ಸರಕಾರಿ ಕೆಲಸದಲ್ಲಿ ಹಿರಿಯರಿಗೆ ಸ್ಥಾನ ನೀಡಲು ವಿಶೇಷ ಯೋಜನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-01 12:29 GMT

ಬೆಂಗಳೂರು, ಅ.1: ಹಿರಿಯ ನಾಗರಿಕರ ಅನುಭವ ಬಳಸಲು ಸರಕಾರದ ಕೆಲಸ ಕಾರ್ಯಗಳಲ್ಲಿ ಅವರಿಗೆ ಸ್ಥಾನ ನೀಡಲು ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರ ಅನುಭವ ಬಳಸಲು ವಿಶೇಷ ಯೋಜನೆ ರೂಪಿಸಲಾಗುವುದು. ಹಿರಿಯರ ಸಲಹೆ ಹಾಗೂ ಮಾರ್ಗದರ್ಶನ ಪಡೆದು ನಾಡು ಕಟ್ಟುವ ಕೆಲಸ ಮಾಡಲಾಗುವುದು. ಸಾಧ್ಯವಿದ್ದ ಕಡೆಗಳಲ್ಲಿ ಹಿರಿಯ ನಾಗರಿಕರ ಸೇವೆಯನ್ನು ಸರಕಾರದ ಸಹಾಯ, ಸಲಹೆಗಳಿಗಾಗಿ ತೆಗೆದುಕೊಳ್ಳುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ನನಗೆ ಖೇದಕರ ಎನಿಸುತ್ತಿದೆ. 5 ಸಾವಿರ ವರ್ಷದ ಪರಂಪರೆ, ಕುಟುಂಬದ ಜನರು ವೃದ್ದಾಶ್ರಮಗಳಿಗೆ ಕಳುಹಿಸುತ್ತಿರುವುದು ನನಗೆ ಹಬಳ ನೋವಿನ ಸಂಗತಿ. ಸಮಾಜದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಎಲ್ಲದಕ್ಕಿಂತ ಮುಖ್ಯವಾದದ್ದು ಮಾನವೀಯತೆ ಎಂದು ಕಳವಳ ವ್ಯಕ್ತಪಡಿಸಿದರು.   

ಇನ್ನೂ, ಹಿರಿಯ ನಾಗರೀಕರ ಹಾಗೂ ಅಂಗವಿಕಲರು ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಅವರ ಮಾಶಾಸನಗಳನ್ನು ನಾನು ಮುಖ್ಯಮಂತ್ರಿಯಾದ ತಕ್ಷಣ ಹೆಚ್ಚಿಗೆ ಮಾಡಲಾಗಿದೆ. ಅದೇ ರೀತಿ,  ರಾಜ್ಯದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ನೀಡುವ ಮೂಲಕ ದೃಷ್ಠಿ ಸಮಸ್ಯೆ ನಿವಾರಣೆಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಕಿವಿ ಕೇಳಿಸದ ಹಿರಿಯ ನಾಗರಿಕರಿಗೆ 500ಕೋಟಿ ರೂ.ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಡಯಾಲಿಸಸ್ ಸೈಕಲ್ ಅನ್ನು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದ ಅವರು, ರಾಜ್ಯದಲ್ಲಿ ಕ್ಯಾನ್ಸರ್ ಕಿಮಿಯೋಥೆರಪಿ  ಎರಡು ಪಟ್ಟು ಹೆಚ್ಚಿಸಲಾಗಿದ್ದು, 12 ಹೊಸ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಚಿವರಾದ ಹಾಲಪ್ಪ ಆಚಾರ್, ವಿ.ಸೋಮಣ್ಣ, ಶಂಕರ್ ಪಾಟೀಲ ಮುನೇನಕೊಪ್ಪ, ಶಾಸಕರಾದ ಉದಯ್ಗರುಡಾಚಾರ್ಯ, ರವಿ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News