RSS ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ರೇಣುಕಾಚಾರ್ಯ ಸವಾಲು

Update: 2022-09-29 14:20 GMT

ಬೆಂಗಳೂರು, ಸೆ. 29: ‘ಆರೆಸ್ಸೆಸ್ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ತೊಡಗಿದ್ದರ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಬೇಕು. ಅದು ಬಿಟ್ಟು ವಿಪಕ್ಷ ನಾಯಕ ಸಿದ್ದರಾಮಯ್ಯ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಅವರಿಗೆ ತಾಕತ್ತು ಇದ್ದರೆ ಆರೆಸೆಸ್ಸ್ ನಿಷೇಧಿಸಲಿ' ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅನುಭವಸ್ಥರು. ಅವರು ಸಿಎಂ ಆಗಿದ್ದಾಗ ಪಿಎಫ್‍ಐ ಕಾರ್ಯಕರ್ತರ ಮೇಲಿನ ಕೇಸುಗಳನ್ನು ವಾಪಸ್ ಪಡೆದುಕೊಂಡರು. ಬಿಜೆಪಿಯ ಹಲವು ಕಾರ್ಯಕರ್ತರ ಕೊಲೆಗಳು ಆದವು' ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.

ಆರೆಸೆಸ್ಸ್ ರಾಷ್ಟ್ರೀಯವಾದಿ ಸಂಘಟನೆ. ಕೋವಿಡ್ ಸಂಕಷ್ಟವೂ ಸೇರಿದಂತೆ ನೆರೆ-ಬರ ಸ್ಥಿತಿಯ ಸಂದರ್ಭಗಳಲ್ಲಿ ಜನರ ನೆರವಿಗೆ ಧಾವಿಸಿದೆ. ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವುದು ಭಾರತ್ಜೋಡೋ ಯಾತ್ರೆಯಲ್ಲ, ಬದಲಿಗೆ ಅದು ಭಾರತ್ ತೋಡೋ ಯಾತ್ರೆ. ಅವರಿಗೆ ಇನ್ನೂ ಪ್ರಬುದ್ಧತೆ ಇಲ್ಲ' ಎಂದು ಲೇವಡಿ ಮಾಡಿದರು.

ಬಿಜೆಪಿ ಅಖಂಡ ಭಾರತವನ್ನು ಒಡೆದು ಹಾಕಿದೆಯಾ, ಭಾರತದಲ್ಲಿ ಐಕ್ಯತೆ ಇಲ್ಲವೇ? ದೇಶದ ಎಲ್ಲ ಭಾಗವನ್ನು ಬಿಟ್ಟುಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಏನಾದರೂ ಅಧಿಕಾರದಲ್ಲಿದ್ದರೆ ಕಾಶ್ಮೀರವನ್ನು ಬಿಟ್ಟು ಕೊಡುತ್ತಿದ್ದರು. ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದ ಗುಲಾಂ ನಬಿ ಅಝಾದ್ ಪಕ್ಷ ತೊರೆದಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಆ ಪಕ್ಷದಲ್ಲಿ ಐಕ್ಯತೆ ಇಲ್ಲ' ಎಂದು ರೇಣುಕಾಚಾರ್ಯ ಟೀಕಿಸಿದರು.

ಕೆಪಿಸಿಸಿ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಯಾವ ಲೆಕ್ಕ. ಉಪ್ಪು ತಿಂದವನು ನೀರು ಕುಡಿಯಲೇಬೇಕು. ನೀವು ಯಾರು ಎಂದು ಬಿಜೆಪಿ ನಿಮ್ಮನ್ನ ಟಾರ್ಗೆಟ್ ಮಾಡಬೇಕು. ಬಸವರಾಜ ಬೊಮ್ಮಾಯಿ ಅಧಿಕಾರ ಗಟ್ಟಿಯಾಗಿದೆ. ಈಶ್ವರಪ್ಪ, ಜಾರಕಿಹೊಳಿ ಯಾರು ಅಸಮಾಧಾನ ಹೊಂದಿಲ್ಲ. ಕೆಲವರಿಗೆ ಎರಡು-ಮೂರು ಖಾತೆಗಳಿದೆ. ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡಬೇಕು' ಎಂದು ಆಗ್ರಹಿಸಿದರು.

ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಬಿಎಸ್‍ವೈ ಅವರು ಸಿಎಂ ಆಗಿದ್ದ ವೇಳೆ ನನಗೆ ಸಚಿವ ಸ್ಥಾನ ನೀಡಬೇಕಿತ್ತು. ಆದರೆ, ಕೊಡಲಿಲ್ಲ. ನಾನು ಬಂಡಾಯ ಏಳಲಿಲ್ಲ. ಅಂದಿನ ಸಿಎಂ ಬಿಎಸ್‍ವೈ ವಿರುದ್ಧವೂ ನಾನು ತುಟಿಬಿಚ್ಚಲಿಲ್ಲ. ನಾನು ಸಚಿವಸ್ಥಾನದ ಆಕಾಂಕ್ಷಿಯಲ್ಲ. ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ' ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News