಾರೆ ಎಂದು ಅವರು ದೂರಿದರು.

ಸಿಎಂ ಆಗಲು ಎಷ್ಟು ಕೋಟಿ ಕೊಟ್ಟಿರಬಹುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಟೀಲ್, ಮೇಡಂ ಚಿಲ್ಲರೆ ತೆಗೆದುಕೊಳ್ಳಲಾರರು. ದೊಡ್ಡ ಮೊತ್ತ ಕೊಟ್ಟಿರಬಹುದು. ನೋಡೋಣ ಒಂದಲ್ಲ ಒಂದು ದಿನ ಡಿ.ಕೆ.ಶಿವಕುಮಾರ್ ಇದನ್ನು ಹೇಳುತ್ತಾರೆ. ಅವರ ಬಾಯಿಂದಲೇ ಕೇಳೋಣ, ನಮ್ಮ ಹತ್ರ ಯಾಕೆ ಹೇಳಿಸ್ತೀರಿ, ಅವರ ಬಾಯಲ್ಲೇ ಹೇಳಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News